ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಬಂಧನದಲ್ಲಿ ಮಕ್ಕಳು ಕಲಿಯುವುದೇನಿದೆ?

Last Updated 31 ಮೇ 2020, 4:27 IST
ಅಕ್ಷರ ಗಾತ್ರ

21ನೇಶತಮಾನದ ಮಕ್ಕಳಲ್ಲಿ ಮೂರು ವಿಧ. ಮೊದಲನೆಯದು ಆಧುನಿಕತೆಯ ಸ್ಪರ್ಶದಿಂದ ಮೂಲ ನೆಲೆಯನ್ನೇ ಮರೆತಂತೆ ಬದುಕುತ್ತಿರುವ ಶ್ರೀಮಂತ ಮತ್ತು ಮಧ್ಯಮ ವರ್ಗಗಳ ಮನೆಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಮಕ್ಕಳು. ಎರಡನೆಯದು ಅತ್ಯಾಧುನಿಕ ತಂತ್ರಜ್ಞಾನದ ನಡುವೆಯೂ ನಗರಜೀವನದ ಹಿತವಲಯವನ್ನು ದೂರದಿಂದಲೇ ನೋಡುತ್ತಾ ಮರೀಚಿಕೆಯನ್ನು ಬೆನ್ನಟ್ಟುತ್ತಿರುವ ಮಕ್ಕಳು. ಮೂರನೆಯದು ಯಾವುದೇ ಹಿತವಲಯದ ಪರಿವೆಯೂ ಇಲ್ಲದೆ ನಿತ್ಯದ ಬದುಕಿಗಾಗಿ ಹೆತ್ತವರ ಕಷ್ಟದಲ್ಲಿ ಭಾಗಿಯಾಗುತ್ತಾ ಭವಿಷ್ಯದ ನಾಳೆಗಳತ್ತ ಹೆಜ್ಜೆ ಹಾಕುತ್ತಿರುವ ಮಕ್ಕಳು. ಈ ಮೂರೂ ವರ್ಗಗಳನ್ನು ಕ್ರಮವಾಗಿ ನಗರವಾಸಿ, ಪಟ್ಟಣವಾಸಿ ಮತ್ತು ಗ್ರಾಮವಾಸಿಗಳೆಂದು ವಿಂಗಡಿಸಬಹುದು.

ಕೆಲವು ಪಟ್ಟಣಗಳು ನಗರೀಕರಣದ ಸ್ಪರ್ಶ ಕಾಣುತ್ತಿವೆ. ಕೆಲವು ಗ್ರಾಮಗಳು ಪಟ್ಟಣಗಳ ಬದುಕಿಗೆ ಹತ್ತಿರವಾಗುತ್ತಿವೆ. ಇನ್ನು ಕೆಲವು ನಗರಗಳು ಆಧುನಿಕ ತಂತ್ರಜ್ಞಾನದ ಸಂವಹನ ಮತ್ತು ಸಂಪರ್ಕ ಸಾಧನಗಳ ಮೂಲಕ ಮೇಲ್ದರ್ಜೆಗೇರಿ ಮಹಾನಗರಗಳಾಗಿ ಪರಿವರ್ತನೆಯಾಗುತ್ತಿವೆ. ಈ ಮೂರೂ ವಲಯಗಳಲ್ಲಿ ಎಲ್ಲಾ ವರ್ಗಗಳ ಮಕ್ಕಳನ್ನೂ ಕಾಣಬಹುದು. ತಾತ್ವಿಕವಾಗಿ ಹದಿಹರೆಯದ ಈ ಮಕ್ಕಳಿಗೆ ಈ ವಲಯಗಳು ಅಪ್ರಸ್ತುತ. ಆದರೆ ನಾವು, ಅಂದರೆ ಆಧುನಿಕ ನಾಗರಿಕತೆಯನ್ನು ಮೈಗೂಡಿಸಿಕೊಂಡಿರುವ ಮಧ್ಯಮ ವರ್ಗ ಮತ್ತು ಮೇಲ್ ಮಧ್ಯಮ ವರ್ಗದ ಜನರು, ನಮ್ಮ ಮಕ್ಕಳಲ್ಲಿ ಇದನ್ನು ಪ್ರಸ್ತುತ ಎನಿಸುವಂತೆ ಮಾಡಿದ್ದೇವೆ.

ಮಕ್ಕಳಲ್ಲಿ ಮೂಲತಃ ಇರಬೇಕಾದ್ದು ಮುಗ್ಧತೆ. ಕನಿಷ್ಠ 10 ವರ್ಷದವರೆಗೂ ಈ ಮುಗ್ಧತೆಯನ್ನು ಮಕ್ಕಳಿಂದ ನಿರೀಕ್ಷಿಸಬಹುದು. ಆದರೆ 50-60ರ ಆಸುಪಾಸಿನಲ್ಲಿರುವವರ ಅನುಭವದ ನೆಲೆಯಲ್ಲಿ ನೋಡುವುದಾದರೆ ಕನಿಷ್ಠ 14-15 ವರ್ಷದವರೆಗೂ ಮಕ್ಕಳಲ್ಲಿ ಮುಗ್ಧತೆ ಮನೆ ಮಾಡಿರಬೇಕು. ಜ್ಞಾನ ವಿಸ್ತರಣೆಯಿಂದ, ಜ್ಞಾನಾರ್ಜನೆಯಿಂದ ಪ್ರಬುದ್ಧತೆ ಹೆಚ್ಚಾದರೂ ಮುಗ್ಧತೆ ಮಾಯವಾಗಬಾರದು ಅಲ್ಲವೇ?

10 ವರ್ಷದ ಬಾಲಕ ಅಥವಾ ಬಾಲಕಿ ಆಧುನಿಕ ತಂತ್ರಜ್ಞಾನದ ಸಾಧನ ಮತ್ತು ಸಲಕರಣೆಗಳನ್ನು ಕರಗತ ಮಾಡಿಕೊಳ್ಳುವುದನ್ನು ಜ್ಞಾನ ವಿಸ್ತರಣೆ ಎಂದು ಭಾವಿಸಲು ಸಾಧ್ಯವಿಲ್ಲ. ಇದು ಸುತ್ತಲಿನ ವಾತಾವರಣದಲ್ಲಿ ಮಕ್ಕಳು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಜ್ಞಾನವಷ್ಟೆ. ಆದರೆ, ಇಂದಿನ ಮೇಲ್ವರ್ಗದ ಸಮಾಜದಲ್ಲಿ ಇದು ಜ್ಞಾನಾರ್ಜನೆ ಎಂದೇ ಪರಿಗಣಿಸಲ್ಪಡುತ್ತದೆ. ಈ ಕಲ್ಪಿತ ಜ್ಞಾನಾರ್ಜನೆ ಅಥವಾ ಭ್ರಮೆಯೇ ಮಕ್ಕಳಲ್ಲಿನ ಮುಗ್ಧತೆ ನಾಶವಾಗಲು ಕಾರಣವೂ ಆಗುತ್ತದೆ.
ನಗರೀಕರಣಕ್ಕೊಳಗಾಗಿರುವ ಮಕ್ಕಳು ಮತ್ತು ನಗರಗಳತ್ತ ಸದಾ ಕಣ್ಣಿಟ್ಟಿರುವ ಪಟ್ಟಣಗಳಲ್ಲಿನ ಮಕ್ಕಳು ಈ ಸಂದರ್ಭದಲ್ಲಿ ತಮಗೇ ಅರಿವಿಲ್ಲದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ನಗರದ ಬದುಕು ಸೃಷ್ಟಿಸಿರುವ ಹಿತವಲಯಗಳು ಗ್ರಾಮೀಣ ಪ್ರದೇಶದ ಮಕ್ಕಳನ್ನೂ ಆಕರ್ಷಿಸುವ ರೀತಿಯಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಭ್ರಮೆ ಸೃಷ್ಟಿಸುತ್ತಿವೆ. ಮಕ್ಕಳನ್ನು ಚಲನಶೀಲರನ್ನಾಗಿ, ಕ್ರಿಯಾಶೀಲರನ್ನಾಗಿ ಮುನ್ನಡೆಸುವ ಪ್ರಕ್ರಿಯೆ ನಗರೀಕರಣದ ಸಂದರ್ಭದಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡುವುದು ಸಂವೇದನಾಶೀಲ ವಾತಾವರಣದಲ್ಲಿ. ತಮ್ಮ ಕಲಿಕೆಯ ಪ್ರಕ್ರಿಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಹೊಸ ವಿಷಯಗಳನ್ನು ಗ್ರಹಿಸುತ್ತಾ ತಮ್ಮೊಳಗಿನ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಮಕ್ಕಳು ಪ್ರಯತ್ನಿಸಬೇಕು. ಪೋಷಕರು ಈ ನಿಟ್ಟಿನಲ್ಲಿ ಅವಕಾಶಗಳನ್ನು ಒದಗಿಸಬೇಕು.

ಆದರೆ, ನಗರ ಜೀವನದ ಹಿತವಲಯದಲ್ಲಿ ಇದು ವಿಭಿನ್ನ ಆಯಾಮ ಪಡೆದುಕೊಂಡಿದೆ. ತಮ್ಮ ಮಕ್ಕಳು ದಿನವಿಡೀ ಕಲಿಕೆಯ ಚಟುವಟಿಕೆಯಿಂದಿದ್ದರೆ ಮಾತ್ರವೇ ಕ್ರಿಯಾಶೀಲರಾಗಲು ಸಾಧ್ಯ ಎನ್ನುವ ಭ್ರಮೆ ಮಧ್ಯಮ ವರ್ಗಗಳನ್ನು ಆವರಿಸಿದೆ. ಮಕ್ಕಳಿಗೆ ವಯೋಸಹಜವಾದ ಆಕಾಂಕ್ಷೆಗಳಿರುತ್ತವೆ. ಅವರದೇ ಆದ ಒಂದು ಲೋಕದಲ್ಲಿ ವಿಹರಿಸುವ ಆಸೆ ಇರುತ್ತದೆ ಎನ್ನುವುದನ್ನು ಮರೆತೇ ಹೋಗುವ ಪೋಷಕರು, ತಮ್ಮ ಬಿಡುವಿಲ್ಲದ ಚಟುವಟಿಕೆಗಳಿಗೆ ಸರಿಹೋಗುವಂತೆ ಮಕ್ಕಳನ್ನೂ ಯಾವುದೋ ಒಂದು ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತಾರೆ. ಹಾಗಾಗಿಯೇ ಪ್ರಾಥಮಿಕ ಶಿಕ್ಷಣದೊಂದಿಗೆ ಅಬಾಕಸ್, ಸಂಗೀತ, ಡ್ರಾಯಿಂಗ್, ಕರಾಟೆ, ವಾದ್ಯ ಸಂಗೀತ, ಯೋಗ ಮತ್ತು ಶಾಲೆಯ ಹೊರತಾಗಿ ಮನೆ ಪಾಠ ಇತ್ಯಾದಿ. ಇಷ್ಟನ್ನೂ ಮಕ್ಕಳು ನಿಭಾಯಿಸಬೇಕಾಗುತ್ತದೆ.

‘ನನ್ನ ಮಗನಿಗೆ ಬಿಡುವೇ ಇರೋಲ್ಲ ರೀ’ ಎಂದು ಉದ್ಗರಿಸುವ ಪೋಷಕರು ಇವಿಷ್ಟನ್ನೂ ಗಂಟೆಗೊಂದು ಚಟುವಟಿಕೆಯಂತೆ ವಿವರಿಸುತ್ತಾ ಹೋಗುವುದನ್ನು ಹಿತವಲಯಗಳಲ್ಲಿ ಕಾಣಬಹುದು. ಮಕ್ಕಳಿಗೆ ವಯೋಸಹಜವಾದ ಕ್ರೀಡೆಗಳಿರುತ್ತವೆ. ಅಪ್ಪ ಅಮ್ಮನೊಂದಿಗೆ, ಸೋದರ– ಸೋದರಿಯೊಂದಿಗೆ ಕಾಲಕಳೆಯುವ ಆಸೆ ಇರುತ್ತದೆ ಎನ್ನುವುದನ್ನು ಬಹುಪಾಲು ಪೋಷಕರು ಯೋಚಿಸುವುದೇ ಇಲ್ಲ. ಕೊರೊನಾ ಸಂದರ್ಭದಲ್ಲಿ ಬಾಹ್ಯ ಸಮಾಜದಲ್ಲಿ ಅನುಸರಿಸುತ್ತಿರುವ ದೈಹಿಕ ಅಂತರ ಈ ಕುಟುಂಬಗಳಲ್ಲಿ ದಿನನಿತ್ಯ ಕಂಡುಬರುತ್ತದೆ. ಅಡುಗೆ ಮನೆಯಲ್ಲಿ ಅಮ್ಮ ಏನ್ಮಾಡ್ತಿದ್ದಾಳೆ ಎಂದು ಕದ್ದು ನೋಡುವ ಪುಟ್ಟ ಕಣ್ಣುಗಳು, ‘ಏಯ್ ಹೋಂ ವರ್ಕ್ ಆಯ್ತಾ. ಗಿಟಾರ್ ಪ್ರಾಕ್ಟೀಸ್ ಮಾಡಿದ್ಯಾ. ಅಬಾಕಸ್ ಅಭ್ಯಾಸ ಮಾಡಿದ್ಯಾ’ ಎಂಬ ಮಾತಿನ ಬಾಣಗಳಿಗೆ ಶರಣಾಗಿ ಬಿಡುತ್ತವೆ.

ಈ ದೈಹಿಕ ಅಂತರವೇ ಮಕ್ಕಳನ್ನು ಪರದೆಗಳತ್ತ ಸೆಳೆದುಬಿಡುತ್ತದೆ. ಮನೆಯಿಂದ ಹೊರಗೆ ಆಟಗಳನ್ನು ಅಡಬಹುದು ಎಂಬ ಪರಿವೆಯೇ ಇಲ್ಲದೆ ಮಕ್ಕಳು ಬೆಳೆಯುತ್ತಿರುವುದನ್ನು ನಗರ ಜೀವನದಲ್ಲಿ ಕಾಣಬಹುದು. ಹಾಗಾಗಿ ಮಕ್ಕಳು ಟಿ.ವಿ ಅಥವಾ ಮೊಬೈಲ್ ಪರದೆಯಲ್ಲಿ ಮುಖ ಹುದುಗಿಸಲು ಆರಂಭಿಸುತ್ತಾರೆ. ಬೇಸಿಗೆ ರಜೆ ಬಂದ ಕೂಡಲೇ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಕಳುಹಿಸಲಾಗುತ್ತದೆ.

ಹರೆಯದ ಮಕ್ಕಳನ್ನು ಪರದೆಯಿಂದ ಹೊರತರುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ ಜಗತ್ತಿನಲ್ಲಿ ಅವಶ್ಯಕತೆ ಇರುವ ಎಲ್ಲವನ್ನೂ ಕೀಲಿಮಣೆಯ ಮೇಲೆ ಕೈಯ್ಯಾಡಿಸುವ ಮೂಲಕ ಪಡೆಯಬಹುದು ಎನ್ನುವ ಭ್ರಮೆಯಲ್ಲಿ ಮಕ್ಕಳು ಬೆಳೆದಿರುತ್ತಾರೆ. ಕೀಲಿಮಣೆ ಮತ್ತು ಪರದೆಯಿಂದಾಚೆಗೂ ಒಂದು ಜ್ಞಾನವಾಹಿನಿ ಇದೆ. ಜ್ಞಾನ ಶಾಖೆ ಇದೆ. ಜ್ಞಾನಾರ್ಜನೆಯ ಮಾರ್ಗ ಇದೆ ಎಂದು ಮಕ್ಕಳಿಗೆ ಹೇಳಲು ಪೋಷಕರಿಗೆ ವ್ಯವಧಾನ ಇರಬೇಕು.

ಕೋವಿಡ್‌ 19 ಈ ಬೇಸಿಗೆ ರಜೆಯು ಮಕ್ಕಳಿಗೆ ಹೊಸ ಲೋಕವನ್ನು ತೋರಿಸಿದೆ. ಪರದೆಯ ಗೀಳು ಇರುವ ಮಕ್ಕಳು ಸಹ ಕುಟುಂಬದೊಂದಿಗೆ ಆಟವಾಡುತ್ತಾ, ಹರಟೆ ಹೊಡೆಯುತ್ತಾ, ಗಲಾಟೆ ಮಾಡುತ್ತಾ ಕಾಲ ಕಳೆಯಬಹುದು ಎನ್ನುವ ವಾಸ್ತವ ಬದುಕನ್ನು ಕಂಡುಕೊಳ್ಳಲು ಕೊರೊನಾ ನೆರವಾಗಿದೆ. ಅವಕಾಶವನ್ನೂ ಬಳಸಿಕೊಳ್ಳದೆ ಸಮಯ ವ್ಯರ್ಥ ಮಾಡುವ ಮಕ್ಕಳಿಗೆ, ತಮ್ಮ ಕಣ್ಣೆದುರಿನ ಪುಟ್ಟ ಪರದೆಯಿಂದಾಚೆಗೆ ಒಂದು ಅದ್ಭುತ ಲೋಕ ಇದೆ ಎನ್ನುವುದನ್ನು ಅರ್ಥ ಮಾಡಿಸಲು ಪೋಷಕರು ಮುಂದಾಗಬೇಕು. ಓದು, ಪಠಣ, ಬರಹ, ಕಲೆ, ಕೌಶಲ, ಆಟೋಟ ಈ ಅದ್ಭುತ ಬದುಕನ್ನು ಮಕ್ಕಳಿಗೆ ಪರಿಚಯಿಸಲು ಇದು ಸಕಾಲ ಎನಿಸುವುದಿಲ್ಲವೇ? ಹೌದು ಎನಿಸಿದರೆ, ಕೋವಿಡ್‌ಗೆ ಧನ್ಯವಾದ ಅರ್ಪಿಸೋಣ. ಮತ್ತೊಮ್ಮೆ ಬರುವುದು ಬೇಡ, ನಾವು ಬದಲಾಗುತ್ತೇವೆ ಎಂದು ಹೇಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT