ಬುಧವಾರ, ಜನವರಿ 19, 2022
23 °C

ಸಿಬಿಎಸ್‌ಇ: ಬದಲಾದ ಮೌಲ್ಯಮಾಪನಕ್ಕೆ ಪೂರಕವಾಗಿರಲಿ ವಿದ್ಯಾರ್ಥಿಗಳ ಸಿದ್ಧತೆ

ವೆಂಕಟಸುಬ್ಬರಾವ್. ವಿ. Updated:

ಅಕ್ಷರ ಗಾತ್ರ : | |

Prajavani

ಇಷ್ಟು ತಿಂಗಳುಗಳ ನಂತರ ಈಗ ಕಲಿಕೆಯ ವಾತಾವರಣವು ಸಹಜಸ್ಥಿತಿಯತ್ತ ಮರಳುತ್ತಿರುವುದು ನಿಜವಾಗಿಯೂ ಸಂತಸದ ವಿಷಯ. ಈ ಬದಲಾದ ಸನ್ನಿವೇಶದಲ್ಲಿ ಅನಿವಾರ್ಯವಾಗಿ ಕಲಿಯುವ ಮತ್ತು ಕಲಿಸುವ ರೀತಿಗಳು, ಪದ್ಧತಿಗಳು ಬದಲಾಗುತ್ತಿವೆ, ಬದಲಾಗಿವೆ. ಒಂದು ಕಡೆ ಕಲಿಕೆಯ ರೀತಿ-ನೀತಿಗಳ ಬದಲಾವಣೆ, ಮತ್ತೊಂದೆಡೆ ಮುಂದೇನು ಎನ್ನುವುದರ ಅನಿಶ್ಚಿತತೆ! ಇವುಗಳ ಮಧ್ಯೆ ಸರಿಯಾದ ರೀತಿಯ ಕಲಿಕೆಯ ಮೌಲ್ಯಮಾಪನ ಮಾಡಲೇಬೇಕಾದ ಅವಶ್ಯಕತೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸಿಬಿಎಸ್‌ಇಯು, ಮೌಲ್ಯಮಾಪನದ ಸುಧಾರಣೆಗಳು – 2021-22 ಹೆಸರಿನಲ್ಲಿ ಶೈಕ್ಷಣಿಕ ವರ್ಷ 2021-22 ಕ್ಕೆ ಅನ್ವಯವಾಗುವಂತೆ ಹೊಸ ಮೌಲ್ಯಮಾಪನದ ರೂಪುರೇಷೆಗಳನ್ನು ಪ್ರಕಟಿಸಿದೆ. ಈ ರೂಪುರೇಷೆಗಳು ಸಿಬಿಎಸ್‌ಇ ಶಾಲೆಗಳಿಗೆ ಅನ್ವಯಿಸುತ್ತವೆ.

ಸಿಬಿಎಸ್‌ಇಯ ಮೌಲ್ಯಮಾಪನದ ಸುಧಾರಣೆಗಳು – 2021-22ರ ಕೆಲವು ಪ್ರಮುಖ ಅಂಶಗಳನ್ನು ಗಮನಿಸೋಣ.

ಈ ಶೈಕ್ಷಣಿಕ ವರ್ಷವನ್ನು ಎರಡು ಅವಧಿಗಳಾಗಿ ವಿಂಗಡಿಸಲಾಗಿದೆ. ಪ್ರತಿ ಅವಧಿಯಲ್ಲಿಯೂ ಶೇ 50 ರಷ್ಟು ಪಠ್ಯಕ್ರಮವನ್ನು ಬೋಧಿಸಲಾಗುವುದು. ಪ್ರತಿ ಅವಧಿಯ ಕೊನೆಯಲ್ಲಿ ಮೌಲ್ಯಮಾಪನವನ್ನು ಮಾಡಲಾಗುವುದು.

ಆಂತರಿಕ ಮೌಲ್ಯಮಾಪನ, ಪ್ರಯೋಗಗಳು ಮತ್ತು ಪ್ರಾಯೋಗಿಕ ಕಾರ್ಯಗಳು, ಪ್ರಾಜೆಕ್ಟುಗಳನ್ನು ಗಂಭೀರವಾಗಿ ಪರಿಗಣಿಸಿ, ಸರಿಯಾದ ರೀತಿಯಲ್ಲಿ ಮಾಡಿ, ಅವುಗಳ ಮೌಲ್ಯಮಾಪನಗಳಿಗೆ ಹೆಚ್ಚು ಒತ್ತುಕೊಡಲಾಗುತ್ತದೆ.

ಆಂತರಿಕ ಮೌಲ್ಯಮಾಪನವು ಇವುಗಳನ್ನು ಒಳಗೊಂಡಿರುತ್ತದೆ.
9 ಮತ್ತು 10ನೆಯ ತರಗತಿಗಳಿಗೆ

3 ಆಂತರಿಕ ಕಿರು-ಪರೀಕ್ಷೆಗಳು (ವರ್ಷದಲ್ಲಿ)
ಪೋರ್ಟ್‌ಫೋಲಿಯೊ
ವಿವಿಧ ರೀತಿಯ ಚಟುವಟಿಕೆಗಳ ಮೌಲ್ಯಮಾಪನ
ಕಲಿಕಾ ಪ್ರಗತಿಯ/ ಅಭಿವೃದ್ಧಿ ಚಟುವಟಿಕೆಗಳ ಮೌಲ್ಯಮಾಪನ

11 ಮತ್ತು 12ನೆಯ ತರಗತಿಗಳಿಗೆ
ಪ್ರತಿಯೊಂದು ಪಾಠದ ಕೊನೆಯಲ್ಲಿ ನಡೆಸುವ ಕಿರು-ಪರೀಕ್ಷೆಗಳು
ಪ್ರಾಯೋಗಿಕ ಚಟುವಟಿಕೆಗಳು
ಪ್ರಾಜೆಕ್ಟ್‌ಗಳು
ಇತರೆ ಕಲಿಕಾ ಚಟುವಟಿಕೆಗಳು

ಮೊದಲನೆಯ ಅವಧಿಯ ಪರೀಕ್ಷೆ
ಒಟ್ಟು ಅಂಕಗಳು 50.
ಆಂತರಿಕ ಮೌಲ್ಯಮಾಪನದ ಅಂಕಗಳು 10. ಮೊದಲನೆಯ ಅವಧಿಯ ಪರೀಕ್ಷೆಯ ಅಂಕಗಳು: 40
ಮೊದಲನೆಯ ಅವಧಿಯ ಪರೀಕ್ಷೆಗಳು ನವೆಂಬರ್‌ನಲ್ಲಿ ಪ್ರಾರಂಭವಾಗುತ್ತವೆ.
ಮೊದಲನೆಯ ಅವಧಿಯ ಪರೀಕ್ಷೆಗಳಲ್ಲಿ, ಬಹು-ಆಯ್ಕೆ ಉತ್ತರದ ಪ್ರಶ್ನೆಗಳು ಮಾತ್ರ ಇರುತ್ತವೆ.
ಶೇ 50ರಷ್ಟು ಪಠ್ಯಕ್ರಮವನ್ನು ಮಾತ್ರ ಒಳಗೊಂಡಿರುತ್ತದೆ.
ಕೆಲವು ವಿಷಯಗಳಲ್ಲಿ 50 ಪ್ರಶ್ನೆಗಳಿಗೆ (ಉದಾ: ವಿಜ್ಞಾನ) ಮತ್ತು ಕೆಲವು ವಿಷಯಗಳಲ್ಲಿ 40 ಪ್ರಶ್ನೆಗಳಿಗೆ (ಉದಾ: ಗಣಿತ) ಉತ್ತರಿಸಬೇಕಾಗಿರುತ್ತದೆ.
ಪ್ರಶ್ನೆಗಳನ್ನು ಭಾಗ-ಎ, ಭಾಗ-ಬಿ ಮತ್ತು ಭಾಗ-ಸಿ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿರುತ್ತದೆ.
ಪ್ರಶ್ನೆಪತ್ರಿಕೆಯು ಸರಳ, ಕ್ಲಿಷ್ಟ ಮತ್ತು ತಾರ್ಕಿಕ ಪ್ರಶ್ನೆಗಳನ್ನೊಳಗೊಂಡಿರುತ್ತದೆ.
ಉತ್ತರಗಳನ್ನು ಒ.ಎಮ್.ಆರ್. ಹಾಳೆಗಳಲ್ಲಿ ತುಂಬಬೇಕು.
ಪರೀಕ್ಷೆಯ ಅವಧಿ: 90 ನಿಮಿಷಗಳು
ಪ್ರಶ್ನೆಪತ್ರಿಕೆಗಳನ್ನು ಓದಲು ನಿಗದಿಪಡಿಸಿದ ಸಮಯ: 20 ನಿಮಿಷಗಳು
ಪರೀಕ್ಷೆಗಳು ಆಯಾ ಶಾಲೆಗಳಲ್ಲಿಯೇ ನಡೆಯುತ್ತವೆ. ಸಿಬಿಎಸ್‌ಇ ಯಿಂದ ನಿಯೋಜಿತರಾದ ವೀಕ್ಷಕರ ಮೇಲ್ವಿಚಾರಣೆಯಲ್ಲಿ ಪರೀಕ್ಷೆಗಳು ನಡೆಯುತ್ತವೆ.

ಮೊದಲನೆಯ ಅವಧಿಯಲ್ಲಿ ಗಳಿಸಿದ ಅಂಕಗಳು, ಅಂತಿಮ ಫಲಿತಾಂಶದ ಭಾಗವಾಗುವುದರಿಂದ, ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಎರಡನೆಯ ಅವಧಿಯ ಪರೀಕ್ಷೆ
ಒಟ್ಟು ಅಂಕಗಳು 50.
ಆಂತರಿಕ ಮೌಲ್ಯಮಾಪನದ ಅಂಕಗಳು 10 ಮತ್ತು ಎರಡನೆಯ ಅವಧಿಯ ಪರೀಕ್ಷೆಯ ಅಂಕಗಳು: 40
ಎರಡನೆಯ ಅವಧಿಯ ಪರೀಕ್ಷೆಗಳು ಮಾರ್ಚ್-ಏಪ್ರಿಲ್-2022 ರಲ್ಲಿ ನಡೆಯುತ್ತವೆ.
ಎರಡನೆಯ ಅವಧಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಸಾಮಾನ್ಯ ಪ್ರಶ್ನೆಪತ್ರಿಕೆಯಂತೆಯೇ ಇರುತ್ತದೆ.
ಶೇ 50ರಷ್ಟು ಪಠ್ಯಕ್ರಮವನ್ನು ಮಾತ್ರ ಒಳಗೊಂಡಿರುತ್ತದೆ.
ಪರೀಕ್ಷೆಯ ಅವಧಿ : 120 ನಿಮಿಷಗಳು
ಆ ಸಮಯದಲ್ಲಿ ( ಮಾರ್ಚ್ – ಏಪ್ರಿಲ್- 2022) ಪರಿಸ್ಥಿತಿಗಳು ಸರಿಯಾಗಿಲ್ಲದಿದ್ದ ಪಕ್ಷದಲ್ಲಿ, ಎರಡನೆಯ ಅವಧಿಯ ಪರೀಕ್ಷೆಯೂ ಮೊದಲನೆಯ ಅವಧಿಯ ಪರೀಕ್ಷೆಯಂತೆಯೇ ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ಒಳಗೊಂಡಿರುತ್ತದೆ ಮತ್ತು ಪರೀಕ್ಷೆಯ ಅವಧಿಯು 90 ನಿಮಿಷಗಳು.

ಎರಡನೆಯ ಅವಧಿಯ ಅಂಕಗಳೂ ಅಂತಿಮ ಫಲಿತಾಂಶಕ್ಕೆ ಪರಿಗಣಿಸಲ್ಪಡುತ್ತವೆ.

ಮುಂದಿನ ದಿನಗಳ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು, ಸಿಬಿಎಸ್‌ಇ ಯು ತನ್ನ ಸುತ್ತೋಲೆಯಲ್ಲಿ, 2021-2022 ಶೈಕ್ಷಣಿಕ ವರ್ಷದ ಮೌಲ್ಯಮಾಪನ ಮತ್ತು ಫಲಿತಾಂಶದ ಬಗ್ಗೆ ಹೀಗೆ ಹೇಳಿದೆ.

ಸನ್ನಿವೇಶ - 1: ಪರಿಸ್ಥಿತಿ ಎಲ್ಲವೂ ಸರಿಯಾಗಿದ್ದು, ಮಕ್ಕಳು ಶಾಲೆಗೆ ಬಂದು ಪರೀಕ್ಷೆ ಬರೆಯುವಂತಿದ್ದರೆ, ಎರಡೂ ಅವಧಿಯ ಪರೀಕ್ಷೆಗಳೂ ನಡೆದು ಅಂಕಗಳನ್ನು ಸಮನಾಗಿ ಪರಿಗಣಿಸಲಾಗುತ್ತದೆ.

ಸನ್ನಿವೇಶ - 2: ಮೊದಲನೆಯ ಅವಧಿಯ ಪರೀಕ್ಷೆಯ ಸಮಯದಲ್ಲಿ ಅನಿವಾರ್ಯವಾಗಿ (ಲಾಕ್‌ಡೌನ್) ಮಕ್ಕಳು ಶಾಲೆಗೆ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಅಂತಿಮ ಫಲಿತಾಂಶದಲ್ಲಿ ಮೊದಲನೆಯ ಅವಧಿಯ ಪರೀಕ್ಷೆಗಳ ಅಂಕಗಳಿಗೆ ಕಡಿಮೆ ಒತ್ತನ್ನು ಕೊಟ್ಟು ಎರಡನೆಯ ಅವಧಿಯ ಅಂಕಗಳಿಗೆ ಹೆಚ್ಚು ಒತ್ತನ್ನು ಕೊಡಲಾಗುವುದು.

ಸನ್ನಿವೇಶ - 3: ಎರಡನೆಯ ಅವಧಿಯ ಪರೀಕ್ಷೆಯ ಸಮಯದಲ್ಲಿ ಅನಿವಾರ್ಯವಾಗಿ (ಲಾಕ್‌ಡೌನ್) ಮಕ್ಕಳು ಶಾಲೆಗೆ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಅಂತಿಮ ಫಲಿತಾಂಶದಲ್ಲಿ ಎರಡನೆಯ ಅವಧಿಯ ಪರೀಕ್ಷೆಗಳ ಅಂಕಗಳಿಗೆ ಕಡಿಮೆ ಒತ್ತನ್ನು ಕೊಟ್ಟು ಮೊದಲನೆಯ ಅವಧಿಯ ಅಂಕಗಳಿಗೆ ಹೆಚ್ಚು ಒತ್ತನ್ನು ಕೊಡಲಾಗುವುದು.

ಸನ್ನಿವೇಶ - 4: ಮೊದಲು ಮತ್ತು ಎರಡನೆಯ ಅವಧಿಯ ಎರಡೂ ಪರೀಕ್ಷೆಗಳ ಸಮಯದಲ್ಲಿ ಅನಿವಾರ್ಯವಾಗಿ (ಲಾಕ್‌ಡೌನ್) ಮಕ್ಕಳು ಶಾಲೆಗೆ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಮೊದಲನೆಯ ಮತ್ತು ಎರಡನೆಯ ಅವಧಿಯ ಆಂತರಿಕ ಮೌಲ್ಯಮಾಪನದ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಲಾಗುವುದು.

ಹೀಗೆ ಈ ಬಾರಿ ವಿದ್ಯಾರ್ಥಿಗಳು ಎಲ್ಲ ಪರೀಕ್ಷೆಗಳನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

(ಮುಂದಿನ ಸಂಚಿಕೆಯಲ್ಲಿ: ಮೊದಲನೆಯ ಅವಧಿಯ ಪರೀಕ್ಷೆಯ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವುದು ಹೇಗೆ?)

(ಲೇಖಕು: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು