ಶುಕ್ರವಾರ, ಜೂನ್ 18, 2021
24 °C
ಹೇಳತೇನ ಕೇಳ...

ಇದು ‘ಕೇಳು ಪುಸ್ತಕ’ಗಳ ಕಾಲ

ಚೈತ್ರಾ ದೊಡ್ಡಹುಸೇನಪುರ Updated:

ಅಕ್ಷರ ಗಾತ್ರ : | |

ಮಹಾತ್ಮ ಗಾಂಧಿ ರಸ್ತೆಯಿಂದ ಮೆಜೆಸ್ಟಿಕ್‌ಗೆ ಹೋಗಲೆಂದು ಮೆಟ್ರೊ ಹತ್ತಿದ್ದೆ. ತರುಣಿಯೊಬ್ಬಳು ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಲೋಕ ಮರೆತಿದ್ದಳು.

ಅವಳ ಗಂಭೀರ ವದನ ಗಮನಿಸಿದಾಗ ಆಕೆ ಸಂಗೀತ ಆಲಿಸುತ್ತಿಲ್ಲ ಎನಿಸುತ್ತಿತ್ತು. ವಿಧಾನಸೌಧ ಸ್ಟೇಷನ್ ಬಳಿ ಹತ್ತುವವರು–ಇಳಿಯುವವರ ಗಡಿಬಿಡಿಯಲ್ಲಿ ಆಕೆ ಕಣ್ತೆರೆದಾಗ ಮುಗುಳ್ನಕ್ಕೆ. ಆಕೆಯೂ ಸ್ನೇಹದ ನಗೆ ತುಳುಕಿಸಿದಳು. ‘ಏನು ಕೇಳ್ತಿದ್ದೀರಿ’ ಎಂದೆ. ಎಂಥದ್ದೋ ಇಂಗ್ಲಿಷ್ ಪುಸ್ತಕದ ಹೆಸರು ಹೇಳಿದಳು. ನನಗೆ ಖುಷಿಯಾಯಿತು.

ಕನ್ನಡ ಪುಸ್ತಕೋದ್ಯಮ ಹಿಂದೊಮ್ಮೆ ಪ್ರಯತ್ನಿಸಿ ಕೈಚೆಲ್ಲಿದ ‘ಕೇಳು ಪುಸ್ತಕ’ ಪ್ರಯೋಗಗಳು ಇದೀಗ ಮತ್ತೆ ಪ್ರವರ್ಧಮಾನಕ್ಕೆ ಬಂದಿವೆ. ಅಮೆಜಾನ್‌ನ ಆಡಿಬಲ್ (audible.com) ಈ ಕ್ಷೇತ್ರಕ್ಕೆ ಭರ್ಜರಿಯಾಗಿ ಪ್ರವೇಶಿಸಿ ಲಕ್ಷಗಟ್ಟಲೆ ಕೇಳುಪುಸ್ತಕಗಳನ್ನು ಮಾರುಕಟ್ಟೆಗೆ ತಂದಿದೆ. ಜನಪ್ರಿಯ ಇಂಗ್ಲಿಷ್ ಬರಹಗಾರರ ಪುಸ್ತಕಗಳು ಈಗ ಮೊದಲು ಕೇಳುಪುಸ್ತಕಗಳಾಗಿ ಮಾರುಕಟ್ಟೆ ಬಂದು, ನಂತರ ಓದುಪುಸ್ತಕಗಳ ರೂಪ ತಳೆಯುತ್ತಿವೆ.

ಕನ್ನಡಕ್ಕೆ ಇದು ಹೊಸ ಪ್ರಯೋಗವೇನಲ್ಲ. ಸುಧಾಮೂರ್ತಿ ಅವರ ‘ಮನದ ಮಾತು’, ಯು.ಆರ್‌. ಅನಂತಮೂರ್ತಿ ಅವರ ‘ಸಂಸ್ಕಾರ’, ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’, ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಸುಬ್ಬಣ್ಣ’ ಕೇಳು ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿವೆ.  ಮುಂಬೈ ಮೂಲದ ‘ಬುಕ್ಸ್‌ಟಾಕ್‌’ ಕಂಪನಿ ಈ ಕೇಳುಪುಸ್ತಕಗಳನ್ನು ಪ್ರಕಟಿಸಿದೆ.

ವಸುಧೇಂದ್ರ ಅವರು ‘ನಮ್ಮಮ್ಮ ಅಂದ್ರೆ ನನಗಿಷ್ಟ‘ ಪುಸ್ತಕವನ್ನು 2007ರಲ್ಲಿ ಕೇಳು ಪುಸ್ತಕವಾಗಿ ರೂಪಿಸಿದ್ದರು. ವೈದೇಹಿ ಅವರ ‘ವೈದೇಹಿ ಧ್ವನಿ– ಆಯ್ದ ಕಥೆ–ಕವನಗಳ ಕೇಳು ಪುಸ್ತಕ’, ರಮೇಶ್‌ ಅರವಿಂದ್ ಧ್ವನಿ ನೀಡಿರುವ ಉಮೇಶ್‌ ಅವರ ‘ದಿ ಲಾಸ್ಟ್‌ ಲೆಕ್ಚರ್‌’ ಸೇರಿದಂತೆ ಹಲವು ಕೇಳುಪುಸ್ತಕಗಳು ಜನಪ್ರಿಯವೂ ಆಗಿವೆ.

‘ಹೊಸ ತಲೆಮಾರಿನ ಯುವಜನರು ಓದುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಮುಳುಗಿ ಸಮಯ ಕಳೆಯುತ್ತಾರೆ’ ಎನ್ನುವ ಆರೋಪಗಳನ್ನು ಮನದಲ್ಲಿರಿಸಿಕೊಂಡೇ ಕೆಲವರನ್ನು ಮಾತನಾಡಿಸಿದೆ.

‘ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪುಸ್ತಕ ಓದುವವರು ಕಡಿಮೆಯಾಗಿದ್ದಾರೆ ಎನ್ನುವುದು ನಿಜ. ಓದುವ ಆಸೆ ಇರುವವರಿಗೆ ಕೇಳುಪುಸ್ತಕಗಳು ವರದಾನವೇ ಸೈ. ಮನೆಯಲ್ಲಿ ಏನಾದರೂ ಕೆಲಸ ಮಾಡುವಾಗಲೂ ಪುಸ್ತಕಗಳನ್ನು ಕೇಳಿಸಿಕೊಳ್ಳಬಹುದು. ಓದುವ ಆಸಕ್ತಿ ಇಲ್ಲದವರನ್ನು ಆಡಿಯೊ ಸೆಳೆಯುತ್ತದೆ. ಆಡಿಯೊ ಕೇಳಿದ ಬಳಿಕ ಲೇಖಕರ ಚಿಂತನೆ ಇಷ್ಟವಾದರೆ ಅವರು ಓದುಗರಾಗುತ್ತಾರೆ. ಕನ್ನಡದ ಮಾರುಕಟ್ಟೆಯಲ್ಲಿ ಕೇಳು ಪುಸ್ತಕಗಳಿಗೆ ಖಂಡಿತ ಸ್ಥಳವಿದೆ. ಕನ್ನಡದಲ್ಲಿಯೂ ಕೇಳುಪುಸ್ತಕಗಳ ಸಂಖ್ಯೆ ಹೆಚ್ಚಾಗಬೇಕು’ ಎನ್ನುತ್ತಾರೆ ಸಾಹಿತ್ಯ ಕೃತಿಗಳನ್ನು ಓದುವುದರಲ್ಲಿ ಆಸಕ್ತಿ ಹೊಂದಿರುವ ನಟೇಶ್‌ಬಾಬು.

 ಕನ್ನಡ ಸಾಹಿತ್ಯ ಲೋಕದ ಪ್ರಮುಖ ಪುಸ್ತಕ ಪ್ರಕಾಶಕರನ್ನು ಮಾತನಾಡಿಸಿದಾಗ ಕೇಳುಪುಸ್ತಕ ಪ್ರಪಂಚದ ಮತ್ತೊಂದು ಆಯಾಮ ಆರ್ಥವಾಯಿತು.

‘ಕೇಳುಪುಸ್ತಕಗಳತ್ತ ಸಾಹಿತ್ಯ ಪ್ರೇಮಿಗಳು ಆಸಕ್ತಿ ತೋರಿದರೆ, ಬೇಡಿಕೆ ಕುದುರಿದರೆ, ಚರ್ಚೆ ಆರಂಭವಾದರೆ ನಾವೂ ಅಂಥ ಪ್ರಯೋಗಗಳನ್ನು ಮಾಡುತ್ತೇವೆ’ ಎಂಬುದು   ಗಾಂಧಿಬಜಾರ್‌ನ ಅಂಕಿತ ಪುಸ್ತಕದ ಪ್ರಕಾಶ್‌ ಕಂಬತ್ತಳ್ಳಿ ಅವರ ಮಾತು.

*
ಮಾರುವುದು ಕಷ್ಟ
‘ಓದು ಬಲ್ಲವನಿಗೆ ಓದುವುದೇ ಸುಖ.  ಕೇಳು ಪುಸ್ತಕಗಳು ಎಂದಿಗೂ ಓದುವುದಕ್ಕೆ ಪರ್ಯಾಯವಾಗಲಾರವು. ದೃಷ್ಟಿದೋಷ ಹೊಂದಿರುವವರಿಗೆ, ಕನ್ನಡ ಮಾತನಾಡಲು ಬರುತ್ತದಾದರೂ ಓದಲು ಬರುವುದಿಲ್ಲ ಎನ್ನುವವರಿಗೆ ಆಡಿಯೊ ಪುಸ್ತಕ ಒಂದು ಪರಿಹಾರ. ಕೇಳುಪುಸ್ತಕಗಳನ್ನು ಮಾರುವುದು ಕಷ್ಟ. ಹೀಗಾಗಿ ಈ ಪ್ರಯೋಗದಿಂದ ಹಿಂದೆ ಸರಿದೆ. ಕೇಳುಪುಸ್ತಕಗಳನ್ನು ಆನ್‌ ಲೈನ್‌ನಲ್ಲಿ ಸುಲಭವಾಗಿ ಖರೀದಿಸಿ ಮೊಬೈಲ್‌ಗಳಿಗೆ ಡೌನ್‌ಲೋಡ್ ಮಾಡಿ ಕೊಳ್ಳುವಂತೆ ಇರಬೇಕು. ಕಥೆಗಾರರು ಕೇಳುಪುಸ್ತಕಗಳನ್ನೇ ಮನದಲ್ಲಿರಿಸಿ ಕೊಂಡು ಸಾಹಿತ್ಯ ಸೃಷ್ಟಿಸುವುದು ಸರಿಯಾದ ಮಾರ್ಗವಲ್ಲ. ಅದು ಸಿನಿಮಾಕ್ಕಾಗಿ ಕಾದಂಬರಿ ಬರೆಯುವ ಹಾಗಿರುತ್ತದೆ’ 

–ವಸುಧೇಂದ್ರ, ಕತೆಗಾರ,ಪ್ರಕಾಶಕ

*

ಕನ್ನಡಕ್ಕೆ ಬೇಡಿಕೆ ಇಲ್ಲ
‘ಇಂಗ್ಲಿಷ್‌ ಕೇಳುಪುಸ್ತಕಗಳಿಗೆ ಇರುವ ಬೇಡಿಕೆ ಕನ್ನಡ ಕೇಳುಪುಸ್ತಕಗಳಿಗೆ ಇಲ್ಲ. ವರ್ತಮಾನ ಹೀಗೆ ಇದೆ ಎಂದು ಭವಿಷ್ಯ ಬದಲಾಗುವುದಿಲ್ಲ ಎಂದಲ್ಲ. ಮುಂದಿನ ದಿನಗಳಲ್ಲಿ ಓದುಗರು ಎಲೆಕ್ಟ್ರಾನಿಕ್‌ ಮಾಧ್ಯಮದ ಕಡೆ ಒಲವು ತೋರುವುದು ಖಚಿತ. ಕೇಳುಪುಸ್ತಕಗಳನ್ನು ನಮ್ಮ ಪ್ರಕಾಶನ ಸಂಸ್ಥೆಯ ಒಂದು ಭಾಗವಾಗಿಸುವ ಯೋಜನೆ ರೂಪಿಸಿಕೊಂಡಿದ್ದೇವೆ’ 
–ರಮೇಶ್‌ ಉಡುಪ ನವಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ

*

ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ
ಪ್ರೊ.ಮುಡಂಬಡಿತ್ತಾಯ ಅವರ ‘ಕಮ್ಯೂನಿಕೇಟ್ ಇಂಗ್ಲೀಷ್ ಮೇಡ್ ಈಜಿ’ ಪುಸ್ತಕವನ್ನು ಎರಡೂ ರೀತಿಯಲ್ಲಿ (ಓದುಪುಸ್ತಕ ಮತ್ತು ಕೇಳುಪುಸ್ತಕ) ಪ್ರಕಟಿಸಿದೆವು. ಓದುಗರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಹಾಗಾಗಿ ಈಗ ಅಂಥ ಪ್ರಯೋಗಗಳನ್ನು ನಿಲ್ಲಿಸಿದ್ದೇವೆ’
–ದೊಡ್ಡೇಗೌಡ ಆರ್., ಪುಸ್ತಕ ಪ್ರಸರಣ ವಿಭಾಗ, ಸ್ವಪ್ನ ಬುಕ್ ಹೌಸ್‌

*

‘ಕೇಳುಪುಸ್ತಕಗಳತ್ತ ಸಾಹಿತ್ಯ ಪ್ರೇಮಿಗಳು ಆಸಕ್ತಿ ತೋರಿದರೆ, ಬೇಡಿಕೆ ಕುದುರಿದರೆ, ಚರ್ಚೆ ಆರಂಭವಾದರೆ ನಾವೂ ಅಂಥ ಪ್ರಯೋಗಗಳನ್ನು ಮಾಡುತ್ತೇವೆ’
–  ‌ ಪ್ರಕಾಶ್‌ ಕಂಬತ್ತಳ್ಳಿ , ಅಂಕಿತ ಬುಕ್‌ ಹೌಸ್, ಪ್ರಕಾಶಕರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು