ಬಿಸಿಲಿಗೆ ಬಾಡದಿರಲಿ ಸೌಂದರ್ಯ

ಸೋಮವಾರ, ಮಾರ್ಚ್ 25, 2019
28 °C

ಬಿಸಿಲಿಗೆ ಬಾಡದಿರಲಿ ಸೌಂದರ್ಯ

Published:
Updated:
Prajavani

ಬೇಸಿಗೆ ರಜದ ಮಜಾ ಅನುಭವಿಸಲು ಬೀಚ್‌ಗೆ ತೆರಳುವ ಮುನ್ನ ನಿಮ್ಮ ತ್ವಚೆಗೆ ಈ ಕಟುವಾದ ಬಿಸಿಲು ಉಂಟು ಮಾಡುವ ಹಾನಿಯ ಬಗ್ಗೆ ಲಕ್ಷ್ಯವಿರಲಿ. ಏರುತ್ತಿರುವ ಉಷ್ಣಾಂಶ, ಧಗೆ ನಿಮ್ಮ ಚರ್ಮದ ಮೇಲೆ ಕಪ್ಪು ಕಲೆ ಮೂಡಿಸಬಹುದು, ಚರ್ಮ ಸುಟ್ಟು ಕಪ್ಪಾಗಿಸಬಹುದು, ನೆರಿಗೆಗಳನ್ನು ಸೃಷ್ಟಿಸಬಹುದು. ಇಂತಹ ಬೇಸಿಗೆಯಲ್ಲೂ ನಿಮ್ಮ ತ್ವಚೆ, ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್‌.

ತ್ವಚೆಯ ಮೇಲ್ಪದರದಲ್ಲಿ ಸಹಜವಾಗಿ ಸತ್ತ ಜೀವಕೋಶಗಳು ಸಂಗ್ರಹವಾಗುತ್ತವೆ. ಸತ್ತ ಜೀವಕೋಶಗಳು ಬೆವರಿನ ರಂಧ್ರಗಳನ್ನೂ ಮುಚ್ಚಿ ಕೊಳೆ ಅಲ್ಲೇ ಉಳಿಯುವಂತೆ ಮಾಡುತ್ತವೆ. ನಿಮ್ಮ ತ್ವಚೆ ಬಹಳ ಪೇಲವ ಹಾಗೂ ಒಣಗಿದಂತೆ ಕಾಣುತ್ತದೆ. ಹೀಗಾಗಿ ಸ್ರ್ಕಬಿಂಗ್‌ ಅಥವಾ ಚರ್ಮವನ್ನು ಉಜ್ಜಿ ಸತ್ತ ಜೀವಕೋಶಗಳನ್ನು ತೆಗೆದು ಸ್ವಚ್ಛಗೊಳಿಸುವುದು ಬಹು ಮುಖ್ಯ. ಆದರೆ ಇದಕ್ಕೆ ಮುನ್ನೆಚ್ಚರಿಕೆ ಅಗತ್ಯ. ನಿತ್ಯ ಸ್ಕ್ರಬ್‌ ಮಾಡುವುದರಿಂದ ತ್ವಚೆ ಕೆಂಪಾಗಿ ಬೊಕ್ಕೆ ಏಳಬಹುದು, ಗಾಯವಾಗಬಹುದು. ಇದಕ್ಕಾಗಿ ಉತ್ತಮ ಸ್ಕ್ರಬ್‌ ಅನ್ನು ಕೇವಲ ಮುಖ ಮಾತ್ರವಲ್ಲ, ಇಡೀ ದೇಹಕ್ಕೆ ಹಾಕಿ ಉಜ್ಜಿ ನಂತರ ತಣ್ಣೀರಿನಲ್ಲಿ ತೊಳೆಯಬೇಕು. ವಾರಕ್ಕೆ 2–3 ಬಾರಿ ಮಾಡುವುದರಿಂದ ತ್ವಚೆಯ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಉತ್ತಮ ಬ್ರ್ಯಾಂಡ್‌ನ ಸ್ಕ್ರಬ್‌ ಅನ್ನು ಇದಕ್ಕೆ ಬಳಸಬಹುದು ಅಥವಾ ಪುಡಿ ಮಾಡಿದ ಸಕ್ಕರೆ ಅಥವಾ ತರಿತರಿಯಾಗಿ ಪುಡಿ ಮಾಡಿದ ಒಣಗಿಸಿದ ಕಿತ್ತಳೆ ಸಿಪ್ಪೆಯನ್ನು ಬಳಸುವುದರಿಂದ ಸತ್ತ ಜೀವಕೋಶಗಳನ್ನು ತೆಗೆದು ಹಾಕಬಹುದು. ಮುಖದ ಮೇಲೆ ವೃತ್ತಾಕಾರವಾಗಿ ಉಜ್ಜಬೇಕು ಮತ್ತು ಸಂಜೆ ಇದನ್ನು ಮಾಡಿಕೊಂಡರೆ ಒಳಿತು.

ಕನಿಷ್ಠ ಮೇಕಪ್‌ ಇರಲಿ
ಬೇಸಿಗೆಯಲ್ಲಿ ಮೇಕಪ್‌ ಕೂಡ ಕಡಿಮೆ ಮಾಡಿ. ಪ್ರಖರ ಸೂರ್ಯನ ಬಿಸಿಲಿನಲ್ಲಿ ಆದಷ್ಟು ಸಹಜವಾಗಿರಲಿ ನಿಮ್ಮ ತ್ವಚೆ. ಫೌಂಡೇಶನ್‌ ಕ್ರೀಮ್‌ ಅನ್ನು ಸ್ವಲ್ಪವೇ ಲೇಪಿಸಿ. ಎಸ್‌ಪಿಎಫ್‌ ಇರುವ ಪೌಡರ್‌ ಹಚ್ಚಿಕೊಳ್ಳಬಹುದು. ತುಟಿಗೂ ಎಸ್‌ಪಿಎಫ್‌15 ಇರುವ ಲಿಪ್‌ಬಾಮ್‌ ಲೇಪಿಸಿ. ಕಣ್ಣಿಗೆ ಯಾವುದೇ ಕಾಜಲ್‌ ಅಥವಾ ಐಲೈನರ್‌ ಬೇಡ.

ಚಳಿಗಾಲದ ಬೆಣ್ಣೆಯಂತಹ ಕೋಲ್ಡ್‌ಕ್ರೀಮಿಗೆ ಬೈ ಹೇಳಿಬಿಡಿ. ಜೆಲ್‌ ಅಥವಾ ಹಣ್ಣಿನ ಅಂಶವಿರುವ ತೆಳುವಾದ ಲೋಷನ್‌ ಒಳ್ಳೆಯದು. ಸ್ನಾನವಾದ ಕೂಡಲೇ ಲೇಪಿಸಿಕೊಳ್ಳುವುದು ಒಳಿತು. ಇದರಿಂದ ತ್ವಚೆಯಲ್ಲಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು.
ಬಿಸಿಲಿನಲ್ಲಿ ಚರ್ಮ ಸುಟ್ಟಂತಾದರೆ ಟ್ಯಾನಿಂಗ್‌ ತೆಗೆಯುವ ಲೋಷನ್‌ ಬಳಸಬಹುದು. ಮಾರುಕಟ್ಟೆಯಲ್ಲಿ ಹಾಲಿನಿಂದ ಮಾಡಿದ ಉತ್ಪನ್ನಗಳು ಸಿಗುತ್ತವೆ. ಇಲ್ಲದಿದ್ದರೆ ಮನೆಯಲ್ಲೇ ಹಾಲಿನ ಕೆನೆಗೆ ಅರಿಸಿನ ಪುಡಿ ಸೇರಿಸಿ ಲೇಪಿಸಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ರಕ್ತಚಂದನವೂ ಮುಖದ ಮೇಲಿನ ಸುಟ್ಟ ಕಲೆ ತೆಗೆಯುತ್ತದೆ. ಇದರ ಪುಡಿಯನ್ನು ನೀರಿನಲ್ಲಿ ಕಲೆಸಿ ಹಚ್ಚಿಕೊಂಡರೆ ಟ್ಯಾನ್‌ ತೆಗೆಯಬಹುದು. ತೀವ್ರ ಉಷ್ಣಾಂಶದಿಂದ ಮೂಡುವ ಸಣ್ಣ ಬೆವರಿನ ಗುಳ್ಳೆಗಳೂ ಇದರಿಂದ ಮಾಯವಾಗುತ್ತವೆ.

ಮನೆಯಿಂದ ಹೊರಗೆ ಹೋಗುವಾಗ ಒಳ್ಳೆಯ ಸನ್‌ಸ್ಕ್ರೀನ್‌ ಲೋಷನ್‌ ಅಥವಾ ಕ್ರೀಂ ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಕಡು ಬಿಸಿಲಿನಿಂದ ತ್ವಚೆ ಒಣಗುವುದು, ಬಿರುಕು ಬಿಡುವುದು, ಕಪ್ಪು ಕಲೆ ಮೂಡುವುದು, ಸುಟ್ಟಂತಾಗುವುದು.. ಹೀಗೆ ಬಹಳಷ್ಟು ಸಮಸ್ಯೆಗಳು ತಲೆದೋರುತ್ತವೆ. ಗಂಭೀರ ಸಮಸ್ಯೆ ತಲೆದೋರುವುದಕ್ಕಿಂತ ಮುನ್ನವೇ ಎಚ್ಚರಿಕೆ ಕೈಗೊಳ್ಳುವುದು ಮುಖ್ಯ. ಕನಿಷ್ಠ ಎಸ್‌ಪಿಎಫ್‌30 ಇರುವ ಸನ್‌ಸ್ಕ್ರೀನ್‌ ಲೋಷನ್‌ ಹಚ್ಚಿಕೊಳ್ಳಿ. ಇದು ಕೆಲವೇ ಗಂಟೆ ಇರುವುದರಿಂದ ದಿನಕ್ಕೆ 2–3 ಬಾರಿ ಹಚ್ಚಿಕೊಳ್ಳಬೇಕಾಗುತ್ತದೆ.

ಸನ್‌ಸ್ಕ್ರೀನ್‌ ಅಥವಾ ಮಾಯಿಶ್ಚರೈಸರ್‌ ಬಳಕೆ ಮಾಡುವಾಗ ಅದು ಹೆಚ್ಚು ಎಣ್ಣೆಯುಕ್ತವಾಗಿರಬಾರದು. ಅಂದರೆ ಬೆವರಿನ ರಂಧ್ರಗಳನ್ನು ಮುಚ್ಚುವಂತಿರಬಾರದು. ಇದರಿಂದ ಸೋಂಕು, ಉರಿ, ತುರಿಕೆ, ಮೊಡವೆ ಮೊದಲಾದವುಗಳನ್ನು ತಡೆಗಟ್ಟಬಹುದು.

ತಲೆಗೆ ತೆಂಗಿನೆಣ್ಣೆಯ ಮಸಾಜ್‌
ಬೇಸಿಗೆಯಲ್ಲಿ ಚರ್ಮ ಮಾತ್ರವಲ್ಲ, ತಲೆಗೂದಲಿನ ಆರೈಕೆಯೂ ಬಹಳ ಮುಖ್ಯ. ಒಣ ಹವೆ ಹಾಗೂ ಬಿಸಿಲು ತಲೆಗೂದಲನ್ನು ಹಾಳು ಮಾಡುತ್ತದೆ. ಕೂದಲು ಒಣಗಿ ಒಂದಕ್ಕೊಂದು ಹೆಣೆದುಕೊಂಡು ಬಾಚಿದರೆ ಕಿತ್ತು ಬರಬಹುದು. ಹೀಗಾಗಿ ವಾರಕ್ಕೆ ಒಮ್ಮೆ ತೆಂಗಿನ ಎಣ್ಣೆಯಿಂದ ಮಸಾಜ್‌ ಮಾಡಿ ಬಿಸಿ ನೀರಲ್ಲಿ ಅದ್ದಿ ಹಿಂಡಿದ ಟವೆಲ್‌ ಕಟ್ಟಿಕೊಳ್ಳಿ. ನಂತರ ಶಾಂಪೂವಿನಿಂದ ತೊಳೆದುಕೊಳ್ಳಿ. ತಲೆಯಲ್ಲಿ ಧೂಳು, ಜಿಡ್ಡು ಹೆಚ್ಚುವುದರಿಂದ ವಾರಕ್ಕೆ 2–3 ಬಾರಿ ತಲೆಸ್ನಾನ ಮಾಡುವುದು ಒಳಿತು.

ಎಲ್ಲಕ್ಕಿಂತ ಮುಖ್ಯವಾಗಿ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಬೇಸಿಗೆಯಲ್ಲಿ ಬೆವರಿನ ಮೂಲಕ ದೇಹದ ನೀರಿನಂಶ ಕಡಿಮೆಯಾಗುವುದರಿಂದ ಚರ್ಮ ಒಣಗಿದಂತಾಗುತ್ತದೆ. ಜೊತೆಗೆ ದೇಹಕ್ಕೂ ಆಯಾಸವಾಗುತ್ತದೆ. ಹೀಗಾಗಿ ನಿತ್ಯ ಎರಡೂವರೆಯಿಂದ ಮೂರು ಲೀಟರ್‌ ದ್ರವ ಪದಾರ್ಥ ಸೇವನೆ ಮರೆಯಬೇಡಿ.

ಬೇಸಿಗೆಯ ಸಂಗಾತಿ ಲೋಳೆಸರ
ಬೇಸಿಗೆಯಲ್ಲಿ ನಿಮ್ಮ ಸಂಗಾತಿಯೆಂದರೆ ಲೋಳೆಸರ (ಅಲೊವೇರ). ಹಲವು ಬಗೆಯ ಚರ್ಮದ ಸಮಸ್ಯೆಗಳಿಗೆ ಇದು ದಿವ್ಯ ಔಷಧ. ಬಿಸಿಲಿನಲ್ಲಿ ದೀರ್ಘ ಕಾಲವಿದ್ದರೆ ಚರ್ಮ ಸುಟ್ಟಂತಾಗಿ ಸಣ್ಣ ಪ್ರಮಾಣದ ಉರಿ ಕಾಣಿಸಬಹುದು. ಇದಕ್ಕೆ ಲೋಳೆಸರ ಶಮನಕಾರಿ. ತಂಪಾದ ಅನುಭವ ನೀಡುವುದಲ್ಲದೇ, ಅಗತ್ಯವಿರುವ ತೇವಾಂಶವನ್ನೂ ಪೂರೈಸುತ್ತದೆ. ಜೊತೆಗೆ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಚರ್ಮಕ್ಕೆ ಧಕ್ಕೆಯಾಗುವುದನ್ನು ತಡೆಯುತ್ತವೆ. ತಾಜಾ ಲೋಳೆಸರವನ್ನು ಕತ್ತರಿಸಿ ಒಳಗಿರುವ ಲೋಳೆಯನ್ನು ತೆಗೆದು ಲೇಪಿಸಿಕೊಳ್ಳಬಹುದು ಅಥವಾ ಅಂಗಡಿಯಲ್ಲಿ ದೊರೆಯುವ ಉತ್ತಮ ದರ್ಜೆಯ ಬ್ರ್ಯಾಂಡ್ ಖರೀದಿಸಬಹುದು.

(ಪೂರಕ ಮಾಹಿತಿ: ಕಾಸ್ಮೆಟಲಾಜಿಸ್ಟ್‌ ಡಾ.ಕಿರಣ್‌ ಎಂ. ಶೇಟ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !