ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಹೀಗಿರಲಿ ಸಿದ್ಧತೆ

ಜೂ 5ಕ್ಕೆ ಪೂರ್ವ ಭಾವಿ ಪರೀಕ್ಷೆ ಫೆ. 22 ಅರ್ಜಿ ಸಲ್ಲಿಕೆಗೆ ಕೊನೆ ದಿನ
Last Updated 9 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಪ್ರಸಕ್ತ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸಿವಿಲ್ ಸರ್ವೀಸ್‌ ಮತ್ತು ಫಾರೆಸ್ಟ್‌ ಸರ್ವೀಸ್‌ ಹುದ್ದೆಗಳಿಗೆ ಜೂನ್ 5 ರಂದು ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್‌) ನಡೆಯುತ್ತಿದೆ. ಈ ಕುರಿತು ಲೋಕಸೇವಾ ಆಯೋಗ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಫೆ. 22 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಸೆ.16ರಂದು ಮುಖ್ಯ ಪರೀಕ್ಷೆ ನಡೆಯಲಿದೆ.

ಐಎಎಸ್/ಐಪಿಎಸ್/ಐಎಫ್ಎಸ್/ಐಆರ್‌ಎಸ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಅಭ್ಯರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಹಂತಗಳನ್ನು ದಾಟಬೇಕು. ಅಭ್ಯರ್ಥಿಗಳು ಸಿವಿಲ್ ಸರ್ವೀಸಸ್ ಮತ್ತು ಇಂಡಿಯನ್ ಫಾರೆಸ್ಟ್ ಸರ್ವೀಸಸ್ ಇವುಗಳಲ್ಲಿ ಯಾವುದಾದರೂ ಒಂದನ್ನು ಅಥವಾ ಎರಡನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಎರಡನ್ನೂ ಆಯ್ಕೆಮಾಡಿಕೊಳ್ಳುವವರ ಅನುಕೂಲಕ್ಕಾಗಿ ಸಿವಿಲ್ ಸರ್ವೀಸಸ್ ಮತ್ತು ಇಂಡಿಯನ್ ಫಾರೆಸ್ಟ್ ಸರ್ವೀಸಸ್ ಮುಖ್ಯ ಪರೀಕ್ಷೆಗಳನ್ನು ಪ್ರತ್ಯೇಕ ದಿನಾಂಕಗಳಂದು ನಡೆಸಲಾಗುತ್ತದೆ.

ಪ್ರಿಲಿಮ್ಸ್‌ಗೆ ಏನೇನು ಪಠ್ಯಕ್ರಮ?

ಪ್ರಿಲಿಮ್ಸ್ ಪರೀಕ್ಷೆಗೆ ಎರಡು ವಿಷಯಗಳ ಪ್ರಶ್ನೆ ಪತ್ರಿಕೆಗಳಿರುತ್ತವೆ. ಮೊದಲನೆಯ ವಿಷಯ– ಸಾಮಾನ್ಯ ಜ್ಞಾನ. ಇದರಲ್ಲಿ ಅಭ್ಯರ್ಥಿಗಳು ಎರಡು ಗಂಟೆ ಅವಧಿಯಲ್ಲಿ, 200 ಅಂಕಗಳಿಗೆ ಪರೀಕ್ಷೆ ಬರೆಯಬೇಕು. ಈ ಪತ್ರಿಕೆಯಲ್ಲಿ ಕೆಳಗೆ ಉಲ್ಲೇಖಿಸಿರುವ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಪ್ರಚಲಿತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಂಗತಿಗಳು

ಭಾರತದ ಪ್ರಾಚೀನ-ಮಧ್ಯಕಾಲೀನ-ಆಧುನಿಕ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ, ರಾಷ್ಟ್ರೀಯತೆ

ಭಾರತ ಮತ್ತು ಪ್ರಪಂಚದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳು

ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ - ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳಿರುತ್ತವೆ.

ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು ಇತ್ಯಾದಿ.

ಪರಿಸರ ಅಧ್ಯಯನ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ, ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ.

ಸಾಮಾನ್ಯ ವಿಜ್ಞಾನ - ಭೌತ-ಜೀವ-ರಸಾಯನ ಶಾಸ್ತ್ರ, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿ ಇತ್ಯಾದಿ.

ಎರಡನೇ ಪ್ರಶ್ನೆ ಪತ್ರಿಕೆ, ಸಿವಿಲ್ ಸರ್ವೀಸ್‌ ಆ್ಯಪ್ಟಿಟ್ಯೂಡ್ ವಿಷಯಕ್ಕೆ ಸಂಬಂಧಿಸಿದ್ದು. ಇದೂ ಕೂಡ 200 ಅಂಕಗಳ ಪ್ರಶ್ನೆ ಪತ್ರಿಕೆ. ಎರಡು ಗಂಟೆ ಕಾಲಾವಧಿ. ಈ ಪತ್ರಿಕೆಯಲ್ಲಿ ಕೆಳಕಂಡಂತೆ ಪ್ರಶ್ನೆಗಳಿರುತ್ತವೆ.

ಕಾಂಪ್ರಹೆನ್ಷನ್ (ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು)

ಸಂವಹನ ಕೌಶಲಗಳು ಮತ್ತು ಇಂಟರ್‌ನಲ್‌ ಸ್ಕಿಲ್ಸ್ (ವೈಯಕ್ತಿಕ ಕೌಶಲಗಳು)

ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ

ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ

ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್ ಇತ್ಯಾದಿ).

ಇಂಗ್ಲಿಷ್ ಭಾಷೆಯಲ್ಲಿರುವ ಪ್ಯಾರಾಗ್ರಾಫ್‌ ಅನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.

ಇಂಗ್ಲಿಷ್ ಕಾಂಪ್ರೆಹೆನ್ಷನ್‌

ಪರೀಕ್ಷೆ ಸಿದ್ಧತೆ ಹೀಗಿರಲಿ..

ಸೌಲಭ್ಯಗಳ ಸಬೂಬು ಹೇಳದೇ, ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಈ ಬಗ್ಗೆ ಐಎಎಸ್‌ ಅಧಿಕಾರಿ ಸತ್ಯಪ್ರಕಾಶ್‌ ಹೀಗೆ ಹೇಳುತ್ತಾರೆ; ‘ನಮ್ಮೂರು ಊರು ಚಿಕ್ಕದು, ಲೈಬ್ರರಿ ಇಲ್ಲ.. ಇಂಥ ನೆಪಗಳು ಪರೀಕ್ಷೆ ಸಿದ್ಧತೆಗೆ ಮುಖ್ಯವಾಗುವುದಿಲ್ಲ. ಕಷ್ಟಪಟ್ಟು ಓದಿ, ಇಷ್ಟಪಟ್ಟು ಓದಿ. ಯಶಸ್ಸು ಗಳಿಸಲೇ ಬೇಕೆಂದು ಗುರಿ ಇಟ್ಟುಕೊಂಡು, ದೃಢ ನಿರ್ಧಾರದಿಂದ ಓದಬೇಕು’.

ಅಂದ ಹಾಗೆ, ಶಿವಮೊಗ್ಗ ಮೂಲದ ಸತ್ಯಪ್ರಕಾಶ್, ಮೊದಲ ಪ್ರಯತ್ನದಲ್ಲೇ ಸಿವಿಲ್ ಸರ್ವೀಸ್‌ ಪರೀಕ್ಷೆಗಳಲ್ಲಿ 2ನೇ ರ‍್ಯಾಂಕ್‌ನೊಂದಿಗೆ ಐಎಎಸ್‌ ಹುದ್ದೆಗೆ ಆಯ್ಕೆಯಾದವರು. ಹರಿಯಾಣ ರಾಜ್ಯದ ವಿವಿಧ ಇಲಾಖೆಗಳ ಆಯುಕ್ತರಾಗಿ, ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

‘ಪ್ರಿಲಿಮ್ಸ್‌ ಅಥವಾ ಮುಖ್ಯಪರೀಕ್ಷೆಗೆ ಸಿದ್ಧರಾಗುವವರು ಇಂಗ್ಲಿಷ್ ಮತ್ತುಕನ್ನಡದ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಿ. ಕೆಲವು ವಾರಪತ್ರಿಕೆಗಳು, ಮಾಸಪತ್ರಿಕೆಗಳು, ಸಾಮಾನ್ಯ ಜ್ಞಾನ ಕೈಪಿಡಿಗಳು, ವ್ಯಕ್ತಿತ್ವ ವಿಕಾಸದ ಪುಸ್ತಕಗಳನ್ನು ಓದಿ. ಮೂಲಭೂತ ಅಂಕಿ–ಅಂಶಗಳನ್ನು ಸಂಗ್ರಹಿಸಿಕೊಂಡು, ಟಾರ್ಗೆಟ್‌ ಓರಿಯಂಟೆಡ್ ಆಗಿ ಓದಬೇಕು. ದೊಡ್ಡದನ್ನು ಸಾಧಿಸುವ, ಎಲ್ಲರಿಗೂ ಹೆಮ್ಮೆ ಎನಿಸುವಂತೆ ಬೆಳೆಯ ಬೇಕೆಂದುಕನಸು ಕಟ್ಟಿಕೊಂಡು ಓದಲು ಆರಂಭಿಸಿ’ ಎಂದು ಸತ್ಯಪ್ರಕಾಶ್ ಸಲಹೆ ನೀಡುತ್ತಾರೆ. ಕನಿಷ್ಠ ಒಂದು ನೂರು ದಿನಗಳ ಕಾಲ ಏಕಾಗ್ರತೆಯಿಂದ ಸತತ ಅಭ್ಯಾಸ (ಫೋಕಸ್ಡ್ ಸ್ಟಡಿ) ಮಾಡಿದರೆ ಪೂರ್ವಭಾವಿ ಪರೀಕ್ಷೆ ಪಾಸು ಮಾಡಬಹುದು’ ಎನ್ನುತ್ತಾರೆ ಅವರು.

ಯಾವುದಕ್ಕೆ ಎಷ್ಟು ಸಮಯ?

ಕೇಂದ್ರೀಯ ವಿದ್ಯಾಲಯಗಳ 6 ರಿಂದ 12 ನೇ ತರಗತಿವರೆಗಿರುವ ಪುಸ್ತಕಗಳಲ್ಲಿರುವ ಮಾಹಿತಿಯನ್ನು ಒಮ್ಮೆ ತಿರುವಿ ಹಾಕಿ. ಇದಕ್ಕೆಎರಡು ವಾರಗಳ ಕಾಲಾವಧಿ ಸಾಕು.

ವಾರ್ಷಿಕ ಪುಸ್ತಕಗಳು, ಐಚ್ಛಿಕ ವಿಷಯದ ಪುಸ್ತಕ ಮತ್ತು ನೋಟ್ಸ್ ತಿರುವಿ ಹಾಕಲು ಎರಡು ತಿಂಗಳು ಬೇಕಾಗುತ್ತದೆ.

ಉಳಿದ ಸಮಯವನ್ನು ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಉಪಯೋಗಿಸುವುದು ಲಾಭದಾಯಕ.

ಕೇವಲ ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ನಡೆಸುವುದಕ್ಕೆ ಬದಲಾಗಿ ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗೂ ಜೊತೆ ಜೊತೆಯಲ್ಲಿಯೇ ನೋಟ್ಸ್ ಮಾಡಿಕೊಳ್ಳುತ್ತಾ ಅಧ್ಯಯನ ಮಾಡಿದರೆ, ಖಂಡಿತಾ ಸಂದರ್ಶನಕ್ಕೆ ಹಾಜರಾಗುವಷ್ಟು ಅರ್ಹತೆ ಗಳಿಸುತ್ತಾರೆ ಎನ್ನುವುದು ಸತ್ಯಪ್ರಕಾಶ್ ಅವರ ಅಭಿಪ್ರಾಯ.

***

ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮ ಪರೀಕ್ಷೆಗೆ ಅಗತ್ಯವಾದ ವಿದ್ಯಾರ್ಹತೆ, ಮತ್ತಿತರ ಮಾಹಿತಿಗಾಗಿ ಈ ಜಾಲತಾಣಗಳನ್ನು ನೋಡಿ: www.upsc.gov.in www.iasexamportal.com www.vajiramandravi.com, www.careerindia.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT