ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ಮಾಹಿತಿ | ಇವಿಎಂ ಮತ್ತು ಚುನಾವಣೆ

ಹನುಮನಾಯಕ್ ರಾಥೋಡ್ ಅವರ ಲೇಖನ
Published 7 ಜೂನ್ 2023, 19:30 IST
Last Updated 7 ಜೂನ್ 2023, 19:30 IST
ಅಕ್ಷರ ಗಾತ್ರ

–ಹನುಮನಾಯಕ್ ರಾಥೋಡ್

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ.

ಇತ್ತೀಚೆಗಷ್ಟೇ ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದೆ. ಹಿಂದಿನ ಚುನಾವಣೆಗಳಲ್ಲಿ ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಹಲವು ರಾಜಕೀಯ ಪಕ್ಷಗಳು ಆಕ್ಷೇಪ ಎತ್ತಿದ್ದವು. ಆದರೆ, ಈ ಚುನಾವಣೆಯ ನಂತರದಲ್ಲಿ ಇವಿಎಂಗಳ (ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ - ಇವಿಎಂ) ಕುರಿತು ಅಂಥ ಯಾವುದೇ ಚರ್ಚೆಗಳಾಗಲಿಲ್ಲ.

ಅಂದ ಹಾಗೆ, ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣೆಯಲ್ಲಿ ಬಳಸಬೇಕೆಂಬ ಯೋಚನೆ ಶುರುವಾಗಿದ್ದು 1977ರಲ್ಲಿ. ಆ ವರ್ಷದಲ್ಲಿ ಚುನಾವಣಾ ಆಯೋಗ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳ ಬಳಕೆಯ ಕುರಿತು ಪ್ರಸ್ತಾವನೆ ಸಲ್ಲಿಸಿತು. ಚುನಾವಣಾ ವೆಚ್ಚವನ್ನು ಉಳಿಸಲು, ಕಾಗದದ ಬಳಕೆ ಕಡಿಮೆ ಮಾಡಲು ಮತ್ತು ಮತ ಪತ್ರಗಳನ್ನು ತಿರುಚುವ ಪ್ರಯತ್ನಗಳ ವಿರುದ್ಧದ ರಕ್ಷಣೆಯಾಗಿ ಕಾರ್ಯನಿರ್ವಹಿಸಲು ಇವಿಎಂಗಳು ನೆರವಾಗುತ್ತವೆ ಎಂಬುದು ಇದರ ಬಳಕೆಯ ಹಿಂದಿನ ಉದ್ದೇಶವಾಗಿತ್ತು.

ಬೆಂಗಳೂರಿನ ಭಾರತ್‌ ಎಲೆಕ್ಟ್ರಾನಿಕ್ಸ್ ನಿಗಮ ಮತ್ತು ಹೈದರಾಬಾದ್‌ನ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ಸಹಯೋಗದೊಂದಿಗೆ ಕೇಂದ್ರ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಮತಯಂತ್ರವನ್ನು ವಿನ್ಯಾಸಗೊಳಿಸಿತು.

ತಂತ್ರಜ್ಞಾನದ ರಚನೆ
* ಎಲೆಕ್ಟ್ರಾನಿಕ್ ಮತಯಂತ್ರವು ಎರಡು ಘಟಕಗಳನ್ನು ಒಳಗೊಂಡಿದೆ.

ಅವುಗಳೆಂದರೆ..
1)ನಿಯಂತ್ರಣ ಘಟಕ
2)ಬ್ಯಾಲೆಟಿಂಗ್ ಘಟಕ.

* ಎರಡು ಘಟಕಗಳನ್ನು ಐದು ಮೀಟರ್ ಕೇಬಲ್‌ನಿಂದ  ಸಂಪರ್ಕಿಸಲಾಗುತ್ತದೆ. ನಿಯಂತ್ರಕ ಘಟಕವನ್ನು ಚುನಾವಣಾ ಅಧಿಕಾರಿಯು ನಿಯಂತ್ರಿಸುತ್ತಾರೆ. ಬ್ಯಾಲೆಟಿಂಗ್ ಘಟಕವನ್ನು ಮತದಾರರು ಮತದಾನದ ಕಂಪಾರ್ಟ್‌ಮೆಂಟ್‌ನಲ್ಲಿ ಇಡುತ್ತಾರೆ. 

* ಮತ ಯಂತ್ರದಲ್ಲಿರುವ ಮೈಕ್ರೊಚಿಪ್‌ ಅನ್ನು ಜಪಾನ್‌ ದೇಶದ ವರು ತಯಾರಿಸುತ್ತಾರೆ. ಅವರು ಮತ ಯಂತ್ರಗಳನ್ನು ರಫ್ತು ಮಾಡುವ ಸಂದರ್ಭದಲ್ಲಿ ಸೀಲ್ ಮಾಡಿರುತ್ತಾರೆ.  

ಸುರಕ್ಷತೆಯ ನಿರ್ವಹಣೆ
ಮತ ಯಂತ್ರದಲ್ಲಿ ಬಳಸಿರುವ ಸಾಫ್ಟ್‌ವೇರ್ ಸುರಕ್ಷತೆಯ ಹಿನ್ನೆಲೆಯಲ್ಲಿ ತಯಾರಕರ ಮಟ್ಟದಲ್ಲಿ ಕಠಿಣ ಶಿಷ್ಟಾಚಾರಗಳಿವೆ. ಉತ್ಪಾದನೆಯ ನಂತರ ಇವಿಎಂಗಳನ್ನು ರಾಜ್ಯಕ್ಕೆ ಮತ್ತು ಅಲ್ಲಿಂದ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಪ್ರತಿ ಇಸಿಐ- ಇವಿಎಂ ಟ್ರ್ಯಾಕಿಂಗ್ ಸಾಫ್ಟ್‌ವೇರ್‌ ಬಳಸಿಕೊಂಡು ಚುನಾವಣಾ ಆಯೋಗವು ಅದರ ಡೇಟಾಬೇಸ್‌ನಿಂದ ಯಾವ ಯಂತ್ರ ಎಲ್ಲಿಗೆ ತಲುಪುತ್ತದೆ ಎಂಬುದನ್ನು ಕಂಡುಹಿಡಿಯಬಹುದು. ಪ್ರತಿ ಮೈಕ್ರೋಚಿಪ್‌ನ ಮೆಮೊರಿಯಲ್ಲಿ ಗುರುತಿನ ಸಂಖ್ಯೆ ಅಡಕವಾಗಿದೆ. ಮೈಕ್ರೋಚಿಪ್ ಬದಲಾಯಿಸುವ ಯಾವುದೇ ಪ್ರಯತ್ನವನ್ನು ಪತ್ತೆ ಹಚ್ಚಬಹುದು ಮತ್ತು ಇವಿಎಂನ್ನು ನಿಷ್ಕ್ರಿಯಗೊಳಿಸಬಹುದು.

ಶೇಖರಣೆ ಸಾಮರ್ಥ್ಯ
ಮತಯಂತ್ರದಲ್ಲಿ ಗರಿಷ್ಠ 64 ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡಬಹುದು. 16 ಜನ ಅಭ್ಯರ್ಥಿಗಳ ಒಂದು ಪಟ್ಟಿಯಂತೆ ತಯಾರಿಸುತ್ತಾರೆ. 16ರ ನಂತರದ ಅಭ್ಯರ್ಥಿಯನ್ನು ಎರಡನೇ ಬ್ಯಾಲೆಟಿಂಗ್ ಪಟ್ಟಿಗೆ ಸೇರಿಸುತ್ತಾರೆ.

ಮತಯಂತ್ರಗಳ ಉಪಯುಕ್ತತೆ
* ಸುಲಭವಾಗಿ ಸಾಗಿಸಲು ಸಾಧ್ಯ. 1989ರಲ್ಲಿ ಇವಿಎಂ ಬೆಲೆ ₹5500 ಆಗಿತ್ತು. ಪ್ರಸ್ತುತ ಬೆಲೆ ಮತಪತ್ರಕ್ಕೆ ಹೋಲಿಸಿದರೆ ಕಡಿಮೆ ಖರ್ಚಿನದ್ದಾಗಿದೆ.

* ಕಡಿಮೆ ತೂಕ. ಸುಲಭವಾಗಿ ಸಾಗಿಸಲು ಸಹಾಯವಾಗುವಂತೆ ಪಾಲಿ ಪ್ರೊಫೆಲಿನ್ ನಿಂದ ತಯಾರಿಸಲಾಗಿದೆ.

* ಅನಕ್ಷರಸ್ಥರು ಸುಲಭವಾಗಿ ಮತ ಚಲಾಯಿಸಬಹುದು. ಮತ ಎಣಿಕೆಯು ಸುಲಭ. ಒಂದು ಕ್ಷೇತ್ರದ ಮತ ಎಣಿಕೆ ಪೂರ್ಣಗೊಳಿಸಲು 2 ರಿಂದ 3 ಗಂಟೆ ಅವಧಿ ಸಾಕು.  ಆದರೆ ಮತಪತ್ರಗಳನ್ನು ಬಳಸುತ್ತಿದ್ದಾಗ, ಮತ ಎಣಿಕೆ ಪೂರ್ಣಗೊಳಿಸಲು 30 ರಿಂದ 40 ಗಂಟೆಗಳ ಕಾಲಾವಧಿ ತೆಗೆದುಕೊಳ್ಳುತ್ತಿತ್ತು.

ಇವಿಎಂ ಮೊದಲ ಪ್ರಯೋಗ
* 1982ರಲ್ಲಿ ಕೇರಳದ ಪರೂರ್ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಕೆಮಾಡಲಾಯಿತು. 84 ಮತಗಟ್ಟೆಗಳ ಪೈಕಿ 50 ಮತಗಟ್ಟೆಗಳಲ್ಲಿ ಜನರು ಮತಯಂತ್ರದ ಮೂಲಕವೇ ಮತ ಚಲಾವಣೆಮಾಡಿದರು.

* 1983ರಲ್ಲಿ ಮೊದಲ ಬಾರಿಗೆ ‌ಕರ್ನಾಟಕಕ್ಕೆ ವಿದ್ಯುನ್ಮಾನ ಮತ ಯಂತ್ರವನ್ನು ಪರಿಚಯಿಸಲಾಯಿತು. ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತಯಂತ್ರ ಬಳಕೆಯಾಯಿತು. 

* ನಂತರ 1998 ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಐದು ವಿಧಾನಸಭಾ ಕ್ಷೇತ್ರ, ರಾಜಸ್ಥಾನದ ಐದು ವಿಧಾನಸಭಾ ಕ್ಷೇತ್ರ ಹಾಗೂ ರಾಷ್ಟ್ರೀಯ ರಾಜಧಾನಿ ದೆಹಲಿಯ ಆರು ವಿಧಾನಸಭಾ ಕ್ಷೇತ್ರಗಳ ಒಟ್ಟು 16 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಯಿತು.

* 2002ರ ಚುನಾವಣೆಯಿಂದ ಎಲ್ಲಾ ಕಡೆ ಎಲೆಕ್ಟ್ರಾನಿಕ್ ಮತಯಂತ್ರವನ್ನು ಬಳಸಲಾಗುತ್ತಿದೆ.

* ಪ್ರಥಮವಾಗಿ ಸಂಪೂರ್ಣ ಎಲ್ಲಾ ಕ್ಷೇತ್ರಗಳಲ್ಲೂ ಮತಯಂತ್ರಗಳೊಂದಿಗೆ ಚುನಾವಣೆ ನಡೆಸಿದ ದೇಶದ ಮೊದಲ ರಾಜ್ಯ ಕರ್ನಾಟಕ. 

ಕೋರ್ಟ್ ತಡೆ 1984
1984ರಲ್ಲಿ ಇವಿಎಂಗೆ ಮೊದಲ ವಿಘ್ನ ಎದುರಾಯಿತು. ಯಂತ್ರಗಳ ಬಳಕೆಗೆ ಕೋರ್ಟ್ ತಡೆ ನೀಡಿತು. ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಯಾಗು‌ವವರೆಗೆ ಇವಿಎಂ ಬಳಕೆಮಾಡುವಂತಿಲ್ಲ ಎಂದ ಸುಪ್ರೀಂ ಕೋರ್ಟ್‌, ಪರೂರ್ ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಿತು.

ಸುಪ್ರೀಂ ಕೋರ್ಟ್ ಆದೇಶದಂತೆ ಮತಯಂತ್ರಗಳನ್ನು ಚುನಾವಣೆಗಳಲ್ಲಿ ಬಳಸಿಕೊಳ್ಳಲು ಅನುವಾಗುವ ರೀತಿಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು, 61ಎ ಸೆಕ್ಷನ್ ಸೇರ್ಪಡೆಮಾಡಲಾಯಿತು. ಈ ತಿದ್ದುಪಡಿಯಿಂದ ಮತಯಂತ್ರಗಳ ಬಳಕೆಗಿದ್ದ ಅಡ್ಡಿ ನಿವಾರಣೆಯಾಯಿತು. ನಂತರ ಮೂರು ಲೋಕಸಭೆ ಹಾಗೂ 118 ವಿಧಾನಸಭೆ ಚುನಾವಣೆಗಳಲ್ಲಿ ಮತ್ತೆ ಮತ ಯಂತ್ರಗಳನ್ನು ಬಳಸಲಾಯಿತು. 2004ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಎಲೆಕ್ಟ್ರಾನಿಕ್ ಮತಯಂತ್ರವನ್ನು ಬಳಸಲಾಯಿತು.

ಹೊರದೇಶಗಳಿಗೂ ರಫ್ತು
ಭಾರತದ ಚುನಾವಣೆಗಳಲ್ಲಿ ಇವಿಎಂಗಳನ್ನು ಪರಿಚಯಿಸಿದ ನಂತರ ಭೂತಾನ್, ನೇಪಾಳ ಮತ್ತು ನಮೀಬಿಯಾದಂತಹ ಅನೇಕ ದೇಶಗಳು ತಮ್ಮ ಚುನಾವಣೆಗಳಲ್ಲಿ ಭಾರತದಲ್ಲಿ ತಯಾರಿಸಿದ ಇವಿಎಂ ಯಂತ್ರಗಳನ್ನು ಬಳಸಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾನ ಮಾಡುವ ವಿಧಾನ
One Person One Vote ಎಂಬಂತೆ ಒಮ್ಮೆ ಬ್ಯಾಲೆಟಿಂಗ್ ಘಟಕದ ಮೂಲಕ ಮತದಾನ ಮಾಡಿದ ಮತದಾರನು ಮತ್ತೊಮ್ಮೆ ಮಾಡಿದರೆ ಅದು ದಾಖಲಾಗುವುದಿಲ್ಲ. ಒಂದು ನಿಮಿಷಕ್ಕೆ ಐದು ಮತ ಮಾತ್ರ ಹಾಕಬಹುದಾದರಿಂದ ಹೆಚ್ಚು ಮತವನ್ನು ಏಕಕಾಲದಲ್ಲಿ ಹಾಕಲಾಗು ವುದಿಲ್ಲ. ಇದರಿಂದ ಸಾವಿರಾರು ಮತಗಳನ್ನು ನಕಲಿ ಮಾಡಿ ಮತಪೆಟ್ಟಿಗೆ ತುಂಬುವುದನ್ನು ತಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT