ವೈದ್ಯನ ಅಪಹರಿಸಿ ಕೊಲೆ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

7

ವೈದ್ಯನ ಅಪಹರಿಸಿ ಕೊಲೆ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Published:
Updated:

ಬೆಂಗಳೂರು: ಚಿಕಿತ್ಸೆ ನೆಪದಲ್ಲಿ ವೈದ್ಯ ಡಾ. ಶರತ್ ಕುಮಾರ್ ಎಂಬುವರನ್ನು ಅಪಹರಿಸಿ ಕೊಲೆ ಮಾಡಿದ್ದ ಮಹಿಳೆ ಸೇರಿದಂತೆ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 63ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಸಂಜಯನಗರದ ಕೆಇಬಿ ಬಡಾವಣೆಯ ಸಂಧ್ಯಾ ಅಲಿಯಾಸ್ ಸಂಜನಾ, ಆರ್‌ಎಂಎಸ್ ಕಾಲೊನಿಯ ರವಿಕುಮಾರ್, ಅಶ್ವತ್ಥ್ ಗೌಡ, ಶಿವಪ್ರತಾಪ್, ಚೇತನ್‌ಕುಮಾರ್, ಭೂಷಿತ್, ಕುಮಾರ್ ಶಿಕ್ಷೆಗೆ ಗುರಿಯಾದವರು.

ಉಡುಪಿಯ ಡಾ. ಶರತ್‌ ಅವರು ಸಂಜಯನಗರದ ಮುಖ್ಯರಸ್ತೆಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದರು. 2010ರ ಏಪ್ರಿಲ್ 9ರಂದು ಅವರನ್ನು ಸಂಪರ್ಕಿಸಿದ್ದ ಆರೋಪಿ ರವಿಕುಮಾರ್, ತಮ್ಮ ತಾಯಿಗೆ ಹುಷಾರಿಲ್ಲವೆಂದು ಹೇಳಿ ತನ್ನ ಮನೆಗೆ ಕರೆಸಿಕೊಂಡಿದ್ದ. ಅದೇ ಮನೆಯಲ್ಲಿದ್ದ ಆರೋಪಿಗಳೆಲ್ಲರೂ ವೈದ್ಯರನ್ನು ಅಪಹರಿಸಿ ಕುಣಿಗಲ್‌ ಬಳಿ ಅಕ್ರಮ ಬಂಧನದಲ್ಲಿರಿಸಿಕೊಂಡು ಚಿತ್ರಹಿಂಸೆ ನೀಡಿದ್ದರು.

ಶರತ್ ಬಳಿಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಸಹ ಮಾಡಿದ್ದರು. ನಂತರ, ಶರತ್ ಅವರನ್ನು ಕೊಲೆ ಮಾಡಿ ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಗುಣಿ ಗ್ರಾಮದ ಕೆರೆ ಸಮೀಪ ಶವ ಎಸೆದಿದ್ದರು.

ಅಪಹರಣ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ: ಜಿಮ್ ತರಬೇತುದಾರನಾದ ರವಿಕುಮಾರ್, ಕೊಲೆಯ ಪ್ರಮುಖ ಆರೋಪಿ. ಆತ ನನ್ನು ಪೊಲೀಸರು ಬಂಧಿಸಿದ್ದರು. ಆತನ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ 2010ರ ಸೆಪ್ಟೆಂಬರ್‌ನಲ್ಲಿ ಆತ ತಪ್ಪಿಸಿಕೊಂಡಿದ್ದ. ನಂತರ, ಸಿಸಿಬಿ ಪೊಲೀಸರು ಆತನನ್ನು ಸೆರೆಹಿಡಿದಿದ್ದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !