ಗುರುವಾರ , ಮಾರ್ಚ್ 23, 2023
21 °C

ಲೆಕ್ಕ ಪರಿಶೋಧಕ, ಅಕೌಂಟೆಂಟ್‌ ಹುದ್ದೆ: ಪೈಪೋಟಿಯೂ ಹೆಚ್ಚು, ಪರೀಕ್ಷೆಯೂ ಕಠಿಣ

ಮನೋಜ್‌ ಟಿ.ಪಿ. Updated:

ಅಕ್ಷರ ಗಾತ್ರ : | |

Prajavani

ಸರ್ಕಾರಿ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಬೇಕಾದಷ್ಟು ನಡೆಯುತ್ತಲೇ ಇರುತ್ತವೆ. ಸ್ಪರ್ಧಾರ್ಥಿಗಳೂ ಕೂಡ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂಬುದರ ಮೇಲೆ ಗಮನ ಇಟ್ಟುಕೊಂಡು ಸಿದ್ಧತೆಗೆ ತೊಡಗುತ್ತಾರೆ. ಹೆಚ್ಚು ಜನಪ್ರಿಯತೆ ಇರುವ ಹುದ್ದೆಗಳ ಮಧ್ಯೆ ಕೆಲವು ಉದ್ಯೋಗಗಳ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ. ಅಂತಹ ಹುದ್ದೆಗಳನ್ನು ಹೆಸರಿಸಬೇಕಾದರೆ ಅಕೌಂಟೆಂಟ್‌ ಮತ್ತು ಲೆಕ್ಕ ಪರಿಶೋಧಕ (ಆಡಿಟರ್‌) ಉದ್ಯೋಗ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಎಸ್‌ಎಸ್‌ಸಿ ಈ ಅಕೌಂಟೆಂಟ್‌ ಮತ್ತು ಆಡಿಟರ್‌ ನೇಮಕಾತಿ ಪರೀಕ್ಷೆಯನ್ನು ನಡೆಸುತ್ತದೆ. ವರ್ಷಕ್ಕೆ ಎರಡು ಸಲ ನಡೆಯುವ ಈ ಪರೀಕ್ಷೆಯಲ್ಲಿ ಆಯ್ಕೆಯಾದವರು ಸರ್ಕಾರದ ಕೆಲವು ಇಲಾಖೆಗಳಲ್ಲಿರುವ ಅಕೌಂಟೆಂಟ್‌ ಮತ್ತು ಆಡಿಟರ್‌ ಹುದ್ದೆಗಳಿಗೆ ಸೇರಬಹುದು. ಈ ಪರೀಕ್ಷೆಯನ್ನು ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಎಂದೇ ಹೇಳಲಾಗುತ್ತಿದ್ದು, ಪೈಪೋಟಿ ಕೂಡ ಸಾಕಷ್ಟಿದೆ.

ಭಾರತೀಯ ಆಡಿಟ್‌ ಮತ್ತು ಅಕೌಂಟ್ಸ್‌ ಇಲಾಖೆಗೆ ನೇಮಕಾತಿಗಾಗಿ ಈ ಪರೀಕ್ಷೆ ನಡೆಯುತ್ತದೆ. ಇದು ಭಾರತ ಸರ್ಕಾರದ ಸಿಎಜಿಗೆ ಸೇರಿದ ಇಲಾಖೆಯಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳ ಅಕೌಂಟ್ಸ್‌ ಕಾದಿಡುವುದು ಮತ್ತು ಆಡಿಟ್‌ ನಡೆಸುವುದು ಈ ಹುದ್ದೆಗಳಿಗೆ ಆಯ್ಕೆಯಾದವರ ಹೊಣೆಗಾರಿಕೆಯಾಗಿದೆ.

ಅರ್ಹತೆ

ಇದಕ್ಕೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಯೆಂದರೆ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. 18–25 ವರ್ಷ ವಯಸ್ಸಿನವರು ಪರೀಕ್ಷೆಗೆ ಕೂರಬಹುದು. ಮೀಸಲಾತಿ ಇರುವವರಿಗೆ ಇದರಲ್ಲಿ ಸಡಿಲಿಕೆ ಇದೆ. ಹಾಗೆಯೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈಗಾಗಲೇ ಉದ್ಯೋಗ ಮಾಡುತ್ತಿರುವವರಿಗೂ ವಿನಾಯ್ತಿ ಇದೆ.

ಈ ಪರೀಕ್ಷೆಯು ಒಬ್ಜೆಕ್ಟಿವ್‌ ಮಾದರಿಯಲ್ಲಿರುತ್ತದೆ. ಎರಡು ತಾಸಿನ ಅವಧಿಯ ಪರೀಕ್ಷೆಯಲ್ಲಿ 200 ಪ್ರಶ್ನೆಗಳಿಗೆ ಉತ್ತರಿಸಬೇಕು. ಪೇಪರ್‌ ಜನರಲ್‌ ಇಂಟೆಲಿಜೆನ್ಸ್‌, ಜನರಲ್‌ ಅವೇರ್‌ನೆಸ್‌, ಕಾಂಪ್ರ್‌ಹೆನ್ಶನ್‌ ಮತ್ತು ಇಂಗ್ಲಿಷ್‌ ಸಾಮರ್ಥ್ಯ ಹಾಗೂ ಅಂಕಗಣಿತದ ಮೇಲೆ ಪ್ರಶ್ನೆಗಳು ಇರುತ್ತವೆ. ಪ್ರತಿಯೊಂದೂ ವಿಭಾಗದಲ್ಲಿ 50 ಪ್ರಶ್ನೆಗಳಿರುತ್ತವೆ.

ಜನರಲ್‌ ಇಂಟೆಲಿಜೆನ್ಸ್‌ನಲ್ಲಿ ವರ್ಬಲ್‌ ಮತ್ತು ನಾನ್‌ ವರ್ಬಲ್‌ ಕುರಿತು ಪ್ರಶ್ನೆಗಳಿದ್ದು, ಸ್ಪರ್ಧಾರ್ಥಿ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವುದು, ತೀರ್ಮಾನಕ್ಕೆ ಬರುವುದು ಮೊದಲಾದವುಗಳ ಬಗ್ಗೆ ಪರೀಕ್ಷಿಸಲಾಗುತ್ತದೆ.

ಸಾಮಾನ್ಯ ಜ್ಞಾನ ವಿಭಾಗದಲ್ಲಿ ಸ್ಪರ್ಧಾರ್ಥಿಗಳು ಪ್ರಚಲಿತ ವಿದ್ಯಮಾನ, ಭಾರತದ ಇತಿಹಾಸ, ಸಂಸ್ಕೃತಿ, ಭೂಗೋಳ ಶಾಸ್ತ್ರ, ರಾಜಕೀಯ ಮತ್ತು ವಿಜ್ಞಾನದ ಕುರಿತ ಪ್ರಶ್ನೆಗಳಿಗೆ ಉತ್ತರಿಸಬೇಕು.

ಇಂಗ್ಲಿಷ್‌ ಶಬ್ದಗಳು, ಗ್ರಾಮರ್‌, ವಾಕ್ಯ ರಚನೆ ಮತ್ತು ಕಾಂಪ್ರೆಹೆನ್ಸನ್‌ ಬಗ್ಗೆ ಇಂಗ್ಲಿಷ್‌ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳಿರುತ್ತವೆ. ಅಂಕಗಣಿತದಲ್ಲಿ ಶೇಕಡಾವಾರು, ಸರಾಸರಿ, ಅನುಪಾತ, ಟೇಬಲ್‌ ಮತ್ತು ಗ್ರಾಫ್‌ ಬಳಕೆ, ಮೆನ್ಸುರೇಶನ್‌, ಸಮಯ ಮತ್ತು ದೂರ ಮೊದಲಾದವುಗಳ ಬಗ್ಗೆ ಪ್ರಶ್ನೆಗಳಿರುತ್ತವೆ.

ಸಾಮಾನ್ಯವಾಗಿ ಪರೀಕ್ಷೆಯ ಅಧಿಸೂಚನೆಯನ್ನು ಜುಲೈನಲ್ಲಿ ಪ್ರಕಟಿಸಲಾಗುವುದು. ಪರೀಕ್ಷೆ ನವೆಂಬರ್‌ನಲ್ಲಿ ನಡೆಯುತ್ತದೆ.

ಪರೀಕ್ಷೆಗೆ ಆದಷ್ಟು ಶೀಘ್ರ ತಯಾರಿ ಆರಂಭಿಸಬೇಕು. ದಿನಪತ್ರಿಕೆಯನ್ನು ನಿತ್ಯ ಓದಿದರೆ ಸಾಮಾನ್ಯ ಜ್ಞಾನ ಸುಧಾರಿಸುತ್ತದೆ. ಪ್ರಚಲಿತ ವಿದ್ಯಮಾನ, ಇತಿಹಾಸ, ಸಂಸ್ಕೃತಿ, ರಾಜಕೀಯ ಮತ್ತು ಭೂಗೋಳದ ಕುರಿತು ಓದಬೇಕು.

ಅಂಕಗಣಿತಕ್ಕೆ ಹೈಸ್ಕೂಲ್‌ನ ಗಣಿತ ಪಠ್ಯಪುಸ್ತಕ ಓದಿದರೆ ಅನುಕೂಲ. ಭಾಷಾ ಪರೀಕ್ಷೆಗೆ ಮೂಲಭೂತ ಗ್ರಾಮರ್‌ ಮತ್ತು ಶಬ್ದ ಭಂಡಾರ ಅವಶ್ಯಕ. ಇಂಗ್ಲಿಷ್‌ ದಿನಪತ್ರಿಕೆಯ ಓದು ಈ ನಿಟ್ಟಿನಲ್ಲಿ ನೆರವಿಗೆ ಬರುತ್ತದೆ. ಅಣಕು ಪರೀಕ್ಷೆಯಿಂದ ಸಮಯ ನಿರ್ವಹಣೆಯನ್ನು ರೂಢಿ ಮಾಡಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು