ಐಐಎಸ್‌ಸಿ ಲ್ಯಾಬ್‌ನಲ್ಲಿ ಸ್ಫೋಟ ಲೋಪಗಳ ತನಿಖೆಯಾಗಲಿ

7

ಐಐಎಸ್‌ಸಿ ಲ್ಯಾಬ್‌ನಲ್ಲಿ ಸ್ಫೋಟ ಲೋಪಗಳ ತನಿಖೆಯಾಗಲಿ

Published:
Updated:
Deccan Herald

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಸೇರಿದ ಲ್ಯಾಬ್‌ನಲ್ಲಿ ಬುಧವಾರ ಸ್ಫೋಟ ಸಂಭವಿಸಿದ್ದು  ಮೈಸೂರಿನವರಾದ  ಎಂಜಿನಿಯರ್ ಮನೋಜ್‌ ಕುಮಾರ್‌ (32)  ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಾದ ಅತುಲ್ಯಾ ಉದಯಕುಮಾರ್, ನರೇಶ್ ಕುಮಾರ್ ಹಾಗೂ ಕಾರ್ತಿಕ್ ಶೆಣೈ ತೀವ್ರವಾಗಿ ಗಾಯಗೊಂಡಿದ್ದಾರೆ. ಹೈಪರ್‌ಸಾನಿಕ್ ಹಾಗೂ ಶಾಕ್ ವೇವ್ಸ್‌ ಬಗ್ಗೆ ಸಂಶೋಧನೆ ನಡೆಸುವ ವಿಚಾರದಲ್ಲಿ ‘ಸೂಪರ್ ವೇವ್ಸ್‌ ಟೆಕ್ನಾಲಜೀಸ್’ ಹೆಸರಿನ ನವೋದ್ಯಮವು ಐಐಎಸ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿತ್ತು.  ಏರೋಸ್ಪೇಸ್‌ ವಿಭಾಗದ ಲ್ಯಾಬ್‌ನಲ್ಲಿ ಸಂಶೋಧನೆ ನಡೆಸಲು ನವೋದ್ಯಮಕ್ಕೆ ಐಐಎಸ್‌ಸಿ ಆಡಳಿತ ಮಂಡಳಿಯು ಅವಕಾಶ ನೀಡಿತ್ತು. ನವೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಈ ನಾಲ್ವರೂ ಹೈಪರ್‌ಸಾನಿಕ್‌ ಶಾಕ್‌ ಟನಲ್‌– 2ರಲ್ಲಿ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿರುವುದು ವಿಷಾದನೀಯ. ಸಿಲಿಂಡರ್‌ನಲ್ಲಿ ಶೇಖರಿಸಿದ್ದ ಹೈಡ್ರೋಜನ್‌ ಅನಿಲವನ್ನು ವರ್ಗಾಯಿಸುವಾಗ ಈ ದುರಂತ ನಡೆದಿರಬಹುದು ಎಂದು ಅಗ್ನಿಶಾಮಕದಳದ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ನವೋದ್ಯಮವು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಪ್ರಯೋಗಾಲಯದಲ್ಲಿ ಒತ್ತಡದಿಂದ ತುಂಬಿದ ನೈಟ್ರೋಜನ್‌, ಹೀಲಿಯಂ, ಆಕ್ಸಿಜನ್‌ ಮತ್ತು ಹೈಡ್ರೋಜನ್‌ ಅನಿಲದ ಸಿಲಿಂಡರ್‌ಗಳು ಸಹ ಇದ್ದವು. ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುವಾಗ ಸುರಕ್ಷತಾ ನಿಯಮಗಳ ಬಗ್ಗೆ ಉನ್ನತ ಮಾನದಂಡಗಳನ್ನು ಅನುಸರಿಸಬೇಕು. ಈ ವಿಚಾರದಲ್ಲಿ ಲೋಪಗಳಾಗಿವೆಯೇ ಎಂಬುದು ತನಿಖೆಗೆ ಒಳಪಡಬೇಕು.

ಎರಡು ದಶಕಗಳ ಹಿಂದೆ ಸ್ಥಾಪಿಸಿದ್ದ ಹೈಪರ್‌ಸಾನಿಕ್ ಹಾಗೂ ಶಾಕ್ ವೇವ್ಸ್‌ ಲ್ಯಾಬ್‌ನಲ್ಲಿ ಯಾವ ರೀತಿ ದುರಂತ ಸಂಭವಿಸಿತು ಎನ್ನುವುದೂ ಸ್ಪಷ್ಟವಾಗಬೇಕು. ಆದರೆ ಇಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿಲ್ಲ. ದೇಶದ ಭದ್ರತೆಯ ದೃಷ್ಟಿಯಿಂದ ಪ್ರಯೋಗದ ಸೂಕ್ಷ್ಮಗಳು ಸೋರಿಕೆಯಾಗಬಾರದು ಎನ್ನುವ ಉದ್ದೇಶದಿಂದ ಈ ನಿಲುವು ತಳೆದಿರಬಹುದು. ಆದರೆ ಪ್ರಯೋಗಕ್ಕೆ ಬಳಸುವ ಸಕಲ ಉಪಕರಣಗಳು ಗುಣಮಟ್ಟದಿಂದ ಕೂಡಿದ್ದವೇ, ಸ್ಫೋಟದಲ್ಲಿ ಅನ್ಯರ ಕೈವಾಡ ಇತ್ತೇ ಎನ್ನುವ ಬಗ್ಗೆ ತನಿಖೆ ನಡೆಯಬೇಕು. ವಿಜ್ಞಾನದ ಸಂಶೋಧನೆಯಲ್ಲಿ ಭಾರತ ಈಗಾಗಲೇ ಹಿಂದೆ ಬಿದ್ದಿದೆ. ಪ್ರಯೋಗಗಳನ್ನು ಜನರಿಗೆ ಮುಟ್ಟಿಸುವಲ್ಲಿ ಚೀನಾ ನಮಗಿಂತ ಮುಂದಿದೆ. ದೇಶದ ಯುವಜನರು ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ಎಂಬಿಎ ಪದವಿಯ ಆಕರ್ಷಣೆಗೆ ಒಳಗಾಗಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಐಐಎಸ್‌ಸಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲೇ ಸ್ಫೋಟ ನಡೆದಿರುವುದು ಆಘಾತಕಾರಿ. ಪ್ರಯೋಗಾಲಯಗಳಲ್ಲಿ ಕೆಲಸ ಮಾಡಲು ಯುವ ವಿಜ್ಞಾನಿಗಳು ಹಿಂಜರಿಯುವಂತಹ ಸಂದರ್ಭವೂ ಮೂಡಬಹುದು. ಮಹತ್ತರ ಸಂಶೋಧನೆಗಳು ನಡೆಯುವಾಗ ಇಂತಹ ದುರ್ಘಟನೆ ನಡೆದಲ್ಲಿ ಅದು ಪ್ರಯೋಗಾಲಯದ ಗುಣಮಟ್ಟದ ಮೇಲೆ ಮೂಡಿಸುವ ಅಪನಂಬಿಕೆ, ಸಂಸ್ಥೆಯ ಪ್ರತಿಷ್ಠೆಗೆ ಹಾನಿಕರವಾಗುವಂತಹದ್ದು. ಆವಿಷ್ಕಾರಗಳಿಗೆ ಮುಂದಾಗುವ ಯುವ ವಿಜ್ಞಾನಿಗಳಲ್ಲಿ ಭದ್ರತೆಯ ಭಾವವನ್ನು ಮೂಡಿಸುವಂತಾಗಬೇಕು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !