ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಗ್ಲಭಾಷಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಹೀಗಿರಲಿ ತಯಾರಿ

ಪ್ರಾಥಮಿಕ ಶಾಲಾ ಸಹಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ
ಅಕ್ಷರ ಗಾತ್ರ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ(ಆಂಗ್ಲ ಭಾಷೆ) ಹುದ್ದೆಗೆ ಆಯ್ಕೆ ಬಯಸುವ ಅಭ್ಯರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿಗೆ ಉತ್ತರಿಸಬೇಕು. ಪತ್ರಿಕೆ –1ರಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಒಟ್ಟು 150 ಅಂಕಗಳ ಪ್ರಶ್ನೆ ಪತ್ರಿಕೆ ಇದು. ಸಾಮಾನ್ಯ ಕನ್ನಡ ಭಾಷೆ, ಸಾಮಾನ್ಯ ಆಂಗ್ಲ ಭಾಷೆ, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ, ಶೈಕ್ಷಣಿಕ ಮನೋವಿಜ್ಞಾನ ಮತ್ತು ವಿಕಸನ ಮತ್ತು ಬೋಧನಾ ವಿಧಾನ, ಮೌಲ್ಯಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ, ಗಣಕ ಯಂತ್ರ ಪ್ರಬುದ್ದತೆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಆಂಗ್ಲ ಭಾಷೆ ಐಚ್ಛಿಕ ಪತ್ರಿಕೆ - 2 ರಲ್ಲಿ ಇಂಗ್ಲಿಷ್ ಭಾಷೆ ಮತ್ತು ಬೋಧನಾ ವಿಷಯದ ಜ್ಞಾನಕ್ಕೆ ಸಂಬಂಧಿಸಿದ 150 ಅಂಕಗಳ, ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಈಪ್ರಶ್ನೆ ಪತ್ರಿಕೆಗೆ ಹೇಗೆ ಉತ್ತರಿಸಬೇಕು ಎಂಬ ಮಾಹಿತಿ ಇಲ್ಲಿದೆ; ಒಟ್ಟು ಐದು ಭಾಗಗಳಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಿರುತ್ತದೆ.

1 ರೀಡಿಂಗ್ ಕಾಂಪ್ರಹೆನ್ಷನ್(READING COMPREHENSION (UNSEEN PASSAGES)): ಈ ಭಾಗದಲ್ಲಿ ಇಂಗ್ಲಿಷ್ ಭಾಷೆಯಲ್ಲಿರುವ ಪಾಠ, ಪದ್ಯ, ಸಂಭಾಷಣೆ, ಲೇಖನ, ಪ್ರಬಂಧ ಅಥವಾ ವರದಿಯೊಂದನ್ನು ನೀಡಿ, ಅದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದು ನಾವು ನೋಡಿರದ ಅಥವಾ ಓದಿರದ (Unseen passage) ಪ್ಯಾಸೇಜ್ ಆಗಿದ್ದು , ಪ್ರಶ್ನೆ ಮತ್ತು ಉತ್ತರಗಳು ಪತ್ರಿಕೆಯಲ್ಲಿಯೇ ಲಭ್ಯವಿರುತ್ತವೆ. ಈ ಪ್ಯಾಸೇಜ್‌ನಲ್ಲಿ ಸೂಕ್ತವಾದ ಪದ / ಪದಗುಚ್ಛ / ವಾಕ್ಯವೃಂದ / ವಾಕ್ಯವನ್ನು ಹುಡುಕಿ ಉತ್ತರಿಸುವ ಜವಾಬ್ದಾರಿ ಅಭ್ಯರ್ಥಿಗಳದ್ದು. ತುಂಬಾ ಸರಳವಾದ ಪ್ರಕ್ರಿಯೆ ಇದು. ಪದ / ವಾಕ್ಯಗಳನ್ನು ವೇಗವಾಗಿ ಓದುವ ಸಾಮರ್ಥ್ಯ, ವ್ಯಾಕರಣ ಜ್ಞಾನ, ಪದಸಂಪತ್ತು, ಸಾಮಾನ್ಯ ಜ್ಞಾನ, ತರ್ಕಗಳಲ್ಲಿ ಅಭಿರುಚಿ ಇದ್ದವರು ಈ ಪ್ರಶ್ನೆಗಳನ್ನು ಸುಲಭವಾಗಿ ಬಿಡಿಸುತ್ತಾರೆ. ವಿವರಣಾತ್ಮಕ ಉತ್ತರ ಅಗತ್ಯವಿದ್ದರೆ ನಿಗದಿತ ಪದ ಅಥವಾ ಪದಗುಚ್ಛವನ್ನು ಬಳಸಿಕೊಂಡು ಸ್ವಂತ ವಾಕ್ಯಗಳಲ್ಲಿ ಉತ್ತರಿಸಬೇಕಿರುತ್ತದೆ.

2 ಪದಸಂಪತ್ತು ಮತ್ತು ಭಾಷೆ ಬಳಕೆ( VOCABULARY AND LANGUAGE USE): ಈ ಭಾಗದಲ್ಲಿ ಇಂಗ್ಲಿಷ್ ಪದದ ಕಾಗುಣಿತ(ಸ್ಪೆಲ್ಲಿಂಗ್), ಪದರಚನೆ, ಉಚ್ಚಾರ, ಸಮಾನಾರ್ಥಕ, ವಿರುದ್ಧಾರ್ಥಕ ಪದಗಳು, ಲಿಂಗ, ವಚನಗಳ ಬದಲಾವಣೆ ಕುರಿತ ಪ್ರಶ್ನೆಗಳಿರುತ್ತವೆ. ಹಾಗೆಯೇ ಹಲವು ಪದಗಳಲ್ಲಿ ಹೇಳಿರುವುದಕ್ಕೆ ಬದಲಾಗಿ ಏಕಪದ ನೀಡುವಿಕೆ, ಸಮಾನ ಉಚ್ಚಾರವಿದ್ದರೂ ವಿವಿಧ ರೂಪ ಮತ್ತು ಅರ್ಥ ಕೊಡುವ ಪದಗಳ ಬಳಕೆ, ಗಾದೆ, ನುಡಿಗಟ್ಟು(Vocabulary), ಪಡೆನುಡಿಗಳ ಬಳಕೆ ಅಥವಾ ಅರ್ಥ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಿತ್ಯವೂ ಪತ್ರಿಕೆ ಓದುವ, ಅಂತರ್ಜಾಲದಲ್ಲಿ ಸಿಗುವ ಪದಸಂಪತ್ತಿನ ಸಮಸ್ಯೆಗಳನ್ನು ಬಿಡಿಸುವ, ಮೊಬೈಲ್ ಡಿಕ್ಷನರಿ ಬಳಸುವ, ಪದಬಂಧ ಬಿಡಿಸುವ ಹವ್ಯಾಸವಿರುವವರು ಈ ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು ಥಟ್ಟನೇ ನೀಡಬಲ್ಲರು.

3 ವ್ಯಾಕರಣ / ಭಾಷಾ ಬಳಕೆ (GRAMMAR / LANGUAGE USE): ವ್ಯಾಕರಣ ಮತ್ತು ಭಾಷಾ ಬಳಕೆಯನ್ನು ಪರೀಕ್ಷಿಸುವ ಸಲುವಾಗಿ ನೀಡಲಾಗುವ ಪ್ರಶ್ನೆಗಳು ವಾಕ್ಯಾಂಶ ಅಥವಾ ಪಾರ್ಟ್ಸ್ ಆಫ್ ಸ್ಪೀಚ್, ಟೈಮ್, ಟೆನ್ಸ್, ಕರ್ತರಿ ಮತ್ತು ಕರ್ಮಣಿ ಪ್ರಯೋಗ, ಪ್ರತ್ಯಕ್ಷ ಮತ್ತು ಪರೋಕ್ಷ ನಿರೂಪಣೆಯ ವಾಕ್ಯಗಳು, ತರತಮ ವಾಚಕಗಳು, ಪ್ರಶ್ನೆಗಳ ವಿವಿಧ ರೂಪಗಳು, ಲೇಖನ ಚಿಹ್ನೆಗಳು, ವಾಕ್ಯ ಅಥವಾ ಪದಸಂಯೋಜನೆಯಲ್ಲಿನ ತಪ್ಪುಗಳು, ಸರಳ-ಸಂಯುಕ್ತ-ಸಂಕೀರ್ಣ ವಾಕ್ಯಗಳು, ಕ್ರಿಯಾಪದಗುಚ್ಛ, ಅಲಂಕಾರಗಳು, ಸಂವಹನ ಕೌಶಲಗಳು ಮತ್ತು ಭಾಷಾ ಬಳಕೆ ಮುಂತಾದ ವಿಷಯಗಳನ್ನು ಒಳಗೊಂಡಿರುತ್ತವೆ. ವ್ಯಾಕರಣ ಪುಸ್ತಕ ಅಥವಾ ಪಠ್ಯಪುಸ್ತಕಗಳಲ್ಲಿ ನೀಡಲಾಗಿರುವ ವ್ಯಾಕರಣಾಂಶಗಳನ್ನು ಅಭ್ಯಾಸ ಮಾಡುವವರು, ಪ್ರಶ್ನೆಗಳನ್ನು ಸುಲಭವಾಗಿ ಬಿಡಿಸಬಹುದು.

4 ಬರವಣಿಗೆ ಸಾಮರ್ಥ್ಯ (WRITING ABILITY): ವಾಕ್ಯರಚನೆಯಲ್ಲಿ ಆಗಿರುವ ತಪ್ಪುಗಳನ್ನು ಗುರುತಿಸಿ ಸರಿಪಡಿಸುವುದು, ವಿವಿಧ ವಾಕ್ಯಾಂಶಗಳನ್ನು ಬಿಟ್ಟ ಸ್ಥಳಗಳಲ್ಲಿ ತುಂಬಿಸುವುದು, ವಾಕ್ಯಗಳಲ್ಲಿ ಬಳಸುವುದು, ಕೊಟ್ಟಿರುವ ಸುಳಿವುಗಳನ್ನು ಇಲ್ಲವೇ ಚಿತ್ರವನ್ನು ಬಳಸಿಕೊಂಡು ಪ್ಯಾರಾಗ್ರಾಫ್ ಅಥವಾ ಪ್ರಬಂಧ ರಚಿಸುವುದು, ಪತ್ರಲೇಖನ, ಸಂದೇಶ ಅಥವಾ ಘೋಷವಾಕ್ಯ ಇಲ್ಲವೇ ಜಾಹೀರಾತನ್ನು ರೂಪಿಸುವುದು, ಇ-ಮೇಲ್, ದಿನಚರಿ, ಲೇಖನ, ವ್ಯಕ್ತಿಚಿತ್ರ ಹೀಗೆ ಯಾವುದಾದರೂ ಸಂಗತಿಯನ್ನು ಕುರಿತು ವಿವರವಾಗಿ ಬರೆಯುವ ಅಭ್ಯಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು ಈ ಭಾಗದಲ್ಲಿರುತ್ತವೆ.

5 ಬೋಧನಾ ವಿಧಾನಗಳು (METHODS AND APPROACHES): ಭಾಷೆಯ ಸಂಕ್ಷಿಪ್ತ ಇತಿಹಾಸ, ಓದು, ಬರಹ ಮತ್ತು ಬೋಧನಾ ವಿಧಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಜೊತೆಗೆ ಭಾಷಾ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗುತ್ತದೆ. ಬಿ.ಇಡಿ. ತರಗತಿಗಳಲ್ಲಿ ಇಂಗ್ಲಿಷ್ ಮೆಥಡ್ ತೆಗೆದುಕೊಂಡವರಾದ್ದರಿಂದ ಭಾಷಾಬೋಧನೆಯ ಮತ್ತು ಭಾಷಾ ಕೌಶಲಗಳ ಕುರಿತ ಪ್ರಶ್ನೆಗಳನ್ನು ಬಿಡಿಸಲು ತರಬೇತಿಯ ಸಂದರ್ಭದಲ್ಲಿ ಓದಿದ ಪಠ್ಯವನ್ನೇ ಮತ್ತೊಮ್ಮೆ ತಿರುವಿಹಾಕಬೇಕು.

ಈ ಪತ್ರಿಕೆಗಳಿಗೆ ಉತ್ತರಿಸಲು ‌1 ರಿಂದ 10ನೇ ತರಗತಿಯವರೆಗಿನ ಪಠ್ಯ ಪುಸ್ತಕಗಳನ್ನು ಹಾಗೂ ಇಂಗ್ಲಿಷ್ ಭಾಷೆ ಮತ್ತು ವ್ಯಾಕರಣದ ಕೃತಿಗಳನ್ನು ಅಭ್ಯಾಸ ಮಾಡಬೇಕು. ಸರಳವಾಗಿ ಇಂಗ್ಲಿಷ್ ವಾಕ್ಯಗಳನ್ನ ಬರೆಯುವ, ಪ್ಯಾರಾಗ್ರಾಫ್ ಅಥವಾ ಪ್ರಬಂಧ ರಚಿಸುವ ಕೌಶಲವನ್ನು ರೂಢಿಸಿಕೊಳ್ಳಬೇಕು. ಅದಕ್ಕೆಂದೇ ಸರಳ ಕಲಿಕಾ ಕೈಪಿಡಿಗಳು ಲಭ್ಯ. ಕನ್ನಡದ ಮೂಲಕ ಇಂಗ್ಲಿಷ್ ಕಲಿಸುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆಂದೇ ರಚಿತವಾದ ನವಕರ್ನಾಟಕ ಪ್ರಕಾಶನದ ಪುಸ್ತಕ “Applied English Course for Competitive Examinations” ಈ ಸ್ಪರ್ಧಾರ್ಥಿಗಳಿಗೆ ಸಿದ್ಧಮಾದರಿ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT