ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವಿತೀಯ PU ಪರೀಕ್ಷಾ ಅವಧಿ 15 ನಿಮಿಷ ಕಡಿತ: ಇನ್ನು ಮುಂದೆ 2:45 ಗಂಟೆ ಪರೀಕ್ಷೆ

Published : 12 ಸೆಪ್ಟೆಂಬರ್ 2024, 13:33 IST
Last Updated : 12 ಸೆಪ್ಟೆಂಬರ್ 2024, 13:33 IST
ಫಾಲೋ ಮಾಡಿ
Comments

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷಾ ಅವಧಿಯನ್ನು 15 ನಿಮಿಷ ಕಡಿತಗೊಳಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

ಹೊಸ ನಿಯಮದಂತೆ ಪರೀಕ್ಷಾ ಅವಧಿ 2 ಗಂಟೆ 45 ನಿಮಿಷ ಇರಲಿದೆ. ಇದುವರೆಗಿನ ಪರೀಕ್ಷೆಗಳಲ್ಲಿ 3 ಗಂಟೆ ಅವಧಿ ಇರುತ್ತಿತ್ತು. ಪರೀಕ್ಷೆಗೆ ಉತ್ತರ ಬರೆಯುವ ಅವಧಿಯನ್ನು 2 ಗಂಟೆ 45 ನಿಮಿಷ ನಿಗದಿ ಮಾಡಿದ್ದರೂ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಓದಿಕೊಳ್ಳಲು ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗುತ್ತದೆ. ಈ ಹಿಂದೆ 3 ಗಂಟೆ ಇದ್ದಾಗಲೂ ಪ್ರಶ್ನೆಗಳ ಓದಿಗೆ ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗುತ್ತಿತ್ತು.

ಹಿಂದಿನ ಪರೀಕ್ಷೆಗಳಲ್ಲಿ ಪ್ರತಿ ವಿಷಯದ ಲಿಖಿತ ಪರೀಕ್ಷೆಯನ್ನು‌ 100 ಅಂಕಗಳಿಗೆ ನಡೆಸಲಾಗುತ್ತಿತ್ತು. 2023–24ನೇ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಪ್ರತ್ಯೇಕ ಅಂಕಗಳನ್ನು ನಿಗದಿ ಮಾಡಿದ್ದ ಕಾರಣ ಲಿಖಿತ ಪರೀಕ್ಷೆಯ ಅಂಕಗಳನ್ನು ಕಡಿತ ಮಾಡಲಾಗಿತ್ತು. ಆದರೆ, ಪರೀಕ್ಷಾ ಅವಧಿಯನ್ನು ಕಡಿತ ಮಾಡಿರಲಿಲ್ಲ.

ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ವಿದ್ಯನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ ಸೇರಿದಂತೆ ಪ್ರಾಯೋಗಿಕ ಪರೀಕ್ಷೆ ಇರುವ  ಕೆಲ ವಿಷಯಗಳಲ್ಲಿ ಲಿಖಿತ ಪರೀಕ್ಷೆಯನ್ನು 70 ಅಂಕಗಳಿಗೆ ಹಾಗೂ ಪ್ರಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಲ್ಲಿ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 

ವಿದ್ಯಾರ್ಥಿಗಳು 80 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು ಒಟ್ಟು 120 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ 80 ಅಂಕಗಳಿಗಷ್ಟೇ ಉತ್ತರಿಸಬೇಕು. 70 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು 105 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ 70 ಅಂಕಗಳಿಗಷ್ಟೇ ಉತ್ತರಿಸಬೇಕು. 

ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಾಗ ಪಠ್ಯ ಹೊರತಾದ ಪ್ರಶ್ನೆಗಳಿಗೆ ಅವಕಾಶ ನೀಡಬಾರದು. ಪಠ್ಯಕ್ರಮದಲ್ಲೇ ಇರುವ ವಿಯಷಗಳ ಮೇಲಷ್ಟೇ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಕಡ್ಡಾಯ ಎಂದು ಮಂಡಳಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT