ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ವಿಜ್ಞಾನ ಸಂಶೋಧನೆಗೆ ಸ್ಫೂರ್ತಿ ‘ಇನ್‌ಸ್ಪೈರ್‌’

Last Updated 31 ಜುಲೈ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ(Department of Science and Technology - DST) ಇಲಾಖೆಯು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(IISc) ಮುಖಾಂತರ ನಡೆಸುತ್ತಿದ್ದ ಕಿಶೋರ ವೈಜ್ಞಾನಿಕ ಪ್ರೋತ್ಸಾಹನ್ ಯೋಜನ (KVPY) ಪರೀಕ್ಷೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರದ್ದುಗೊಂಡಿದೆ. ಈಹಿನ್ನೆಲೆಯಲ್ಲಿ ಡಿಎಸ್‌ಟಿ ವಿಭಾಗದವರೇ ನಡೆಸುವ ‘ಇನ್‌ಸ್ಪೈರ್‌’ (INSPIRE - Innovation in Science Pursuit for Inspired Research) ಕಾರ್ಯಕ್ರಮ ಮತ್ತೆ ಮುನ್ನೆಲೆಗೆ ಬಂದಿದೆ.

ಪಿಯುಸಿಯಲ್ಲಿ ವಿಜ್ಞಾನ ಮತ್ತು ಪ್ರಥಮ ಪದವಿಯಲ್ಲಿ ಮೂಲ ವಿಜ್ಞಾನ ಓದುವ ವಿದ್ಯಾರ್ಥಿಗಳಿಗೆಂದೇ ಕೆವಿಪಿವೈ ಮೀಸಲಾಗಿತ್ತು. ಪಿಯುಸಿ ಶಿಕ್ಷಣದಲ್ಲಿ ಶೇ 75 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಕೆವಿಪಿವೈ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಿದ್ದರು. ಈಗ ಪರೀಕ್ಷೆ ಇಲ್ಲವಾದ್ದರಿಂದ ಮೂಲ ಹಾಗೂ ನಿಸರ್ಗ ವಿಜ್ಞಾನ ವಿಷಯಗಳ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಇನ್‌ಸ್ಪೈರ್‌ ಕಾರ್ಯಕ್ರಮಕ್ಕೆ ದಾಖಲಾಗಬೇಕಿದೆ.

ಇನ್‌ಸ್ಪೈರ್‌ ಕಾರ್ಯಕ್ರಮ ಭಾರತದ ಸಂಶೋಧನಾ ಅಸ್ಮಿತೆಗೆ ಪೂರಕವಾಗಿ ರೂಪಿ ಸಲ್ಪಟ್ಟಿದೆ. ಇದರ ಮೂಲಕ 10 ರಿಂದ 27 ವರ್ಷದವರು ಮೂಲ ವಿಜ್ಞಾನದ ವಿಷಯಗಳ ವಿವಿಧ ಹಂತದ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಇದು ಪ್ರಮುಖವಾಗಿ ಮೂರು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಸೀಟ್ಸ್ (SEATS – Scheme For Early Attraction Of Talents)

ಇದು 10 ರಿಂದ 15 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಕಾರ್ಯಕ್ರಮ. ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಇನ್‌ಸ್ಪೈರ್‌ ಪ್ರಶಸ್ತಿ. ಎರಡನೆಯದು ಇಂಟರ್ನ್‌ಷಿಪ್‌. 6 ರಿಂದ 10ನೇ ತರಗತಿಯಲ್ಲಿ ಕಲಿಯುವ ಎಳೆಯ ಮನಸ್ಸುಗಳಲ್ಲಿ ಮೂಲ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿ ಅವರನ್ನು ಸಂಶೋಧನಾ ರಂಗಕ್ಕೆ ಕರೆತರಲು ಮಾಡುತ್ತಿರುವ ವಿನೂತನ ಪ್ರಯತ್ನ ಇದು. ಪ್ರತಿ ವರ್ಷ 10 ಲಕ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹5 ಸಾವಿರ ಮೊತ್ತದ ಇನ್‌ಸ್ಪೈರ್‌ ಪ್ರಶಸ್ತಿ ನೀಡಲಾಗುತ್ತದೆ.ಇಂಟರ್ನ್‌ಷಿಪ್‌ ಅಂಗವಾಗಿ 11ನೇ ತರಗತಿಯಲ್ಲಿ ವಿಜ್ಞಾನ ವಿಷಯಗಳ ಅಧ್ಯಯನ ಮಾಡುವ ಐವತ್ತು ಸಾವಿರ ವಿದ್ಯಾರ್ಥಿಗಳಿಗೆ ಸಮ್ಮರ್ ಕ್ಯಾಂಪ್ ಆಯೋಜಿಸಿ ರಾಷ್ಟ್ರೀಯ – ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ - ಸಂಶೋಧಕರೊಂದಿಗೆ ಸಮಾಲೋಚನೆ, ಪ್ರಯೋಗ, ಪ್ರಾತ್ಯಕ್ಷಿಕೆಗಳ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಮೂಲ ವಿಜ್ಞಾನವನ್ನು ಹೇಗೆ ಅಧ್ಯಯನ ಮಾಡಬೇಕು ಎಂಬ ಒಳನೋಟ ನೀಡುವ, ಯಾವ ಯಾವ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಬೇಕು ಎಂಬ ಬಗ್ಗೆ ತಿಳುವಳಿಕೆ ನೀಡುವ ಗಂಭೀರ ಚರ್ಚೆ - ಪ್ರಶ್ನೋತ್ತರ ಕಾರ್ಯಕ್ರಮಗಳು ಇದರಲ್ಲಿರುತ್ತವೆ. ಯಶಸ್ವಿಯಾಗಿ ಇಂಟರ್ನ್‌ಷಿಪ್‌ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ.

ಸ್ಕಾಲರ್‌ಷಿಪ್ ಫಾರ್ ಹೈಯರ್ ಎಜುಕೇಶನ್ (SHE)

ಜೆಇಇ, ಮೇನ್ಸ್, ಜೆಇಇ ಅಡ್ವಾನ್ಸ್‌, ನೀಟ್, ಎನ್‌ಟಿಎಸ್‌ಇ ಪರೀಕ್ಷೆಗಳಲ್ಲಿ ಮೊದಲ 10 ಸಾವಿರ ರ‍್ಯಾಂಕ್‌ಗಳಿಸಿದ ವಿದ್ಯಾರ್ಥಿಗಳು ಇನ್‌ಸ್ಪೈರ್‌ ಸ್ಕಾಲರ್‌ಷಿಪ್‌ಗೆ ಅರ್ಹರಾಗಿರುತ್ತಾರೆ. ಜೊತೆಗೆ, ಆಯಾ ರಾಜ್ಯದ ಶಿಕ್ಷಣ ವ್ಯವಸ್ಥೆ ಹಾಗೂ ಬೋರ್ಡ್‌ಗಳು ನಡೆಸುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉನ್ನತ ಅಂಕಗಳಿಸಿದ ಶೇ 1 ರಷ್ಟು ವಿದ್ಯಾರ್ಥಿಗಳು ಮೂಲ ಹಾಗೂ ನೈಸರ್ಗಿಕ ವಿಜ್ಞಾನ ವಿಷಯಗಳಲ್ಲಿ ಪದವಿ ಶಿಕ್ಷಣ ಆಯ್ದುಕೊಂಡವರೂ ಈ ಸ್ಕಾಲರ್‌ಷಿಪ್ ಪಡೆಯಲು ಆರ್ಹತೆ ಗಳಿಸುತ್ತಾರೆ.

ತೀವ್ರಗತಿಯ ಸಂಶೋಧನಾ ಪ್ರವೃತ್ತಿ ಬೆಳೆಸುವುದನ್ನು ಗುರಿಯಾಗಿಟ್ಟುಕೊಂಡಿರುವ ‘ಶಿ’ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಮೂಲ ವಿಜ್ಞಾನ ವಿಷಯಗಳನ್ನು ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಕಲಿಯುತ್ತಿರುವ 17ರಿಂದ 22 ವಯೋಮಾನದ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ವಾರ್ಷಿಕ ₹80 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಕೆವಿಪಿವೈ ರದ್ದಾಗಿರುವುದರಿಂದ ಅಲ್ಲಿ ನೀಡಲಾಗುತ್ತಿದ್ದ ಶಿಷ್ಯವೇತನ ಮತ್ತು ಸಂಶೋಧನೆ ಬೇಕಾದ ಸವಲತ್ತುಗಳನ್ನು ಇನ್‌ಸ್ಪೈರ್‌ನ ಅಡಿಯಲ್ಲಿ ನೀಡಲಾಗುತ್ತದೆ. ಇನ್ನು ಮುಂದೆ ಇನ್‌ಸ್ಪೈರ್‌ ಕಾರ್ಯಕ್ರಮ ಸೇರುವ ವಿದ್ಯಾರ್ಥಿಗಳ ಸಂಖ್ಯೆ 12 ಸಾವಿರಕ್ಕೆ ಏರಲಿದೆ.

ಅಶ್ಯೂರ್ಡ್‌ ಆ‍ಪರ್ಚುನಿಟೀಸ್ ಫಾರ್ ರಿಸರ್ಚ್‌ ಕರಿಯರ್ಸ್‌ (AORC)

ಇದರ ಉದ್ದೇಶ ದೇಶ ಎದುರಿಸುತ್ತಿರುವ ಪ್ರತಿಭಾ ಪಲಾಯನದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವುದು. ಪ್ರತಿಭಾ ಸಂಪನ್ನರಾದ ನಮ್ಮ ಯುವ ವಿಜ್ಞಾನಿ - ಸಂಶೋಧಕರಿಗೆ ನಮ್ಮದೇ ನೆಲದಲ್ಲಿ ಅವರಿಗೆ ಸಿಗಬೇಕಾದ ಅವಕಾಶ, ಸ್ಥಾನಮಾನ ಮತ್ತು ಸಂಶೋಧನಾ ವಿಷಯಗಳನ್ನು ನೀಡುವುದು ಎಓಆರ್‌ಸಿಯ ಗುರಿ. ಸಂಶೋಧನ ಸವಲತ್ತು, ಸುಸಜ್ಜಿತ ಪ್ರಯೋಗಾಲಯ ಹಣ – ಖ್ಯಾತಿ – ಐಷಾರಾಮಿ ಜೀವನದ ಆಸೆಗಾಗಿ ದೇಶ ತೊರೆಯಬೇಕೆನ್ನುವ ಸಂಶೋಧನಾ ಮನಸುಗಳನ್ನು ಇಲ್ಲಿಯೇ ನೆಲೆಸುವಂತೆ ಮಾಡಿ ಅವರಿಂದ ದೇಶದ ಉನ್ನತಿಗೆ ಬೇಕಾದ ಸಂಶೋಧನೆಗಳನ್ನು ಮಾಡಿಸಿ ಅವರ ಸಾಧನೆಗೆ ತಕ್ಕ ‘ಇನ್‌ಸ್ಪೈರ್‌ ಫ್ಯಾಕಲ್ಟಿ ಅವಾರ್ಡ್’ ಅನ್ನೂ ನೀಡಲಾಗುತ್ತದೆ. 22 ರಿಂದ 27 ವಯೋಮಾನದ ಒಂದು ಸಾವಿರ ಸಂಶೋಧಕರಿಗೆ ಡಾಕ್ಟರೇಟ್ ಪದವಿ ಪಡೆಯಲು ಶಿಷ್ಯ ವೇತನ ನೀಡಲಾಗುತ್ತದೆ ಮತ್ತು ಪಿಎಚ್‌ಡಿ ಮುಗಿಸಿದ ಸಾವಿರ ಸಂಶೋಧಕರಿಗೆ ಡಾಕ್ಟರೇಟ್ ನಂತರದ ಉನ್ನತ ಸಂಶೋಧನೆಗಾಗಿ ಮತ್ತಷ್ಟು ಶಿಷ್ಯವೇತನದ ಜೊತೆ ದೇಶದ ಅತ್ಯುನ್ನತ ಸಂಶೋಧನಾ ಸಂಸ್ಥೆ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡಲು 5 ವರ್ಷಗಳ ಅವಧಿಯ ಸೇವಾ ಅವಕಾಶವನ್ನು ನೀಡಲಾಗುತ್ತದೆ. ವಿಶೇಷವೆಂದರೆ ಮೂಲ ಮತ್ತು ಅನ್ವಯಿಕ ವಿಜ್ಞಾನ ಶಾಖೆಗಳೆರಡರಲ್ಲೂ ದುಡಿಯುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವವರಿಗೂ ಈ ಅವಕಾಶಗಳಿರುತ್ತವೆ.

ಇನ್‌ಸ್ಪೈರ್ ಕುರಿತ ಹೆಚ್ಚಿನ ಮಾಹಿತಿಗೆ ಈ ಜಾಲತಾಣಗಳನ್ನು ಸಂಪರ್ಕಿಸಬಹುದು.

https://online-inspire.gov.in
https://dst.gov.in

https://transformingindia.mygov.in

(ಲೇಖಕರು: ಪ್ರಾಚಾರ್ಯರು, ವಿಡಿಯಾ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT