ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಬುದ್ಧಿಯಿಲ್ಲದವರಿಗೆ ಶಾಸ್ತ್ರಗಳಿಂದ ಉಪಯೋಗವಿಲ್ಲ

Last Updated 27 ಜೂನ್ 2019, 16:12 IST
ಅಕ್ಷರ ಗಾತ್ರ

ಶಾಸ್ತ್ರ, ಗುರುವಿನ ಮಾರ್ಗದರ್ಶನ ಮತ್ತು ಸ್ವಪ್ರಯತ್ನದ ಬಲದಿಂದಸಾಧನೆ ಸುಲಭ. ಇವೆಲ್ಲವೂ ಮನುಷ್ಯ ಪ್ರಯತ್ನಗಳೇ. ಇಲ್ಲಿ ದೈವಕ್ಕೆ ಸ್ಥಾನವಿಲ್ಲ-‌ ಇದು ಯೋಗಾ ವಾಸಿಷ್ಠದಲ್ಲಿ ಬರುವ ಒಂದು ಮಾರ್ಗದರ್ಶಿ.

ಶಾಸ್ತ್ರ ಎಂದರೆ ಧರ್ಮಗ್ರಂಥದಲ್ಲಿ ಹೇಳಿರುವುದು ಎಂದಲ್ಲ. ನಿಮ್ಮ ಮಟ್ಟಿಗೆ ಪಠ್ಯದಲ್ಲಿ ಇರುವ ಮಾಹಿತಿ. ಬೇರೆ ಬೇರೆಯವರಿಗೆ ಅವರ ಜ್ಞಾನಕ್ಕೆ ಕಾಣಿಕೆ ಸಲ್ಲಿಸುವ ಗ್ರಂಥಗಳು.

’ಗುರು ಲೇಕ ಎಟುವಂಟಿ ಗುಣಿಕಿ ತೆಲಿಯಗಬೋದು’ ಎಂದು ಹಾಡಿದರು ತ್ಯಾಗರಾಜರು. ನಾವೇ ಕಲಿಯ ಹೊರಟರೆ ನಮ್ಮ ಸೀಮಿತ ತಿಳಿವಳಿಕೆಯಲ್ಲಿ ಸರಿಯಾಗಿ ಕಲಿಯದೇ ತಪ್ಪು ಅರ್ಥ ಮಾಡಿಕೊಳ್ಳಬಹುದು.

ಗುರುಗಳಾದರೆ ಅವರಿಗಿರುವ ಅನುಭವ ಮತ್ತು ವಿಪುಲ ಜ್ಞಾನದ ನೆರವಿನಿಂದ ಸರಿಯಾಗಿ ಕಲಿಸಬಲ್ಲರು. ಇವೆಲ್ಲವುಗಳ ಜೊತೆಗೆ ನಮ್ಮ ಪ್ರಯತ್ನವಿಲ್ಲದಿದ್ದರೆ, ಯಶಸ್ಸು ಮರೀಚಿಕೆಯಾಗಿರುತ್ತದೆ. ದೃಷ್ಟಿಯೇ ಇಲ್ಲದವನಿಗೆ ಹೇಗೆ ಕನ್ನಡಕ ಉಪಯೋಗಕ್ಕೆ ಬರುವುದಿಲ್ಲವೋ, ಹಾಗೆಯೇ ಸ್ವಂತ ಬುದ್ಧಿಯಿಲ್ಲದವನಿಗೆ ಶಾಸ್ತ್ರಗಳಿಂದ ಏನೂ ಉಪಯೋಗವಾಗುವುದಿಲ್ಲ ಎನ್ನುತ್ತದೆ ಮತ್ತೊಂದು ಶ್ಲೋಕ.

ನಾವು ಬಹುತೇಕರು ಎಡವುದು ಪ್ರಯತ್ನ ಮಾಡುವುದರಲ್ಲಿ.
• ಅನೇಕರಿಗೆ ಭವಿಷ್ಯ ಕುರಿತಂತೆ ಸ್ಪಷ್ಟ ಕಲ್ಪನೆ ಇಲ್ಲ.
• ಅನೇಕರು ಈಗ ಇರುವ ಹಾಗೆಯೇ ಸೌಕರ್ಯಗಳು, ಸವಲತ್ತುಗಳು ಎಂದೆಂದಿಗೂ ಇರುತ್ತವೆ ಎಂಬ ಕುರುಡು ನಂಬಿಕೆಯಲ್ಲಿ ಮುಳುಗಿರುತ್ತಾರೆ.
• ಅನೇಕರಿಗೆ ತಮ್ಮ ಕನಸನ್ನು ಕುರಿತು ಚಿಂತಿಸಲೂ ಭಯ. ಅದು ಈಡೇರದಿದ್ದರೆ ಭ್ರಮನಿರಸನವಾಗುವುದು ಎನ್ನುವ ಹೆದರಿಕೆ ಅವರಿಗೆ.
• ಹಲವರಂತೂ ಮೋಜು, ಮಸ್ತಿಯೇ ತಮ್ಮ
ಬದುಕು ಎನ್ನುವ ಧ್ಯೇಯದಲ್ಲಿಯೇ ದಿನಚರಿಯನ್ನು ರೂಪಿಸಿಕೊಂಡಿರುತ್ತಾರೆ.

ವಿದ್ಯಾರ್ಥಿಗಳ, ಯುವಜನರ ಜೊತೆಗಿನ ಸುದೀರ್ಘ ಒಡನಾಟದಲ್ಲಿ ಕಂಡುಕೊಂಡ ಸತ್ಯವಿದು.

ಇದರ ಜೊತೆಗೆ ಹಲವು ವಯಸ್ಕರು, ’ಸರ್, ಹುಡುಗರಾಗಿದ್ದಾಗ ದೊಡ್ಡವರು ಹೇಳಿದ ಮಾತು ಕೇಳಲಿಲ್ಲ. ಆಟ ಆಡಿಕೊಂಡು ಇದ್ದು ಬಿಟ್ಟೆವು. ಈಗ ಬದುಕಿನಲ್ಲಿ ಪ್ರಯಾಸ ಪಡುತ್ತಿದ್ದೇವೆ’ ಎಂದೂ ಅಲವತ್ತುಕೊಂಡಿದ್ದಾರೆ. ಇವರ ಮಾತುಗಳಾದರೂ ಕೆಲವರಿಗೆ ಪ್ರೇರೇಣೆ ನೀಡೀತು ಎಂದು ಆಶಿಸುವೆ!

ನಿಮ್ಮ ವ್ಯಕ್ತಿತ್ವಕ್ಕೆ, ನಿಮ್ಮ ಬುದ್ಧಿಶಕ್ತಿಗೆ, ನಿಮ್ಮ ಕೌಶಲಕ್ಕೆ ನೀವು ಬೆಲೆ ಕಟ್ಟಿದಾಗ ಕನಸುಗಳು ಮೂಡುತ್ತವೆ. ಅವಕ್ಕೆ ಗೌರವ ಕೊಟ್ಟು ಅವುಗಳನ್ನು ಈಡೇರಿಸಿಕೊಳ್ಳಲು ಬೇಕಾದ ನಡವಳಿಕೆಯನ್ನು ರೂಢಿಸಿಕೊಂಡಾಗ ಕನಸಿನ ಸಾಕಾರದತ್ತ ಸಾಗುವಿರಿ.

ಕನಸು ಈಡೇರುತ್ತದೆಯೋ, ಇಲ್ಲವೋ, ಅದರ ಸಾಕಾರದತ್ತ ಸಾಗುವ ಪ್ರಯಾಣದ ಆನಂದವನ್ನು ನೀವು ಅನುಭವಿಸಿದರೆ, ಜೀವನ ಸಂತೋಷ, ನೆಮ್ಮದಿಗಳಿಂದ ಕೂಡಿರುತ್ತದೆ.

ಅದುವೇ ನಿಜವಾದ ಯಶಸ್ಸು. ನಿಜವಾದ ಸಂತೃಪ್ತಿ. ಅವುಗಳನ್ನು ಪಡೆಯುವುದು ನಿಮ್ಮ ನಿಯಂತ್ರಣದಲ್ಲಿಯೇ ಇದೆ- ನನ್ನ ಬದುಕಿಗೆ ನಾನೇ ಸಾರ್ವಭೌಮ ಎಂದು ನಿರ್ಧರಿಸಿದರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT