ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಗ್ರಹಿಕೆ: ಏನಿದು ಸ್ಕಿಮ್ಮಿಂಗ್‌, ಸ್ಕ್ಯಾನಿಂಗ್‌ ವಿಧಾನ?

Last Updated 17 ಮಾರ್ಚ್ 2021, 19:30 IST
ಅಕ್ಷರ ಗಾತ್ರ

(ಮುಂದುವರಿದ ಭಾಗ)

ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಸ್ಪರ್ಧಾರ್ಥಿಗಳಿಗೆ ಇಂಗ್ಲಿಷ್ ವಿಷಯದಲ್ಲಿ ಪಠ್ಯದ ಗ್ರಹಿಕೆ (ರೀಡಿಂಗ್‌ ಕಾಂಪ್ರ್‌ಹೆನ್ಶನ್‌) ಎನ್ನುವುದು ಸುಲಭವಾಗಿ ಅಂಕ ಗಳಿಸುವ ವಿಭಾಗ. ಆದರೆ ಇದರಲ್ಲಿ ಕೆಲವು ವಿಧಾನಗಳನ್ನು ಅಳವಡಿಸಿಕೊಂಡರೆ ಪ್ರಶ್ನೆಗಳಿಗೆ ವೇಗವಾಗಿ ಉತ್ತರಿಸಬಹುದು.

ಸ್ಕಿಮ್ಮಿಂಗ್ ಮತ್ತು ಸ್ಕ್ಯಾನಿಂಗ್– ಇವು ಲೇಖನ ಓದುವ ಎರಡು ವಿಧಾನಗಳು

1. ಸ್ಕಿಮ್ಮಿಂಗ್: ಇದು ಲೇಖನದ ಉದ್ದೇಶ ಮತ್ತು ವಿವರವಾದ ಅರ್ಥವನ್ನು ಗಮನಿಸದೆ ಕೇವಲ ಸಾಮಾನ್ಯ ಕಲ್ಪನೆಯನ್ನು ಪಡೆಯಲು ವೇಗವಾಗಿ ಓದುವ ಒಂದು ವಿಧಾನ.

ಉದಾಹರಣೆ: ಇದರಲ್ಲಿ ಕೇವಲ ಸೂಕ್ತವಾದ ಮತ್ತು ಅವಶ್ಯಕವಾದ ಸಾಲುಗಳನ್ನು ಮಾತ್ರ ಓದುವುದು ಹಾಗೂ ನಿಖರವಾದ ಪದಗಳ ಅರ್ಥ ತಿಳಿದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಓದುವ ವಿಧಾನ: ಇದರಲ್ಲಿ ಪ್ರಾರಂಭಿಕ ಹಾಗೂ ಅಂತ್ಯದ ಸಾಲುಗಳನ್ನು ಮಾತ್ರ ಓದಬೇಕಾಗುತ್ತದೆ. ಶೀರ್ಷಿಕೆ, ಉಪ ಶೀರ್ಷಿಕೆ, ಬೋಲ್ಡ್ ಕ್ಯಾಪ್ಷನ್, ಇಟಾಲಿಕ್... ಇಂತಹ ಹೈಲೈಟ್ ಮಾಡಿದ ಪದಗಳನ್ನು ಗಮನವಿಟ್ಟು ಓದಿರಿ.

2. ಸ್ಕ್ಯಾನಿಂಗ್: ಇದು ಲೇಖನದ ನಿರ್ದಿಷ್ಟ ಪಠ್ಯವನ್ನು ಹುಡುಕುವ ತಂತ್ರವನ್ನು ಸೂಚಿಸುತ್ತದೆ.

ಉದಾಹರಣೆ: ಇದರಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಕೆಲವು ಶಬ್ದಗಳ ನಿರ್ದಿಷ್ಟ ಅರ್ಥ ಹುಡುಕುವ ಅವಶ್ಯಕತೆ ಇರುತ್ತದೆ. ಸ್ಕ್ಯಾನಿಂಗ್‌ಗಾಗಿ ಪೂರ್ತಿ ಲೇಖನವನ್ನು ಕನಿಷ್ಠ ಒಂದು ಬಾರಿಯಾದರೂ ಓದಲೇಬೇಕಾದ ಅವಶ್ಯಕತೆ ಇರುತ್ತದೆ.

ಓದುವ ವಿಧಾನ: ಇದರಲ್ಲಿ ಅಗತ್ಯವಿರುವ ವಿವರವನ್ನು ಪಡೆಯಲು ಶೀರ್ಷಿಕೆ ಹಾಗೂ ಉಪ ಶೀರ್ಷಿಕೆ ಮತ್ತು ಪದಗಳ ನಿರ್ದಿಷ್ಟ ಅರ್ಥಗಳ ಬಗ್ಗೆ ತಿಳಿದಿರುವುದು ಅವಶ್ಯಕ.

ಒಟ್ಟಿನಲ್ಲಿ ಪ್ರಶ್ನೆಗಳಿಗೆ ಅನುಸಾರವಾಗಿ ಸ್ಕಿಮ್ಮಿಂಗ್ ಅಥವಾ ಸ್ಕ್ಯಾನಿಂಗ್ ಯಾವುದು ಅವಶ್ಯಕ ಎಂಬುದನ್ನು ವಿದ್ಯಾರ್ಥಿಗಳು ಹೆಚ್ಚು ಅಭ್ಯಾಸದಿಂದ ತಿಳಿದುಕೊಳ್ಳಬೇಕು.

ಉದಾಹರಣೆಗೆ ಎಲ್ಲಿ, ಯಾವಾಗ, ಎಷ್ಟು, ಸಮಾನಾರ್ಥಕ, ವಿರುದ್ಧಾರ್ಥಕ, ನುಡಿಗಟ್ಟಿನ ಅರ್ಥ ಮುಂತಾದ ನೇರವಾದಂತಹ ಪ್ರಶ್ನೆಗಳಿಗೆ ಸ್ಕಿಮ್ಮಿಂಗ್ ಅನುಸರಿಸಿದರೆ ಸೂಕ್ತ ಹಾಗೂ ಲೇಖಕರ ಮನೋಭಾವ (ಟೋನ್), ಥೀಮ್, ಶೀರ್ಷಿಕೆ, ಯಾವುದು ಸರಿ, ಯಾವುದು ತಪ್ಪು ಇಂತಹ ಪರೋಕ್ಷ ಪ್ರಶ್ನೆಗಳಿಗೆ ಹೆಚ್ಚು ಸಮಯದ ಅವಶ್ಯಕತೆ ಇರುವ ಸ್ಕ್ಯಾನಿಂಗ್ ಮಾರ್ಗ ಅನುಸರಿಸಬೇಕಾಗುವುದು.

ಉತ್ತರಿಸುವ ಬಗೆ

* ಮೊದಲು ಆರ್‌ಸಿ ಯನ್ನು ಗಮನಿಸಿದ ತಕ್ಷಣ ಪ್ರಶ್ನೆಗಳ, ಶಬ್ದಗಳ ಹಾಗೂ ಲೇಖನದ ಕ್ಲಿಷ್ಟತೆಯ ಮಟ್ಟ ಪರಿಶೀಲಿಸಿರಿ. ಸುಲಭವಿದ್ದಲ್ಲಿ ಮಾತ್ರ ಮೊದಲು ಉತ್ತರಿಸಲು ಪ್ರಾರಂಭಿಸಿ. ಒಂದು ವೇಳೆ ಮಧ್ಯಮ ಕ್ಲಿಷ್ಟತೆಯಿಂದ ಇದ್ದರೆ ಪರೀಕ್ಷಾ ಸಮಯದ ಮಧ್ಯದಲ್ಲಿಯೇ ಉತ್ತರಿಸಿ.ಕೊನೆಗೆ ಉತ್ತರಿಸಲು ಯೋಚಿಸಿದಲ್ಲಿ ಪೂರ್ತಿ ಲೇಖನ ಓದಲು ಸಾಧ್ಯವಾಗದೆ ಇರಬಹುದು. ನೇರವಾದ ಹಾಗೂ ಸರಳವಾದ ಪ್ರಶ್ನೆಗಳಿಗೂ ಸಹ ಉತ್ತರಿಸಲು ಸಮಯಾವಕಾಶ ದೊರಕದೇ ಹೋಗಬಹುದು.

* ಮೊದಲು ಪ್ರಶ್ನೆಗಳನ್ನು ಓದಿ ಕೀ ವರ್ಡ್ಸ್ ಗುರುತು ಮಾಡಿಕೊಳ್ಳಿ.

* ಪ್ರಶ್ನೆಗಳಿಗೆ ತಕ್ಕಂತೆ ಸ್ಕಿಮ್ಮಿಂಗ್ ಅಥವಾ ಸ್ಕ್ಯಾನಿಂಗ್ ವಿಧಾನ ಅನುಸರಿಸಿ.

* ಪ್ರಶ್ನೆಗಳಿಗೆ ಉತ್ತರಿಸಲು ಲೇಖನದ ಹೊರತಾಗಿ ನಿಮ್ಮ ಸ್ವಂತ ಯೋಚನೆಯನ್ನು ಬಳಸಬೇಡಿ, ನಿಮ್ಮ ಜ್ಞಾನ ಲೇಖನದ ಗ್ರಹಿಕೆಯಲ್ಲಿ ಮೀಸಲಿರಬೇಕೆ ಹೊರತು ಲೇಖನದಲ್ಲಿರದ ಸರಿಯಾದ ಉತ್ತರ ನೀಡುವಲ್ಲಿ ಅಲ್ಲ.

ಉದಾಹರಣೆಗೆ ಲೇಖನದ ಪ್ರಕಾರ ಕರ್ನಾಟಕದಲ್ಲಿ 30 ಜಿಲ್ಲೆಗಳು, ಅದು ಹಳೆಯ ಲೇಖನ ಎಂದಿಟ್ಟುಕೊಳ್ಳಿ. ನಿಮ್ಮ ಅಧ್ಯಯನದ ಪ್ರಕಾರ ಇತ್ತೀಚಿಗೆ ಉದಯಗೊಂಡ ವಿಜಯನಗರ ಸೇರಿ ಕರ್ನಾಟಕದಲ್ಲಿ 31 ಜಿಲ್ಲೆಗಳು. ಈಗ ಪ್ರಶ್ನೆಯಲ್ಲಿ ಕರ್ನಾಟಕದಲ್ಲಿ ಜಿಲ್ಲೆಗಳು ಎಷ್ಟು ಎಂದು ಕೇಳಿದಾಗ ನೀವು ಲೇಖನದ ಪ್ರಕಾರ 30 ಎಂಬ ಉತ್ತರ ನೀಡಬೇಕೆ ಹೊರತು ನಿಮ್ಮ ಜ್ಞಾನದ ಪ್ರಕಾರ 31 ಎಂಬ ಉತ್ತರವಲ್ಲ. ಏಕೆಂದರೆ 31 ಆ ಲೇಖನದಲ್ಲಿ ಇಲ್ಲ.

* ಕೆಲವು ನೇರವಾದ ಪ್ರಶ್ನೆಗಳಿಗೆ ಆಯ್ಕೆಗಳನ್ನು ಕಡಿತಗೊಳಿಸುವ ಮೂಲಕ(option e*imination) ಕಡಿಮೆ ಸಮಯದಲ್ಲಿ ಉತ್ತರಿಸಿ.

* ಇವುಗಳಲ್ಲಿ ಯಾವ ವಾಕ್ಯಗಳು ಸರಿ ಅಥವಾ ತಪ್ಪು ಎಂಬಂಥ ಪ್ರಶ್ನೆಗಳಿಗೆ ಗಮನವಿಟ್ಟು ಪ್ರಶ್ನೆಗಳನ್ನು ಓದಿ ಉತ್ತರಿಸಿ. ಉದಾಹರಣೆಗೆ ಇವುಗಳಲ್ಲಿ ಯಾವುದು ಸರಿಯಲ್ಲ ಎಂದು ಕೇಳಿದಾಗ ನೀವು ಸರಿ ಇರುವ ಆಯ್ಕೆಗೆ ಉತ್ತರಿಸುವ ಸಾಧ್ಯತೆ ಇರುತ್ತದೆ. ಹಾಗೆಯೇ ಇವುಗಳಲ್ಲಿ ಯಾವ ವಾಕ್ಯಗಳು ಸರಿ ಎಂಬ ಪ್ರಶ್ನೆ ಕೇಳಿದಾಗ ಒಂದು ವಾಕ್ಯ ಸರಿ ಕಂಡ ತಕ್ಷಣ ಅದೇ ಆಯ್ಕೆಗೆ ಉತ್ತರಿಸಬೇಡಿ. ಕಾರಣ ಅದರಲ್ಲಿ ಒಂದಕ್ಕಿಂತ ಹೆಚ್ಚು ವಾಕ್ಯಗಳು ಸರಿಯಿರಬಹುದು.

ಪ್ರತಿದಿನ ಕನಿಷ್ಠ ನಾಲ್ಕು ಆರ್.ಸಿ ಅಭ್ಯಸಿಸುವುದರಿಂದ ಈ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸಬಹುದು.

* ಆರ್‌.ಸಿ ವಿಭಾಗ ಉತ್ತರಿಸಲು ಗರಿಷ್ಠ ಐದು ನಿಮಿಷ ಮೀಸಲಿಡಿ.

* ಪ್ರತಿದಿನ ನಾಲ್ಕು ಆರ್‌.ಸಿ ಅಭ್ಯಾಸ ಮಾಡಿ.

* ವಿವಿಧ ಟೋನ್‌ಗಳ (ಎಥಿಕಲ್, ಟೆಕ್ನಿಕಲ್, ಹ್ಯೂಮರಸ್ ಸರ್‌ಕಾಸ್ಟಿಕ್, ಐರನಿಕಲ್, ಕ್ರಿಟಿಕಲ್) ಆರ್‌.ಸಿ ಅಭ್ಯಸಿಸುವ ಮೂಲಕ ಉಳಿದ ವಿಭಾಗಗಳ ಜ್ಞಾನ ಹೆಚ್ಚಿಸಿಕೊಳ್ಳಬಹುದು.

*ಈ ವಿಭಾಗದಲ್ಲಿ ದೊರೆತ ಹೊಸ/ ಕ್ಲಿಷ್ಟಕರ ಪದಗಳನ್ನು ಪಟ್ಟಿ ಮಾಡಿಕೊಂಡು ಹೆಚ್ಚು ಪದಗಳ ಜ್ಞಾನ ಬೆಳೆಸಿಕೊಳ್ಳಿ.

*ಈ ವಿಭಾಗದಲ್ಲಿ ಓದುವುದು, ಗ್ರಹಿಸುವುದು ಮುಖ್ಯವಾದ್ದರಿಂದ ಓದುವ ನಿರರ್ಗಳತೆ ಹೆಚ್ಚಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT