ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ-ತೋಟಗಾರಿಕೆ, ರೇಷ್ಮೆ ಕೃಷಿ ಡಿಪ್ಲೊಮಾ ಕೋರ್ಸ್‌ಗಳ ಮಾಹಿತಿ

ಕೋರ್ಸ್ ಕಾರ್ನರ್‌
ಅಕ್ಷರ ಗಾತ್ರ

ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ಅಭ್ಯರ್ಥಿಗಳ ಕೌಶಲ ಹೆಚ್ಚಿಸುವ ಹಾಗೂ ಈ ಮೂಲಕ ಸ್ವ ಉದ್ಯೋಗಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಕೃಷಿಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಡಿಪ್ಲೊಮಾ ಹಾಗೂ ದೂರ ಶಿಕ್ಷಣ ಕೋರ್ಸ್‌ಗಳನ್ನು ನಡೆಸುತ್ತಾ ಬಂದಿವೆ.

ಯಾವುದೇ ಸರ್ಕಾರಿ ಉದ್ಯೋಗದ ಭರವಸೆಯ ಆಧಾರದ ಮೇಲೆ ಈ ಕೋರ್ಸ್‌ಗಳನ್ನು ನಡೆಸುತ್ತಿಲ್ಲ. ಬದಲಿಗೆ, ಗ್ರಾಮೀಣ ಅಭ್ಯರ್ಥಿಗಳಿಗೆ ಕೃಷಿ ಅನುಭವ, ಕೃಷಿ ತಂತ್ರಜ್ಞಾನದ ಪ್ರಸಾರ ಮತ್ತು ವಿಸ್ತರಣಾ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಈ ಕೋರ್ಸ್‌ಗಳನ್ನು ಮುಗಿಸಿದವರು ಸರ್ಕಾರಿ ಉದ್ಯೋಗ ಹುಡುಕುವುದು ಬಿಟ್ಟು, ಸ್ವಯಂ ಕೃಷಿಯಲ್ಲಿ ತೊಡಗುವುದು ಅಪೇಕ್ಷಣೀಯ.

ಕೃಷಿ ಡಿಪ್ಲೊಮಾ ಕೋರ್ಸ್

ದಾವಣಗೆರೆ ಜಿಲ್ಲೆ ಕತ್ತಲಗೆರೆ ಮತ್ತು ಉಡುಪಿ ಜಿಲ್ಲೆ ಬ್ರಹ್ಮಾವರ, ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಬಳ್ಳಾರಿ ಜಿಲ್ಲೆ ಹಗರಿಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಮಂಡ್ಯದ ವಿ.ಸಿ. ಫಾರಂನ ಕೃಷಿ ಕಾಲೇಜಿನಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ ಇದೆ.ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು 19 ವರ್ಷದೊಳಗಿರುವ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆwww.uahs.edu.in http://uasraichur.edu.in www.uasbangalore.edu.in ನೋಡಬಹುದು.

ದೂರಶಿಕ್ಷಣ ಕೋರ್ಸ್

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯದ ದೂರಶಿಕ್ಷಣ ವಿಭಾಗವು ಒಂದು ವರ್ಷ ಅವಧಿಯ ಕೃಷಿ ಡಿಪ್ಲೊಮಾ, ಸಮಗ್ರ ಕೃಷಿ, ಸಾವಯವ ಕೃಷಿ ಮತ್ತು ಜೇನು ಸಾಕಾಣಿಕೆ ಕುರಿತ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸುತ್ತಿದೆ. ಓದು, ಬರಹ ಬಲ್ಲ ಅಥವಾ 7ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಓದಿರುವವರು ಅರ್ಜಿ ಸಲ್ಲಿಸಬಹುದು.

ದೂರಶಿಕ್ಷಣದ ಮೂಲಕಕೃಷಿ ತಾಂತ್ರಿಕತೆಯನ್ನು ಗ್ರಾಮೀಣ ಯುವಜನಾಂಗಕ್ಕೆ ತಲುಪಿಸುವುದು, ಶಾಲಾ / ಕಾಲೇಜು ವಂಚಿತರಾದವರಲ್ಲಿ ಕೃಷಿಯ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು ಮತ್ತು ಕೃಷಿ ಶಿಕ್ಷಣವನ್ನು ಮುಂದುವರಿಸಲು ಅವಕಾಶಗಳನ್ನು ಒದಗಿಸುವುದು, ಕೃಷಿ ಕಾರ್ಯನಿರತರಿಗೆ ಉನ್ನತ ಕೃಷಿಜ್ಞಾನವನ್ನು ಪಡೆಯಲು ಅವಕಾಶ ಒದಗಿಸುವುದು ಈ ಕೋರ್ಸ್‌ ಉದ್ದೇಶ.ವಿವರಗಳಿಗೆ ನೋಡಿ: www.uasbangalore.edu.in

ರೇಷ್ಮೆ ಕೃಷಿ ಡಿಪ್ಲೊಮಾ

ಬೆಂಗಳೂರು ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯಗಳು ರೇಷ್ಮೆ ಕೃಷಿ ಮತ್ತು ಕೃಷಿ ಸಂಬಂಧಿತ ಒಂದು ಮತ್ತು ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತಿವೆ. ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯ ಕೋಲಾರ ಜಿಲ್ಲೆ ಚಿಂತಾಮಣಿಯಲ್ಲಿರುವ ರೇಷ್ಮೆ ಕೃಷಿ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎರಡು ವರ್ಷಗಳ ರೇಷ್ಮೆ ಕೃಷಿ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದ್ದು ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ನೋಡಿ: www.uasbangalore.edu.in

ತೋಟಗಾರಿಕೆ ಡಿಪ್ಲೊಮಾ ಕೋರ್ಸ್

ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಕೋಲಾರದ ಹೊಗಳಗೇರೆ ಮತ್ತು ಗೋಕಾಕ ತಾಲ್ಲೂಕು ಅರಭಾವಿಯಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯಗಳಲ್ಲಿ ಎರಡು ವರ್ಷಗಳ ತೋಟಗಾರಿಕೆ ಡಿಪ್ಲೋಮಾ ಕೋರ್ಸ್ ನಡೆಸಲಾಗುತ್ತಿದೆ. ಈ ಕೋರ್ಸ್‌ಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ತೋಟಗಾರಿಕೆ ಸಂಬಂಧಿಸಿದ ಬೀಜೋತ್ಪಾದನೆ, ಸಸ್ಯಾಭಿವೃದ್ಧಿ ಮತ್ತು ಸಸ್ಯಪಾಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧ್ಯಯನ ಮಾಡುತ್ತಾರೆ. ಶೇ 75ರಷ್ಟು ಪ್ರಾಯೋಗಿಕ ತರಬೇತಿ ಇರುತ್ತದೆ. ಹೆಚ್ಚಿನ ವಿವರಗಳಿಗೆ
ನೋಡಿ: www.uhsbagalkot.edu.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT