ಮಂಗಳವಾರ, ಮೇ 24, 2022
27 °C

ಉನ್ನತ ರ‍್ಯಾಂಕ್‌ಗೆ ಮೌಲಿಕ ಪ್ರಬಂಧ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುವ ಪ್ರತಿಯೊಬ್ಬರೂ ಸಾಮಾನ್ಯ ಅಧ್ಯಯನದ ನಾಲ್ಕು ಪತ್ರಿಕೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಮುಖ್ಯ ಪರೀಕ್ಷೆಯ ಮೊದಲ ಪತ್ರಿಕೆ ಪ್ರಬಂಧ ರಚನೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಶಾಲಾ ಸಮಯದಿಂದಲೂ ಪ್ರಬಂಧ ಬರೆಯುತ್ತಿದ್ದೇವೆ, ಅದಕ್ಕೇಕೆ ವಿಶೇಷ ತಯಾರಿ? ಎನ್ನುವ ಧೋರಣೆಯೂ ಅನೇಕರಲ್ಲಿ ಇರುತ್ತದೆ.

ವಾಸ್ತವವಾಗಿ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ರ‍್ಯಾಂಕ್ ಹೆಚ್ಚಿಸುವಲ್ಲಿ ಪ್ರಬಂಧ ಪತ್ರಿಕೆಯ ಅಂಕಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಉಳಿದ ಎಂಟು ಪತ್ರಿಕೆಗಳಿಗೆ ನೀಡುವ ಪ್ರಾಮುಖ್ಯವನ್ನು ಪ್ರಬಂಧ ಪತ್ರಿಕೆಗೂ ನೀಡಿದರೆ ಮಾತ್ರ ಅಭ್ಯರ್ಥಿಗಳು ಸಂದರ್ಶನದ ಸುತ್ತಿಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಬಂಧ ಬರೆಯುವಲ್ಲಿ ಅಭ್ಯರ್ಥಿಗಳು ಬಳಸುವ ಪದಸಂಪತ್ತು, ವಾಕ್ಯರಚನಾ ಕೌಶಲ, ವಿಶ್ಲೇಷಣೆಗಳು ಇತರ ಪತ್ರಿಕೆಗಳ ಉತ್ತರಗಳ ಸತ್ವವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ.

ಹತ್ತಲ್ಲ, ಇಪ್ಪತ್ತಲ್ಲ 250 ಅಂಕಗಳು!

ಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸದ ಪಠ್ಯಕ್ರಮದ ಭಾಷಾ ಪತ್ರಿಕೆಗಳಲ್ಲಿ ಹೆಚ್ಚೆಂದರೆ ಪ್ರಬಂಧ ರಚನೆಗೆ 20 ಅಂಕಗಳಿರುತ್ತವೆ. ಎರಡು ವಿಷಯಗಳನ್ನು ನೀಡಿ ಒಂದಕ್ಕೆ ಉತ್ತರಿಸುವಂತೆ ಕೇಳಿರುತ್ತಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಬಂಧಗಳಿಗೆ ನಿಗದಿಯಾದ ಒಟ್ಟು ಅಂಕಗಳು ಬರೋಬ್ಬರಿ 250! ಅಭ್ಯರ್ಥಿಗಳು 125 ಅಂಕಗಳ ಎರಡು ಪ್ರಬಂಧ ಬರೆಯಬೇಕು. ಪ್ರಶ್ನೆಪತ್ರಿಕೆಯಲ್ಲಿ ಎರಡು ವಿಭಾಗಗಳಿದ್ದು ಪ್ರತಿ ವಿಭಾಗದಲ್ಲಿ ನಾಲ್ಕು ವಿಷಯಗಳಿರುತ್ತವೆ. ಎರಡೂ ವಿಭಾಗಗಳಿಂದ ಒಂದೊಂದು ವಿಷಯ ಆಯ್ದುಕೊಂಡು 1000 ರಿಂದ 1200 ಪದಗಳ ಮಿತಿಯೊಳಗೆ ಪ್ರಬಂಧ ಬರೆಯಬೇಕೆಂಬ ನಿಬಂಧನೆಯಿದೆ. ವಿಷಯಕ್ಕೆ ಪೂರಕವಾಗುವ ಅಂಶಗಳನ್ನು ಸಮರ್ಥವಾಗಿ ಬರೆದರೆ 200 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ.

ಒಂದೇ ಅಂಶದ ಜಪ ಬೇಡ

ಯಾವುದೇ ವಿಷಯಕ್ಕೆ ಸಂಬಂಧಪಡುವ ಅನೇಕ ಅಂಶಗಳಿರುತ್ತವೆ. ನಿಮಗೆ ಇಷ್ಟವೆನಿಸುವ ಒಂದೇ ಅಂಶವನ್ನು ಇಡೀ ಪ್ರಬಂಧದುದ್ದಕ್ಕೂ ಲಂಬಿಸಬೇಡಿ. ವಿಷಯದ ಮುಖ್ಯಾಂಶ, ಬೇಡಿಕೆ ಮತ್ತು ಉದ್ದೇಶಕ್ಕನು ಗುಣವಾಗಿ ಸರಳ ಭಾಷೆಯಲ್ಲಿ, ವ್ಯಾಕರಣಬದ್ಧವಾಗಿ ಪ್ರಬಂಧ ಬರೆಯಿರಿ. ಒಂದು ವಿಷಯವನ್ನು ಹಲವು ದೃಷ್ಟಿಕೋನಗಳಿಂದ ವಿಶ್ಲೇಷಿಸುವ ಸಾಧ್ಯತೆಗಳಿರುತ್ತವೆ. ಅದರ ಸದುಪಯೋಗ ಪಡೆಯಿರಿ. ವಿಷಯಾಂತರ ಮಾಡಿ ಏನೇನೋ ಬರೆಯಬೇಡಿ. ಬಹುತೇಕ ವಿಷಯಗಳು ಸಮಕಾಲೀನ ಸಾಮಾಜಿಕ ವ್ಯವಸ್ಥೆ, ಬದುಕು, ಆರ್ಥಿಕತೆ, ಶಿಕ್ಷಣರಂಗ, ತಂತ್ರಜ್ಞಾನ ಸಾಧನೆ - ಸಂಬಂಧಗಳ ಕುರಿತೇ ಆಗಿರುತ್ತವೆ. ಪುರುಷ ಪ್ರಾಧಾನ್ಯವನ್ನು ಪ್ರಶ್ನಿಸುವ ಮಹಿಳಾಪರ ವಿಷಯಗಳೂ ಇರುತ್ತವೆ.

ವಿಷಯದ ಆಯ್ಕೆ ಭಿನ್ನವಾಗಿರಲಿ

ಪತ್ರಿಕೆಯಲ್ಲಿ ಎಂಟು ವಿವಿಧ ವಿಷಯಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಬರೆಯಲು ಪ್ರಾರಂಭಿಸುವ ಮುನ್ನ ಆಯ್ಕೆ ಮಾಡಿಕೊಳ್ಳುವ ವಿಷಯಗಳು ಒಂದಕ್ಕೊಂದು ಸಂಬಂಧ ಪಡದಿದ್ದರೆ ಒಳ್ಳೆಯದು. ಆಗ ನಿಮಗೆ ವಿಭಿನ್ನ ವಿಷಯಗಳ ಬಗ್ಗೆ ಸಮರ್ಥವಾಗಿ ಬರೆಯುವ ಅವಕಾಶ ಸಿಗುತ್ತದೆ. ಉದಾಹರಣೆಗೆ ಭಾಗ ಒಂದರಿಂದ ವಿಜ್ಞಾನ – ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ ಆಯ್ದುಕೊಂಡರೆ ಭಾಗ ಎರಡರಿಂದ ತತ್ವಶಾಸ್ತ್ರ, ಮಾನವಿಕ, ಜೀವವೈವಿಧ್ಯ, ಅಂತರ್‌ ವಿಮರ್ಶೆ, ಆತ್ಮಾವಲೋಕನದ ವಿಷಯವನ್ನು ಆಯ್ದುಕೊಂಡು ಬರೆಯುವ ಪ್ರಯತ್ನ ಮಾಡಿರಿ.

ವಿಶ್ಲೇಷಣಾತ್ಮಕ ‘3600’ ಉತ್ತರ ಬೇಕು!

ಪ್ರಬಂಧಕ್ಕೆ ಕೊಡುವ ವಿಷಯಗಳು ಅತ್ಯಂತ ಗಹನವಾಗಿರುತ್ತವೆ. ಅಭ್ಯರ್ಥಿಯ ಬುದ್ಧಿಶಕ್ತಿ, ಸಾಮಾಜಿಕ ಜ್ಞಾನ ವಾಕ್ಯರಚನಾ ಶೈಲಿ ಮತ್ತು ಭಾಷಾ ಪ್ರೌಢಿಮೆಯನ್ನು ಒರೆಗೆ ಹಚ್ಚುವ ವಿಷಯಗಳು ವಿಚಿತ್ರವೂ, ವಿಶೇಷವೂ ಕೆಲವೊಮ್ಮೆ ಅತಿ ಸವಾಲಿನವೂ ಆಗಿರುತ್ತವೆ. ಉದಾಹರಣೆಗೆ ‘ಟೆಕ್ನಾಲಜಿ ಆ್ಯಸ್ ಸೈಲೆಂಟ್ ಫ್ಯಾಕ್ರ್ಸ್‌ ಇನ್ ಇಂಟರ್‌ನ್ಯಾಷನಲ್ ರಿಲೇಶನ್ಸ್’ ಎಂಬ ವಿಷಯವನ್ನೇ ಗಮನಿಸಿ. ಸಾವಿರ ಪದಗಳಿಗೆ ಹೊಂದುವಂತೆ ತಂತ್ರಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳೆರಡನ್ನೂ ಗಮನದಲ್ಲಿಟ್ಟುಕೊಂಡು ಪ್ರಬಂಧ ಬರೆಯಬೇಕು. ಅದಕ್ಕಾಗಿ ವಿಶೇಷ ಅಧ್ಯಯನ ಆಗಿರಬೇಕು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಸಾಧನೆ, ಹೊರದೇಶಗಳಿಂದ ತಂತ್ರಜ್ಞಾನ ಆಮದು, ಇಲ್ಲಿಂದ ನಡೆಯುವ ರಫ್ತು, ಅಂತರರಾಷ್ಟ್ರೀಯ ವ್ಯಾಪಾರ ನೀತಿ, ಆಂತರಿಕ ಆಮದು – ರಫ್ತು ನೀತಿ, ಇಲ್ಲಿನ ಉದ್ಯಮಗಳ ಪರ –ವಿರೋಧದ ನಿಲುವು, ಸಾಮರ್ಥ್ಯ, ಆರ್ಥಿಕ ಲಾಭ - ನಷ್ಟ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ನಮ್ಮ ತಂತ್ರಜ್ಞಾನದ ಬಗೆಗಿರುವ ಬೆಲೆಯ ಅಂಶಗಳನ್ನೆಲ್ಲಾ ಪ್ರಬಂಧದ ಭಾಗವನ್ನಾಗಿಸಬೇಕು. ಇತ್ತೀಚಿನ ಸಾಧನೆಗಳ ಕುರಿತು ಬರೆಯಬೇಕು.

ಉದಾಹರಣೆಗೆ 1998ರಲ್ಲಿ ಪೊಖ್ರಾನ್‌ನಲ್ಲಿ ಅಣು ಬಾಂಬ್ ಸಿಡಿಸಿದ ನಮ್ಮ ದೇಶದ ಸಾಧನೆಯ ಕುರಿತು ವಿಶ್ವದಾದ್ಯಂತ ಪರ – ವಿರೋಧದ ಹೇಳಿಕೆಗಳು ವ್ಯಕ್ತವಾಗಿದ್ದವು. ಅದು ನಮ್ಮ ತಂತ್ರಜ್ಞಾನದ ಅತಿ ದೊಡ್ಡ ಸಾಧನೆಯಾಗಿತ್ತು. ನ್ಯೂಕ್ಲಿಯರ್ ಕ್ಲಬ್ ಸೇರಿಕೊಂಡ ಹೆಮ್ಮೆ ನಮ್ಮದಾಗಿತ್ತು. ಇದನ್ನು ಸಹಿಸದ ಹಿರಿ-ಕಿರಿಯ ದೇಶಗಳು ಭಾರತದೊಂದಿಗಿನ ವ್ಯಾಪಾರ – ವಹಿವಾಟಿನ ಒಪ್ಪಂದಗಳನ್ನು ಕಡಿದುಕೊಳ್ಳುವ ನಿಲುವು ವ್ಯಕ್ತ ಪಡಿಸಿದ್ದವು! ನಾವು ಶಾಂತಿ - ಸ್ವಸುರಕ್ಷತೆಗಾಗಿ ಈ ಪ್ರಯೋಗ ಎಂಬ ನಿಲುವು ತಾಳಿದ್ದರಿಂದ ಹೆಚ್ಚಿನ ಗೊಂದಲ ಮುಂದುವರಿಯಲಿಲ್ಲ. ಪ್ರಬಂಧದಲ್ಲಿ ಈ ಅಂಶಗಳು ಕಾಣಿಸಿಕೊಂಡರೆ ಅದರ ತೂಕವೇ ಬೇರೆ!

‘ಕಲ್ಚರ್ ಈಸ್ ವಾಟ್ ವಿ ಆರ್, ಸಿವಿಲೈಜೇಶನ್ ಈಸ್ ವಾಟ್ ವಿ ಹ್ಯಾವ್’, ‘ಸಿಂಪ್ಲಿಸಿಟಿ ಈಸ್ ದ ಅಲ್ಟಿಮೇಟ್ ಸೋಫಿಸ್ಟಿಕೇಶನ್’, ‘ದಿ ಪ್ರೊಸೆಸ್ ಆಫ್ ಸೆಲ್ಫ್ ಡಿಸ್ಕವರಿ ಹ್ಯಾಸ್ ನೌ ಬೀನ್ ಟೆಕ್ನಾಲಜಿಕಲಿ ಔಟ್ ಸೋರ್ಸ್ಡ್‌’, ‘ದಿ ರಿಯಲ್ ಈಸ್ ರ‍್ಯಾಶನಲ್ ಅಂಡ್‌ದ ರ‍್ಯಾಶನಲ್ ಈಸ್ ರಿಯಲ್’, ‘ಹಿಸ್ಟರಿ ರಿಪೀಟ್ಸ್ ಇಟ್‌ಸೆಲ್ಫ್, ಫಸ್ಟ್ ಆ್ಯಸ್ ಟ್ರ್ಯಾಜಿಡಿ, ಸೆಕೆಂಡ್ ಆ್ಯಸ್ ಫಾರ್ಸ್’..ಹೀಗೆ ಜೀವನದ ಹಲವು ಮಗ್ಗುಲುಗಳನ್ನು ಸ್ಪರ್ಶಿಸುವ ಸಂಕೀರ್ಣ ವಿಷಯಗಳು ಪ್ರಬಂಧದ ಪತ್ರಿಕೆಯಲ್ಲಿರುತ್ತವೆ. ಹೆಣ್ಣುಮಕ್ಕಳ ಕಾರ್ಯಕ್ಷಮತೆಯನ್ನು ಹೊಗಳುವ ‘ಹ್ಯಾಂಡ್‌ ದಟ್ ರಾಕ್ಸ್ ದಿ ಕ್ರೇಡಲ್, ರೂಲ್ಸ್‌ ದಿ ವರ್ಲ್ಡ್’, ಶ್ರೇಷ್ಠತೆಯ ಪರಿಕಲ್ಪನೆಯನ್ನು ಪ್ರಶ್ನಿಸುವ ‘ದೇರ್ ಆರ್ ಬೆಟರ್ ಪ್ರಾಕ್ಟೀಸಸ್‌ ಟು ಬೆಸ್ಟ್ ಪ್ರಾಕ್ಟೀಸಸ್, ಸಂಶೋಧನೆಯನ್ನು ಟೀಕಿಸುವ ‘ವಾಟ್ ಈಸ್ ರಿಸರ್ಚ್, ಎ ಬ್ಲೈಂಡ್‌ ಥೇಟ್ ವಿಥ್ ನಾಲೆಡ್ಜ್’ ಎಂಬ ಹೇಳಿಕೆಗಳನ್ನು ಪ್ರಬಂಧಗಳನ್ನಾಗಿ ವಿಸ್ತರಿಸುವ ಕ್ಷಮತೆ ಅಭ್ಯರ್ಥಿಗಳಿಗೆ ಬೇಕು. ಅದಕ್ಕಾಗಿ ವಿಸ್ತೃತ ಅಧ್ಯಯನ ಮಾಡಿರಲೇಬೇಕು.

‘ಕೋಟ್ – ಅನ್‌ಕೋಟ್‌’

ಪ್ರಬಂಧದಲ್ಲಿ ಯಾವುದಾದರೂ ಸಾಧಕರ, ತಜ್ಞರ, ನಾಯಕರ ಹೇಳಿಕೆಗಳನ್ನು ಉದಾಹರಿಸುವುದಾದರೆ ಅದನ್ನು ಪೂರ್ತಿಯಾಗಿ ತಪ್ಪಿಲ್ಲದೆ ಬರೆಯಿರಿ. ಇಸವಿ, ಅಂಕಿ – ಅಂಶಗಳೂ ಸರಿಯಾಗಿರಲಿ. ಪುಸ್ತಕದ ಹೆಸರು, ಲೇಖನ – ವರದಿಯ ಉಲ್ಲೇಖಗಳಿಗೆ ಸರಿಯಾದ ದಾಖಲೆ ಇರಲಿ. ಯಾವುದೇ ಸಂಸ್ಥೆ, ಸರ್ಕಾರ, ವ್ಯಕ್ತಿಯ ಕುರಿತಾದ ಒಮ್ಮುಖದ ಟೀಕೆ ಬೇಡ.

ವಿಷಯ ಮಂಡನೆಯಲ್ಲಿ ಸಮಸ್ಯೆಗಳನ್ನು ಮಾತ್ರ ಹೇಳಿದರೆ ಸಾಲದು. ಪರಿಹಾರವನ್ನೂ ಸೂಚಿಸಿರಿ. ಎಷ್ಟೋ ವಿಚಾರಗಳು ಪ್ರಬಂಧಕ್ಕಿಂತ ಚರ್ಚೆಯ ವಿಷಯಗಳಂತಿರುತ್ತವೆ. ರೇಗಿಸುವಂತಿರುತ್ತವೆ. ಪ್ರಚೋದನೆಗೊಳಗಾಗದೆ ನಿಮ್ಮ ನಿಲುವನ್ನು ಮಂಡಿಸಿ. ತೀರಾ ಆದರ್ಶಮಯ ಹೇಳಿಕೆ, ಪರಿಹಾರ, ಊಹಾತ್ಮಕ, ಕಾಲ್ಪನಿಕ ಮಂಡನೆ ಬೇಡ. ಪ್ರಬಂಧ ವರದಿಯಂತಿರಬಾರದು. ಪ್ರಬಂಧದ ಧ್ವನಿ ಸಕಾರಾತ್ಮಕವಾಗಿರಲಿ. ಯಾವುದೋ ಒಂದು ಬದ್ಧತೆ ನಿಲುವಿಗೆ ಅಂಟಿಕೊಳ್ಳದೆ ಸಮನ್ವಯದ ನಿಲುವು ಪ್ರತಿಪಾದಿಸಿರಿ. ನೀವು ಅಧಿಕಾರಿಯಾಗುವವರು, ಜರ್ನಲಿಸ್ಟ್ ಅಲ್ಲ ಎಂಬುದನ್ನು ಮರೆಯದಿರಿ.

(ಮುಂದಿನವಾರ ಪಾಠ–9: ಕಡ್ಡಾಯ ಪತ್ರಿಕೆ ಎ ಮತ್ತು ಬಿ ಎದುರಿಸುವುದು ಹೇಗೆ?)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು