ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಶಾಲೆಗೆ: ಮಕ್ಕಳನ್ನು ಬದಲಾವಣೆಗೆ ಸಿದ್ಧಗೊಳಿಸಿ

Last Updated 5 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಕ್ಕಳು ಕಳೆದ ಒಂದೂವರೆ ವರ್ಷದಿಂದ ಶಾಲಾ ತರಗತಿಗಳ ಬಗ್ಗೆ ಅನಿಶ್ಚಿತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೋವಿಡ್‌ ಒಂದನೇ ಅಲೆ, ಎರಡನೇ ಅಲೆ ಸಾಕಷ್ಟು ಅನಾಹುತ ಮಾಡಿದ್ದು, ಇದರ ಮಧ್ಯೆ ಮೂರನೆಯ ಅಲೆಯ ಬಗ್ಗೆಯೂ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಿರುವಾಗಲೇ ಆರನೇ ತರಗತಿಯಿಂದ ಎಂಟನೆ ತರಗತಿಯ ಮಕ್ಕಳಿಗೆ ತರಗತಿಗಳು ಆರಂಭವಾಗಿದ್ದು, ಶಾಲೆಗೆ ಹೋಗಲು ಸಿದ್ಧವಾಗಿರುವ ಮಕ್ಕಳ ಬಗ್ಗೆ ಪೋಷಕರು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗಿದೆ.

ಒಂದೂವರೆ ವರ್ಷದಿಂದ ಹೆಚ್ಚು ಕಡಿಮೆ ಮನೆಯೊಳಗೇ ಕಳೆದ, ಆನ್‌ಲೈನ್‌ ತರಗತಿಗಳ ಮೇಲೆ ಅವಲಂಬಿತರಾಗಿದ್ದ ಮಕ್ಕಳನ್ನು ಈ ಬದಲಾವಣೆಗೆ ಸಿದ್ಧಗೊಳಿಸುವುದು ಪೋಷಕರಿಗೆ ಸ್ವಲ್ಪಮಟ್ಟಿಗೆ ಕಷ್ಟವೇ ಸರಿ.

ಶಾಲೆಗೆ ಮರಳಿ ಹೋಗುವ ಬಗ್ಗೆ ಕೆಲವು ಮಕ್ಕಳಿಗೆ ಖುಷಿಯಿರಬಹುದು. ಮತ್ತೆ ಸ್ನೇಹಿತರನ್ನು ಕಾಣುವುದು, ಅವರ ಜೊತೆ ಆಟವಾಡುವುದು ಯಾರಿಗೆ ಬೇಡ ಹೇಳಿ! ಆದರೆ ಹೆಚ್ಚಿನ ಮಕ್ಕಳಿಗೆ ಇದು ಕೊಂಚ ಕಷ್ಟವೆನಿಸುತ್ತದೆ. ಅಂಥವರಿಗೆ ಪೋಷಕರು ಧೈರ್ಯ ಹೇಳಬೇಕು. ಜೊತೆಗೆ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸುವಂತೆ ಮಕ್ಕಳಿಗೆ ತಿಳಿಹೇಳಬೇಕು.

ಕೋವಿಡ್‌ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವುದಲ್ಲದೇ, ನಿಜವಾದ ಪರಿಸ್ಥಿತಿ ಹೇಗಿದೆ ಎಂಬುದನ್ನು ಮನದಟ್ಟು ಮಾಡುವುದು ಸೂಕ್ತ. ನಮ್ಮ ರಾಜ್ಯದಲ್ಲಿ ಕೆಲವು ಕಡೆ ಕೋವಿಡ್‌ ಸೋಂಕು ಕಡಿಮೆಯಾಗಿದ್ದರೂ ಕೂಡ, ಪೂರ್ತಿ ನಿಂತಿಲ್ಲ. ಈಗಾಗಲೇ ಡೆಲ್ಟಾ ತಳಿ ಹಲವು ಕಡೆ ಸಮಸ್ಯೆ ಸೃಷ್ಟಿಸುತ್ತಲೇ ಇದೆ. ಸಾಕಷ್ಟು ಮಕ್ಕಳಿಗೂ ಈ ಸೋಂಕು ತಗಲಿದೆ. ಎಲ್ಲವನ್ನೂ ಮಕ್ಕಳಿಗೆ ವಿವರವಾಗಿ ಹೇಳುವ ಅವಶ್ಯಕತೆ ಇಲ್ಲ. ಆದರೆ ಕೋವಿಡ್‌ ಸಮಸ್ಯೆ ಇನ್ನೂ ಕಡಿಮೆಯಾಗಿಲ್ಲ ಎಂಬುದರ ಬಗ್ಗೆ ಹೇಳಬಹುದು.

ಮಾಸ್ಕ್‌ ಧರಿಸಿ ಶಾಲೆಗೆ ಹೋಗುವ ಬಗ್ಗೆ ಅವರಿಗೆ ತಿಳಿಹೇಳಿ. ಇದು ಈಗಿನ ಪರಿಸ್ಥಿತಿಯಲ್ಲಿ ಸಾಮಾನ್ಯ ಎಂದು ವಿವರಿಸಿ. ಪರಿಸ್ಥಿತಿ ಅನಿಶ್ಚಿತವಾಗಿರುವಾಗ ಈ ತರಹದ ಸಂವಹನ ಹೆಚ್ಚು ಮುಖ್ಯವಾಗುತ್ತದೆ.

ಸಾಧ್ಯವಾದರೆ ಮಕ್ಕಳನ್ನು ಸ್ವತಃ ಶಾಲೆಗೆ ಬಿಟ್ಟು ಬನ್ನಿ. ಹೆಚ್ಚು ಕಡಿಮೆ 18 ತಿಂಗಳುಗಳ ಕಾಲ, 24 ಗಂಟೆಯೂ ಮಕ್ಕಳು ತಮ್ಮ ಪೋಷಕರ ಜೊತೆಗೆ ಕಳೆದಿದ್ದಾರೆ. ಹೆಚ್ಚಿನ ಪೋಷಕರೂ ಮನೆಯಿಂದಲೇ ಕಚೇರಿ ಕೆಲಸ ಮಾಡಿಕೊಂಡಿದ್ದರು. ಆದರೂ ಕೂಡ ತಂದೆ– ತಾಯಿಯನ್ನು ಬಿಟ್ಟಿರಲು ಮಕ್ಕಳಿಗೆ, ಹಾಗೆಯೇ ಮಕ್ಕಳನ್ನು ಕೆಲವು ಗಂಟೆಗಳ ಕಾಲ ಬಿಟ್ಟಿರುವುದು ಪೋಷಕರಿಗೆ ಕಷ್ಟವಾಗಬಹುದು. ಹೀಗಾಗಿ ಮಕ್ಕಳನ್ನು ಆದಷ್ಟು ತಾವೇ ಶಾಲೆಗೆ ಕಳಿಸುವ, ಕರೆದುಕೊಂಡು ಬರುವ ಕೆಲಸ ಮಾಡಿದರೆ ಉತ್ತಮ. ಮಕ್ಕಳಿಗೂ ಇದರಿಂದ ಭದ್ರತೆಯ ಭಾವನೆ ಮೂಡುತ್ತದೆ.

ಬೆಳಿಗ್ಗೆ ಬೇಗ ಎದ್ದು, ಒಂದಿಷ್ಟು ಸಮಯ ಮಕ್ಕಳ ಜೊತೆ ಕಳೆಯಿರಿ. ಮಕ್ಕಳನ್ನು ಬೆಳಿಗ್ಗೆ ಬೇಗ ಎಬ್ಬಿಸಿ, ಅವರ ಜೊತೆ ಕೋವಿಡ್ ಬಿಟ್ಟು ಬೇರೆ ವಿಷಯದ ಬಗ್ಗೆ ಮಾತನಾಡುತ್ತ, ಅವರಲ್ಲಿ ಆತಂಕವಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ.

ಶಾಲೆಗೆ ಭೇಟಿ ಕೊಡಿ. ಮಕ್ಕಳ ಜೊತೆ ಶಾಲಾ ಸಮಯಕ್ಕಿಂತ ಮುಂಚೆಯೇ ತೆರಳಿ ಒಂದಿಷ್ಟು ಸಮಯ ಹೊರಗಡೆ ಕಾಲ ಕಳೆಯಿರಿ. ಅವರ ಸ್ನೇಹಿತರ ಜೊತೆ ದೂರದಿಂದಲೇ ಕೈಯಾಡಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಿ. ಸಾಧ್ಯವಾದರೆ ಶಿಕ್ಷಕರನ್ನೂ ಭೇಟಿ ಮಾಡಿ ಆದಷ್ಟು ಪರಿಸ್ಥಿತಿ ತಿಳಿಯಾಗಿದೆ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಸಿ.

ಆದರೂ ಕೂಡ ಮಕ್ಕಳಿಗೆ ಶಾಲೆಯಲ್ಲಿ ಮೊದಲಿನಂತೆ ಇರುವಂತಾಗಲು ಸ್ವಲ್ಪ ಸಮಯ ಬೇಕು. ಒಂದೆರಡು ವಾರಗಳಲ್ಲಿ ಇಂತಹ ಆತಂಕ, ಭಯ ದೂರವಾಗಲು ಒಂದಿಷ್ಟು ಹೆಚ್ಚಿನ ಬೆಂಬಲವೇ ಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT