ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ?

Last Updated 23 ನವೆಂಬರ್ 2022, 20:15 IST
ಅಕ್ಷರ ಗಾತ್ರ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ

ಕೇಂದ್ರ ಸರ್ಕಾರ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ(Unlawful Activities Prevention Act- UAPA) ಪಾಪ್ಯುಲರ್‌ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿತ್ತು.

ಈ ಸಂಘಟನೆ ನಿಷೇಧಿಸಿರುವ ಹಿಂದೆ ಸೂಕ್ತವಾದ ಕಾರಣಗಳು, ಸರಿಯಾದ ಸಾಕ್ಷ್ಯಗಳಿವೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನ್ಯಾಯಾಧಿಕರಣ / ನ್ಯಾಯಮಂಡಳಿ(ಟ್ರಿಬ್ಯುನಲ್‌) ರಚಿಸಿದ್ದು, ಅದರ ಮುಖ್ಯ ಸ್ಥರನ್ನಾಗಿದೆಹಲಿಯ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರನ್ನು ನೇಮಿಸಲಾಗಿತ್ತು. ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್ ಸಿ ಶರ್ಮ ಅವರು, ದಿನೇಶ್ ಅವರನ್ನು ಈ ಟ್ರಿಬ್ಯುನಲ್‌ಗೆ ನೇಮಕ ಮಾಡಿದ್ದರು.

ನ್ಯಾಯಾಧಿಕರಣ ಎಂದರೆ ಏನು ?

* ಯಎಪಿಎ ಕಾಯ್ದೆ ಅಡಿ ಯಾವುದೇ ಒಂದು ರಾಜಕೀಯ ಸಂಘಟನೆಯನ್ನು ನಿಷೇಧಿಸಿದಾಗ, ಈ ಪ್ರಕ್ರಿಯೆ ಸರಿಯಾದ ಕಾರಣಗಳಿಗಾಗಿ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ಒಂದು ನ್ಯಾಯಾಧಿಕರಣ ಅಥವಾ ನ್ಯಾಯಮಂಡಳಿಯನ್ನು ಸ್ಥಾಪಿಸುತ್ತದೆ. ಇದೊಂದು ತಾತ್ಕಾಲಿಕ ರಚನೆಯಾಗಿರುತ್ತದೆ.

* ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಈ ನ್ಯಾಯಾಧಿಕರಣದ ಚಟುವಟಿಕೆಗಳು ನಡೆಯುತ್ತವೆ. ಜೊತೆಗೆ, ಅವಶ್ಯಕತೆಯಿದ್ದಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಸಹಾಯಕರನ್ನೂ ನೇಮಿಸುತ್ತದೆ.

* ಈ ಯಎಪಿಎ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಯಾವುದೇ ಒಂದು ಸಂಸ್ಥೆಯನ್ನು ಕಾನೂನುಬಾಹಿರ ಎಂದು ಘೋಷಿಸಿದ ನಂತರ, 30 ದಿನಗಳ ಒಳಗೆ, ಆ ರೀತಿ ನಿಷೇಧಿಸಲು ಸಾಕಷ್ಟು ಸಾಕ್ಷ್ಯಗಳು ಮತ್ತು ಕಾರಣಗಳಿವೆಯೇ ಎಂದು ಪರಿಶೀಲಿಸಲು ನ್ಯಾಯಾಧಿಕರಣವನ್ನು ರಚಿಸಬೇಕು. ಹಾಗೆಯೇ, ಆ ನ್ಯಾಯಾಧಿಕರಣ ನೀಡುವ ತೀರ್ಪಿನ ಪ್ರಕಾರ ಸಂಘಟನೆಯ ನಿಷೇಧದ ಊರ್ಜಿತತೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ನ್ಯಾಯಾಧಿಕರಣದ ಕಾರ್ಯ:ಕೋಡ್ ಆಫ್ ಸಿವಿಲ್ ಪ್ರೊಸೀಜರ್ 1908ರ ಪ್ರಕಾರ ಸಿವಿಲ್ ಕೋರ್ಟ್‌ಗಳಿಗೆ ಇರುವಂತಹ ಅಧಿಕಾರವನ್ನೇ ನ್ಯಾಯಾಧಿಕರಣವು ಹೊಂದಿರುತ್ತದೆ.

ನಿಷೇಧ ದೃಢೀಕರಿಸುವ ವಿಧಾನಗಳು ಯಾವುವು?

* ಸಂಘಟನೆಯೊಂದನ್ನು ನಿಷೇಧಿಸುವ ಮುನ್ನ, ನ್ಯಾಯಮಂಡಳಿಯು ‘ನಿಮ್ಮ ಸಂಘಟನೆಯನ್ನು ಕಾನೂನುಬಾಹಿರವೆಂದು ಏಕೆ ಘೋಷಿಸಬಾರದು‘ ಎಂದು ಕಾರಣ ಕೇಳಿ, ಆ ಸಂಘಟನೆಗೆ ನೋಟಿಸ್‌ ಜಾರಿ ಮಾಡುತ್ತದೆ.ನೋಟಿಸ್‌ಗೆ 30 ದಿನಗಳೊಳಗೆ ಉ.ತ್ತರಿಸುವಂತೆ ಸೂಚಿಸುತ್ತದೆ.

* ಸಂಘಟನೆ ಅಥವಾ ಅದರ ಪದಾಧಿಕಾರಿಗಳು ನೋಟಿಸ್‌ಗೆ ನೀಡುವ ಉತ್ತರ / ಕಾರಣಗಳನ್ನು ಪರಿಗಣಿಸುವ ನ್ಯಾಯಮಂಡಳಿ,ನಂತರ ವಿಚಾರಣೆ ನಡೆಸುತ್ತದೆ.

* ಈ ಕಾರಣಗಳ ಜೊತೆಗೆ ಹೆಚ್ಚಿನ ಮಾಹಿತಿಯ ಅಗತ್ಯವಿದ್ದರೆ, ಕೇಂದ್ರ ಸರ್ಕಾರ ಅಥವಾ ಯಾವುದೇ ಪದಾಧಿಕಾರಿಗಳು ಅಥವಾ ಸಂಘದ ಸದಸ್ಯರನ್ನು ಕರೆಸಿ ವಿಚಾರಣೆ ನಡೆಸುತ್ತದೆ. ನಂತರ ಸಂಘಟನೆಯನ್ನು ಕಾನೂನುಬಾಹಿರವೆಂದು ಘೋಷಿಸಲು ಸಾಕಷ್ಟು ಕಾರಣಗಳಿವೆಯೇ ಇಲ್ಲವೇ ಎಂಬುದನ್ನು ನ್ಯಾಯಮಂಡಳಿ ನಿರ್ಧರಿಸುತ್ತದೆ. ನಂತರ ಆರು ತಿಂಗಳ ಅವಧಿಯಲ್ಲಿ ಆ ನಿರ್ಧಾರವನ್ನು ಘೋಷಿಸುತ್ತದೆ.

* ಯುಎಪಿಎ ಸೆಕ್ಷನ್ 6 ರ ಪ್ರಕಾರ, ಕೇಂದ್ರ ಸರ್ಕಾರವು ಸ್ವಯಂ‌ ಇಚ್ಛೆಯ ಮೇಲೆ ಅಥವಾ ಯಾವುದೇ ಸಂಬಂಧಿತ ವ್ಯಕ್ತಿಯ ಅರ್ಜಿಯ ಆಧಾರದಲ್ಲಿ ಅಧಿಸೂಚನೆಯನ್ನು ರದ್ದುಗೊಳಿಸಬಹುದು. ನ್ಯಾಯ ಮಂಡಳಿಯ ದೃಢೀಕರಣವನ್ನು ಲೆಕ್ಕಿಸದೆಯೂ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಳ್ಳಬಹುದು.

* ಆದರೆ ಆ ಸಂಸ್ಥೆಯು ಕಾನೂನುಬಾಹಿರವಾಗಿದೆ ಎಂದು ನ್ಯಾಯಮಂಡಳಿಯು ದೃಢೀಕರಿಸಿದರೆ, ಅಧಿಸೂಚನೆ ಜಾರಿಗೆ ಬಂದ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಕೇಂದ್ರದ ನಿರ್ಧಾರವೇ ಜಾರಿಯಲ್ಲಿರುತ್ತದೆ.

ಯುಎಪಿಎಗೆ ತಿದ್ದುಪಡಿ

* ’ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆ – 2019‘ ಅನ್ನು ಲೋಕಸಭೆ ಮತ್ತು ರಾಜ್ಯಸಭೆಯು 2019 ರಲ್ಲಿ ಅಂಗೀಕರಿಸಿತು. ’ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ -1967‘ರಲ್ಲಿರುವ ಅಂಶಗಳನ್ನು ತಿದ್ದುಪಡಿ ಮಾಡಿ, ಈ ಕಾಯ್ದೆಯನ್ನು ರೂಪಿಸಲಾಗಿದೆ.

* ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ಕಾರ್ಯವಿಧಾನಗಳನ್ನು ಒದಗಿಸು ವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.

* ಯುಎಪಿಎ, ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಹಾನಿಯನ್ನುಂಟುಮಾಡುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಕಾನೂನಾಗಿದೆ.

ಯುಎಪಿಎ ತಿದ್ದುಪಡಿ ಕಾಯ್ದೆ ಈ ಕೆಳಗಿನಿಂತಿದೆ‌;

*ಈ ಹಿಂದಿನ ಕಾಯ್ದೆ ಪ್ರಕಾರ, ಯಾವುದೇ ಸಂಘಟನೆಯು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗವಹಿಸಿದ್ದರೆ, ಅದನ್ನು ಉತ್ತೇಜಿಸಿದರೆ ಅಥವಾ ಸ್ವಯಂ ಭಯೋತ್ಪಾದನೆಯಲ್ಲಿ ತೊಡಗಿದ್ದರೆ, ಅಂಥ ಸಂಘಟನೆಯನ್ನು ಕೇಂದ್ರ ಸರ್ಕಾರ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬಹುದಿತ್ತು. ಈ ತಿದ್ದುಪಡಿಯಾಗಿರುವ ಕಾಯ್ದೆ, ಈ ಮೇಲೆ ಹೇಳಿರುವ ಆಧಾರದ ಮೇಲೆ‘ವ್ಯಕ್ತಿ’ಗಳನ್ನು ಕೂಡ ‘ಭಯೋತ್ಪಾದಕ’ ಎಂದು ಘೋಷಿಸುವ ಅಧಿಕಾರ ವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

ಎನ್‌ಐಎ ಯಿಂದ ಆಸ್ತಿಯ ವಶ :

* ಈ ಹಿಂದಿನ ಕಾಯ್ದೆ ಪ್ರಕಾರ, ಭಯೋತ್ಪಾದನೆ ಸಂಘಟನೆ ಜೊತೆ ಸಂಪರ್ಕ ಹೊಂದಿರುವವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು, ಸಂಬಂಧಿಸಿದ ತನಿಖಾಧಿಕಾರಿಯು ಪೊಲೀಸ್ ಮಹಾನಿರ್ದೇಶಕರ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಈಗ ತಿದ್ದುಪಡಿ ಕಾಯ್ದೆಯು, ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಅಧಿಕಾರಿಗಳು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಎನ್‌ಐಎ ಸಂಸ್ಥೆಯ ಮಹಾನಿರ್ದೇಶಕರ ಅನುಮೋದನೆ ಪಡೆಯಬೇಕು ಎಂದು ಸೂಚಿಸುತ್ತದೆ.

* ಈ ಹಿಂದೆ ಭಯೋತ್ಪಾದನಾ ಸಂಬಂಧಿತ ಪ್ರಕರಣಗಳಲ್ಲಿ ಡೆಪ್ಯುಟಿ ಸೂಪರಿಂಡೆಂಟ್ ಅಥವಾ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ದರ್ಜೆಗಿಂತ ಕೆಳಗಿರುವ ಯಾವುದೇ ಅಧಿಕಾರಿಯು ತನಿಖೆ ನಡೆಸುವಂತಿಲ್ಲ ಎಂಬ ನಿಯಮವಿತ್ತು.

* ಆದರೆ ಈಗ ತಿದ್ದುಪಡಿಯ ಪ್ರಕಾರ ಕಾಯ್ದೆಯ ಪ್ರಕರಣಗಳನ್ನು ತನಿಖೆ ಮಾಡುವ ಅಧಿಕಾರವನ್ನು ಇನ್‌ಸ್ಪೆಕ್ಟರ್ ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯ ಎನ್‌ಐಎ ಅಧಿಕಾರಿಗಳಿಗೆ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT