₹1.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

7
ಆಫ್ರಿಕಾ ಪ್ರಜೆಗಳು ಸೇರಿ ಮೂವರ ಬಂಧನ

₹1.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

Published:
Updated:
Deccan Herald

ಬೆಂಗಳೂರು: ನಗರದ ಕೆಲವು ಪಬ್‌ ಹಾಗೂ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಆರೋಪದಡಿ ಆಫ್ರಿಕಾ ಪ್ರಜೆಗಳು ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಫ್ರಿಕಾದ ಫೈತ್ ಚುಕ್ಸ್ (34), ಕಂಟೆ ಹೆನ್ರೆ (24) ಹಾಗೂ ಮಂಗಳೂರು ನಿವಾಸಿ ಪ್ರತೀಕ್ ಶೆಟ್ಟಿ (29) ಬಂಧಿತರು. ಅವರಿಂದ ₹1.5 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಜ‍ಪ್ತಿ ಮಾಡಲಾಗಿದೆ.

‘ಶೈಕ್ಷಣಿಕ ವೀಸಾದಡಿ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆಫ್ರಿಕಾ ಪ್ರಜೆಗಳು, ಕಾಲೇಜೊಂದರಲ್ಲಿ ಎಂಬಿಎ ಕೋರ್ಸ್‌ಗೆ ಸೇರಿದ್ದರು. ಅಂದಿನಿಂದಲೇ ಮಾದಕ ವಸ್ತು ಮಾರಾಟ ಮಾಡಲಾರಂಭಿಸಿದ್ದರು. ಅವರಿಗೆ ಗ್ರಾಹಕರನ್ನು ಹುಡುಕಿಕೊಡುವ ಕೆಲಸವನ್ನು ಪ್ರತೀಕ್ ಮಾಡುತ್ತಿದ್ದ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ತಿಳಿಸಿದರು.

‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರತೀಕ್, ತಿಂಗಳಿಗೆ ₹60 ಸಾವಿರ ಸಂಬಳ ಪಡೆಯುತ್ತಿದ್ದ. ಪಬ್‌ ಹಾಗೂ ಹೋಟೆಲ್‌ಗಳಲ್ಲಿ ಪಾರ್ಟಿ ನಡೆಸುವವರನ್ನು ಆತನೇ ಸಂಪರ್ಕಿಸುತ್ತಿದ್ದ. ನಂತರ, ಆಫ್ರಿಕಾ ಪ್ರಜೆಗಳಿಂದ ಮಾದಕ ವಸ್ತು ಕೊಡಿಸುತ್ತಿದ್ದ. ಅದಕ್ಕೆ ಕಮಿಷನ್ ಪಡೆಯುತ್ತಿದ್ದ’ ಎಂದರು.

‘1.5 ಕೆ.ಜಿ ತೂಕದ ಕೊಕೇನ್, 1930 ಎಕ್ಸ್‌ಟೆಸಿ ಮಾತ್ರೆಗಳು, ಕಾರು, ದ್ವಿಚಕ್ರ ವಾಹನ ಹಾಗೂ ₹6 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದರು.

₹8 ಸಾವಿರಕ್ಕೆ ಒಂದು ಗ್ರಾಂ: ‘ಮಾದಕ ವಸ್ತುವನ್ನು ಮುಂಬೈನಿಂದ ನಗರಕ್ಕೆ ತಂದು ಮಾರಾಟ ಮಾಡಿದ್ದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಕೊಕೇನ್‌ನನ್ನು ಒಂದು ಗ್ರಾಂ ₹8 ಸಾವಿರಕ್ಕೆ ಹಾಗೂ ಮಾತ್ರೆಯೊಂದನ್ನು ₹1 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು’ ಎಂದು ಸುನೀಲ್‌ಕುಮಾರ್‌ ಹೇಳಿದರು.

‘ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಮಾದಕ ವಸ್ತು ತರುತ್ತಿದ್ದ ಫೈತ್ ಚುಕ್ಸ್, ನಗರದ ಹಲವರ ಮೂಲಕ ಮಾರಾಟ ಮಾಡಿಸುತ್ತಿದ್ದ ಎಂದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನವಿದೆ’ ಎಂದರು.

‘ಆರೋಪಿಗಳ ಬಳಿ ಡ್ರಗ್ಸ್ ಪಡೆಯುತ್ತಿದ್ದ 40 ಮಂದಿ ಗ್ರಾಹಕರನ್ನು ಪತ್ತೆ ಹಚ್ಚಿದ್ದೇವೆ. ಅವರನ್ನು ಪೋಷಕರ ಸಮೇತ ನವೆಂಬರ್ 4ರಂದು ಕಚೇರಿಗೆ ಕರೆಸಿ ತಿಳಿವಳಿಕೆ ಹೇಳಲಿದ್ದೇವೆ’ ಎಂದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !