ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ,ನಗರಾಭಿವೃದ್ಧಿ ಡಿಪ್ಲೊಮಾ ಕಲಿಕೆ ಹೇಗೆ? -ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

Published 23 ಜುಲೈ 2023, 23:40 IST
Last Updated 23 ಜುಲೈ 2023, 23:40 IST
ಅಕ್ಷರ ಗಾತ್ರ

1. ನಾನು ಸರ್ಕಾರಿ ಟೂಲ್ ರೂಮ್ ಮತ್ತು ಟ್ರೈನಿಂಗ್‌ ಸೆಂಟರ್‌ನಲ್ಲಿ ಟೂಲ್ ಮತ್ತು ಡೈ ಮೇಕಿಂಗ್ ಡಿಪ್ಲೊಮಾ ಮಾಡಿದ್ದೇನೆ. ಮುಂದೇನು ಮಾಡುವುದು ತಿಳಿಸಿ.

-ಅದಿಲ್ ಹುಸೇನ್, ಊರು ತಿಳಿಸಿಲ್ಲ.

ಮುಂದಿನ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಈ ಸಲಹೆಗಳನ್ನು ಗಮನಿಸಿ:


• ಟೂಲ್ ಮತ್ತು ಡೈ ಮೇಕಿಂಗ್ ಡಿಪ್ಲೊಮಾ ಅಭ್ಯರ್ಥಿಗಳಿಗೆ ಉತ್ಪಾದನಾ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆಯಿದೆ. ಹಾಗಾಗಿ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೇರವಾಗಿ ಉದ್ಯೋಗವನ್ನು ಪಡೆಯಬಹುದು.


• ಹೆಚ್ಚಿನ ತಜ್ಞತೆಗಾಗಿ, ಬಿಇ/ಬಿಟೆಕ್ (ಮೆಕ್ಯಾನಿಕಲ್) ಕೋರ್ಸ್ ಮಾಡಬಹುದು.


• ಔದ್ಯೋಗಿಕ ಕ್ಷೇತ್ರದ ಅನುಭವದ ನಂತರ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಬಹುದು.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

2. ನಾನು ಬಿಎ (ಅರ್ಥಶಾಸ್ತ್ರ) 6ನೇ ಸೆಮೆಸ್ಟರ್ ಓದುತ್ತಿದ್ದೇನೆ. 3 ತಿಂಗಳ ಇಂಟರನ್‌ಷಿಪ್‌ ಮಾಡಬೇಕು. ಒಳ್ಳೆಯ ಇಂಟರನ್‌ಷಿಪ್‌ ನೀಡುವ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ವಿವರವನ್ನು ನೀಡಿ.

ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಸೈದ್ಧಾಂತಿಕ ಜ್ಞಾನದ ಪ್ರಾಯೋಗಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು, ಕಾರ್ಪೊರೇಟ್ ಪ್ರಾಜೆಕ್ಟ್ಗಳನ್ನು (ಇಂಟರನ್‌ಷಿಪ್) ವಿನ್ಯಾಸಗೊಳಿಸಲಾಗುತ್ತದೆ. ಆದಾಗ್ಯೂ, ಈ ಸೀಮಿತ ಉದ್ದೇಶದೊಂದಿಗೆ ಪ್ರಾಜೆಕ್ಟ್‌ಗಳನ್ನು ಮಾಡುವುದು ಸೂಕ್ತವಲ್ಲ; ಬದಲಾಗಿ, ಯಶಸ್ವಿ ವೃತ್ತಿಯನ್ನು ರೂಪಿಸುವ ಅತ್ಯುತ್ತಮ ಅವಕಾಶವನ್ನಾಗಿ ಬಳಸಿಕೊಳ್ಳಬೇಕು. ಈ ಸಲಹೆಗಳನ್ನು ಗಮನಿಸಿ:

• ನಿಮ್ಮ ಆಸಕ್ತಿ, ಅಭಿರುಚಿ, ಕೌಶಲ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ರೂಪಿಸಿ.


• ವೃತ್ತಿಯೋಜನೆಯಲ್ಲಿ, ನೀವು ಮುಂದೆ ಯಾವ ಕ್ಷೇತ್ರದಲ್ಲಿ ವೃತ್ತಿಯನ್ನು ಮಾಡಲು ಬಯಸುತ್ತೀರಿ ಎಂದು ನಿರ್ಧರಿಸಿ, ಆ ಕ್ಷೇತ್ರದ ಪ್ರತಿಷ್ಠಿತ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಪಟ್ಟಿಯನ್ನು ಮಾಡಬೇಕು. ಈ ಪಟ್ಟಿಯನ್ನು ಮಾಡಲು ಜಾಲತಾಣ ಮತ್ತು ಲಿಂಕ್ಡ್ಇನ್ (Linkedin) ಸಾಮಾಜಿಕ ಮಾಧ್ಯಮ ಸಹಾಯವಾಗುತ್ತದೆ.


• ಪ್ರಾಜೆಕ್ಟಿಗೆ ಅಗತ್ಯವಾದ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ, ಕಂಪನಿಗೆ ನೀವು ಮಾಡುವ ಪ್ರಾಜೆಕ್ಟ್ ಉಪಯುಕ್ತವಾಗಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.


• ಈ ಪ್ರತಿಷ್ಠಿತ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಇಮೇಲ್/ದೂರವಾಣಿ ಮೂಲಕ ಸಂಪರ್ಕಿಸಿ, ನಿಮ್ಮ ಪ್ರಸ್ತಾವನೆಯನ್ನು ಪರಿಣಾಮಕಾರಿಯಾಗಿ ಮಂಡಿಸಿ.
ಅತ್ಯುತ್ತಮ ಕಂಪನಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ಗಳನ್ನು ಪಡೆಯಲು, ಶಿಕ್ಷಣ ಸಂಸ್ಥೆಗಳ ಪ್ಲೇಸ್‌ಮೆಂಟ್ ಸೆಲ್ ಕಾರ್ಯನಿರ್ವಹಿಸುತ್ತದೆ. ನೀವು ಓದುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಈ ಸೌಕರ್ಯವಿಲ್ಲದಿದ್ದರೆ, ಸ್ವಂತ ಪ್ರಯತ್ನಗಳಿಂದ ಸೂಕ್ತವಾದ ಪ್ರಾಜೆಕ್ಟ್ ಪಡೆಯಬಹುದು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ: ಇಲ್ಲಿ ಕ್ಲಿಕ್ ಮಾಡಿ


3. ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದು, 84,000 ರ‍್ಯಾಂಕ್ ಗಳಿಸಿರುವುದರಿಂದ ಎಂಜಿನಿಯರಿಂಗ್‌ಗೆ ಸರ್ಕಾರಿ ಸೀಟ್ ಸಿಗುವುದಿಲ್ಲವೆನಿಸುತ್ತಿದೆ. ಆದ್ದರಿಂದ, ಕೊನೆಯವರಿಗೂ ಕಾಯುವುದೇ ಅಥವಾ ಬಿಬಿಎ/ಬಿಬಿಎಂ ಮಾಡುವುದೇ? ಯಾವುದು ಸೂಕ್ತ?

ಈ ವರ್ಷದ ಎಂಜಿನಿಯರಿಂಗ್ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಕಳೆದ ವರ್ಷದ ಮಾಹಿತಿಯಂತೆ, 1793 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳು ಭರ್ತಿಯಾಗಲಿಲ್ಲ. ಹಾಗಾಗಿ, ಕರ್ನಾಟಕದ ಯಾವುದಾದರೂ ಕಾಲೇಜಿನಲ್ಲಿ ಎಂಜಿನಿಯರಿಂಗ್ ಸೀಟ್ ಸಿಗುವ ಸಾಧ್ಯತೆಯಿದೆ. ಮೇಲಾಗಿ, ಎಂಜಿನಿಯರಿಂಗ್ ಮತ್ತು ಬಿಬಿಎ ಸಂಬಂಧಿತ ವೃತ್ತಿಗಳಿಗೆ ಬೇಕಾಗುವ ಅಭಿರುಚಿ ಮತ್ತು ಕೌಶಲಗಳು ವಿಭಿನ್ನವಾಗಿವೆ. ಹಾಗಾಗಿ, ನಿಮಗೆ ಯಾವ ವೃತ್ತಿ ಸೂಕ್ತ ಎಂದು ಪರೀಶೀಲಿಸುವುದು ಮುಖ್ಯ. ಅಂತಿಮ ನಿರ್ಧಾರ ನಿಮ್ಮದು.

4. ನಾನು ಬಿ.ಎಸ್ಸಿ ಮುಗಿಸಿದ್ದೇನೆ. ಈಗ ಗ್ರಾಮೀಣ ಮತ್ತು ನಗರಾಭಿವೃದ್ಧಿ ವಿಷಯದಲ್ಲಿ ಡಿಪ್ಲೊಮಾ ಮಾಡುವ ಆಸಕ್ತಿಯಿದೆ. ಈ ವಿಷಯದ ಕೋರ್ಸ್ ಮಾಡಲು ಉತ್ತಮ ಕಾಲೇಜುಗಳ ವಿವರವನ್ನು ತಿಳಿಸಿ.

ನಮಗಿರುವ ಮಾಹಿತಿಯಂತೆ ಈ ಎರಡೂ ವಿಭಿನ್ನವಾದ ವಿಷಯಗಳಿಗೆ ಸಂಬಂಧಿಸಿದಂತೆ ಒಂದೇ ಡಿಪ್ಲೊಮಾ ಕೋರ್ಸ್ ಲಭಿಸುವುದು ಸಾಧ್ಯವಾಗಲಾರದು. ಹಾಗಾಗಿ, ನಿಮ್ಮ ಆಸಕ್ತಿಯಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ಅಥವಾ ಎರಡು ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಏಕಕಾಲದಲ್ಲಿ ಮಾಡಬಹುದು. ಈ ಕೋರ್ಸ್‌ಗಳು ಆನ್‌ಲೈನ್/ದೂರಶಿಕ್ಷಣದ ಮೂಲಕ ದೊರೆಯುತ್ತದೆ. ಹಾಗೂ, ನಿಮ್ಮ ವೃತ್ತಿಯೋಜನೆಯನ್ನು ಅನುಷ್ಠಾನಗೊಳಿಸಲು ಸಹಾಯವಾಗುವುದಾದರೆ, ಈ ವಿಷಯಗಳ ಬಗ್ಗೆ ಎಂಎ ಕೋರ್ಸ್ ಮಾಡುವ ಸಾಧ್ಯತೆಗಳನ್ನೂ ಪರಿಶೀಲಿಸಿ. ಜಾಲತಾಣದಲ್ಲಿ ಪ್ರಾಥಮಿಕ ಸಂಶೋಧನೆಯ ಮೂಲಕ ಸಮಗ್ರವಾದ ಕೋರ್ಸ್ ಮಾಹಿತಿಯನ್ನು ಕಲೆಹಾಕಿ, ಮುಂದಿನ ನಿರ್ಧಾರವನ್ನು ಮಾಡಬಹುದು.

ನೀವು ಕೇಳುತ್ತಿರುವ ವಿಷಯಗಳ ಕುರಿತಾದ ಕೋರ್ಸ್ ಮಾಹಿತಿಗಾಗಿ ಗಮನಿಸಿ: 

5. ನಾನು ಬಿ.ಎಸ್ಸಿ 3ನೇ ಸೆಮೆಸ್ಟರ್ ಓದುತ್ತಿರುವಾಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರಾಗಿ ಕೆಲಸಕ್ಕೆ ಸೇರಿರುತ್ತೇನೆ. ಬಡ್ತಿಗೆ, ಈ ಶೈಕ್ಷಣಿಕೆ ಅರ್ಹತೆಯನ್ನು ಪರಿಗಣಿಸುತ್ತಾರೆಯೇ? ಅಥವಾ, ಪದವಿಯನ್ನು ಗಳಿಸಿದ ಬಳಿಕವೇ ಬಡ್ತಿಗೆ ಅರ್ಹತೆ ಸಿಗುತ್ತದೆಯೇ?
ನಾಗಪ್ರಿಯ, ಬೀದರ್.

ನಿಮ್ಮ ನೇಮಕಾತಿಯ ನಿಯಮ ಮತ್ತು ನಿಬಂಧನೆಗಳು, ಸೇವಾ ವಿವರಗಳ ಮಾಹಿತಿಯಿಲ್ಲದೆ ನಿಖರವಾಗಿ ಉತ್ತರಿಸುವುದು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ.

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT