ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರವಾಸ: ಪಠ್ಯದಾಚೆಗಿನ ಅನುಭವಾತ್ಮಕ ಕಲಿಕೆ

Published 10 ಡಿಸೆಂಬರ್ 2023, 21:45 IST
Last Updated 10 ಡಿಸೆಂಬರ್ 2023, 21:45 IST
ಅಕ್ಷರ ಗಾತ್ರ

ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಬಹುತೇಕ ಶಾಲೆಗಳ ಮಕ್ಕಳು ತಮ್ಮ ಕನಸಿಗೆ ಬಣ್ಣಬಣ್ಣದ ರೆಕ್ಕೆ ಕಟ್ಟಿಕೊಂಡು ಕಲ್ಪನಾಲೋಕದಲ್ಲಿ ತೇಲುತ್ತಾರೆ. ಕಲಿಕಾರ್ಥಿಗಳಲ್ಲಿ ಸಡಗರ ಮತ್ತು ಉತ್ಸಾಹದ ಮೂಲಕ ಸ್ಫೂರ್ತಿ ಮತ್ತು ಪ್ರೇರಣೆ ತುಂಬುವ ಮಹತ್ತರ ಕಾರ್ಯಕ್ರಮವೇ ಶೈಕ್ಷಣಿಕ ಪ್ರವಾಸ.

ಕಲಿಕೆಯ ಒಂದು ಭಾಗವಾದ ಶೈಕ್ಷಣಿಕ ಪ್ರವಾಸವು ವೀಕ್ಷಣೆಯ ಮೂಲಕ ಅನುಭವ ಜನ್ಯ ಕಲಿಕೆಯಾಗಿದೆ. ತಾತ್ವಿಕ ಜ್ಞಾನವನ್ನು ಒರೆಗೆ ಹಚ್ಚಿ ವೀಕ್ಷಿಸುವ ಮತ್ತು ಸಾದೃಶ್ಯಗಳೊಂದಿಗೆ ಹೋಲಿಕೆ ಮಾಡಿ ಕಲಿಯುವ ಚಟುವಟಿಕೆಯಾಗಿದೆ. ಶೈಕ್ಷಣಿಕ ಪ್ರವಾಸವು ಮಕ್ಕಳಲ್ಲಿ ಪರಿಸರ ಪ್ರೇಮ, ನಿಸರ್ಗದ ರಮ್ಯತೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳ ಅಧ್ಯಯನ, ಅಭಿವೃದ್ಧಿಗೆ ಪೂರಕವಾದ ಉದ್ಯಮಗಳ ವೀಕ್ಷಣೆ, ವೈವಿಧ್ಯಮಯ ಜನಸಮುದಾಯ ಮತ್ತು ವಿವಿಧ ಸಂಸ್ಕೃತಿಗಳ ಪರಿಚಯ, ಪಾರಂಪರಿಕ ವೃತ್ತಿಗಳ ಪರಿಚಯ, ವಿವಿಧ ಪ್ರಾಣಿ ಪಕ್ಷಿ ಖಗಮೃಗಗಳ ವೀಕ್ಷಣೆ ಮೂಲಕ ಜ್ಞಾನ ವಿಕಾಸಕ್ಕೆ ಪೂರಕವಾಗಿದೆ.

ಇವುಗಳ ಜೊತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಶೈಕ್ಷಣಿಕ ಪ್ರವಾಸ ಹೆಚ್ಚು ಮಹತ್ತರವಾಗಿದೆ. ಶೈಕ್ಷಣಿಕ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಪರಸ್ಪರ ಸಹಕಾರ, ಹಂಚಿ ತಿನ್ನುವ ಮನೋಭಾವ, ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರರಿಗೆ  ಗೌರವ ನೀಡುವುದು, ವಿವಿಧ ಸಂಸ್ಕೃತಿಗಳ ಮೆಚ್ಚುಗೆ ಹೀಗೆ ಹಲವು ಬಗೆಯ ಸೌಜನ್ಯಯುತ ನಡವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪಠ್ಯದಲ್ಲಿನ ಪರಿಕಲ್ಪನೆಗಳನ್ನು ಕೇಳಿ ತಿಳಿಯುವುದಕ್ಕಿಂತ ನೋಡಿ ತಿಳಿದಾಗ ಹೆಚ್ಚು ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಶೈಕ್ಷಣೀಕ ಪ್ರವಾಸಕ್ಕೆ ತನ್ನದೇ ಆದ ಮಹತ್ವವಿದೆ.

ಪ್ರವಾಸ ಪ್ರಯಾಸವಾಗದಿರಲಿ: ಸ್ಥಳ ಆಯ್ಕೆ : ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟಕ್ಕೆ ಹೊಂದುವಂತಿರಲಿ. ಕೇವಲ ಪ್ರೇಕ್ಷಣೀಯ ಅಥವಾ ತೀರ್ಥಯಾತ್ರಾ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳದೇ, ನಿಸರ್ಗ ರಮಣೀಯ ಸ್ಥಳಗಳು, ಕಿರು ಕೈಗಾರಿಕಾ ಪ್ರದೇಶಗಳು, ಸ್ಥಳೀಯ ಐ.ಟಿ.ಐ ಅಥವಾ ಜಿ.ಟಿ.ಟಿ.ಸಿ ಕಾಲೇಜುಗಳು, ಐತಿಹಾಸಿಕ ಸ್ಥಳಗಳು, ಸ್ಥಳೀಯ ಪಕ್ಷಿ ಸಂರಕ್ಷಿತ ತಾಣಗಳು, ಅರಣ್ಯ ಇಲಾಖೆಯ ಸಂರಕ್ಷಿತ ಕಿರು ಅರಣ್ಯಗಳು, ನಿಸರ್ಗಧಾಮಗಳು, ಅಂಚೆ ಕಛೇರಿ, ಬ್ಯಾಂಕ್, ವಿಶೇಷ ವೃತ್ತಿಗಾರರ ಕಾರ್ಯಕ್ಷೇತ್ರಗಳು ಇರಲಿ.


ಸ್ಪಷ್ಟ ಮಾಹಿತಿ: ಪ್ರವಾಸದ ಸ್ಥಳಗಳ ಕುರಿತು ಮಕ್ಕಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದನ್ನು ಶಾಲಾ ಶಿಕ್ಷಕರೇ ನೀಡದರೆ ಉತ್ತಮ. ಇಲ್ಲದಿದ್ದರೆ ಸ್ಥಳೀಯ ಗೈಡ್‌ಗಳನ್ನು ಬಳಸಿಕೊಂಡು ಸ್ಥಳಗಳ ಐತಿಹಾಸಿಕ, ಸಾಂಸ್ಕೃತಿಕ, ಪರಿಸರ ಮತ್ತು ರಕ್ಷಣೆಯ ಮಹತ್ವ ತಿಳಿಸುವಂತಹ ಮಾಹಿತಿ ಸ್ಪಷ್ಟವಾಗಿದ್ದರೆ ಪ್ರವಾಸದ ಉದ್ದೇಶ ಸಾರ್ಥಕಗೊಳ್ಳುತ್ತದೆ.
ವಸತಿ ಮತ್ತು ಊಟ : ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಬಗ್ಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ತಿಳಿದುಕೊಂಡು ಬುಕ್ಕಿಂಗ್ ಮಾಡಿಕೊಳ್ಳುವುದು ಉಚಿತ. ಇಲ್ಲಿದ್ದರೆ ವಸತಿಗಾಗಿ ಪರದಾಡಬೇಕಾಗುತ್ತದೆ. ಜೊತೆಗೆ ಪ್ರವಾಸದ ಸ್ಥಳಗಳಲ್ಲಿ ಊಟದ ವ್ಯವಸ್ಥೆಯ ಬಗ್ಗೆಯೂ ಪೂರ್ವಯೋಜನೆ ಅಗತ್ಯ. ಕೆಲವು ಪ್ರದೇಶದ ಸ್ಥಳೀಯ ಊಟ ಕೆಲವು ಭಾಗದ ಮಕ್ಕಳಿಗೆ ರುಚಿಸುವುದಿಲ್ಲ. ಅದಕ್ಕಾಗಿ ಸೂಕ್ತ ಸಿದ್ದತೆ ಮಾಡಿಕೊಳ್ಳುವುದು ಅಗತ್ಯ ಎನಿಸುತ್ತದೆ.

ಸುರಕ್ಷತೆ : ಪ್ರವಾಸದ ಸಮಯದಲ್ಲಿ ಮಕ್ಕಳ ಸುರಕ್ಷತೆ ಬಹಳ ಮುಖ್ಯ. ಸಾಧ್ಯವಾದಷ್ಟೂ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವುದು ಒಳಿತು. ಇಲಾಖೆಯು ನಿಗದಿಪಡಿಸಿದ ಸಾರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡು ಸುರಕ್ಷಿತ ಪ್ರವಾಸ ಕೈಗೊಳ್ಳಬೇಕು. ಅಲ್ಲದೇ ಪ್ರವಾಸದ ಸ್ಥಳಗಳಲ್ಲಿಯೂ ಮಕ್ಕಳ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಬೇಕು. ಆದಷ್ಟೂ ನೀರಿನ ಮೂಲಗಳು ಮತ್ತು ಚಾರಣ ಸ್ಥಳಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲೇಬೇಕು. ಮಕ್ಕಳು ಒಂಟಿಯಾಗಿ ಸುತ್ತಾಡುವುದನ್ನು ತಪ್ಪಿಸಲು ಗುಂಪುಗಳ ರಚನೆ ಅಗತ್ಯ.

ಖರ್ಚು-ವೆಚ್ಚ : ಶೈಕ್ಷಣಿಕ ಪ್ರವಾಸವು ಪಾಲಕರಿಗೆ ಹೊರೆಯಾಗದೇ ಅವರ ಆರ್ಥಿಕ ಮಿತಿಗನುಗುಣವಾಗಿರಲಿ. ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರವಾಸ ಮಾಡಲು ಅನುಕೂಲವಾಗುವಂತೆ ಖರ್ಚು ವೆಚ್ಚಗಳನ್ನು ಹೊಂದಿಸಿಕೊಳ್ಳುವುದು ಉಚಿತ. ಪ್ರವಾಸದ ನಂತರ ಖರ್ಚು ವೆಚ್ಚಗಳ ಮಾಹಿತಿಯನ್ನು ಪಾಲಕರಿಗೆ ಅಥವಾ ಶಾಲಾ ಮಂಡಳಿಗೆ ಹಂಚಿಕೊಳ್ಳುವAತಾಗಬೇಕು. ಇದು ಪಾರದರ್ಶಕ ಪ್ರವಾಸದ ಪ್ರತೀಕ.

ದಾಖಲೀಕರಣ: ಇದು ತುಂಬಾ ಮಹತ್ವದ್ದು. ಪ್ರವಾಸದ ವೇಳೆ ಮಕ್ಕಳು ಸಣ್ಣ ನೋಟ್‌ಬುಕ್‌ನಲ್ಲಿ ಸಂಕ್ಷಿಪ್ತ ಮಾಹಿತಿಯನ್ನು ಬರೆದುಕೊಳ್ಳುವಂತೆ ಪ್ರೇರೆಪಿಸಬೇಕು. ಪ್ರವಾಸದ ನಂತರ ಮಕ್ಕಳು ತಾವು ನೋಡಿದ ಸ್ಥಳಗಳ ಕುರಿತ ಅನುಭವಗಳನ್ನು ಅಕ್ಷರಗಳ ಮೂಲಕ ದಾಖಲು ಮಾಡಲು ಉತ್ತೇಜಿಸಿ. ಈ ದಾಖಲೀಕರಣ ಅವರ ಜ್ಞಾನಾರ್ಜನೆಯ ಮಟ್ಟಕ್ಕೆ ತಕ್ಕಂತೆ ಇರಲಿ. ಉತ್ತಮ ದಾಖಲೀಕರಣಕ್ಕೆ ಸೂಕ್ತ ಬಹುಮಾನ ನೀಡುವಂತಾದರೆ ಇನ್ನಷ್ಟು ಸ್ಪೂರ್ತಿ ಪಡೆಯುತ್ತಾರೆ.

ಸಂಗ್ರಹ : ಪ್ರವಾಸದ ಸ್ಥಳಗಳಲ್ಲಿನ ಕಲ್ಲು, ಮಣ್ಣು, ಮರಳು, ಎಲೆಗಳು, ಬೀಜಗಳು, ಧಾನ್ಯಗಳು ಅಥವಾ ವಿಶೇಷ ಎನಿಸಿದ ಇನ್ನಿತರೇ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶಿಸುವ ವ್ಯವಸ್ಥೆ ಮಾಡಿದರೆ ಪ್ರವಾಸಕ್ಕೆ ಬಾರದಿರುವ ಇನ್ನಿತರೇ ಮಕ್ಕಳ ಕಲಿಕೆಗೂ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT