ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | MI vs SRH: ಸೂರ್ಯ ಶತಕದ ಅಬ್ಬರ: ‘ಸನ್‌’ ತತ್ತರ

ಮುಂಬೈ ತಂಡಕ್ಕೆ ಏಳು ವಿಕೆಟ್‌ ಗೆಲುವು l ಹೈದರಾಬಾದ್ ಆಸೆಗೆ ಹಿನ್ನಡೆ
Published 6 ಮೇ 2024, 13:34 IST
Last Updated 6 ಮೇ 2024, 13:34 IST
ಅಕ್ಷರ ಗಾತ್ರ

ಮುಂಬೈ: ಪೀಯೂಷ್ ಚಾವ್ಲಾ ಮತ್ತು ಹಾರ್ದಿಕ್ ಪಾಂಡ್ಯ ತಲಾ ಮೂರು ವಿಕೆಟ್‌ಗಳೊಡನೆ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದರು. ನಂತರ ಸೂರ್ಯಕುಮಾರ್ ಯಾದವ್ (ಔಟಾಗದೇ 102, 51ಎ, 4X12, 6X6) ಅಬ್ಬರದ ಶತಕ ಗಳಿಸಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಏಳು ವಿಕೆಟ್‌ಗಳಿಂದ ಗೆಲ್ಲಲು ನೆರವಾದರು. ‌


ಒಂದು ಹಂತದಲ್ಲಿ ಐದನೇ ಓವರ್‌ನಲ್ಲಿ ಮೂರು ವಿಕೆಟ್‌ಗೆ 31 ರನ್‌ಗಳಿಸಿ ಕುಸಿತದ ಭೀತಿಯಲ್ಲಿದ್ದ ಮುಂಬೈ ತಂಡವನ್ನು ಸೂರ್ಯ ಮತ್ತು ತಿಲಕ್‌ ವರ್ಮಾ (ಔಟಾಗದೇ 37, 32ಎ, 4X6) ಅವರು ಮುರಿಯದ ನಾಲ್ಕನೇ ವಿಕೆಟ್‌ಗೆ 79 ಎಸೆತಗಳಲ್ಲಿ 143 ರನ್ ಸೇರಿಸಿ ಸನ್‌ ರೈಸರ್ಸ್ ಆಸೆಗೆ ತಣ್ಣೀರೆರಚಿದರು.  

ಇದು ಮುಂಬೈಗೆ ನಾಲ್ಕನೇ ಗೆಲುವಾಗಿದ್ದು, ಅಂಕ ಪಟ್ಟಿಯಿಂದ ಕೊನೆಯ ಸ್ಥಾನದಿಂದ ಬಡ್ತಿ ಪಡೆಯಿತು. ಸನ್ ರೈಸರ್ಸ್‌ ಪ್ಲೇ ಆಫ್ ಹಾದಿಗೆ ಈ ಸೋಲು ಕೊಂಚ ಹಿನ್ನಡೆ ತಂದಿತು. 


ಇದಕ್ಕೆ ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಸನ್ ರೈಸರ್ಸ್‌ 8 ವಿಕೆಟ್‌ಗೆ 173 ರನ್‌ ಗಳಿಸಿತು. ಈ ಗುರಿ ಬೆನ್ನತ್ತಿದ ಮುಂಬೈ ತಂಡ 16 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗೆ 174 ರನ್ ಗಳಿಸಿತು. 
ಆರಂಭಿಕ ಆಟಗಾರರಾದ ಇಶಾನ್ ಕಿಶಾನ್‌ (9) ಮತ್ತು ರೋಹಿತ್ ಶರ್ಮಾ (4) ಬೇಗನೆ ನಿರ್ಗಮಿಸಿದರು. ನಮನ್ ಧೀರ್ ಅವರಿಗೆ   ಖಾತೆ ತೆರೆಯಲು ಭುವನೇಶ್ವರ ಕುಮಾರ್ ಅವಕಾಶ ನೀಡಲಿಲ್ಲ. 


ಇದಕ್ಕೆ ಮೊದಲು ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ಗೆ ಮೊದಲು ಬೌಲಿಂಗ್‌ನಲ್ಲಿ ಲಯ ಕಂಡುಕೊಂಡರೆ, ಅನುಭವಿ ಪೀಯೂಷ್‌ ಚಾವ್ಲಾ ಅವರೂ ಮೂರು ವಿಕೆಟ್‌ ಪಡೆದರು. 

ಟ್ರಾವಿಸ್ ಹೆಡ್‌ (48, 30ಎ, 4X7, 6X1) ಬಿರುಸಿನ ಬ್ಯಾಟಿಂಗ್ ನಡೆಸಿದರೆ, ಕೊನೆಗಳಿಗೆಯಲ್ಲಿ  ನಾಯಕ ಪ್ಯಾಟ್‌ ಕಮಿನ್ಸ್‌ 17 ಎಸೆತಗಳಲ್ಲಿ 35 (4x2, 6x2) ರನ್ ಬಾರಿಸಿ ತಂಡ 150ರ ಗಡಿದಾಟುವಂತೆ ನೋಡಿಕೊಂಡರು. 


ಪಾಂಡ್ಯ ಲಯ ಮತ್ತು ವೇಗ ಕಂಡುಕೊಂಡು 31 ರನ್ನಿಗೆ 3 ವಿಕೆಟ್‌ ಪಡೆದರೆ, ಚಾವ್ಲಾ (4–0–33–3) ಕೂಡ ಪ್ರಭಾವಶಾಲಿ ಎನಿಸಿ ಸನ್‌ರೈಸರ್ಸ್‌ ಬ್ಯಾಟರ್‌ಗಳು ಅಬ್ಬರಿಸದಂತೆ ನೋಡಿಕೊಂಡರು.


ಕಳೆದ ಸಲ ಇವೆರಡು ತಂಡಗಳು ಎದುರಾದಾಗ ಸನ್‌ರೈಸರ್ಸ್‌ ಬ್ಯಾಟರ್‌ಗಳು ಅಬ್ಬರಿಸಿ 277 ರನ್‌ ಗಳಿಸಿ ದಾಖಲೆ ಬರೆದಿದ್ದರು. ಆದಕ್ಕೆ ತದ್ವಿರುದ್ಧವಾಗಿ ಈ ಬಾರಿ ಆಕ್ರಮಣದ ಆಟ ಕಾಣಲಿಲ್ಲ.


ಪವರ್‌ ಪ್ಲೇ ಅವಧಿಯಲ್ಲಿ ಅಭಿಷೇಕ್‌ ಶರ್ಮಾ ವಿಕೆಟ್‌ ಕಳೆದುಕೊಂಡು 56 ರನ್ ಗಳಿಸಿತ್ತು. ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಹತ್ತು ಓವರುಗಳ ನಂತರ ದಾಳಿಗಿಳಿದ ಲೆಗ್‌ ಬ್ರೇಕ್‌ ಬೌಲರ್‌ ಚಾವ್ಲಾ ಅವರು ಆರಂಭ ಆಟಗಾರ ಟ್ರಾವಿಡ್‌ ಹೆಡ್‌ (48, 30 ಎಸೆತ) ಮತ್ತು ಹೆನ್ರಿಚ್‌ ಕ್ಲಾಸೆನ್ (2) ಅವರ ವಿಕೆಟ್‌ಗಳನ್ನು ಪಡೆದು ಸನ್‌ರೈಸರ್ಸ್‌ಗೆ ಬಲವಾದ ಹೊಡೆತ ನೀಡಿದರು.


ಆರಂಭ ಆಟಗಾರ ಹೆಡ್‌ ಅವರ ಆಟ ವಿಶ್ವಾಸದಿಂದ ಕೂಡಿರಲಿಲ್ಲ. ಮೊದಲ ಪಂದ್ಯ ಆಡಿದ ಅಂಕುಶ್‌ ಕಾಂಬೋಜ್ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರೂ ಅದು ನೋಬಾಲ್ ಆಗಿತ್ತು. ಕೆಲವು ಬೌಂಡರಿಗಳೂ ಅಧಿಕಾರಯುತವಾಗಿರದೇ ‘ಎಜ್‌’ ಮೂಲಕ ಹೋದವು. 

 
ಸ್ಕೋರುಗಳು:

ಸನ್‌ರೈಸರ್ಸ್‌ ಹೈದರಾಬಾದ್‌: 20 ಓವರುಗಳಲ್ಲಿ 8 ವಿಕೆಟ್‌ಗೆ 173 (ಟ್ರಾವಿಸ್ ಹೆಡ್‌ 48, ನಿತೀಶ್ ಕುಮಾರ್ ರೆಡ್ಡಿ 20, ಪ್ಯಾಟ್‌ ಕಮಿನ್ಸ್‌ ಔಟಾಗದೇ 35; ಹಾರ್ದಿಕ್‌ ಪಾಂಡ್ಯ 31ಕ್ಕೆ3, ಪೀಯೂಷ್ ಚಾವ್ಲಾ 33ಕ್ಕೆ3).

ಮುಂಬೈ ಇಂಡಿಯನ್ಸ್‌ 17.2 ಓವರ್‌ಗಳಲ್ಲಿ 3 ವಿಕೆಟ್‌ಗೆ 174. (ಸೂರ್ಯಕುಮಾರ್ ಯಾದವ್ ಔಟಾಗದೆ 102, ತಿಲಕ್ ವರ್ಮಾ ಔಟಾಗದೇ 37, ಭುವನೇಶ್ವರ ಕುಮಾರ್ 22ಕ್ಕೆ1, ಪ್ಯಾಟ್ ಕಮಿನ್ಸ್‌ 35ಕ್ಕೆ1) ಪಂದ್ಯ ಶ್ರೇಷ್ಠ: ಸೂರ್ಯಕುಮಾರ್ ಯಾದವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT