ನವದೆಹಲಿ: ಸರ್ಕಾರಿ ಹುದ್ದೆಗಳ ಭರ್ತಿಗೆ ನಡೆಯುವ ನೇಮಕಾತಿ ಪರೀಕ್ಷೆಗಳ ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಎಚ್ಚರಿಸಿದೆ.
ಯಾವುದೇ ರೂಪದಲ್ಲಿ ಪ್ರಶ್ನೆಪತ್ರಿಕೆಗಳನ್ನು ಪ್ರಕಟಿಸುವುದು, ನಕಲು ಮಾಡುವುದು, ಪ್ರಸಾರ ಮಾಡುವುದು, ಸಂಗ್ರಹ ಮಾಡುವುದು ಕಂಡುಬಂದಲ್ಲಿ ಅದನ್ನು ಗಂಭೀರ ಅಪರಾಧ ಎಂದು ಪರಿಗಣಿಸಿ ಅಂಥ ಅಭ್ಯರ್ಥಿಗಳು ಪರೀಕ್ಷೆ ಬರೆಯದಂತೆ ನಿಷೇಧ ಹೇರಲಾಗುವುದು ಎಂದು ಅದು ಹೇಳಿದೆ.
ಪರೀಕ್ಷಾ ಕೇಂದ್ರಗಳಲ್ಲಿ ನೀಡಲಾಗುವ ಕರಡು ಹಾಳೆಗಳನ್ನು ತೆಗೆದುಕೊಂಡು ಹೋಗುವುದನ್ನೂ ದುರ್ನಡತೆ ಎಂದು ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಕೆಲವರು ಯುಟ್ಯೂಬ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳ ಮೂಲಕ ಇಂಥ ಕೃತ್ಯ ಎಸಗುತ್ತಿರುವುದು ಕಂಡುಬಂದ ಕಾರಣ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.