ಸಾಮಾನ್ಯವಾಗಿ ಶೈಕ್ಷಣಿಕ ಪ್ರವಾಸ ಎಂದರೆ ಶಾಲೆಯಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಐತಿಹಾಸಿಕ ಸ್ಥಳಗಳಿಗೆ ಹೋಗುವ, ವೈಜ್ಞಾನಿಕ ವಿಚಾರಗಳನ್ನು ಅರಿಯಲು ತೆರಳುವ ಪ್ರವಾಸವೇ ಆಗಿರುತ್ತದೆ. ಆದರೆ ಶಾಲೆಗಳನ್ನೇ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಜನರು ಬರುವುದಾದರೆ ಅದು ಅಕ್ಷರಶಃ ಶೈಕ್ಷಣಿಕ ಪ್ರವಾಸ ಅಲ್ಲವೆ? ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಇದು ಹೌದು.

ವಿಶೇಷವೆಂದರೆ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳನ್ನು ನೋಡಲು 2017ರಲ್ಲಿ ರಾಜ್ಯದ ಹಲವು ಕಡೆಗಳಿಂದ ತಂಡಗಳು ಬಂದಿವೆ. ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳ ಪೈಕಿ ಅನೇಕ ಶಾಲೆಗಳಲ್ಲಿ ಅಧ್ಯಾಪಕರು ಮತ್ತು ಸ್ಥಳೀಯರ ಮುತುವರ್ಜಿಯಿಂದ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರುವುದನ್ನು ನೋಡಲೆಂದೇ ಅಧಿಕಾರಿಗಳು, ಅಧ್ಯಾಪಕರು ಮತ್ತು ಶಿಕ್ಷಣಪ್ರೇಮಿಗಳು ಭೇಟಿ ನೀಡಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಜನರಲ್ಲಿ ತೀರಾ ಅಸಡ್ಡೆ ಮೂಡುತ್ತಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಆದರೆ ವಾಸ್ತವವಾಗಿ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಶಾಲೆಗಳೇ ಹೆಚ್ಚು ನವೀನ ಪ್ರಯೋಗಗಳನ್ನು ನಡೆಸುತ್ತಿರುವುದು ಕಾಣುತ್ತದೆ.

‘ಕೆಲವು ಶಾಲೆಗಳಲ್ಲಿ ಸಾವಯವ ರೀತಿಯಲ್ಲಿ ಬೆಳೆದ ಕೈತೋಟಗಳಿದ್ದರೆ, ಮತ್ತೆ ಕೆಲವು ಶಾಲೆಗಳಲ್ಲಿ ಬೆಳಗಿನ ಉಪಾಹಾರ ವ್ಯವಸ್ಥೆ ಇದೆ. ಮಧ್ಯಾಹ್ನದ ಬಿಸಿಯೂಟವನ್ನೂ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸುವ ಮುತುವರ್ಜಿ, ಎಸಿ ಅಳವಡಿಸಿದ ಕಂಪ್ಯೂಟರ್ ಲ್ಯಾಬ್‌ಗಳು, ವ್ಯವಹಾರಕ್ಕೆ ಬೇಕಾದಷ್ಟು ಇಂಗ್ಲಿಷ್ ಕಲಿಕೆಗೆ ವ್ಯವಸ್ಥೆ ಮಾಡಿಕೊಂಡಿರುವ ಶಾಲೆಗಳು ಇಲ್ಲಿವೆ. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಕ್ಷಕರು, ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಶಿಕ್ಷಣ ಸಂಯೋಜಕರು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸ ಬರುತ್ತಾರೆ. ಶಾಲೆಗಳನ್ನು ಅಧ್ಯಯನ ಮಾಡುವ ಉದ್ದೇಶ ಅವರದು’ ಎನ್ನುತ್ತಾರೆ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ.

2017ರ ಜೂನ್‌ನಿಂದ ಡಿಸೆಂಬರ್ ಅವಧಿಯಲ್ಲಿ 18 ತಂಡಗಳು ವಿವಿಧ ಜಿಲ್ಲೆಗಳಿಂದ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿವೆ. ಒಂದು ತಂಡದಲ್ಲಿ ಸುಮಾರು 20ರಿಂದ 40 ಮಂದಿ ಇರುತ್ತಾರೆ. ರಾಯಚೂರು, ಮಂಡ್ಯ, ಕೊಡಗು, ಬೀದರ್, ಹಾಸನ, ಗುಲ್ಬರ್ಗ, ಯಾದಗಿರಿ, ಬೆಂಗಳೂರಿನ ರಾಮನಗರ, ಪಾಂಡವಪುರ, ಗದಗ, ಮೈಸೂರು, ಬಳ್ಳಾರಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು, ಅಧ್ಯಾಪಕರ ತಂಡಗಳು ದಕ್ಷಿಣ ಕನ್ನಡದ ಶಾಲೆಗಳನ್ನು ನೋಡಿ ಮೆಚ್ಚಿಕೊಂಡಿವೆ. ಒಂದು ಜಿಲ್ಲೆಯಿಂದ ಎರಡು ತಂಡಗಳು ಬಂದ ಉದಾಹಣೆಯೂ ಇದೆ.

ಶಾಲೆಯ ಏಳಿಗೆಗೆ ಸರ್ಕಾರದ ಅನುದಾನ ಮಾತ್ರ ಸಾಲದು. ಸರ್ಕಾರ ಕೊಟ್ಟ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಹಾಗೂ ಅದಕ್ಕೆ ಇನ್ನಷ್ಟು ಸೇರಿಸಿ ಶಾಲೆಯನ್ನು ಅಭಿವೃದ್ಧಿಪಡಿಸುವ ಪ್ರವೃತ್ತಿ ಇಲ್ಲಿನ ಹಲವಾರು ಗ್ರಾಮಗಳಲ್ಲಿ ಕಂಡುಬರುತ್ತದೆ. ಹಾಗಾಗಿ ಶಾಲೆಗಳೇ ಊರಿನ ಕೇಂದ್ರಬಿಂದು ಆಗಿವೆ ಎನ್ನುತ್ತಾರೆ ಅವರು.

ತಾವೇ ಬೆಳೆದ ಹಣ್ಣು ತಿನ್ನುವ ಮಕ್ಕಳು: ಕೆದ್ದಳಿಕೆ ಸರ್ಕಾರಿ ಶಾಲೆಯಲ್ಲಿ ಸುಮಾರು ಎರಡು ಎಕರೆ ಜಾಗವಿದೆ. ಅಲ್ಲಿ ತರಕಾರಿ, ಹಣ್ಣಿನ ಗಿಡಗಳನ್ನು ಮಕ್ಕಳು, ಶಿಕ್ಷಕರು ಸೇರಿ ಬೆಳೆಸಿದ್ದಾರೆ. ಸುಮಾರು 45 ತೆಂಗಿನ ಗಿಡಗಳಿವೆ. ಈ ಕೃಷಿ ಕಾಯಕಕ್ಕೆ ಅನುಕೂಲವೆಂಬಂತೆ ಬಾವಿಯಿದೆ. 100 ಹಣ್ಣಿನ ಗಿಡಗಳಲ್ಲಿ ಬೆಳೆಯುವ ಹಣ್ಣನ್ನು ಮಕ್ಕಳಿಗೇ ಹಂಚಲಾಗುತ್ತದೆ. ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಇದಕ್ಕಿಂತ ದೊಡ್ಡ ಪ್ರಯತ್ನ ಮತ್ತೇನು ಬೇಕು. ತಾವೇ ಬೆಳೆದ ಹಣ್ಣನ್ನು ಮೆಲ್ಲುವ ಮಕ್ಕಳ ಮನದಲ್ಲಿ ಸಂತೃಪ್ತಿಯ ನಗುವನ್ನು ಯಾವ ರ‍್ಯಾಂಕ್ ಕೂಡ ನೀಡಲಾಗದು ಅಲ್ಲವೆ – ಎಂದು ಪ್ರಶ್ನಿಸುವವರು, ಕೆದ್ದಳಿಕೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ನಾಯಕ್ ರಾಯಿ. ಶಾಲೆಯಲ್ಲಿಯೇ ತರಕಾರಿಗಳನ್ನು ಬೆಳೆಯುವುದರಿಂದ ಮಧ್ಯಾಹ್ನದ ಬಿಸಿಯೂಟವಂತೂ ವೈವಿಧ್ಯಮಯವಾಗಿರುತ್ತದೆ.

‘ಶತಮಾನೋತ್ಸವ ಕಂಡ ಅನಂತಾಡಿ ಶಾಲೆಯಲ್ಲಿಯೂ ಸುಮಾರು ಐದು ಲಕ್ಷ ರೂಪಾಯಿಗಳಷ್ಟು ವರಮಾನ ಬರುವ ಕೃಷಿ ಕಾಯಕ ನಡೆಯುತ್ತದೆ. ಮಿತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಎಕರೆ ತೋಟದ ಮೂಲಕ ಶಾಲೆಗೆ ಆದಾಯ ಬರುತ್ತದೆ. ಆ ಆದಾಯ ಮಕ್ಕಳ ಚಟುವಟಿಕೆಗಳಿಗೆ, ಕಲಿಕೆಗೇ ಮೀಸಲು.

ಕಡೇಶಿವಾಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 90 ಜಾತಿಯ ಔಷಧಗಿಡಗಳ ತೋಟವನ್ನೇ ನಿರ್ಮಿಸಲಾಗಿದೆ. ದ್ರಾಕ್ಷಿ ತೋಟ, ಸುವರ್ಣಗೆಡ್ಡೆ ಬೆಳೆ ತೆಗೆದು ಅವರು ಕೃಷಿಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ. ಮಜಿ ಸರ್ಕಾರಿ ಶಾಲೆಯಲ್ಲಿ ತೊಂಡೆಯ ಬೃಹತ್ ಚಪ್ಪರವೇ ಇದೆ ಎಂದು ವಿವರಿಸುತ್ತಾರೆ’ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ. ಹೀಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಶಾಲೆಗಳ ದೊಡ್ಡ ಪಟ್ಟಿಯೇ ಅವರ ಬಳಿ ಇದೆ.

ಎಲ್ಲ ಶಾಲೆಗಳೂ ಕೃಷಿಪ್ರಧಾನವೇನಲ್ಲ. ನಡ ಸರ್ಕಾರಿ ಶಾಲೆಯಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ಮೌಲ್ಯದಲ್ಲಿ ನಿರ್ಮಿಸಲಾದ ವಿಶೇಷವಾದ ಗಣಿತ ಲ್ಯಾಬ್ ಇದೆ. ಸುರಿಬೈಲು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಬೂಬಕ್ಕರ್ ಮಳೆನೀರು ಸಂಗ್ರಹದ ಕುರಿತು ವಿವರಿಸುತ್ತಾರೆ. ಮತ್ತೆ ಹೆಚ್ಚಿನ ಶಾಲೆಗಳಲ್ಲಿ ಕಲಾಪ್ರಿಯತೆ ಕಾಣುತ್ತದೆ. ಶಾಲೆಗಳ ಆವರಣ ಗೋಡೆಯ ಮೇಲೆ ಮಕ್ಕಳೇ ಬಿಡಿಸಿದ ಚಿತ್ತಾರ, ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಹಲವು ಚಿತ್ರಗಳು ನೋಡುಗರನ್ನು ಆಕರ್ಷಿಸದೇ ಇರದು.

ಬಂಟ್ವಾಳ ತಾಲ್ಲೂಕಿನ ಕ್ಷೇತ್ರ ಸಂಯೋಜನಾಧಿಕಾರಿಗಳ ಕಚೇರಿಯಂತೂ ವರ್ಲಿ ಕಲೆಯಿಂದ ಕಂಗೊಳಿಸುತ್ತಿದೆ. ಜಿಲ್ಲೆಗೆ ಭೇಟಿ ನೀಡುವ ಎಲ್ಲ ತಂಡಗಳೂ ಇಲ್ಲಿನ ಕಚೇರಿಯನ್ನು ನೋಡುವುದಕ್ಕೇ ಬರುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳೆಂದರೆ ನೋಡುವಂಥದ್ದೇನಿದೆ ಎಂಬ ಅಸಡ್ಡೆ ಇರುತ್ತದೆ. ಆದರೆ ನಮ್ಮ ಕಚೇರಿ ನೋಡುವುದಕ್ಕೂ ಸುಂದರವಾಗಿದೆ. ಸಿಬ್ಬಂದಿಯೂ ಲವಲವಿಕೆಯಿಂದ ಕೆಲಸ ಮಾಡುತ್ತಾರೆ ಎನ್ನುತ್ತಾರೆ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೇಶ್.

ಶಿಕ್ಷಕರ ನೇಮಕ
ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಲ್ಲ. 30 ಮಕ್ಕಳಿಗೆ ಒಬ್ಬರು ಶಿಕ್ಷಕರು ಎಂಬುದು ಸರ್ಕಾರದ ಮತ್ತೊಂದು ನಿಯಮ. ಆದರೆ ನಲಿಕಲಿ ತರಗತಿಗಳನ್ನು ಒಬ್ಬರು ಶಿಕ್ಷಕರು ನಿರ್ವಹಿಸುವಾಗ ಉಳಿದ ತರಗತಿಯ ವಿದ್ಯಾರ್ಥಿಗಳು ಏನು ಮಾಡಬೇಕು ? – ಈ ಸಮಸ್ಯೆಗೆ ಊರಿನವರು ಸರ್ಕಾರವನ್ನು ಹಳಿಯುತ್ತಿಲ್ಲಾ ಕುಳಿತುಕೊಳ್ಳದೇ, ತಾವೇ ಶಿಕ್ಷಕರನ್ನು ನೇಮಿಸಿದ ಉದಾಹರಣೆ ಇವೆ. ಸ್ಥಳೀಯರೇ ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿದ್ದಾರೆ. ಮತ್ತೆ ಕೆಲವೆಡೆ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ತೆರಳುವ ಪೋಷಕರ ಮನವೊಲಿಸುವ ದೃಷ್ಟಿಯಿಂದ ಕನ್ನಡ ಮಾಧ್ಯಮ ಪಾಠಗಳಿಗೆ ಯಾವುದೇ ತೊಡಕು ಆಗದಂತೆ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುವುದಕ್ಕೆ ಪ್ರತ್ಯೇಕ ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ಊರಿನವರೇ ನೇಮಿಸಿದ್ದಾರೆ. ಅವರ ಸಂಬಳವನ್ನು ಸ್ಥಳೀಯರು ವಂತಿಗೆ ಹಾಕಿ ನೀಡುತ್ತಾರೆ. ಇದರಿಂದಾಗಿ ಇಂಗ್ಲಿಷ್ ವ್ಯಾಮೋಹ ಇರುವ ಪೋಷಕರು ಸರ್ಕಾರಿ ಶಾಲೆಯಿಂದ ವಿಮುಖರಾಗುವುದಿಲ್ಲ. ಅತ್ತ ಮಕ್ಕಳು ಕನ್ನಡ ಭಾಷೆಯನ್ನೂ ಸೊಗಸಾಗಿ ಕಲಿಯುತ್ತಿದ್ದಾರೆ ಚಂದಳಿಕೆ ಎಂಬ ಊರಿನ ಜನರು.

ದೇಶದಲ್ಲೇ ಬೆಸ್ಟ್ ಶೈಕ್ಷಣಿಕ ಜಿಲ್ಲೆ
2010ರಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಪರಿಶೀಲನಾ ಸಮಿತಿ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಸರ್ಕಾರಿ ಶಾಲೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನುತ್ತಾರೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್. ದೇಶದಲ್ಲಿಯೇ ಶೈಕ್ಷಣಿಕವಾಗಿ ಮುಂದುವರೆದ ಅತ್ಯುತ್ತಮ 20 ಜಿಲ್ಲೆಗಳ ಪೈಕಿ ಈ ಜಿಲ್ಲೆಯೂ ಒಂದು ಎಂದು ಪರಿಗಣಿಸಿದ್ದರು. ನಾನು ಕೇರಳ, ತಮಿಳುನಾಡು, ಗುಜರಾತ್, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಆ ಎಲ್ಲ ಪ್ರದೇಶದ ಶಾಲೆಗಳ ಸ್ಥಿತಿಗತಿ ಪರಿಶೀಲಿಸಿದರೆ, ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳ ಸ್ಥಿತಿ ತುಂಬ ಚೆನ್ನಾಗಿದೆ. ಸರ್ಕಾರಿ ಶಾಲೆಗಳು ಉತ್ತಮವಾಗಿವೆ ಎನ್ನುವುದು ಪೋಷಕರಿಗೂ ಅರ್ಥವಾಗಿದ್ದೂ, ಶಾಲೆಯ ಅಭಿವೃದ್ಧಿಯಲ್ಲಿ ಅವರೂ ತೊಡಗಿಸಿಕೊಳ್ಳುತ್ತಿದ್ದಾರೆ, ಎನ್ನುತ್ತಾರೆ ಅವರು.

ಕೆದ್ದಳಿಕೆ ಮತ್ತು ಸುರಿಬೈಲು ಶಾಲೆ ನೋಡಿ ಬೆರಗಾದೆವು. ಅಲ್ಲಿನ ಕೃಷಿ, ಮಳೆನೀರು ಸಂಗ್ರಹ ಮಾತ್ರವಲ್ಲ, ಕಲಿಕಾ ವಿಧಾನ, ಬೆಳಗ್ಗೆ ಮಕ್ಕಳ ಅಸೆಂಬ್ಲಿ ಎಲ್ಲವೂ ವಿನೂತನವಾಗಿದೆ. ಅಸೆಂಬ್ಲಿ ನಡೆಸುವ ವಿಧಾನವನ್ನು ನಮ್ಮ ಶಾಲೆಯಲ್ಲೂ ಅಳವಡಿಸಿಕೊಂಡಿದ್ದೇವೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತಲಿದೆ.
–ಪ್ರೇಮಿಲಾ ಶಿವರಾಜ್ ರಾಂಪುರೆ,
ಹಳ್ಳಿಖೇಡ (ಬಿ) ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ

–ಸುರಿಬೈಲು ಶಾಲೆಗೆ ಭೇಟಿ ನೀಡಿದ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.