ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ನಂತರ ಸೈನ್ಸಾ, ಆರ್ಟ್ಸಾ, ಕಾಮರ್ಸ್ಸಾ?

Last Updated 2 ಮೇ 2022, 2:07 IST
ಅಕ್ಷರ ಗಾತ್ರ

‘ಹತ್ತನೇ ಕ್ಲಾಸ್‌ ಮುಗಿಯಿತು. ಮುಂದೆ ಯಾವ ಕೋರ್ಸ್‌ಗೆ ಸೇರಬೇಕು. ಆರ್ಟ್ಸಾ.. ಸೈನ್ಸಾ.. ಕಾಮರ್ಸ್ಸಾ.. ಡಿಪ್ಲೊಮಾನಾ, ಐಟಿಐಗೆ ಸೇರೋದಾ’ – ಇವು ಅನೇಕ ವಿದ್ಯಾರ್ಥಿಗಳು, ಪೋಷಕರಲ್ಲಿ ಕಾಡುತ್ತಿರುವ ಪ್ರಶ್ನೆಗಳು. ಫಲಿತಾಂಶ ಬರುವುದಕ್ಕೆ ಮುನ್ನ ಮಕ್ಕಳನ್ನು ಇಂಥ ಕೋರ್ಸ್‌ಗೆ ಸೇರಿಸಬೇಕೆಂದುಕೊಂಡಿದ್ದ ಪೋಷಕರು, ಒಮ್ಮೊಮ್ಮೆ ಫಲಿತಾಂಶದ ನಂತರದಲ್ಲಿ ಅಂಕಗಳನ್ನು ನೋಡಿದ ಮೇಲೆ ತಮ್ಮ ಯೋಚನೆಯನ್ನೇ ಬದಲಿಸಿಕೊಳ್ಳುತ್ತಾರೆ.

ಏನೇ ಆಗಲಿ, ಯಾರೇ ಸಲಹೆ ನೀಡಲಿ, ಅಂತಿಮವಾಗಿ ಕೋರ್ಸ್‌ನ ಆಯ್ಕೆ ವಿದ್ಯಾರ್ಥಿಯದ್ದೇ ಆಗಿರಬೇಕು. ಒಬ್ಬ ವಿದ್ಯಾರ್ಥಿಯ ಸಂದರ್ಶನವನ್ನು ಮಾಡಿದ ನಂತರ ಈ ವಿದ್ಯಾರ್ಥಿಗೆ ಈ ಕೋರ್ಸ್ ಆದೀತು ಎನ್ನಬಹುದೇ ಹೊರತು ವಿದ್ಯಾರ್ಥಿ ಯಾರೆಂದೇ ಗೊತ್ತಿಲ್ಲದೆ ಎಲ್ಲರಿಗೂ ಅನ್ವಯವಾಗುವಂತೆ ಸಲಹೆ ನೀಡಲು ಬರುವುದಿಲ್ಲ. ಆದರೆ ಯಾವ ವಿಧಾನದಲ್ಲಿ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಬಹುದು.

ಆದ್ಯತೆಯನ್ನು ಗಮನಿಸಿ

ಮೊದಲಿಗೆ ಮಕ್ಕಳ ಆದ್ಯತೆಯನ್ನು ಗಮನಿಸಬೇಕು. ಕೆಲವು ಕುಟುಂಬಗಳಲ್ಲಿ ಮಕ್ಕಳು ಆದಷ್ಟು ಬೇಗ ಉದ್ಯೋಗಕ್ಕೆ ಸೇರಬೇಕಾದ ಅನಿವಾರ್ಯತೆ ಇರುತ್ತದೆ. ಮಕ್ಕಳು ಇದಕ್ಕೆ ಒಪ್ಪದಿದ್ದರೆ ಜೀವನ ನಡೆಸಲಿಕ್ಕೇ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ಇರುತ್ತದೆ. ಬೇಗನೆ ಉದ್ಯೋಗಕ್ಕೆ ಸೇರುವುದು ಮಕ್ಕಳ ವಿಕಾಸದ ದೃಷ್ಟಿಯಿಂದ ಸರಿಯಲ್ಲದಿದ್ದರೂ, ಕುಟುಂಬದ ಅಗತ್ಯಕ್ಕಾದರೂ ಅವರು ಸ್ಪಂದಿಸಬೇಕಾಗುತ್ತದೆ.‌ ಆಗ ತಕ್ಷಣದ ಅಗತ್ಯವನ್ನು ಪೂರೈಸಿದ ಬಳಿಕ ವಿದ್ಯಾರ್ಥಿಯ ಆಸಕ್ತಿಯ ಕೋರ್ಸ್ ಅನ್ನು ಬದಲಿ ವ್ಯವಸ್ಥೆಗಳ ಮೂಲಕ ಮಾಡಿಕೊಳ್ಳಬೇಕು.

ಈ ಒಂದು ಸನ್ನಿವೇಶವನ್ನು ಹೊರತುಪಡಿಸಿದರೆ ಮಕ್ಕಳ ಆಸಕ್ತಿಗಳಿಗೆ ಪಾಲಕರು ಸ್ಪಂದಿಸಬೇಕು. ಆದರೆ, ಅವರ ಮೇಲೆ ಒತ್ತಡ ಹೇರಬಾರದು. ಏಕೆಂದರೆ ಪ್ರಕೃತಿ ಧರ್ಮದ ಪ್ರಕಾರ ಮಕ್ಕಳು ಇರುವಷ್ಟು ಕಾಲ ಪಾಲಕರು ಇರುವುದಿಲ್ಲ.‌ ತಾವೇ ಇಲ್ಲದ ಜಗತ್ತಿನಲ್ಲಿ ಬದುಕಬೇಕಾದ ಮಕ್ಕಳ ಮೇಲೆ ತಮ್ಮ ಆಯ್ಕೆಯನ್ನು ಪಾಲಕರು ಹಾಕಬಾರದು.‌ ಜವಾಬ್ದಾರಿ ಮಕ್ಕಳದ್ದಾಗಿರಬೇಕು. ಆಗ ಪಾಲಕರ ಅವಲಂಬನೆಯಿಂದ ಮಕ್ಕಳು ಸ್ವತಂತ್ರರಾಗುತ್ತಾರೆ.

ಆಸಕ್ತಿಯೂ ಮುಖ್ಯ

ವಿದ್ಯಾರ್ಥಿಗಳು ತಾವು ಮುಂದೆ ಏನಾಗಬೇಕು ಎಂದು ನಿರ್ಧರಿಸಿರುತ್ತಾರೋ, ಅದೇ ಕೋರ್ಸ್‌ ಆಯ್ಕೆಗೆ ಇರಬೇಕಾದ ಒಂದು ಮಾನದಂಡ. ಆದರೆ ಕೆಲವೊಂದು ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ಮುಂದೆ ಏನಾಗಬೇಕು ಎಂದುಕೊಳ್ಳುವುದು ಭಾವನಾತ್ಮಕವಿರುತ್ತದೆ.‌ ನಿರ್ಧಾರಕ್ಕೆ ವೈಚಾರಿಕ ಸ್ಪಷ್ಟತೆ ಇಲ್ಲ. ಉದಾಹರಣೆಗೆ ವಿದ್ಯಾರ್ಥಿ ತಾನು ಡಾಕ್ಟರ್ ಆಗಬೇಕು ಎಂದುಕೊಳ್ಳುತ್ತಾನೆ/ಳೆ. ಆದರೆ ಡಾಕ್ಟರ್ ಆಗಲು ಏನನ್ನು, ಎಷ್ಟು ವರ್ಷ ಓದಬೇಕು ಎಂಬ ಕಲ್ಪನೆಯೇ ಇರುವುದಿಲ್ಲ. ಈ ರೀತಿ ಮಾಡಿಕೊಳ್ಳುವ ಆಯ್ಕೆಗಳು ಕೋರ್ಸ್‌ ಅನ್ನು ಆರಿಸಿಕೊಳ್ಳಲು ಇರುವ ಮಾನದಂಡವಾಗುವುದಿಲ್ಲ. ಇಂಥದ್ದನ್ನು ಓದಿದರೆ, ಇಂಥ ವೃತ್ತಿಗೆ ಸೇರಬಹುದು ಎಂಬ ಸ್ಪಷ್ಟತೆಯೊಂದಿಗೆ ಕೋರ್ಸ್‌ ಆಯ್ಕೆ ಮಾಡಿಕೊಂಡಿದ್ದರೆ ಆಗ ಓದಿನ ಆಸಕ್ತಿಯೂ ಮಾನದಂಡವಾಗಿರುತ್ತದೆ.

ವ್ಯಕ್ತಿತ್ವದ ಪ್ರವೃತ್ತಿ ಮತ್ತು ಆಸಕ್ತಿ

ಆಸಕ್ತಿಯ ಹಿಂದೆ ಇನ್ನೆರಡು ಅಂಶಗಳಿವೆ. ಕೆಲವರಿಗೆ ತಾವು ಬಯಸಿದ ವೃತ್ತಿಯ ಆಸಕ್ತಿ ಇರುತ್ತದೆ. ಆದರೆ ಆ ವೃತ್ತಿಗಾಗಿ ಓದಬೇಕಾದ ವಿಷಯಗಳ ಬಗ್ಗೆ ಆಸಕ್ತಿ ಇರುವುದಿಲ್ಲ.‌ ಇನ್ನು ಕೆಲವರಿಗೆ ಕಲಿಕಾ ವಿಷಯಗಳ ಬಗ್ಗೆ ಆಸಕ್ತಿ ಇರುತ್ತದೆ.‌ ಅದರಿಂದ ಸಿಗುವ ವೃತ್ತಿಯ ಬಗ್ಗೆ ಆಸಕ್ತಿ ಇರುವುದಿಲ್ಲ.

ನಿಮಗೆ ಯಾವುದು ಸೂಕ್ತ ಎಂದು ಕಂಡು ಹಿಡಿಯಲು ಯಾರೂ ಬೇಡ.‌ ನೀವೇ ಸಾಕು. ಕಲಿಕಾ ವಿಷಯದ ಬಗ್ಗೆ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಹಾಗೂ ನಿಮ್ಮ ಆಕಾಂಕ್ಷೆಯ ಬಗ್ಗೆ ನೀವೇ ಯೋಚಿಸಿ.‌ ಯಾವುದು ಸೂಕ್ತ ಎಂದು ನಿಮಗೇ ಹೊಳೆಯುತ್ತದೆ.‌ ಜೊತೆಗೆ, ಅವಶ್ಯವಾಗಿ ಹಿರಿಯರ ಸಲಹೆ ಪಡೆಯಿರಿ.‌‌ ಆದರೆ ಒಮ್ಮೆ ಮಾಡಿದ ಆಯ್ಕೆಯ ಬಗ್ಗೆ ನಂತರ ಸರಿಯೋ ತಪ್ಪೋ ಎನಿಸಬಾರದು.‌ ಅದರಲ್ಲೆ ಮುಂದುವರಿಯಬೇಕು.‌ ಆಗ ಯಶಸ್ಸು ಸಾಧ್ಯ.

ಕಲಿಕಾ ವಿಷಯ

ಕಲಿಕಾ ವಿಷಯದ ಮೇಲೆ ಮೂರು ಕಾರಣಗಳಿಂದ ಆಸಕ್ತಿ ಇಲ್ಲವಾಗುತ್ತದೆ.

1 ಬೋಧಿಸುವ ಅಧ್ಯಾಪಕರ ಬೋಧನಾ ಕೌಶಲದ ಕೊರತೆಯ ಕಾರಣದಿಂದ.‌ ಈ ಕಾರಣದಿಂದ ಕಲಿಕಾ ವಿಷಯದ ಮೇಲೆ ಆಸಕ್ತಿ ಹೊರಟು ಹೋಗಿದ್ದರೆ ಯಾವ ವೃತ್ತಿಯ ಬಗ್ಗೆ ಆಸಕ್ತಿ ಇದೆಯೊ ಅದಕ್ಕೆ ಸೂಕ್ತವಾದ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾಸಂಸ್ಥೆಯ ಸನ್ನಿವೇಶ ಮತ್ತು ಬೋಧಕರು ಬದಲಾದಾಗ ಕಲಿಕಾ ವಿಷಯವೂ ಆಸಕ್ತಿದಾಯಕವಾಗುತ್ತದೆ.

2 ಕಲಿಕಾ ವಿಷಯದಲ್ಲಿ ವಿದ್ಯಾರ್ಥಿಗಳು ಗಂಭೀರವಾಗಿ ತೊಡಗಿಕೊಳ್ಳದೆ ಇರುವುದರಿಂದಲೂ ಬಯಸಿದ ವೃತ್ತಿಗೆ ಪೂರಕವಾದ ವಿಷಯದ ಕಲಿಕೆಗೆ ಆಸಕ್ತಿ ಇಲ್ಲವಾಗುತ್ತದೆ. ಈ ವಿಷಯ ಕಷ್ಟ ಎನಿಸುತ್ತದೆ.‌ ಎಸ್ಸೆಸ್ಸೆಲ್ಸಿ ಹಂತದಲ್ಲಿ ಹುಡುಗತನದ ಪ್ರವೃತ್ತಿ ಇರುವುದರಿಂದ ವಿಷಯವನ್ನು ಲಘುವಾಗಿ ತೆಗೆದುಕೊಂಡದ್ದರ ಪರಿಣಾಮವಾಗಿ ವಿಷಯ ಕಷ್ಟ ಎನಿಸುವುದು ಇದೆ.‌ ಇದು ಕಾರಣವಾಗಿದ್ದಾಗಲೂ ಬಯಸಿದ ವೃತ್ತಿಗೆ ಪೂರಕವಾದ ಕಲಿಕಾ ವಿಷಯದ ಕೋರ್ಸ್‌ ಅನ್ನೇ ತೆಗೆದುಕೊಳ್ಳಬೇಕು.‌ ವಿಷಯದಲ್ಲಿ ಗಂಭೀರವಾಗಿ ತೊಡಗಿಕೊಂಡಂತೆಲ್ಲ ಕಲಿಕಾ ಕಷ್ಟಗಳು ನಿವಾರಣೆಯಾಗುತ್ತವೆ.

3ವಿದ್ಯಾರ್ಥಿಯ ವ್ಯಕ್ತಿತ್ವವೇ ನಿರ್ದಿಷ್ಟ ಕಲಿಕಾ ವಿಷಯಕ್ಕೆ ಹೊಂದಾಣಿಕೆಯಾಗದೆ ‘ಕಷ್ಟ’ ಎನಿಸುವುದು. ಕೆಲವೊಮ್ಮೆ ಗಣಿತ, ವಿಜ್ಞಾನ ಶಾಖೆಗಳು ಸುಲಭವಾಗುವವರಿಗೆ ಮಾನವಿಕಗಳು(Humanities) ಮತ್ತು ಭಾಷಿಕಗಳು(Languages) ಕಷ್ಟವಾಗುವುದು, ಮಾನವಿಕಗಳು ಮತ್ತು ಭಾಷಿಕಗಳು ಸುಲಭವಾಗುವವರಿಗೆ ವಿಜ್ಞಾನ ಮತ್ತು ಗಣಿತಗಳು ಕಷ್ಟವಾಗುವುದು ಇರುತ್ತದೆ. ಇದು ವ್ಯಕ್ತಿತ್ವದ ಲಕ್ಷಣ. ಇಂತಹ ಸಂದರ್ಭದಲ್ಲಿ ವೃತ್ತಿಯ ಆಯ್ಕೆಯನ್ನೇಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಮಾನವಿಕಗಳನ್ನು ತೆಗೆದುಕೊಂಡು ಶೇ 95 ಅಂಕ ಪಡೆಯಬಲ್ಲವನು, ವಿಜ್ಞಾನ ತೆಗೆದುಕೊಂಡು ಶೇ 38 ಅಂಕ ಪಡೆದಂತಾಗುವ ಪರಿಸ್ಥಿತಿ ಬರುತ್ತದೆ. ಯಶಸ್ಸು ಸಿಗುವುದು ಕೋರ್ಸ್ ಅಥವಾ ನಿರ್ದಿಷ್ಟ ವೃತ್ತಿಯಿಂದಾಗಿ ಅಲ್ಲ.‌ ಕೋರ್ಸ್ ಮತ್ತು ವೃತ್ತಿಯನ್ನು ಅತ್ಯುತ್ತಮವಾಗಿಯೇ ನಿರ್ವಹಿಸಿದಾಗ. ಆದ್ದರಿಂದ ಯಾವುದನ್ನು ಅತ್ಯುತ್ತಮವಾಗಿಯೇ ನಿರ್ವಹಿಸಲು ಆಗುತ್ತದೆಯೋ ಅದನ್ನೆ ಆರಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT