ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ ನಂತರ ಸ್ಪರ್ಧಾತ್ಮಕ ಪರೀಕ್ಷೆ

Last Updated 28 ಆಗಸ್ಟ್ 2019, 9:18 IST
ಅಕ್ಷರ ಗಾತ್ರ

ನಾನು ಬಿಇ ಕಂಪ್ಯೂಟರ್ ಸೈನ್ಸ್ ಆರನೆಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಇನ್ನೂ ಮೂರು ಸೆಮಿಸ್ಟರ್‌ ಬಾಕಿ ಇದ್ದು ನನಗೆ ಆ ವಿಷಯಗಳಲ್ಲಿ ಆಸಕ್ತಿ ಇಲ್ಲ. ಆದರೂ ಎಂಜಿನಿಯರಿಂಗ್‌ನಲ್ಲಿ ಉದ್ಯೋಗ ಪಡೆಯಬೇಕು. ನಾಲ್ಕು ವರ್ಷ ಈ ಕ್ಷೇತ್ರದಲ್ಲಿ ಕಳೆದಿದ್ದೇನೆ. ಆದರೆ ನನಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಆಸಕ್ತಿ ಇದೆ. ಇದರ ಕುರಿತು ಗೊಂದಲವಿದೆ. ಹೇಗೆ ನನ್ನ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿ.

ರಾಧಾ ಎಂ.ಆರ್‌, ಊರು ಬೇಡ

ರಾಧಾ, ನೀವು ಕೆಲವು ವಿಷಯಗಳನ್ನು ಸ್ಪಷ್ಟ ಪಡಿಸಿಕೊಂಡು ಮುಂದಿನ ನಿರ್ಧಾರವನ್ನು ಕೈಗೊಳ್ಳುವುದು ಉತ್ತಮ. ನಿಮಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಸದ್ಯ ಓದುವ ವಿಷಯಗಳು ಆಸಕ್ತಿ ಇಲ್ಲವೋ ಅಥವಾ ಒಟ್ಟಾರೆ ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲೇ ಆಸಕ್ತಿ ಇಲ್ಲವೋ ಎಂದು ಸ್ಪಷ್ಟ ಪಡಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿ ಇದೆ ಎಂದು ಬರೆದಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ಒಂದು ಉದ್ಯೋಗ ಕ್ಷೇತ್ರವಲ್ಲ, ಬದಲಾಗಿ ಬೇರೆ ಬೇರೆ ಉದ್ಯೋಗ ಕ್ಷೇತ್ರಗಳಲ್ಲಿ ಕೆಲಸ ಸಿಗಲು ಪಾಸಾಗಬೇಕಿರುವ ಒಂದು ಹಂತವಷ್ಟೇ. ಈಗ ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರವೇ ಪ್ರವೇಶಾತಿ ಪಡೆಯಬೇಕಾಗಿದೆ. ಹಾಗಾಗಿ ನೀವು ಈಗ ಸ್ಪಷ್ಟಪಡಿಸಿಕೊಳ್ಳಬೇಕಾದುದು ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ‘ಯಾವ ಕ್ಷೇತ್ರಕ್ಕೆ’ ಹೋಗ ಬಯಸುತ್ತೀರಿ ಎಂಬುದು. ನಿಮಗೆ ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿ ಆಸಕ್ತಿ ಇಲ್ಲದಿ ದ್ದರೆ ಬೇರೆ ಯಾವ ಕ್ಷೇತ್ರ ಆಸಕ್ತಿದಾಯಕ ಎಂದು ಯೋಚಿಸಿ ತೀರ್ಮಾನಿಸಿ. ನಿಮ್ಮ ಬಳಿ ಇನ್ನೂ ಸಮಯ ಇದೆ. ಒಂದೊಂದೇ ಕ್ಷೇತ್ರದ ಬಗ್ಗೆ ತಿಳಿಯುತ್ತ ಆ ಕ್ಷೇತ್ರಕ್ಕೆ ಪ್ರವೇಶಾತಿ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಿ. ಹಾಗೇ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪದವಿ ಶಿಕ್ಷಣವು ಅರ್ಹತೆ ಆದ್ದರಿಂದ ನಿಮ್ಮ ಎಂಜಿನಿಯರಿಂಗ್ ಅನ್ನು ಉತ್ತಮ ಅಂಕದೊಂದಿಗೆ ಪೂರೈಸಿಕೊಳ್ಳಿ.

ಹಿಂದೆ ಹೇಳಿದಂತೆ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು ಎಂಬುದು ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ಯಾವುದೇ ಪದವಿಯ ಮೇಲೆ ಬರೆಯಬಹುದಾದ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಗಣಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇದ್ದಲ್ಲಿ ಐ.ಬಿ.ಪಿ.ಎಸ್. ನಡೆಸುವ ಕ್ಲರಿಕಲ್, ಪ್ರೊಬೇಷನರಿ ಆಫೀಸರ್ ಪರೀಕ್ಷೆಗಳು, ಎಸ್.ಬಿ.ಐ. ಮತ್ತು ಆರ್.ಬಿ.ಐ. ನಡೆಸುವ ಪರೀಕ್ಷೆಗಳನ್ನು ಬರೆಯಬಹುದು. ಸರ್ಕಾರದ ಆಡಳಿತಾತ್ಮಕ ಹುದ್ದೆಗಳಲ್ಲಿ ಕೆಲಸ ಮಾಡಬೇಕು ಎಂದು ಬಯಸಿದ್ದಲ್ಲಿ ಯು.ಪಿ.ಎಸ್‌.ಸಿ. ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ ನಂತರ ಐ.ಎ.ಎಸ್. ಅಥವಾ ಐ.ಪಿ.ಎಸ್. ಸೇವೆಗಳಿಗೆ ಸೇರಬಹುದು. ಕರ್ನಾಟಕ ಸರ್ಕಾರದ ಆಡಳಿತಾತ್ಮಕ ಸೇವೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕೆ.ಪಿ.ಎಸ್.ಸಿ. ನಡೆಸುವ ಕೆ.ಎ.ಎಸ್. ಪರೀಕ್ಷೆಗಳನ್ನು ಬರೆಯಬಹುದು. ಇನ್ನು ಸರ್ಕಾರದ ಬೇರೆ ಇಲಾಖೆಗಳಲ್ಲಿ ಎಫ್.ಡಿ.ಎ. ಅಥವಾ ಎಸ್.ಡಿ.ಎ ಹುದ್ದೆಗಳಿಗಾಗಿ ಆಯಾ ಸಮಯದಲ್ಲಿ ಕರೆಯಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು. ಇವುಗಳಲ್ಲದೆ ಬೇರೆ ಕ್ಷೇತ್ರಗಳು ನಿಮ್ಮಆಸಕ್ತಿಯ ಕ್ಷೇತ್ರಗಳಾಗಿದ್ದರೆ ಅವುಗಳ ಬಗ್ಗೆ ಹುಡುಕಿ ಯಾವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ ಎಂದು ತಿಳಿದು ತಯಾರಿ ನಡೆಸಿ. ಆಲ್ ದಿ ಬೆಸ್ಟ್.

ನಾನು 25 ವರ್ಷದವನು. ಸರ್ಕಾರಿ ನೌಕರನಾಗಿದ್ದು 3 ವರ್ಷ ಸೇವಾವಧಿ ಮುಗಿದಿದೆ.2015 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕಲಾ ಪದವಿ ಮಾತ್ರ ಪಡೆದಿದ್ದೇನೆ. ನನಗೆ ಉಪನ್ಯಾಸಕನಾಗಬೇಕೆಂಬ ಆಸೆಯಿದೆ. ಉಪನ್ಯಾಸಕನಾಗಲು ಶಿಕ್ಷಣ ಹೇಗೆ ಪೂರೈಸಬೇಕು ಹಾಗೂ ತಯಾರಿ ಹೇಗೆ ನಡೆಸಬೇಕು ತಿಳಿಸಿ.

ಹೆಸರು, ಊರು ಬೇಡ

ನೀವು ಸರ್ಕಾರಿ ನೌಕರಿ ಮಾಡುತ್ತಲೆ ಶಿಕ್ಷಣ ಮುಂದುವರೆಸುತ್ತೀರ ಅಥವಾ ಅದರಿಂದ ಹೊರಬಂದು ಶಿಕ್ಷಣ ಪಡೆಯುತ್ತೀರ ಎನ್ನುವುದನ್ನು ನಿರ್ಧರಿಸಿ. ಕೆಲಸದಿಂದ ಬಿಡುವು (ಅವಕಾಶವಿದ್ದರೆ ತಾತ್ಕಾಲಿಕ ಬಿಡುವು ಪಡೆದರೆ ಉತ್ತಮ) ಪಡೆದು ಒಳ್ಳೆಯ ವಿಶ್ವವಿದ್ಯಾಲಯದಲ್ಲಿ ನಿಮ್ಮ ಇಷ್ಟದ ವಿಷಯದಲ್ಲಿ ಎಂ. ಎ. ಪದವಿ ಪಡೆಯಬಹುದು. ಇದರಿಂದ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡಬಹುದು. ಎಂ. ಎ. ನಂತರ ಬಿ.ಎಡ್. ಪದವಿ ಓದಿದಲ್ಲಿ ನೀವು ಪ್ರಾಥಮಿಕ, ಹೈಸ್ಕೂಲ್‌ ಮತ್ತು ಪಿ.ಯು ಕಾಲೇಜಿನಲ್ಲಿ ಶಿಕ್ಷಕ/ ಉಪನ್ಯಾಸಕನಾಗಿ ಕೆಲಸ ಮಾಡಬಹುದು. ಮುಂದೆ ಪಿಎಚ್.ಡಿ. ವ್ಯಾಸಂಗ ಮಾಡಿದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಬಹುದು.
ನೀವು ಈಗ ದುಡಿಯುವುದು ಮುಖ್ಯವಾಗಿದ್ದು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಕೆಲಸ ಮಾಡುತ್ತಲೇ ಓದುತ್ತೀರಿ ಎಂದು ನಿರ್ಧಾರ ಮಾಡಿದರೆ, ನಿಮ್ಮ ಶಿಕ್ಷಣವನ್ನು ದೂರ ಶಿಕ್ಷಣ ಮಾದರಿಯಲ್ಲಿ ಮುಂದುವರಿಸಬಹುದು. ನಿಮಗೆ ಇಷ್ಟವಿರುವ ವಿಷಯದಲ್ಲಿ ಎಂ.ಎ. ಮಾಡಿಕೊಳ್ಳಿ. ನಂತರ ಯು.ಜಿ.ಸಿ. ನೆಟ್ ಪರೀಕ್ಷೆ ತೇರ್ಗಡೆ ಮಾಡಿಕೊಳ್ಳಿ. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಬಹುದು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಲು ಯು.ಜಿ.ಸಿ. ನೆಟ್ ಪರೀಕ್ಷೆ ತೇರ್ಗಡೆ ಹೊಂದಿರಬೇಕು ಮತ್ತು ಶಿಕ್ಷಣ ಇಲಾಖೆ ಕರೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು.

ಸರ್ಕಾರಿ ಪದವಿ ಕಾಲೇಜುಗಳ ಕಲಾ ವಿಭಾಗದಲ್ಲಿ ಕಡಿಮೆ ಉದ್ಯೋಗಾವಕಾಶಗಳಿವೆ. ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಂಬಳವಿದ್ದು ಅವಕಾಶಗಳು ವಿರಳವಾಗಿರುತ್ತದೆ. ಹಾಗಾಗಿ ನಿಮ್ಮ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು ಕೊಂಡು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಿ. ಶುಭಾಶಯ.

ನಾನು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿ 6 ತಿಂಗಳುಗಳಾಗಿವೆ. ನನಗೆ ಸರ್ಕಾರಿ ಉದ್ಯೋಗ ಸಿಗಲಿ ಎಂದು ಓದುತ್ತಿದ್ದೇನೆ. ಯಾವ ಉದ್ಯೋಗಕ್ಕೆ ಸೇರಬೇಕು ಎಂದು ಸರಿಯಾದ ಮಾರ್ಗ ತಿಳಿಸಿ.

ಕಾವ್ಯಾ, ಅರಸೀಕೆರೆ

ನೀವು ಯಾವ ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದು ಇಲ್ಲಿ ತಿಳಿಸಿಲ್ಲ. ಇನ್ನು ಸರ್ಕಾರಿ ಕೆಲಸಕ್ಕಾಗಿ ಓದುವುದಕ್ಕಿಂತ ಇಂತಹ ಸರ್ಕಾರಿ ಕೆಲಸದ ಸ್ಪರ್ಧಾತ್ಮಕ ಪರೀಕ್ಷೆಗೆ ಎಂದು ನಿರ್ಧರಿಸಿ ಓದುವುದು ಮುಖ್ಯ. ಆದರೂ ಸಾಮಾನ್ಯವಾಗಿ ಎಲ್ಲ ಪರೀಕ್ಷೆಗೂ ಸಹಾಯಕ್ಕೆ ಬರುವ ಕೆಲವು ವಿಷಯಗಳನ್ನು ಓದಿಕೊಳ್ಳಬಹುದು. ನಂತರ ಆಯಾ ಪರೀಕ್ಷೆಗಳ ಅಧಿಸೂಚನೆ ಬಂದಾಗ ಅದಕ್ಕೆ ಸೂಕ್ತವಾದ ತಯಾರಿ ಮಾಡಿಕೊಳ್ಳಹುದು. ಸಾಮಾನ್ಯವಾಗಿ ತಾರ್ಕಿಕ ಆಲೋಚನೆ, ಸಾಮಾನ್ಯ ಗಣಿತ, ಸಾಮನ್ಯ ಜ್ಞಾನ/ ಪ್ರಚಲಿತ ವಿದ್ಯಮಾನ ಇತ್ಯಾದಿಗಳನ್ನು ಓದಿಕೊಳ್ಳಬಹುದು.

ಇನ್ನೂ ಸರಿಯಾದ ಮಾರ್ಗ ಎನ್ನುವುದಕ್ಕಿಂತ ಸೂಕ್ತವಾದ ಮಾರ್ಗ ಯಾವುದು ಅಂತ ನೋಡಬೇಕಾಗುತ್ತದೆ. ಸೂಕ್ತವಾದ ಮಾರ್ಗ ಎಂದರೆ, ನಿಮಗೆ ಆಸಕ್ತಿ ಇರುವ ಮತ್ತು ನಿಮ್ಮ ಶೈಕ್ಷಣಿಕ ಅರ್ಹತೆಗೆ ಹೊಂದುವ ಸರ್ಕಾರಿ ಕೆಲಸವನ್ನು ನೋಡ ಬೇಕಾಗುತ್ತದೆ. ನೀವು ನಿಮ್ಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಇಚ್ಛಿಸುವವರಾದರೆ ಸರ್ಕಾರಿ ಸಾಮ್ಯದ ಕಂಪನಿಗಳಾದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ಹೈಡ್ರೋ ಪವರ್ ಕಾರ್ಪೊರೇಶನ್ಸ್, ಆಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಎನ್.ಟಿ.ಪಿ.ಸಿ.. ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್, ಕೋಲ್ ಇಂಡಿಯಾ ಲಿಮಿಟೆಡ್, ಮೆಟ್ರೋ ರೈಲ್ ಕಾರ್ಪೊರೇಶನ್ಸ್ ಹಾಗೂ ಇನ್ನೂ ಅನೇಕ ಸಂಸ್ಥೆಗಳ ಅಧಿಸೂಚನೆ ಬಂದಾಗ ನೇಮಕಾತಿ ಪ್ರಕ್ರಿಯೆಲ್ಲಿ ಭಾಗವಹಿಸಬಹುದು. ಅದಲ್ಲದೆ ನಿಮ್ಮ ಕ್ಷೇತ್ರವಲ್ಲದೆ ನಿಮ್ಮ ಪದವಿ ಶಿಕ್ಷಣದ ಆಧಾರದ ಮೇಲೆ ಪ್ರಯತ್ನಿಸುವುದಾದರೆ ಬ್ಯಾಂಕಿಂಗ್ ಪರೀಕ್ಷೆ, ಎಫ್.ಡಿ.ಎ., ಎಸ್.ಡಿ.ಎ., ಭಾರತೀಯ ಸೇನೆ, ಭಾರತೀಯ ರೈಲ್ವೆ, ಎಸ್.ಎಸ್.ಸಿ, ಪಿ.ಡಿ.ಓ. ಪದವಿ ಆಧಾರದ ಆಡಳಿತಾತ್ಮಕ ಸೇವಾ ಪರೀಕ್ಷೆಗಳು (ಯು.ಪಿ.ಎಸ್.ಸಿ., ಕೆ.ಪಿ.ಎಸ್.ಸಿ.) ಇತ್ಯಾದಿಗಳಿಗೂ ಪ್ರಯತ್ನಿಸಬಹುದು.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,
ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT