ಗುರುವಾರ , ಮೇ 28, 2020
27 °C

‘ಪಂಜರದ ಗಿಳಿ’ ಸಿಬಿಐಗೆ ಬಿಡುಗಡೆಯ ಭಾಗ್ಯ ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಎರಡು ತಿಂಗಳ ಹಿಂದೆ ರಜೆಯ ಮೇಲೆ ಕಳಿಸಲಾಗಿತ್ತು. ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿ ವರ್ಮಾ ಅವರನ್ನು ಮರಳಿ ನಿರ್ದೇಶಕ ಹುದ್ದೆಯಲ್ಲಿ ಪ್ರತಿಷ್ಠಾಪಿಸಿತ್ತು. ಅವರ ಮೇಲಿನ ಭ್ರಷ್ಟಾಚಾರ ಮತ್ತು ಪಕ್ಷಪಾತದ ಆಪಾದನೆಗಳ ಕುರಿತು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖಾ ವರದಿಯ ಹಿನ್ನೆಲೆಯಲ್ಲಿ ವಾರದೊಳಗೆ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವಂತೆ ನ್ಯಾಯಾಲಯವು ಉನ್ನತ ಸಮಿತಿಗೆ ನಿರ್ದೇಶನ ನೀಡಿತ್ತು.

ಗುರುವಾರ ನಡೆದ ಮೂವರು ಸದಸ್ಯರ ಈ ಉನ್ನತ ಸಮಿತಿಯ ಸಭೆಯು ವರ್ಮಾ ಅವರನ್ನು ನಿರ್ದೇಶಕ ಹುದ್ದೆಯಿಂದ ಹೊರಹಾಕಲು ಬಹುಮತದಿಂದ ತೀರ್ಮಾನಿಸಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಬಹುಮತದ ನಿರ್ಧಾರವನ್ನು ಮತ್ತೊಬ್ಬ ಸದಸ್ಯ ಮಲ್ಲಿಕಾರ್ಜುನ ಖರ್ಗೆ (ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕ) ವಿರೋಧಿಸಿದರು. ವರ್ಮಾ ಅವರನ್ನು ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿತ್ತು. ಸಮಿತಿಯ ಈ ನಿರ್ಧಾರ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿ ವರ್ಮಾ ಶುಕ್ರವಾರ ಹೊಸ ಹುದ್ದೆಯ ಸೇವೆಗೆ ‘ರಾಜೀನಾಮೆ’ ಸಲ್ಲಿಸಿದ್ದಾರೆ.

ಸಮಜಾಯಿಷಿಯ ಅವಕಾಶವನ್ನೂ ಕೊಡದೆ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ತೀವ್ರ ತರಾತುರಿಯಿಂದ ಕೆಳಗಿಳಿಸಿದ್ದು ಯಾಕೆ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಮತ್ತು ಸಮೂಹ ಮಾಧ್ಯಮಗಳು ಕೇಳಿವೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕುರಿತು ಎಫ್‌ಐಆರ್ ಸಲ್ಲಿಕೆಯನ್ನು ತಡೆಯುವುದೇ ಈ ನಡೆಯ ಹಿಂದಿನ ಉದ್ದೇಶವಾಗಿತ್ತು ಎಂಬ
ಆಪಾದನೆಯನ್ನು ಕೇಂದ್ರ ಸರ್ಕಾರ ಎದುರಿಸುವಂತಾಗಿದೆ. ಸಿವಿಸಿ ತನಿಖೆಗೆ ದಾರಿ ಮಾಡಿದ ದೂರುಗಳನ್ನು ಸಲ್ಲಿಸಿದ ಅಸ್ತಾನಾ ಕೂಡ ಆರೋಪಿಯೇ. ಆತನ ವಿರುದ್ಧ ಕೂಡ ಸಿಬಿಐ ತನಿಖೆ ನಡೆದಿದೆ.

ಈ ತನಿಖೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಉಸ್ತುವಾರಿಯಲ್ಲಿ ನಡೆಯಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಆದರೆ ತನಿಖೆಯ ಅಂತಿಮ ವರದಿ ತಮ್ಮದಲ್ಲ ಎಂದು ಪಟ್ನಾಯಕ್ ಹೇಳಿದ್ದಾರೆ ಎಂಬ ಅಂಶವನ್ನು ವರ್ಮಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ವರದಿ ತಮ್ಮದಲ್ಲ ಎಂದು ಪಟ್ನಾಯಕ್ ಅವರು ಹೇಳಿರುವುದು ನಿಜವೇ ಆಗಿದ್ದಲ್ಲಿ ಅದು ಅತ್ಯಂತ ಗಂಭೀರ ವಿಚಾರ. ಇಡೀ ಪ್ರಕರಣದ ಹಿಂದೆ ಅಗೋಚರ ಹಿತಾಸಕ್ತಿಗಳ ಕೈವಾಡದ ಅನುಮಾನ ಮೂಡಿಸುತ್ತದೆ.

ಅಲೋಕ್ ವರ್ಮಾ- ರಾಕೇಶ್ ಅಸ್ತಾನಾ ಪ್ರಕರಣದಲ್ಲಿ ಸಿವಿಸಿ ನಡೆಯನ್ನು ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಶಂಕಿಸಿತ್ತು. ಸಿಬಿಐನಂತಹ ಗಣ್ಯ ತನಿಖಾ ಸಂಸ್ಥೆಗೆ ಹತ್ತಿರುವ ಗೆದ್ದಲಿನ ಮೂಲಕಾರಣ ರಾಜಕೀಯ ಹಸ್ತಕ್ಷೇಪ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ಕಾಲ ಕಾಲಕ್ಕೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳೂ ಈ ತನಿಖಾ ಸಂಸ್ಥೆಯನ್ನು ತಮ್ಮ ಪಂಜರದ ಗಿಳಿ ಆಗಿಸಿದ್ದು ಕಹಿ ಸತ್ಯ. ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸಿಬಿಐಯನ್ನು ‘ಕಾಂಗ್ರೆಸ್ ಇನ್ವೆಸ್ಟಿಗೇಷನ್ ಬ್ಯೂರೊ’ ಎಂದು ಜರೆದಿದ್ದರು. ಕಳೆದ ನಾಲ್ಕೂವರೆ ವರ್ಷಗಳಿಂದ ಅವರೇ ಪ್ರಧಾನಮಂತ್ರಿಯಾಗಿದ್ದಾರೆ. ‘ಮೋದಿ-ಶಾ ಇನ್ವೆಸ್ಟಿಗೇಷನ್ ಬ್ಯೂರೊ’ ಎಂಬ ಬಿರುದು-ಬಾವಲಿಯಿಂದ ಮುಕ್ತಗೊಳಿಸುವ ಯಾವುದೇ ಕ್ರಮವನ್ನು ಅವರು ಜರುಗಿಸಿಲ್ಲ. ಬದಲಿಗೆ ಹಳೆಯ ಸರ್ಕಾರಗಳ ಹಾದಿಯನ್ನೇ ತುಳಿದಿದ್ದಾರೆ. ಎರಡು ವರ್ಷಗಳ ಹಿಂದೆ ಸಿಬಿಐಗೆ ಅಲೋಕ್ ವರ್ಮಾ ನೇಮಕವು ಆಡಳಿತ ಪಕ್ಷದ ಆಯ್ಕೆಯಾಗಿತ್ತು. ಆದರೆ ತಾನು ಎಳೆದ ಲಕ್ಷ್ಮಣ ರೇಖೆಯನ್ನು ವರ್ಮಾ ದಾಟುವ ಸುಳಿವು ಸಿಕ್ಕ ತಕ್ಷಣ, ಸಿಬಿಐ ಮುಖ್ಯಸ್ಥರ ಹುದ್ದೆಗೆ ಐಪಿಎಸ್‌ನ ಗುಜರಾತ್ ಕೇಡರ್‌ಗೆ ಸೇರಿದ ರಾಕೇಶ್ ಅಸ್ತಾನಾ ಅವರನ್ನು ತರುವ ಪ್ರಯತ್ನ ನಡೆಯಿತು. ಆದರೆ ಅದು ಫಲಿಸಲಿಲ್ಲ. ವರ್ಮಾ ಮತ್ತು ಅಸ್ತಾನಾ ತಿಕ್ಕಾಟಕ್ಕೆ ಸರ್ಕಾರದ ಪಕ್ಷಪಾತವೇ ನಾಂದಿ ಹಾಡಿತ್ತು.

ಈ ಪಕ್ಷಪಾತ-ಒಳಜಗಳದ ವ್ಯಾಧಿ ದೇಶದ ಬೇಹುಗಾರಿಕೆ ಜಾಲದ ಅಂಗಗಳಾದ ಇಂಟೆಲಿಜೆನ್ಸ್ ಬ್ಯೂರೊ (ಐ.ಬಿ) ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್, ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ ಹಾಗೂ ಸಿವಿಸಿಗೂ ಹಬ್ಬಿರುವ ಕಳವಳಕಾರಿ ಅಂಶ ಬಯಲಿಗೆ ಬಿದ್ದಿತ್ತು. ನೆರೆ ರಾಷ್ಟ್ರದ ಮೇಲೆ ಯಶಸ್ವಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸುವ ಕೇಂದ್ರ ಸರ್ಕಾರವು ಸಿಬಿಐಗೆ ಒಂದು ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು