ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೂಲ ವಿಜ್ಞಾನದ ಗುಂಗು!

Last Updated 26 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಇನ್ನೇನು ಮಾರ್ಚ್‌ ತಿಂಗಳು ಬಂದೇ ಬಿಟ್ಟಿತು. ಈಗ ಎರಡನೇ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಚರ್ಚೆಗಳು ಬಹುತೇಕ ಒಂದೇ– ಮುಂದೇನು? ಯಾವ ವಿಷಯದಲ್ಲಿ ಓದು ಮುಂದುವರೆಸುವುದು? ಎಲ್ಲಿ? ಎಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು? ಎಂಬುದು. ನಿಜ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೂ ಸುಲಭವಾಗಿ ದೊರಕದು. ಯಾವುದೇ ಕೋರ್ಸು ಮುಂದುವರೆಸಬೇಕಾದರೂ ಸ್ಪರ್ಧೆ ಎದುರಿಸಲೇ ಬೇಕು. ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಆಯ್ಕೆಯೇ ದೊಡ್ಡ ಪ್ರಶ್ನೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಪದವಿಗಳು ಬಹುಶಃ ಪ್ರಥಮ ಆದ್ಯತೆ. ಇವುಗಳ ನಂತರವಷ್ಟೆ ಎಲ್ಲರ ಗಮನ ಇತರೆ ಕೋರ್ಸುಗಳ ಕಡೆಗೆ ಸಾಗುತ್ತದೆ. ಕೃಷಿ, ತೋಟಗಾರಿಕೆ ಹಾಗೂ ಪಶುಪಾಲನೆಯ ಪದವಿಗಳನ್ನು ಆಯ್ದುಕೊಳ್ಳಲು ಸಾಧ್ಯವಾಗ
ದಿದ್ದಾಗ ಉಳಿಯುವುದು ನಾವು ಬಿಎಸ್ಸಿ ಎಂದು ಹೇಳುವ ಪದವಿ ಕೋರ್ಸುಗಳು. ಈ ಪದವಿ ಕೋರ್ಸುಗಳು ಬಹುತೇಕ ವಿಜ್ಞಾನ ವಿದ್ಯಾರ್ಥಿಗಳ ಕೊನೆಯ ಆಯ್ಕೆಯಾಗಿತ್ತು.

ಆದರೆ ಈಗ ಕಾಲ ಬದಲಾಗಿದೆ. ಎಂಜಿನಿಯರಿಂಗ್‌ ಓದಿದವರಲ್ಲೂ ಕೂಡ ಬಹುತೇಕ ಮಂದಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಕಡಿಮೆ ವೇತನಕ್ಕೆ ದುಡಿಯುವ ಪರಿಸ್ಥಿತಿ ಎದುರಾಗಿದೆ ಅಥವಾ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸಂಬಂಧಪಡದ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಇಲ್ಲವೇ ಇನ್ನಿತರ ಅಲ್ಪಾವಧಿ ಕೋರ್ಸ್‌ಗಳ ತರಬೇತಿ ಪಡೆದು ಹೊಸ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಹೀಗಾಗಿ ವಿಜ್ಞಾನ ಪದವಿಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ. ಹೊಸ ವಿಷಯಗಳು, ಹೊಸ ಉದ್ಯೋಗಗಳ ಅವಕಾಶ, ಸಂಶೋಧನೆಗೂ ವಿಪುಲ ಅವಕಾಶಗಳು ಈ ಕ್ಷೇತ್ರದಲ್ಲಿವೆ. ಆಸಕ್ತಿದಾಯಕ ವಿಷಯಗಳು ವಿದ್ಯಾರ್ಥಿ
ಗಳನ್ನು ಸೆಳೆಯುತ್ತಿವೆ.

ಪೂರಕ ವಿಷಯಗಳು

ವಿಶ್ವವಿದ್ಯಾನಿಲಯಗಳ ನಿಯಮಗಳಿಗನುಸಾರವಾಗಿ ಕೆಲವು ಪೂರಕ ವಿಷಯಗಳನ್ನು ಒಟ್ಟು ಮಾಡಿರುತ್ತಾರೆ. ಉದಾಹರಣೆಗೆ, ಸಿಬಿಜಡ್.‌ ಅರ್ಥಾತ್‌, ರಸಾಯನವಿಜ್ಞಾನ, ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ಎನ್ನುವುದು ಒಂದು ಕಾಂಬಿನೇಷನ್ನು. ಹಾಗೆಯೇ ಬಯೋಕೆಮಿಸ್ಟ್ರಿ, ಮೈಕ್ರೊಬಯಾಲಜಿ, ಬಯೋಟೆಕ್ನಾಲಜಿ ಮತ್ತೊಂದು ಕಾಂಬಿನೇಷನ್ನು. ಹೀಗೆ ಕಾಲೇಜುಗಳೇ ಒಟ್ಟು ಮಾಡಿದ ವಿಷಯಗಳನ್ನಷ್ಟೆ ಆಯ್ದುಕೊಳ್ಳಲು ಅವಕಾಶವಿದೆ. ನಮಗೆ ಬೇಕೆಂದ ಆಯ್ಕೆ ಸಾಧ್ಯವಿಲ್ಲ. ಉದಾಹರಣೆಗೆ, ಫಿಸಿಕ್ಸು, ಕೆಮಿಸ್ಟ್ರಿ ಹಾಗೂ ಬಯೋಟೆಕ್ನಾಲಜಿಗೆ ಅವಕಾಶ ಇಲ್ಲ. ಆಯಾ ಕಾಲೇಜಿನಲ್ಲಿ ಯಾವ ರೀತಿಯ ಕಾಂಬಿನೇಷನ್ನು ಇದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ವಿಜ್ಞಾನದ ಕೋರ್ಸುಗಳು ಯಾವುದೇ ಇರಲಿ, ಮಾಧ್ಯಮ ಬಹುತೇಕ ಇಂಗ್ಲಿಷೇ ಆಗಿರುತ್ತದೆ. ಕರ್ನಾಟಕದಲ್ಲಿ ಸದ್ಯಕ್ಕೆ ಉನ್ನತ ಪದವಿಗಳನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಿಲ್ಲವಾದ್ದರಿಂದ ಕನ್ನಡ ಮಾಧ್ಯಮದಲ್ಲಿ ಪಿಯುಸಿ ಮಾಡಿದ ವಿದ್ಯಾರ್ಥಿಗಳಿಗೆ ತುಸು ತೊಂದರೆ ಆಗಬಹುದು. ಪಿಯುಸಿಯಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡುವಾಗಲೇ ಇಂಗ್ಲಿಷು ಮಾಧ್ಯಮ ಅನಿವಾರ್ಯವಾದ್ದರಿಂದ ಈ ತೊಂದರೆ ಸ್ವಲ್ಪ ಕಡಿಮೆ ಎನ್ನಿಸಬಹುದು. ಆದರೆ ಇಂಗ್ಲಿಷನ್ನು ಓದಿ, ಅರ್ಥೈಸುವ ಬಗ್ಗೆ ತುಸು ಹೆಚ್ಚು ಗಮನ ಕೊಡುವುದರಿಂದ ಈ ಕೋರ್ಸುಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ. ಭಾಷೆಯ ತೊಡಕಿನಿಂದಾಗಿ ವಿಷಯಗಳು ಅರ್ಥವಾಗದೆ ಕೋರ್ಸು ಕಠಿಣ ಎನ್ನಿಸಬಹುದಾದ್ದರಿಂದ ಈ ಕಡೆಗೆ ಗಮನ ಕೊಡಬೇಕಾದ್ದು ಅವಶ್ಯಕ.

ಪಿಯುಸಿ ವಿದ್ಯಾರ್ಥಿಗಳ ಕೊನೆಯ ಆಯ್ಕೆ ಪದವಿ ಕೋರ್ಸುಗಳು ಎಂದಾಕ್ಷಣ ಇವುಗಳಲ್ಲಿ ಪ್ರವೇಶಾತಿ ಸುಲಭ ಎನ್ನುವುದು ಕೇವಲ ಆಸೆಯಷ್ಟೆ. ಏಕೆಂದರೆ ಕರ್ನಾಟಕದಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಪಾಸಾದವರಿಗೆಲ್ಲರಿಗೂ ಪ್ರವೇಶಾತಿ ನೀಡುವಷ್ಟು ಪದವಿ ಸೀಟುಗಳು ಇಲ್ಲ. ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳೆರಡನ್ನು ಒಟ್ಟು ಮಾಡಿದರೂ ಎಂಜಿನಿಯರಿಂಗ್‌, ವೈದ್ಯಕೀಯ ಹಾಗೂ ಕೃಷಿಯಂತಹ ಕೋರ್ಸುಗಳಿಗೆ ಆಯ್ಕೆಯಾಗದೆ ಉಳಿದವರೆಲ್ಲರಿಗೂ ಪದವಿಯಲ್ಲಿ ಪ್ರವೇಶ ದೊರಕದು. ಇದರ ಜೊತೆಗೆ ಈ ವಿವಿಧ ಕಾಂಬಿನೇಷನ್ನುಗಳು ಹಾಗೂ ಅವು ದೊರಕುವ ಕಾಲೇಜುಗಳು ಇತ್ಯಾದಿ ಸೇರಿದಲ್ಲಿ, ಬಹುಶಃ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕೋರ್ಸುಗಳಲ್ಲಿ ಪ್ರವೇಶಾತಿ ಗಿಟ್ಟಿಸಿಕೊಳ್ಳುವುದು ಸುಲಭವೇನೋ ಎನ್ನಿಸಿಬಿಡಬಹುದು.

ವಿಶಿಷ್ಟ ಕೋರ್ಸ್‌: ಮುನ್ನೆಚ್ಚರಿಕೆ ಅಗತ್ಯ

ಇತ್ತೀಚೆಗೆ ಹಲವು ಸ್ವಾಯತ್ತ ಕಾಲೇಜುಗಳು ಹೊಸ, ಹೊಸ ಕೋರ್ಸುಗಳನ್ನು ಪರಿಚಯಿಸುತ್ತಿವೆ. ಡೀಮ್ಡ್‌ ವಿಶ್ವವಿದ್ಯಾನಿಲಯಗಳೂ ತಮ್ಮದೇ ಪಠ್ಯಕ್ರಮಗಳನ್ನು ರೂಪಿಸಿ, ಕೋರ್ಸುಗಳನ್ನು ನಿರ್ಧರಿಸುತ್ತಿವೆ. ಇಂತಹವುಗಳಲ್ಲಿ ಬಲು ವಿಶಿಷ್ಟ ಎನ್ನಿಸುವ ಹಲವು ವಿಷಯಗಳು ಇರಬಹುದು. ಪದವಿ ಮಟ್ಟದಲ್ಲಿ ವಿಷಯಗಳನ್ನು ಆಯ್ಕೆ ಮಾಡುವಾಗ ಆದಷ್ಟೂ ಸಾಮಾನ್ಯ ವಿಷಯಗಳನ್ನು ಆಯ್ಕೆ ಮಾಡುವುದು ಉಚಿತ. ಕಾಲೇಜುಗಳಲ್ಲಿನ ಶಿಕ್ಷಣದ ಮಟ್ಟ ಎಷ್ಟೇ ಉತ್ತಮವಾಗಿದ್ದರೂ ವಿಷಯ ಬಲು ವಿಶಿಷ್ಟವಾಗಿದ್ದಲ್ಲಿ ಮುಂದಿನ ಓದಿಗೆ ಆಯ್ಕೆಗಳು ಕಡಿಮೆ ಆಗುತ್ತವೆ ಎನ್ನುವುದು ಗಮನದಲ್ಲಿರಲಿ.

ಈ ಮೂಲ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ಉದ್ಯೋಗಾವಕಾಶಗಳು ದೊರಕುವುವೇ ಎನ್ನುವುದು ಮುಂದಿನ ಪ್ರಶ್ನೆ. ಇತ್ತೀಚೆಗೆ ಬಹುತೇಕ ಎಲ್ಲ ಸರ್ಕಾರಿ ಉದ್ಯೋಗಗಳಿಗೂ ಕನಿಷ್ಠ ವಿದ್ಯಾರ್ಹತೆ ಪದವಿ ಆಗಿರುವುದರಿಂದ ಈ ಮಟ್ಟದ ಓದು ಅವಶ್ಯಕ ಹಾಗೂ ಅನಿವಾರ್ಯ. ಇದರೊಟ್ಟಿಗೆ ಇಂದಿನ ಉದ್ಯೋಗಗಳ ಸ್ವರೂಪವೂ ಬದಲಾಗಿದೆ. ಕ್ಷೇತ್ರ ಯಾವುದೇ ಆಗಿರಲಿ, ಗುಮಾಸ್ತಗಿರಿಗೂ ಪದವಿಯಲ್ಲದೆ ಹಲವು ಇತರೆ ಕೌಶಲಗಳು ಬೇಕಾಗುತ್ತವೆ. ಇವುಗಳಲ್ಲಿ ಕಂಪ್ಯೂಟರ್‌ ಬಳಕೆ ಬಲು ಮುಖ್ಯ. ಪದವಿಯ ಜೊತೆ, ಜೊತೆಗೇ ಕಂಪ್ಯೂಟರ್‌ನಲ್ಲಿ ಕೆಲವು ಅಪ್ಲಿಕೇಶನ್ನುಗಳನ್ನು ಹೇಗೆ ಬಳಸುತ್ತಾರೆ ಎನ್ನುವುದನ್ನು ಕಲಿಯುವುದು ಉದ್ಯೋಗದ ದೃಷ್ಟಿಯಿಂದ ಮುಖ್ಯ.

ಸ್ವಯಂ ಉದ್ಯೋಗದ ಅವಕಾಶಗಳಿವೆಯೇ ಎನ್ನುವುದು ಮುಂದಿನ ಪ್ರಶ್ನೆ. ಪದವಿ ಮಟ್ಟದಲ್ಲಿ ನಾವು ಓದುವ ವಿಷಯಗಳನ್ನೇ ಆಧರಿಸಿದ ಸ್ವಯಂ ಉದ್ಯೋಗ ಅವಕಾಶಗಳು ಬಲು ಕಡಿಮೆ ಎನ್ನಬಹುದು. ಆದರೂ ಇಲ್ಲದೆ ಏನಿಲ್ಲ. ಬಯೋಕೆಮಿಸ್ಟ್ರಿಯ ಪದವೀಧರರು ರೋಗಪತ್ತೆಯ ಪ್ರಯೋಗಾಲಯಗಳನ್ನು ಸ್ಥಾಪಿಸಬಹುದು. ಫಾರ್ಮಸಿ ಪದವೀಧರರು ಔಷಧದ ಅಂಗಡಿಗಳನ್ನು ತೆರೆಯಬಹುದು. ಮೈಕ್ರೊಬಯಾಲಜಿಯ ಪದವೀಧರರು ಕೃಷಿ ಹಾಗೂ ವೈದ್ಯಕೀಯ ರೋಗ ಪರೀಕ್ಷೆಯ ಪ್ರಯೋಗಾಲಯಗಳಲ್ಲಿ ವೃತ್ತಿ ಹುಡುಕಬಹುದು. ಯಾವುದೇ ಸ್ವಯಂ ಉದ್ಯೋಗಕ್ಕೆ ಬೇಕಾಗುವಂತಹ ಅಧಿಕ ಪರಿಶ್ರಮ ಹಾಗೂ ಕೆಲವು ವಿಶೇಷ ಜ್ಞಾನ ಇವಕ್ಕೂ ಬೇಕಾಗುತ್ತವೆ. ಅವನ್ನು ಪಡೆದುಕೊಳ್ಳುವುದು ಬಲು ಮುಖ್ಯ.

ಹೊಸ ವಿಷಯಗಳು

ಪದವಿ ಕೋರ್ಸುಗಳಲ್ಲಿ ಇತ್ತೀಚೆಗೆ ಹಲವು ಹೊಸ ವಿಷಯಗಳ ಸೇರ್ಪಡೆಯಾಗಿವೆ. ಹಿಂದೆ ಬಿಎಸ್ಸಿ ಎಂದರೆ ಕೇವಲ ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ರಸಾಯನವಿಜ್ಞಾನಗಳಷ್ಟೆ ಅಧ್ಯಯನ ವಿಷಯಗಳಾಗಿದ್ದುವು. ಈಗ ಇವುಗಳೊಟ್ಟಿಗೆ ಇನ್ನೂ ಹಲವು ವಿಜ್ಞಾನ ಶಾಖೆಗಳನ್ನು ಬೋಧಿಸಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾದಂಥವು ಬಯೋಟೆಕ್ನಾಲಜಿ (ಜೈವಿಕ ತಂತ್ರಜ್ಞಾನ), ಆಹಾರ ತಂತ್ರಜ್ಞಾನ (ಫುಡ್‌ ಟೆಕ್ನಾಲಜಿ), ಕಣಜೀವ ವಿಜ್ಞಾನ (ಮಾಲಿಕ್ಯುಲಾರ್‌ ಬಯಾಲಜಿ), ಸೂಕ್ಷ್ಮಜೀವಿವಿಜ್ಞಾನ (ಮೈಕ್ರೊಬಯಾಲಜಿ), ಸೆಲ್‌ ಬಯಾಲಜಿ, ಬಯೋಇನ್‌ಫಾರ್ಮಾಟಿಕ್ಸ್‌, ಬಯೋಮೆಡಿಕಲ್‌ ಸೈನ್ಸ್‌, ಮಟೀರಿಯಲ್‌ ಸೈನ್ಸ್‌, ಎನ್‌ವಿರಾನ್‌ಮೆಂಟಲ್‌ ಸೈನ್ಸ್‌, ಫಿಶರೀಸ್‌, ಇಂಡಸ್ಟ್ರಿಯಲ್‌ ಸೈನ್ಸ್‌, ಜಿಯೊಫಿಸಿಕ್ಸ್‌, ಪಾಲಿಮರ್‌ ಸೈನ್ಸ್‌, ಲೈಫ್‌ ಸೈನ್ಸ್‌, ಜೆನೆಟಿಕ್ಸ್‌ ಪ್ರಮುಖವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT