ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನ ಕಲೆ ಉದ್ಯೋಗದ ಮೆಟ್ಟಿಲು

Last Updated 5 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ವಿದ್ಯಾಭ್ಯಾಸ ಮುಗಿಸಿ ಉದ್ಯೋಗದ ವಲಯದಲ್ಲಿ ನೀವು ಹೆಜ್ಜೆಗಳನ್ನು ಇಡುತ್ತೀರಾ. ಆಗ ನಿಮ್ಮ ಎರಡು ದಶಕಗಳ ವಿದ್ಯಾಭ್ಯಾಸ ನಿಮಗೆ ನೀಡಿದ ಅಕಾಡೆಮಿಕ್‌ ಹಾಗೂ ಟೆಕ್ನಿಕಲ್‌ ಕೌಶಲ್ಯವನ್ನು ಒಂದು ತಕ್ಕಡಿಯಲ್ಲಿ ಇಟ್ಟರೆ ಅದಕ್ಕಿಂತ ಭಾರವಾಗಿರುವುದು ಮತ್ತೊಂದು ತಕ್ಕಡಿಯಲ್ಲಿ ನಿಮ್ಮ ಸಂವಹನ ಕೌಶಲ್ಯ. ನಿಮ್ಮ ವೃತ್ತಿಪರ ಜೀವನವನ್ನು ಮೂರು ‘ಆರ್‌’ ಗಳು (ರೆಮ್ಯುನರೇಶನ್‌, ರೆಸ್ಪಾನ್ಸಿಬಿಲಿಟಿ ಹಾಗೂ ರೆಸ್ಪೆಕ್ಟ್‌) ನಿರ್ಧರಿಸುತ್ತವೆ.

ನಿಮ್ಮ ಸಂವಹನ ಕಲೆ ಉದ್ಯೋಗದ ಕ್ಷೇತ್ರದಲ್ಲಿ ಬಹಳ ಮುಖ್ಯ. ಈ ಕಾರಣದಿಂದಲೇ ಉದ್ಯೋಗಾಕಾಂಕ್ಷಿಗಳನ್ನು ಆರಿಸುವಾಗ ಸಂದರ್ಶನದ ವೇಳೆಯಲ್ಲಿಯೇ ಅವರನ್ನು ಸಹೋದ್ಯೋಗಿಗಳ ನಡುವೆ ಮಾತನಾಡುವಂತೆ ಮಾಡಿ ಅವರ ವಾಕ್‌ಚಾತುರ್ಯವನ್ನು ಸೂಕ್ಷ್ಮವಾಗಿ ಅಳೆದು ಆನಂತರ ಆರಿಸುತ್ತಾರೆ.

ಉದ್ಯೋಗಾಕಾಂಕ್ಷಿಗಳು ಮಾತನಾಡಿದಾಗ ಅವರಲ್ಲಿರುವ ಉದ್ಯೋಗಕ್ಕೆ ಸಂಬಂಧಿಸಿದಂತಹ ವಾಕ್‌ಚಾತುರ್ಯ, ಸ್ಪಷ್ಟತೆ, ವಿಷಯ ಮಂಡನೆ, ಮನವೊಲಿಕೆ, ಪರಿಣಾಮ ಮತ್ತು ಪ್ರಭಾವ, ನಾಜೂಕು ಮತ್ತು ಸೌಹಾರ್ದಯುತ ನಡವಳಿಕೆಯನ್ನು ಗುರುತಿಸುತ್ತೇವೆ. ಇವೆಲ್ಲ ಅಂಶಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ಸರಳವಾಗಿ ತೋರಿಸಿ
ಕೊಡಬೇಕೆಂದರೆ ಇದರಲ್ಲಿ ಎರಡು ಪ್ರಧಾನ ಭಾಗಗಳಿವೆ, ಅವು ‘ಏನನ್ನು ಮಾತನಾಡಬೇಕು’ ಮತ್ತು ‘ಹೇಗೆ ಮಾತನಾಡಬೇಕು’ ಎಂಬುದು.

ಏನನ್ನು ಮಾತನಾಡಬೇಕು?

ಮೊದಲು ಏನು ಮಾತನಾಡುವುದು ಎಂಬುದು ಸಹಜವಾಗಿ ಆಯಾ ಸಂದರ್ಭವನ್ನು ಅವಲಂಬಿಸಿರುತ್ತದೆ. ವಿಷಯಗಳನ್ನು ಆಧರಿಸಿರುತ್ತದೆ. ನಾವು ಮೇಲಧಿಕಾರಿ, ಅದೇ ಮಟ್ಟದ ಸಹೋದ್ಯೋಗಿಗಳು ಅಥವಾ ನಮ್ಮ ಕೈ ಕೆಳಗಿನ ಸಿಬ್ಬಂದಿ ಜೊತೆ ಉದ್ಯೋಗದ ನಿಟ್ಟಿನಲ್ಲಿ ಆಗಿರುವ, ಆಗುತ್ತಿರುವ ಮತ್ತು ಆಗಬೇಕಾದ ಕೆಲಸದ ಬಗ್ಗೆ ಮಾತುಗಳನ್ನು ಆಡುತ್ತಲೇ ಇರುತ್ತೇವೆ. ಇಂದಿನ ಕಾಲದಲ್ಲಿ ಕೆಲಸದ ಬಗ್ಗೆ ಮಾತನಾಡುವಾಗ ಏನು ಮಾತನಾಡುವುದೆಂದು ಗುರುತಿಸುವುದೇ ಮುಖ್ಯ.

ಈಗಂತೂ ಏನನ್ನು ಮಾತನಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕು.

ಉದಾಹರಣೆಗೆ ಮೇಲಧಿಕಾರಿಯ ಬಳಿ ಹೋಗಿ ‘ಸರ್‌, ಬಹಳ ದಿನದ ನಂತರ ನಮ್ಮ ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಮುಂದಿನ ತಿಂಗಳು ನನ್ನ ಅಣ್ಣನ ಮದುವೆ, ಅದಕ್ಕೆ ನನಗೆ ಒಂದು ವಾರ ರಜೆ ಬೇಕು’ ಎಂದು ಕೇಳುವುದಕ್ಕಿಂತ ಇಲ್ಲಿ ನೀವು ಹೇಳುವ ಕಾರಣವು ಬರೀ ರಜೆ ಕೇಳಲು ಮಾತ್ರ ಅಲ್ಲವೇ? ಈ ನಿಟ್ಟಿನಲ್ಲಿ ಇಲ್ಲಿ ಏನನ್ನು ಮಾತನಾಡಬೇಕು ಎಂಬುದು ರಜದ ಬೇಡಿಕೆಗೆ ಸೀಮಿತವಾಗಿದ್ದರೆ ಉತ್ತಮ, ಆನಂತರ ಅವಶ್ಯವಿದ್ದರೆ ವಿವರಿಸಿ.

ಏನನ್ನು ಮಾತನಾಡಬೇಕು ಎಂಬುದನ್ನು ಕೆಲವು ಬಾರಿ ಮೊದಲೇ ತೀರ್ಮಾನಿಸಲು ಸಾಧ್ಯ. ಅಂಥ ಸಂದರ್ಭಗಳಲ್ಲಿ ನೀವು ಒಂದು ಮುಖ್ಯವಾದ ಕೆಲಸವನ್ನು ಮಾಡಬೇಕು. ಅದೇನೆಂದರೆ ಪೂರ್ವಸಿದ್ಧತೆ!

ಉದ್ಯೋಗದಲ್ಲಿ ವಿಷಯ ಮಂಡನೆ ಮಾಡಬೇಕಾಗುವುದು ಅನಿವಾರ್ಯ. ನೀವು ಅದನ್ನು ಮಾಡಿದ ನಂತರ ಸಹದ್ಯೋಗಿಗಳ ಸಂದೇಹ ಹಾಗೂ ಸಲಹೆಗಳನ್ನು ಚರ್ಚಿಸಬೇಕಾಗಿರುವುದು ಸಹಜ. ಇದು ಗುಂಪು ಚರ್ಚೆಯ ಮತ್ತೊಂದು ರೂಪ ತಾನೆ? ಕಾಲಾವಕಾಶವನ್ನು ನೀಡಿ ನಿಮಗೆ ಯಾವುದಾದರೊಂದು ವಿಷಯದ ಬಗ್ಗೆ ವಿಷಯ ಮಂಡಿಸಿ ಎಂದಾಗ ತಪ್ಪದೆ ಆ ವಿಷಯದ ಬಗ್ಗೆ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಲೇಬೇಕು, ಇದನ್ನು ಮಾತ್ರ ಮರಿಯಲೇ ಬೇಡಿ.

ಗಮನವಿಡಿ, ಹೇಗೆ ಮಾತನಾಡುವುದೆಂದು ನಿಮಗೆ ಗೊತ್ತಿಲ್ಲದಿದ್ದರೆ ನಿಮ್ಮ ಆಫೀಸಿನಲ್ಲಿ ನಿಮ್ಮನ್ನು ಕ್ಷಮಿಸಬಹುದು. ಆದರೆ ಕಾಲಾವಧಿ ನೀಡಿದಾಗಲೂ ನೀವು ಏನು ಮಾತನಾಡಬೇಕು ಎಂಬುದರ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಳ್ಳದಿದ್ದರೆ ಖಂಡಿತವಾಗಿಯೂ ನಿಮ್ಮ ಕರ್ತವ್ಯದ ಬಗ್ಗೆ ನಿಮಗಿರುವ ನಿಷ್ಠೆಯ ಮೂಲವನ್ನೇ ಪ್ರಶ್ನಿಸಲಾಗುತ್ತದೆ.

ಏನು ಮಾತನಾಡಬೇಕು ಎಂಬುದರ ಮತ್ತೊಂದು ಮಹತ್ವದ ನಿಯಮ ಏನೆಂದರೆ ಕೇಳಿದ ಪ್ರಶ್ನೆಯನ್ನು ಅಥವಾ ಹೇಳಬೇಕಾದ ಮಾತಿನ ಸಾರಾಂಶವನ್ನು ಮನಸ್ಸಿನಲ್ಲಿಯೇ ಚೆನ್ನಾಗಿ ಅರ್ಥ ಮಾಡಿಕೊಂಡು ಮೊದಲು ಈ ವಿಷಯದ ಬಗ್ಗೆ ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳಿಬಿಡಿ, ಆನಂತರ ಅದರ ವಿವರ ಅಥವಾ ಅದಕ್ಕೆ ಸಂಬಂಧಿಸಿದಂಥ ವಾತಾವರಣಗಳ ಬಗ್ಗೆ ಮಾಹಿತಿ ನೀಡಿ. ಯಾವುದೇ ಕಾರಣಕ್ಕೂ ಈ ಎರಡು ಕೆಲಸಗಳನ್ನು ತಲೆಕೆಳಗೆ ಮಾಡಿ ಮೊದಲು ವಿವರಿಸಿ ಆನಂತರ ಸಂಕ್ಷೇಪವಾದ ಉತ್ತರವನ್ನು ನೀಡದಿರಿ.

ಉದಾಹರಣೆಗೆ: ನಿಮಗೆ ಕೊಟ್ಟ ಪ್ರಾಜೆಕ್ಟ್‌ ಪೂರ್ಣವಾಯಿತೆ? ಎಂಬ ಪ್ರಶ್ನೆಯನ್ನು ನಿಮ್ಮ ಮೇಲಧಿಕಾರಿ
ಗಳು ಕೇಳಬಹುದು. ಈ ಪ್ರಶ್ನೆಗೆ ನೀವು ಉತ್ತರ ಶುರು ಮಾಡಿ ‘ಪ್ರಾರಂಭದಲ್ಲಿ ಸಲೀಸಾಗಿ ಕೆಲಸ ನಡೆದುಕೊಂಡು ಹೋಯಿತು, ಮಧ್ಯದಲ್ಲಿ ಸ್ವಲ್ಪ ತೊಂದರೆ ಆಯಿತು, ಆನಂತರ ನಾವೆಲ್ಲ ಸಾಕಷ್ಟು ಕಾಲ ಚಿಂತಿಸಿದೆವು. ಆಮೇಲೆ ಎರಡು ದಿನ ಕಚೇರಿಯಿಂದ ಕದಲದೆ ನಮ್ಮ ತಂಡ ಕೆಲಸ ಮಾಡಿತು’ ಎಂದು ಹೇಳಿದಾಗ ನಿಮಗೆ ಮತ್ತೆ ಅವರು ಅದೇ ಪ್ರಶ್ನೆ ಕೇಳುತ್ತಾರೆ. ‘ಅದೆಲ್ಲಾ ಸರಿ! ಆದರೆ ಪ್ರಾಜೆಕ್ಟ್‌ ಮುಗಿಯಿತಾ ಇಲ್ಲವಾ? ಮೊದಲು ಅದನ್ನು ಹೇಳಿ!’ ಎನ್ನಬಹುದು.

ಈ ಮೇಲಿನ ಪ್ರಶ್ನೆಗೆ ಉತ್ತರ ನೀಡುವಾಗ ನೀವು ಮೊಟ್ಟ ಮೊದಲಿಗೆ ಹೌದು ಅಥವಾ ಇಲ್ಲ ಎಂದು ಹೇಳಿ ಆನಂತರ ವಿವರವನ್ನು ನೀಡುವುದೇ ಸರಿ.

ಈಗ ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊಟ್ಟಮೊದಲಿಗೆ ನೀವು ಗಮನಿಸಬೇಕಾದ ವಿಷಯ ನಿಮ್ಮ ಮಾತನಾಡುವ ವೈಖರಿ, ಧ್ವನಿಯ ಏರಿಳಿತ, ಅಭಿವ್ಯಕ್ತಿ, ಶಬ್ದಗಳ ಬಳಕೆ, ವ್ಯಾಕರಣ, ವಿಷಯ ಮಂಡನೆ. ಇವಿಷ್ಟನ್ನು ನೀವು ಕನ್ನಡದಲ್ಲಿ ಸೂಕ್ಷ್ಮವಾಗಿ ಅನುಸರಿಸುತ್ತೀರಾ. ಆದರೆ ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ಇವೆಲ್ಲವೂ ನಿಮ್ಮ ಮಾತಿನಲ್ಲಿ ಎದ್ದು ಕಾಣುವುದಿಲ್ಲ.

ಮೇಲಧಿಕಾರಿಯ ಮುಂದೆ ಅತೀ ವಿನಯ ಹಾಗೂ ಕೈ ಕೆಳಗಿರುವವರ ಮುಂದೆ ಬೆದರಿಕೆಯ ಮಾತನಾಡಿದರೆ ಪ್ರಗತಿಯ ಹಾದಿಯನ್ನು ನೀವು ತಡೆಯುವವರಲ್ಲಿ ಒಬ್ಬರಾಗುವುದು ಖಂಡಿತ. ಆಗ ನಿಮ್ಮ ಮಾತೇ ನಿಮ್ಮ ಶತ್ರುವಾಗಿ ಬೆಳವಣಿಗೆಗೆ ಧಕ್ಕೆ ಉಂಟುಮಾಡುತ್ತದೆ.

ಮಾತಿನ ಬೆಲೆ

ಉದ್ಯೋಗಕ್ಕೆ ಸಂಬಂಧಿಸಿದ ಸಂಭಾಷಣೆಯನ್ನು ನಾವು 5 ರೀತಿಗಳಲ್ಲಿ ಬಳಸುತ್ತೇವೆ. ಅವು ಮಾಹಿತಿ ನೀಡುವುದು, ತರಬೇತಿ, ಮನವೊಲಿಕೆ, ಮಾರಾಟ ಮಾಡುವುದು ಹಾಗೂ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು. ನಿಮ್ಮ ಸಂಭಾಷಣೆಯಲ್ಲಿರುವ ಉತ್ಸಾಹ ಮತ್ತು ಆಸಕ್ತಿಯನ್ನು ಕಂಡು ಉತ್ತೇಜನೆಗೊಂಡರೆ ತಾನೇ ನಿಮ್ಮ ಮಾತಿಗೆ ಬೆಲೆ ಬರುವುದು.

ಸಂಕ್ಷೇಪವಾಗಿ ಹೇಳುವುದಾದರೆ ನೀವು ಕ್ಯಾಶುವಲ್‌ ಭಾಷೆ ಉಪಯೋಗಿಸದೆ ಉದ್ಯೋಗದ ನಿಟ್ಟಿನಲ್ಲಿ ಸದಾ ಫಾರ‍್ಮಲ್‌ (ಸಾಂಪ್ರದಾಯಿಕ) ಭಾಷೆಯನ್ನು ವೃತ್ತಿಪರ ರೀತಿಯಲ್ಲಿ ಉಪಯೋಗಿಸುವಾಗ ಅದು ವ್ಯಾಕರಣದ ಜೊತೆ ‘ಹೇಗೆ ಮಾತನಾಡಬೇಕು’ ಎಂಬ ನಿಯಮಗಳಿಗೆ ಹೊಂದುವಂತಿರುತ್ತದೆ.

ಕೆಲಸ ಹಾಗೂ ಭಾಷೆ

ಇಂಗ್ಲಿಷ್‌ ಭಾಷೆಯನ್ನು ನಾವು ಕೆಲಸಕ್ಕೆ ಸಂಬಂಧಿಸಿದಂತೆ ಉಪಯೋಗಿಸುವಾಗ ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಗಮನ ಕೊಟ್ಟು ಇನ್ನೊಂದು ರೀತಿಯಲ್ಲಿ ನಾವು ನಮ್ಮ ಹೊಣೆಗಾರಿಕೆಯನ್ನು ವ್ಯಕ್ತಪಡಿಸಲು ಸಾಧ್ಯ. ಹೇಗೆ ಮಾತನಾಡಬೇಕು ಎಂಬ ಅಂಶಗಳು ಕೆಲಸಕ್ಕಿಂತ ಭಾಷೆಗೆ ಹೆಚ್ಚಾಗಿ ಸಂಬಂಧಿಸಿದರೂ ನಮ್ಮ ಕೆಲಸದ ಪರಿ ನಮ್ಮ ಗುಣವನ್ನು ನೇರವಾಗಿ ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT