ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಿ.ಎಸ್ಸಿ(ಕೃಷಿ) ಆಯ್ಕೆ ಅನುಕೂಲಕರವೇ?

Last Updated 6 ಜೂನ್ 2022, 0:30 IST
ಅಕ್ಷರ ಗಾತ್ರ

1. ನಾನು ಪಿಯುಸಿ (ವಿಜ್ಞಾನ) ಮಾಡಿದ್ದೇನೆ. ಮುಂದೆ ಬಿ.ಎಸ್ಸಿ (ಕೃಷಿ) ಮಾಡಬೇಕು ಎಂದುಕೊಂಡಿದ್ದೇನೆ. ಈ ಕುರಿತು ಮಾಹಿತಿ ನೀಡಿ.

ಪ್ರೀತಿ, ಹೊಸಪೇಟೆ

ಬಿಎಸ್‌ಸಿ (ಕೃಷಿ), ಕೃಷಿ ಉತ್ಪನ್ನಗಳ ವ್ಯವಸಾಯ, ಮಾರಾಟ ಮತ್ತು ನಿರ್ವಹಣೆಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳನ್ನು ಕಲಿಸುವ ನಾಲ್ಕು ವರ್ಷದ ಕೋರ್ಸ್. ನಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಪ್ರತಿ ವರ್ಷ ಶೇ 20 ಕ್ಕೂ ಹೆಚ್ಚು ಬೆಳೆ ನಷ್ಟವಾಗುತ್ತಿದೆ. ಹಾಗಾಗಿ, ಕೃಷಿ ಸಂಬಂಧಿತ ಆಧುನಿಕ ತಂತ್ರಜ್ಞಾನದಿಂದ ಅಧಿಕ ಇಳುವರಿ, ಸಮಯದ ಉಳಿತಾಯ, ಉತ್ಪಾದನಾ ವೆಚ್ಚದ ಕಡಿತ, ಉತ್ಪನ್ನಗಳ ಸಂರಕ್ಷಣೆ, ಸಂಸ್ಕರಣೆ, ಸಾಗಣೆ ಮತ್ತು ಮಾರಾಟ ನಿರ್ವಹಣೆ ಕುರಿತ ಅತ್ಯಂತ ಉಪಯುಕ್ತ ಮಾಹಿತಿಯನ್ನು ಈ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಈ ಕೋರ್ಸ್ ಮಾಡಿರುವ ಪದವೀಧರರಿಗೆ ಹೆಚ್ಚಿನ ಬೇಡಿಕೆಯಿದೆ.

ಈ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕೃಷಿ ಉದ್ದಿಮೆಗಳು, ಆಹಾರ ಸಂಬಂಧಿತ ಉದ್ದಿಮೆಗಳು, ಸಾವಯವ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ದಿಮೆಗಳು, ರಸಗೊಬ್ಬರ ಮತ್ತು ಕೀಟನಾಶಕ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳು, ಬ್ಯಾಂಕಿಂಗ್, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ನಿಮಗೆ ಅಭಿರುಚಿಯಿದ್ದರೆ ಸ್ವಂತವಾಗಿ ಕೃಷಿ ಮಾಡಬಹುದು.

ಪ್ರಮುಖವಾಗಿ, ಈ ಕೋರ್ಸ್ ನಂತರದ ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಕನಸುಗಳ ಬಗ್ಗೆ ಸ್ಪಷ್ಟತೆಯಿರಬೇಕು. ಹಾಗಾಗಿ, ವೃತ್ತಿಯೋಜನೆ ಮಾಡುವ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:→
https://www.youtube.com/c/EducationalExpertManagementCareerConsultant

2. ನಾನು ಬಿಎಸ್‌ಸಿ ಮಾಡಿದ್ದು, ಮುಂದೆ ಎಂಎಸ್‌ಸಿ (ಭೂಗೋಳ) ಮಾಡಬೇಕೆಂದುಕೊಂಡಿದ್ದೀನಿ. ಈ ಕೋರ್ಸ್ ನಂತರದ ಅವಕಾಶಗಳ ಬಗ್ಗೆ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಎಂಎಸ್ಸಿ(ಭೂಗೋಳ) ಕೋರ್ಸ್ ನಂತರ ಕಾರ್ಟೊಗ್ರಾಫರ್, ಪರಿಸರ ನಿರ್ವಾಹಕ, ಹವಾಮಾನ ಶಾಸ್ತ್ರಜ್ಞ, ನಿಸರ್ಗ ಸಂರಕ್ಷಣಾ ಅಧಿಕಾರಿ, ಮಾಲಿನ್ಯ ವಿಶ್ಲೇಷಕ, ಜನಸಂಖ್ಯಾ ಶಾಸ್ತ್ರಜ್ಞ, ಭೂಮಾಪಕ, ಭೂಗೋಳ ಅಧ್ಯಾಪಕ ಮುಂತಾದ ಹುದ್ದೆಗಳನ್ನು ಸಂಬಂಧಿತ ಕ್ಷೇತ್ರಗಳಲ್ಲಿ ಪಡೆದುಕೊಳ್ಳಬಹುದು. ಯುಪಿಎಸ್ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.

3. ನಾನು 2016ರಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ 2018ರಲ್ಲಿ ಪಿಯುಸಿ ಕಾಮರ್ಸ್ ಮಾಡಿದ್ದೇನೆ. 2021ರಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶೇ 80ರಷ್ಟು ಅಂಕಗ ಳೊಂದಿಗೆ ಬಿಕಾಂ ಪದವಿ ಪಡೆದಿದ್ದೇನೆ. ಇದೀಗ, ಯುಪಿಎಸ್ಸಿ ಪರೀಕ್ಷೆಗೆ ಓದಲು ಶುರುಮಾಡಿದ್ದೇನೆ. ಆದರೆ, ಯಾವ ಭಾಷೆಯಲ್ಲಿ ಬರೆಯ ಬೇಕು ಎಂದು ಗೊಂದಲ ಇದೆ. ಸಲಹೆ ನೀಡಿ.

ಸತೀಶ್, ಕೋಲಾರ

ಯುಪಿಎಸ್ಸಿ ಪರೀಕ್ಷೆಯನ್ನು ಯಾವ ಭಾಷೆಯಲ್ಲಿ ಬರೆಯಬೇಕೆನ್ನುವ ಪ್ರಶ್ನೆ ಮುಖ್ಯವಾದರೂ ಕಠಿಣವಾದ ಈ ಪರೀಕ್ಷೆಗೆ ಐಚ್ಛಿಕ ವಿಷಯಗಳ ಆಯ್ಕೆ ಮತ್ತು ಈ ವಿಷಯಗಳ ಕುರಿತ ವಿಸ್ತೃತ ಅಧ್ಯಯನ, ಪರೀಕ್ಷೆಗೆ ಸೂಕ್ತ ಕಾಯತಂತ್ರ ಮತ್ತು ತಯಾರಿಗೆ ಹೆಚ್ಚಿನ ಗಮನ ನೀಡಬೇಕು. ಯಾವ ಭಾಷೆಯಲ್ಲಿ ಹೆಚ್ಚಿನ ತಜ್ಞತೆಯಿದ್ದು, ವ್ಯಾಕರಣ ಶುದ್ಧ ಬರವಣಿಗೆ ಸಾಧ್ಯವೋ ಆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ, ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಇಂಗ್ಲಿಷ್‌ನಲ್ಲಿ ಬರೆದು ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದೇ ಎಂದು ಯೋಚಿಸಿ.

4. ನಾನು ಬಿಎ ಅಂತಿಮ ಪದವಿಯಲ್ಲಿ ಓದುತ್ತಿದ್ದೇನೆ. ಇದಾದ ನಂತರ, ಎಂಬಿಎ ಮಾಡಬಹುದೇ? ನಾನು, ಯಾವ ವಿಭಾಗದಲ್ಲಿ ಎಂಬಿಎ ಮಾಡಬಹುದು? ಇದರಿಂದ ನನಗೆ ಮುಂದೆ ತೊಂದರೆ ಆಗುವುದಿಲ್ಲವೇ?

ಹೆಸರು, ಊರು ತಿಳಿಸಿಲ್ಲ

ಒಂದು ಉದ್ಯಮದ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ತಿಳುವಳಿಕೆಯನ್ನು, ಎಂಬಿಎ ಕೋರ್ಸಿನ ವಿಭಾಗಗಳಾದ ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಬಂಡವಾಳ ನಿರ್ವಹಣೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ ಇತ್ಯಾದಿಗಳಲ್ಲಿ ನೀಡಲಾಗುತ್ತದೆ. ಹಾಗಾಗಿ, ನಿಮ್ಮ ಆಸಕ್ತಿಯ ಅನುಸಾರ ಒಂದು ಅಥವಾ ಎರಡು ವಿಭಾಗಗಳಲ್ಲಿ (ಡ್ಯುಯಲ್ ಸ್ಪೆಷಲೈಜೇಷನ್) ತಜ್ಞತೆಯನ್ನು ಪಡೆದುಕೊಳ್ಳಬಹುದು.

ಜಾಗತೀಕರಣದ ನಂತರ ಎಂಬಿಎ ಒಂದು ಜನಪ್ರಿಯ ಸ್ನಾತಕೋತ್ತರ ಕೋರ್ಸ್ ಮತ್ತು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಕೋರ್ಸ್ ಸಹಾಯಕಾರಿ. ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಎಂಬಿಎ ಕೋರ್ಸ್ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg

5. ನಾನು ವಿಜ್ಞಾನ ವಿದ್ಯಾರ್ಥಿಯಾಗಿದ್ದು ಏರೋನಾಟಿಕಲ್ ಎಂಜಿನಿ ಯರಿಂಗ್ ಓದುವ ಆಸೆ ಇದೆ. ಅದಕ್ಕೆ ಕೆಸಿಇಟಿ ಬರೆದರೆ ಸಾಕಾ ಅಥವಾ ಬೇರೆ ಸಿಇಟಿ ಬರೆಯಬೇಕೇ? ಎಂಜಿನಿಯರಿಂಗ್ ಮುಗಿಯುವುದಕ್ಕೆ ಎಷ್ಟು ಹಣ ಬೇಕು? ಕರ್ನಾಟಕದಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ಗೆ ಯಾವ ಕಾಲೇಜು ಸೂಕ್ತ?

ಶಂಕರ್, ಬಾಗಲಕೋಟೆ.

ಕರ್ನಾಟಕದಲ್ಲಿರುವ ಅನೇಕ ಕಾಲೇಜುಗಳಲ್ಲಿ ಏರೋನಾಟಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಕೋರ್ಸ್ ಲಭ್ಯವಿದೆ. ಹಾಗಾಗಿ, ನಮ್ಮ ಅಭಿಪ್ರಾಯದಂತೆ ಕೆಸಿಇಟಿ ಪರೀಕ್ಷೆ ಸಾಕಾಗುತ್ತದೆ. ಆದರೂ, ಐಐಟಿ ಸೇರಿದಂತೆ ಕೆಲವು ಪ್ರತಿಷ್ಠಿತ ಸಂಸ್ಥೆಗಳಿಗೆ ಸೇರಬೇಕಾದರೆ ಜೆಇಇ ಮುಂತಾದ ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕು. ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ ನೀವು ಯಾವ ಕಾಲೇಜು (ಸರ್ಕಾರಿ, ಖಾಸಗಿ) ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ.

ಉತ್ತಮ ಕಾಲೇಜುಗಳ ಮಾಹಿತಿಗಾಗಿ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಮಾಧ್ಯಮ ಸಂಸ್ಥೆಗಳ ರ‍್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ. ಹಾಗೂ, ಉತ್ತಮ ಕಾಲೇಜುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

ವಿ. ಪ್ರದೀಪ್ ಕುಮಾರ್
ವಿ. ಪ್ರದೀಪ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT