ಬುಧವಾರ, ಸೆಪ್ಟೆಂಬರ್ 22, 2021
25 °C

ದೇವರ ಪ್ರಸಾದದಲ್ಲಿ ವಿಷ ಉನ್ನತ ತನಿಖೆ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ಕಾರ್ಯಕ್ರಮವೊಂದರಲ್ಲಿ ವಿತರಿಸಲಾದ ವಿಷಪೂರಿತ ಪ್ರಸಾದದಿಂದಾಗಿ 13 ಮಂದಿ ಸಾವಿಗೀಡಾದ ಘಟನೆಯನ್ನು ಒಂದು ಸಾಮೂಹಿಕ ಕೊಲೆಯ ಪ್ರಕರಣವೆಂದೇ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕಾಗಿದೆ. ದೇವಾಲಯದ ಆಡಳಿತ ಮಂಡಳಿಯ ಸದಸ್ಯರ ಆಂತರಿಕ ಕಚ್ಚಾಟ ಪೈಶಾಚಿಕ ಕೃತ್ಯದ ರೂಪ ಪಡೆದಿದ್ದು, ಕಾರ್ಯಕ್ರಮದ ಆಯೋಜಕರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ವಿರೋಧಿ ಗುಂಪು ಪ್ರಸಾದದಲ್ಲಿ ಕೀಟನಾಶಕ ಬೆರೆಸಿರಬಹುದೆಂದು ಊಹಿಸಲಾಗಿದೆ.

ಪ್ರಸಾದದ ಮಾದರಿಯನ್ನು ಸಿಎಫ್‌ಟಿಆರ್‌ಐಗೆ ಹಾಗೂ ಮೃತಪಟ್ಟವರ ಅಂಗಾಂಗ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಆ ಸಂಸ್ಥೆಗಳಿಂದ ವರದಿ ಬಂದ ನಂತರವೇ ವಿಷದ ಸ್ವರೂಪ ಸ್ಪಷ್ಟವಾಗಲಿದೆ. ಘಟನೆಗೆ ಕಾರಣ ಏನೇ ಇದ್ದರೂ ಅನ್ನದಲ್ಲಿ ವಿಷ ಸೇರಿಸುವ ಕ್ರೌರ್ಯಕ್ಕೆ ಯಾವುದೇ ಸಮರ್ಥನೆಯಿಲ್ಲ. ಜನರ ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಕಾಗೆ ಹಾಗೂ ಎರಡು ನಾಯಿಗಳು ಇದೇ ಪ್ರಸಾದಕ್ಕೆ ಬಲಿಯಾಗಿವೆ. ಸುಮಾರು 90 ಮಂದಿ ಅಸ್ವಸ್ಥಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಅವರಿಗೆ ಉತ್ತಮ ಚಿಕಿತ್ಸೆ ದೊರೆಯುವಂತಾಗಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಪ್ರಸಾದ ಸೇವನೆಯಿಂದ ಭಕ್ತರು ಅಸ್ವಸ್ಥರಾಗುವ ಘಟನೆಗಳು ಭಾರತೀಯ ಸಂದರ್ಭದಲ್ಲಿ ಹೊಸತೇನಲ್ಲ. ಹಲವು ಸಂದರ್ಭಗಳಲ್ಲಿ ಪ್ರಸಾದ ಸಿದ್ಧಪಡಿಸಲು ಬಳಸುವ ನೀರಿನ ಮಾಲಿನ್ಯ ಹಾಗೂ ಪಾತ್ರೆಗಳಲ್ಲಿನ ಕಿಲುಬು ವಿಷವಾಗಿ ಪರಿಣಮಿಸುತ್ತದೆ. ಶುಚಿತ್ವದ ಕೊರತೆಯಿಂದ ಸಂಭವಿಸುವ ಅನಾಹುತಗಳು ಪ್ರಸಾದ ಸೇವಿಸಿದ ಭಕ್ತರಲ್ಲಿ ವಾಂತಿ– ಭೇದಿಗೆ ಕಾರಣವಾಗುತ್ತವೆ. ಆದರೆ ಸುಳ್ವಾಡಿ ಗ್ರಾಮದ ಘಟನೆಯ ಹಿಂದಿರುವುದು ಪಾತ್ರೆಗಳ ಕಿಲುಬಲ್ಲ; ಮನಸ್ಸುಗಳ ಕಿಲುಬು. ಈ ಕಿಲುಬು ಮುಗ್ಧ ಜನರನ್ನು ಬಲಿ ತೆಗೆದುಕೊಂಡಿದೆ. ಈವರೆಗೆ ದೇವರ ಪ್ರಸಾದಕ್ಕೆ ವಿಷ ಬೆರೆಸಿದ ಇಂತಹ ಘಟನೆ ನಡೆದಿರುವುದು ಎಲ್ಲಿಯೂ ವರದಿಯಾಗಿಲ್ಲ. ಪ್ರಸಾದದಲ್ಲಿ ವಿಷ ಬೆರೆಸಬಹುದು ಎನ್ನುವ ಕಲ್ಪನೆಯೇ ಜನಸಾಮಾನ್ಯರ ಪಾಲಿಗೆ ಅಸಹನೀಯ.

ದೇವರ ಪ್ರಸಾದವನ್ನು ಪವಿತ್ರವೆಂದು ನಂಬಿ ಜನರು ಕಣ್ಮುಚ್ಚಿ ಸೇವಿಸುವಂಥ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಜನಸಾಮಾನ್ಯರ ನಂಬಿಕೆಯನ್ನು ಗಾಸಿಗೊಳಿಸುವಂತಹದ್ದು. ಸುಳ್ವಾಡಿ ಘಟನೆಯ ಹಿನ್ನೆಲೆಯಲ್ಲಿ ಪ್ರಸಾದವನ್ನು ಸ್ವೀಕರಿಸಲು ಕೂಡ ಜನ ಹಿಂದೆಮುಂದೆ ನೋಡಬೇಕಾದ ಸಂದರ್ಭ ಉಂಟಾಗಿದೆ. ಪ್ರಸಾದ ಎನ್ನುವುದು ದೇವರ ನೈವೇದ್ಯದ ರೂಪ ಮಾತ್ರವಲ್ಲದೆ, ಅನೇಕ ಬಡವರ ಪಾಲಿಗೆ ಒಂದು ಹೊತ್ತಿನ ಹಸಿವು ನೀಗಿಸುವ ಮಾರ್ಗವೂ ಆಗಿದೆ. ಯಾತ್ರಾಸ್ಥಳಗಳಲ್ಲಿ ನಡೆಯುವ ಅನ್ನದಾನದ ಚಟುವಟಿಕೆಗಳಲ್ಲಿ ಧಾರ್ಮಿಕ ಸ್ವರೂಪದ ಜೊತೆಗೆ ಹಸಿವನ್ನು ತಣಿಸುವ ಸಾಮಾಜಿಕ ಕಾಳಜಿಯ ಆಯಾಮವೂ ಇರುತ್ತದೆ.

ಇಂಥ ಉದಾತ್ತ ಆಚರಣೆಗಳ ಸಾಲಿನಲ್ಲಿ ಸುಳ್ವಾಡಿಯ ಘಟನೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈ ದುರ್ಘಟನೆ ಇತರ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ಒಂದು ಪಾಠವಾಗಬೇಕು, ಎಚ್ಚರಿಕೆಯ ಉದಾಹರಣೆಯಾಗಬೇಕು. ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಹಾಗೂ ‍ಪ್ರಸಾದ ವಿತರಿಸುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ಹೊರಬರಲು ಸರ್ಕಾರ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ
ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ದೇವಸ್ಥಾನಗಳ ಆದಾಯ ಪುಂಡುಪೋಕರಿಗಳ ಪಾಲಾಗದಂತೆಯೂ ಸರ್ಕಾರ ಎಚ್ಚರಿಕೆ ವಹಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು