ಶನಿವಾರ, ಸೆಪ್ಟೆಂಬರ್ 18, 2021
28 °C

ಲಾಸ್ಟ್ ಮಿನಿಟ್ ಟಿಪ್ಸ್: ಬ್ಯಾಂಕಿಂಗ್ ಪರೀಕ್ಷೆ ತಯಾರಿ ಹೀಗಿರಲಿ...

ಅರುಣ ಬ. ಚೂರಿ Updated:

ಅಕ್ಷರ ಗಾತ್ರ : | |

Prajavani

ಪರೀಕ್ಷೆಗಾಗಿ ಅಭ್ಯರ್ಥಿಯು ಎಷ್ಟೇ ಪರಿಪೂರ್ಣತೆಯಿಂದ ತಯಾರಿ ನಡೆಸಿದರೂ ಸಹ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಕೊನೆಯ ಕ್ಷಣದ ಸಲಹೆಗಳು (ಲಾಸ್ಟ್ ಮಿನಿಟ್ ಟಿಪ್ಸ್) ಅಭ್ಯರ್ಥಿಯ ಪರೀಕ್ಷಾ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ಕೊನೆಯ ಕ್ಷಣದ ಸಲಹೆಗಳೇನು?

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, ಕೊನೆಯ ಕ್ಷಣದ ಸಲಹೆಗಳು ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತವೆ. ಈ ಸಲಹೆಗಳು ಬೇರೆಯವರು ಕೊಟ್ಟಿದ್ದನ್ನು ಅನುಸರಿಸಿದ್ದಾಗಿರಬಹುದು ಅಥವಾ ಸ್ವತಃ ತಯಾರಿಸಿದ್ದಾಗಿರ
ಬಹುದು. ಒಟ್ಟಿನಲ್ಲಿ ವಿದ್ಯಾರ್ಥಿಯ ಪರೀಕ್ಷಾ ಯಶಸ್ಸಿಗೆ ಕಾರಣವಾದರೆ ಸಾಕು.

ನಿಮ್ಮ ಸಂಪೂರ್ಣ ಅಧ್ಯಯನದ ಅವಧಿಯಲ್ಲಿ ನಿಮಗೆ ಎದುರಾದ ಅನುಮಾನಗಳು, ನೀವು ಮಾಡಿದ ತಪ್ಪುಗಳು ಕೊನೆಯ ಕ್ಷಣದಲ್ಲಿ ನೀವು ಓದಲೇಬೇಕಾದ ಕೆಲವು ಸಣ್ಣ ಟಿಪ್ಪಣಿಗಳು (ಶಾರ್ಟ್ ನೋಟ್ಸ್) ಹಾಗೂ ನೆನಪಿನಲ್ಲಿರಲೇಬೇಕಾದ ಕೆಲವು ಸೂತ್ರಗಳು ಇವೆಲ್ಲವುಗಳನ್ನು ಒಂದು ಕಡೆ ಸಂಗ್ರಹಿಸಿ ಫ್ಲೋಚಾರ್ಟ್ ಅಥವಾ ಫ್ಲಾಶ್ ಕಾರ್ಡ್‌ನ ಸಹಾಯದಿಂದ ಪ್ರಾಮುಖ್ಯತೆಗೆ ಅನುಸಾರವಾಗಿ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅವುಗಳನ್ನು ಪುನರ್‌ಮನನ ಮಾಡಬೇಕು. ಇದರ ತಯಾರಿ ಓದಿನ ಜೊತೆಜೊತೆಗೇ ನಡೆದಿದ್ದರೆ ಸಂಗ್ರಹ ಮತ್ತು ತಯಾರಿಯ ಸಮಯ ಖಂಡಿತ ಉಳಿತಾಯವಾಗುವುದು.

ಫ್ಲೋಚಾರ್ಟ್ ಸಹಾಯದಿಂದ ತಯಾರಿ

ಅಧ್ಯಯನ ಅವಧಿಯಲ್ಲಿ ಎದುರಿಸಲಾಗದ  ಪ್ರಶ್ನೆಗಳನ್ನು ಹಾಗೂ ಎದುರಿಸಿಯೂ ತಪ್ಪು ಉತ್ತರ ತಂದುಕೊಟ್ಟಂತಹ ಕಾರಣಗಳನ್ನು ಪಟ್ಟಿ ಮಾಡಿರಿ. ಉದಾಹರಣೆಗೆ ತಪ್ಪು ಸೂತ್ರ, ತಪ್ಪು ವಿಧಾನ, ಯಾವ ಹಂತದಲ್ಲಿ ತಪ್ಪು ಉತ್ತರ ದೊರಕುವಂತಾಯಿತು ಎಂಬುದನ್ನು ಫ್ಲೋಚಾರ್ಟ್ ಸಹಾಯದಿಂದ ಗುರುತಿಸಿಕೊಂಡು ಪರೀಕ್ಷೆಗೆ ಹತ್ತಿರವಿರುವ ದಿನಗಳಲ್ಲಿ ಅಭ್ಯರ್ಥಿ ದುರ್ಬಲ ಇರುವ ಆ ವಿಷಯದ ಕಡೆಗೆ ಹೆಚ್ಚು ಗಮನ ನೀಡಬೇಕು.

ಉದಾಹರಣೆಗೆ ಇಂಗ್ಲಿಷ್ ವಿಷಯದ ‘ರೀಡಿಂಗ್‌ ಕಾಂಪ್ರ್‌ಹೆನ್ಶನ್‌’ ವಿಭಾಗದಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದಲ್ಲಿ 
ಸ್ವತಃ ಒಂದು ಫ್ಲೋಚಾರ್ಟ್ ತಯಾರಿಸಿ. ಕೆಳಗೆ ನೀಡಿದ ಫ್ಲೋಚಾರ್ಟ ‘ರೀಡಿಂಗ್‌ ಕಾಂಪ್ರ್‌ಹೆನ್ಶನ್‌’ ಗಾಗಿ ಅನುಸರಿಸಲೇಬೇಕಾದ ವಿಧಾನವಲ್ಲ, ಇದು ಕೇವಲ ಒಂದು ಉದಾಹರಣೆ ಅಷ್ಟೇ. ಅಭ್ಯರ್ಥಿಗಳು ತಮ್ಮ ಅವಶ್ಯಕತೆಗೆ ತಕ್ಕಂತೆ ವಿಷಯ ಅನುಸಾರ ಫ್ಲೋಚಾರ್ಟ್ ತಯಾರಿಸಿಕೊಳ್ಳಬಹುದು
ಉದಾಹರಣೆ:

ಫ್ಲಾಶ್ ಕಾರ್ಡ್ ಸಿದ್ಧತೆ

ಪರೀಕ್ಷಾ ತಯಾರಿಗಾಗಿ ಕೇವಲ ಪುಸ್ತಕಗಳು, ಆನ್‌ಲೈನ್ ಕ್ಲಾಸ್‌ಗಳು ಹಾಗೂ ಅಣಕು ಪರೀಕ್ಷೆಗಳನ್ನು(ಮಾಕ್ ಟೆಸ್ಟ್) ಮಾತ್ರ ಅನುಸರಿಸುತ್ತಿರುವ ಅಭ್ಯರ್ಥಿಗಳು ಇದರ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ವಿದ್ಯಾರ್ಥಿಗಳು ಇವುಗಳನ್ನು ಅವಶ್ಯಕತೆಗೆ ತಕ್ಕಂತೆ ಮುಂಚೆಯೇ ತಯಾರಿಸಿಕೊಂಡು ಪರೀಕ್ಷೆ ಹತ್ತಿರ ಇರುವ ಸಮಯದಲ್ಲಿ ಇಂಗ್ಲಿಷ್ ವೊಕೆಬಲರಿ, ಸ್ಕ್ವೇರ್ಸ್, ಕ್ಯೂಬ್ಸ್, ಫಾರ್ಮುಲಾಸ್ ಪ್ರೈಮ್ ನಂಬರ್ಸ್, ಅಪೋಸಿಟ್ಸ್ ಮುಂತಾದವುಗಳ ಪುನರಾವರ್ತನೆಗೆ ಉಪಯೋಗಿಸಿಕೊಳ್ಳಬಹುದು. ಇವುಗಳನ್ನು ವಿದ್ಯಾರ್ಥಿ ಅವಶ್ಯಕತೆಗೆ ತಕ್ಕಂತೆ ವಿವಿಧ ಅಳತೆಗಳಲ್ಲಿ ಒಂದು ಬದಿಯಲ್ಲಿ ಪ್ರಶ್ನೆ, ಮತ್ತೊಂದು ಬದಿಯಲ್ಲಿ ಅದರ ಉತ್ತರ ಈ ರೀತಿ ತಾನು ಅಭ್ಯಸಿಸುವ ಸಮಯದಲ್ಲಿಯೇ ತಯಾರಿಸಿಟ್ಟುಕೊಳ್ಳಬೇಕು, ಪರೀಕ್ಷೆ ಹತ್ತಿರ ಇರುವ ಈ ಸಮಯದಲ್ಲಿ ಪುನರಾವರ್ತನೆಗೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು, ದಿನದ ವಿವಿಧ ಸಮಯದಲ್ಲಿ ಎಲ್ಲವುಗಳನ್ನು ಪುನರಾವರ್ತಿಸಿದಾಗ ಸಹಜವಾಗಿಯೇ ಎಲ್ಲವುಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಇದಲ್ಲದೆ ಸ್ನೇಹಿತರ ಫ್ಲಾಶ್ ಕಾರ್ಡ್ ವಿನಿಮಯ ಮಾಡಿಕೊಂಡು ಹೆಚ್ಚು ಅಧ್ಯಯನ ನಡೆಸಬಹುದು, ಆದರೆ ಫ್ಲಾಶ್ ಕಾರ್ಡ್ ತಯಾರಿಗೆ ಸಮಯ ಬೇಕಿದ್ದು, ಇವುಗಳನ್ನು ಮುಂಚೆಯೇ ತಯಾರಿಸಿದರೆ ಸೂಕ್ತ.

ಕೊನೇ ಕ್ಷಣಕ್ಕೆ ವೇಳಾಪಟ್ಟಿ

ಕೊನೆ ಕ್ಷಣದ ತಯಾರಿಗಾಗಿ ಪ್ರಾಮುಖ್ಯತೆಗೆ ಅನುಸಾರವಾಗಿ ಸ್ಥಿರ ವೇಳಾಪಟ್ಟಿ ತಯಾರಿಸಿ ಹಾಗೂ ಅನುಸರಿಸಿ. ನೀವು ಈ ಹಿಂದೆ ಅಭ್ಯಸಿಸುವಾಗ ಮಾಡಿದ ಎಲ್ಲಾ ತಪ್ಪುಗಳ ನೋಟ್ಸ್ ವಿಮರ್ಶೆಗೂ ಸಹ ವೇಳಾಪಟ್ಟಿಯಲ್ಲಿ ಸಮಯ ಮೀಸಲಿರಿಸಿ. ಅಧ್ಯಯನದ ಪ್ರಕಾರ ನಾವು ನೇರವಾಗಿ ನೀಡಿದ ಸರಿ ಉತ್ತರಕ್ಕಿಂತಲೂ ತಪ್ಪು ಉತ್ತರ ನೀಡಿ ಪುನಃ ಪ್ರಯತ್ನಿಸಿ. ಸರಿ ಉತ್ತರ ನೀಡಿದ ಉತ್ತರ ಹೆಚ್ಚು ಸಮಯ ನೆನಪಿನಲ್ಲಿರುತ್ತದೆ. ದಿನದ ಆರಂಭದಲ್ಲಿ ವೇಳಾಪಟ್ಟಿಯಲ್ಲಿ ಆ ದಿನದ ಅಧ್ಯಯನದ ವಿಷಯಗಳನ್ನು ಗಮನಿಸಿ ಹಾಗೂ ಅನುಸರಿಸಿ. ನಂತರ ದಿನದ ಅಂತ್ಯಕ್ಕೆ ಅದು ಪೂರ್ಣಗೊಂಡಿತೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿರಿ. ಇಲ್ಲದೇ ಹೋದರೆ ಅದಕ್ಕೆ ಕಾರಣ ಏನೆಂಬುದನ್ನು ಹುಡುಕಿ. ಆ ಕಾರಣ ನಿಮ್ಮ ಪರೀಕ್ಷಾ ತಯಾರಿಗಿಂತ ಮುಖ್ಯವೇ ಎಂಬುದನ್ನು ಅವಲೋಕಿಸಿ. ಇಲ್ಲ ಅಂತಾದರೆ ಮರುದಿನ ಅಂತಹ ಕಾಲಹರಣವನ್ನು ತಡೆಯಿರಿ. ಸದ್ಯಕ್ಕಂತೂ ವರ್ಷದ ಕೊನೆಯ ಈ ಬ್ಯಾಂಕಿಂಗ್ ಪರೀಕ್ಷಾ ತಯಾರಿಗಿಂತ ಅತಿಮುಖ್ಯ ಕೆಲಸ ಬೇರೆ ಇಲ್ಲ ಎಂದು ಭಾವಿಸೋಣ.

ಉದಾಹರಣೆಗೆ ಅಭ್ಯರ್ಥಿಗಳು ನಿರಂತರ ಅಭ್ಯಸಿಸುವುದು ಒಳ್ಳೆಯದಲ್ಲ ಎಂದು ವಿರಾಮದ ನೆಪದಲ್ಲಿ ಗೆಳೆಯರೊಟ್ಟಿಗೆ ಸಿನಿಮಾ ವೀಕ್ಷಣೆಗೆ ತೆರಳುವರು. ನಂತರ ಸಮಯ ನಿರ್ವಹಣೆ ಎಂದು ರಾತ್ರಿ 4 ಗಂಟೆಗಳ ಕಾಲ ಹೆಚ್ಚುವರಿಯ ಅಭ್ಯಾಸಕ್ಕೆ ತೀರ್ಮಾನಿಸುವರು. ಇಲ್ಲಿ ಎರಡೂ ಸಹ ಸಕಾರಣಗಳಲ್ಲ. ಮೊದಲನೆಯದಾಗಿ ವಿರಾಮಕ್ಕಾಗಿ ಚಲನಚಿತ್ರ ವೀಕ್ಷಣೆಗೆ ತೆರಳಲು ಇದು ಸೂಕ್ತ ಸಮಯವಲ್ಲ. ಇದು ಕೊನೆಯ ಕ್ಷಣದ ತಯಾರಿಗೆ ಸಮಯ. ಇಲ್ಲಿ ಆದಷ್ಟು ಸಮಯವನ್ನು ಪರೀಕ್ಷಾ ತಯಾರಿಗಾಗಿ ಮೀಸಲಿಟ್ಟರೆ ಒಳ್ಳೆಯದು. ವಿರಾಮಕ್ಕಾಗಿ ಓದಿನ ನಡುವೆ ವಿವಿಧ ಮಾರ್ಗಗಳನ್ನು ಅನುಸರಿಸಬೇಕೇ ಹೊರತು ಚಲನಚಿತ್ರ ವೀಕ್ಷಣೆಗಳಂತಹ ಏಕಾಗ್ರತೆ ಹಾಳು ಮಾಡುವಂತಹ ವಿರಾಮಗಳಿಂದಲ್ಲ. ಇದಲ್ಲದೆ ಈ ಕಾರಣದಿಂದಾಗಿ ನೀವು ತಡರಾತ್ರಿಯವರೆಗೂ ಅಭ್ಯಸಿಸಿದ ಆ 4 ಗಂಟೆಗಳು ಖಂಡಿತ ನಿರೀಕ್ಷಿತ ಫಲ ನೀಡಲಾರವು. ಇಲ್ಲಿ ಎರಡು ಕೂಡ ತಪ್ಪು ಆಯ್ಕೆಗಳೇ.

ಇನ್ನು ಇಷ್ಟು ದಿನ ನಡೆಸಿದ ಅಧ್ಯಯನ, ಅಣಕು ಪರೀಕ್ಷೆ, ಕ್ವಿಜ್ ನಂತರ ಹೊಸ ಹಾಗೂ ಮುಖ್ಯವಾದವುಗಳನ್ನು ಪಟ್ಟಿ ಮಾಡಿಕೊಂಡಿರಬೇಕು. ಸಹಜವಾಗಿಯೇ ಪರೀಕ್ಷಾ ತಯಾರಿಯ ಕೊನೆಯ ದಿನಗಳಲ್ಲಿ ಹೊಸ ವಿಷಯದ ಅಧ್ಯಯನ ನಡೆಸಬಾರದು. ಒಂದು ವೇಳೆ ಇದು ಅತ್ಯಗತ್ಯ ಹಾಗೂ ಅನಿವಾರ್ಯ ಎಂದೆನಿಸಿದರೆ ಹಾಗೂ 15– 30 ದಿನಗಳ ಕಾಲ ಅವಕಾಶವಿದ್ದಲ್ಲಿ ಸ್ಟಡಿ ರಿಸ್ಕ್ ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಕಾರಣ ಇದು ಅಭ್ಯರ್ಥಿಯ ಭವಿಷ್ಯದ ವಿಷಯ ಹಾಗೂ ಪ್ರಿಲಿಮ್ಸ್ ಪರೀಕ್ಷೆ ಆಗಿರುವುದರಿಂದ ‘ಕಾನ್ಸೆಪ್ಟ್ ಲರ್ನಿಂಗ್’ ಹೊಸದಾದರೂ ಸುಲಭವಾಗಿಯೇ ಇರುತ್ತದೆ.

ಜೋಶ್‌ ಕಾಫ್‌ಮನ್‌ ಬರೆದ ‘ದಿ ಫಸ್ಟ್‌ 20 ಅವರ್ಸ್‌’ ಎಂಬ ಪುಸ್ತಕದಲ್ಲಿ ವಿವರಿಸಿದ ಪ್ರಕಾರ ಹೊಸತನ್ನು ಕಲಿಯಲು ಬೇಕಾದ ಸಮಯ ಕೇವಲ 20 ಗಂಟೆಗಳು. ಆದ್ದರಿಂದ ಕ್ಷಿಪ್ರ ಕೌಶಲ ಸಂಪಾದನೆಗಾಗಿ ನಾವು ಪಾಲನೆ ಮಾಡಬೇಕಾಗಿರುವ ನಾಲ್ಕು ಸರಳ ಹಂತಗಳು ಎಂದರೆ

1. ಕೌಶಲ ಮರುಸ್ಥಾಪನೆ.‌

2. ಹೆಚ್ಚೆಚ್ಚು ಕಲಿಯುವುದು ಹಾಗೂ ನಮ್ಮನ್ನು ನಾವು ತಿದ್ದಿಕೊಳ್ಳುವುದು.

3. ಅಭ್ಯಾಸದ ಅಡೆತಡೆ ತೆಗೆದು ಹಾಕುವುದು.

4. ಕನಿಷ್ಠ 20 ಗಂಟೆ ಅಭ್ಯಾಸ ನಡೆಸುವುದು.

ಪರೀಕ್ಷೆ ಹತ್ತಿರವಿರುವಾಗ ಹೊಸತನ್ನು ಕಲಿಯುವುದು ಒಳ್ಳೆಯದಲ್ಲ ಎಂಬ ಸಿದ್ಧ ಉತ್ತರ ನೀಡಿ ಸ್ಪರ್ಧೆಯಿಂದ ಹೊರಗುಳಿಯುವುದಕ್ಕಿಂತ ಮೇಲ್ಕಾಣಿಸಿದ ನಾಲ್ಕು ಸರಳ ಹಂತಗಳನ್ನು ಅನುಸರಿಸಿ ಕೊಂಚ ಸ್ಟಡಿ ರಿಸ್ಕ್ ತೆಗೆದುಕೊಂಡರೂ ಸರಿ, ಹೆಚ್ಚು ಅಂಕ ಗಳಿಸಿ ಸ್ಪರ್ಧೆಯಲ್ಲಿ ಇರುವುದೇ ಉತ್ತಮ.

ಪ್ರತಿದಿನ ಅಭ್ಯಸಿಸುವಾಗ ನೀವು ಆ ದಿನ ಪೂರ್ತಿಗೊಳಿಸಿದ ವಿಷಯಗಳನ್ನು ಡೈರಿಯಲ್ಲಿ ಗುರುತಿಸುತ್ತಾ ಬನ್ನಿ. ಅದಲ್ಲದೆ ಹೊಸವಿಧಾನ, ಶಾರ್ಟ್‌ಕಟ್‌ ಸೂತ್ರಗಳು ದೊರೆತಲ್ಲಿ ಅದನ್ನು ಸಹ ಪಟ್ಟಿ ಮಾಡುತ್ತಾ ಬನ್ನಿ. ಇದು ಮರುದಿನ ಅಭ್ಯಸಿಸುವುದಕ್ಕೆ ಖುಷಿ ನೀಡುವುದಲ್ಲದೆ ಹೆಚ್ಚು ಸಮಯ ನೆನಪಿನಲ್ಲಿರುವಂತೆ ಮಾಡುತ್ತದೆ.

ಜ್ಞಾಪಕ ಶಕ್ತಿಗಾಗಿ ಸಲಹೆಗಳು

ಅಧ್ಯಯನದ ಈ ಕೊನೆಯ ದಿನಗಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ

  • ಕೇಳುವುದರ ಮುಖಾಂತರ ಕಲಿಕೆ
  • ವೀಕ್ಷಣೆಯ ಮುಖಾಂತರ ಕಲಿಕೆ

ಕೇಳುವುದರ ಮುಖಾಂತರ ಕಲಿಕೆ

ಈ ಮೂಲಕ ಕಲಿಕಾ ಆಸಕ್ತಿ ಹೊಂದಿರುವವರು ನಿಮಗೆ ಅಗತ್ಯವಿರುವ ವಿಷಯ ಹುಡುಕಿ ಸೂಕ್ತ ಆನ್‌ಲೈನ್ ಅಥವಾ ಆಫ್‌ಲೈನ್ ಕ್ಲಾಸ್‌ಗಳನ್ನು ತೆಗೆದುಕೊಳ್ಳಬಹುದು. ಬದಲಾವಣೆ ಬೇಕೆನಿಸಿದಲ್ಲಿ ಅಥವಾ ತಮ್ಮ ಅವಶ್ಯಕತೆಗೆ ತಕ್ಕಂತೆ ಅಧ್ಯಯನ ವಿಷಯ ಬೇಕೆನಿಸಿದಲ್ಲಿ ಸ್ವತಃ ತಾವೇ ಆ ವಿಷಯ ರೆಕಾರ್ಡ್ ಮಾಡಿ ದಿನನಿತ್ಯ ಅವುಗಳನ್ನು ಕೇಳಬಹುದು ಇದರಿಂದಾಗಿ ಪುನರಾವರ್ತನೆ ಸುಲಭ ಹಾಗೂ ನಿಖರ. ಇದಲ್ಲದೆ ತಾವು ಪರಿಪೂರ್ಣ ಹೊಂದಿದ ವಿಷಯಗಳನ್ನು ಬೇರೆಯವರಿಗೆ ತಿಳಿಸಿಕೊಡುವುದರಿಂದಲೂ ಹಾಗೂ ಪರಿಪೂರ್ಣ ಹೊಂದದ ವಿಷಯಗಳನ್ನು ಬೇರೆಯವರಿಂದ ಕೇಳಿಸಿಕೊಳ್ಳುವುದರಿಂದಲೂ ಜ್ಞಾನ ಹಾಗೂ ನಿಖರತೆ ಹೆಚ್ಚುತ್ತಾ ಹೋಗುತ್ತದೆ. ಅಧ್ಯಯನದ ಕೊನೆಯ ದಿನಗಳಲ್ಲಿ ಈ ವಿಧಾನ ಅನುಸರಿಸಿ. ಆದರೆ ಪರೀಕ್ಷೆ ಅತಿ ಹತ್ತಿರವಿರುವಾಗ ಸ್ವಯಂ ಅಧ್ಯಯನ ಮಾಡಿದರೆ ಒಳ್ಳೆಯದು. ಪರೀಕ್ಷೆಯ ಹಿಂದಿನ ದಿನವಂತೂ ಕುಟುಂಬದೊಂದಿಗೆ ಕಾಲ ಕಳೆಯಿರಿ. ಆದಷ್ಟು ಒತ್ತಡ ರಹಿತರಾಗಿರಿ.

ವೀಕ್ಷಣೆಯ ಮೂಲಕ ಕಲಿಕೆ

ಕಲಿಕಾ ಆಸಕ್ತಿ ಹೊಂದಿರುವವರು ಫ್ಲಾಶ್ ಕಾರ್ಡ್ ವಿಧಾನ ಅನುಸರಿಸಿ. ಪಾಕೆಟ್ ಫಾರ್ಮುಲಾ ಇಟ್ಟುಕೊಳ್ಳಿ. ಟಿಪ್ಪಣಿಗಳ (ನೋಟ್ಸ್) ತಯಾರಿಕೆಯಲ್ಲಿ ವಿವಿಧ ಗಾತ್ರಗಳ ಅಕ್ಷರಗಳು ಹಾಗೂ ಬಣ್ಣಗಳನ್ನು ಬಳಸಿರಿ. ಹೈಲೈಟರ್ ಸಹಾಯದಿಂದ ಅತಿ ಮುಖ್ಯ ಸೂತ್ರಗಳನ್ನು ಗುರುತಿಸಿಕೊಳ್ಳಿ. ಪುನರ್‌ಮನನದ ಸಮಯದಲ್ಲಿ ಇದು ಬಹಳ ಸಹಾಯಕಾರಿಯಾಗುತ್ತದೆ. ಹಾಗೆಯೇ ವಿವಿಧ ವಿಷಯಗಳನ್ನು ಅಭ್ಯಸಿಸುವಾಗ ಅಪ್ಲಿಕೇಶನ್‌ ಸಹಾಯ ತೆಗೆದುಕೊಳ್ಳಿ. ಉದಾಹರಣೆಗೆ ಸ್ಕ್ವೇರ್ಸ್, ಕ್ಯೂಬ್ಸ್, ಮಲ್ಟಿಪ್ಲಿಕೇಶನ್, ಟೇಬಲ್ಸ್, ಮೆಮೊರಿ ಅಥವಾ ಸಾಮಾನ್ಯ ಜ್ಞಾನದ ವಿಷಯದಲ್ಲಿ ಚಿತ್ರ ಸಮೇತ ನೀಡುವ ಆಯಾ ದಿನದ ಸುದ್ದಿಗಳು ಹಾಗೂ ಪ್ರಶ್ನೆಗಳು ವಿವರ ಸಮೇತ ಇರುವುದರಿಂದ ನೆನಪಿನಲ್ಲಿಡಲು ಸಹಾಯಕಾರಿಯಾಗುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು