ಬುಧವಾರ, ಮಾರ್ಚ್ 3, 2021
20 °C

ಇ-ಕಲಿಕೆ ಡಿಸೈನರ್‌ಗೆ ಬಹು ಬೇಡಿಕೆ

ಎಸ್‌.ಜಿ.ಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಇ – ಕಲಿಕೆಯ ಕುರಿತು ಹೊಸದಾಗಿ ಹೇಳಬೇಕಾಗಿಲ್ಲ. ಈ ಮಾಹಿತಿ ಯುಗದಲ್ಲಿ ಹೊಸ ವಿಷಯಗಳ ಕಲಿಕೆಗೆ, ಕಲಿಸುವಿಕೆಗೆ ಬಹುತೇಕರು ಅವಲಂಬಿತರಾಗುವುದು ಆನ್‌ಲೈನ್‌ ಮೇಲೆ. ಯಾವುದೇ ಜಾಗದಲ್ಲಿ, ಯಾವುದೇ ಸಮಯದಲ್ಲಿ ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ನಲ್ಲಿ ಓದಿಕೊಳ್ಳುವ ಅನುಕೂಲ ಇದರಲ್ಲಿರುವುದರಿಂದ ಬಹಳ ಜನಪ್ರಿಯ ಕಲಿಕಾ ವಿಧಾನವಿದು. ಕಳೆದ ಎರಡು ವರ್ಷಗಳಲ್ಲಿ ಆಗಿರುವ ಡಿಜಿಟಲ್‌ ಕ್ರಾಂತಿಯಿಂದಾಗಿ ಕೇವಲ ನಗರಗಳಲ್ಲ, ಹಳ್ಳಿಗಳಲ್ಲೂ ಕೂಡ ಇ–ಕಲಿಕೆ ಜನಪ್ರಿಯವಾಗಿದೆ. ಕಡಿಮೆ ಬೆಲೆಗೆ ಲಭ್ಯವಿರುವ ಇಂಟರ್‌ನೆಟ್‌ ಡೇಟಾ, ಲ್ಯಾಪ್‌ಟಾಪ್‌, 5ಜಿ ಮೊಬೈಲ್‌ಗಳಿಂದಾಗಿ ಕಲಿಕೆ ಇಂದು ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೇ, ಕಂಪ್ಯೂಟರ್‌ ಪರದೆಯ ಮೇಲೆ, ಅಂಗೈನ ಮೊಬೈಲ್‌ ಮೇಲೆ ಬಂದು ಕೂತಿದೆ. 

ಇಂತಹ ಇ–ಕಲಿಕೆ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಸ್ಟಾರ್ಟ್‌ಅಪ್‌ಗಳಲ್ಲದೇ, ವಿದೇಶಿ ಕಂಪನಿಗಳು ಸಾಕಷ್ಟು ಹೂಡಿಕೆ ಮಾಡುತ್ತಿವೆ. ಹೀಗಾಗಿ ಇವುಗಳು ಆಕರ್ಷಕ ವೇತನ, ಇತರ ಸೌಲಭ್ಯವನ್ನು ನೀಡುವುದರ ಮೂಲಕ ಉದ್ಯೋಗಾಕಾಂಕ್ಷಿಗಳ ಬಾಗಿಲು ಬಡಿದಿವೆ. 

ಇ–ಶಿಕ್ಷಣದಲ್ಲಿ ಅದರಲ್ಲಿರುವ ಕಲಿಕಾ ಸಾಮಗ್ರಿ ಬಹಳ ಮುಖ್ಯ. ಹೀಗಾಗಿ ಈ ಕಲಿಕಾ ಸಾಮಗ್ರಿ ಅಥವಾ ವಿಷಯವನ್ನು ಅಭಿವೃದ್ಧಿಪಡಿಸುವುದು ಕೂಡ ಅಷ್ಟೇ ಮಹತ್ವದ್ದು. ಬರಹಗಳಲ್ಲದೇ ದೃಶ್ಯ– ಶ್ರಾವ್ಯ, ಅನಿಮೇಶನ್‌ ಮೊದಲಾದವುಗಳನ್ನು ಇಲ್ಲಿ ಬಳಸಿಕೊಳ್ಳಲಾಗುತ್ತಿದೆ. 

ಪ್ರಮುಖ ಹುದ್ದೆಗಳು

ಇದರಲ್ಲಿ ನಾಲ್ಕು ಮುಖ್ಯ ವಿಭಾಗಗಳಿದ್ದು ವಿಷಯ ತಜ್ಞ (ಎಸ್‌ಎಂಇ– ಸಬ್ಜೆಕ್ಟ್‌ ಮ್ಯಾಟರ್‌ ಎಕ್ಸ್‌ಪರ್ಟ್‌), ಸೂಚನಾ ವಿನ್ಯಾಸಕ (ಐಡಿ), ಸ್ಟೋರಿಬೋರ್ಡ್‌ ಕಲಾವಿದ (ಎಸ್‌ಬಿಎ) ಹಾಗೂ ವಿಷಯವನ್ನು ದೃಶ್ಯ ಮಾಧ್ಯಮದ ಮೂಲಕ ಅಭಿವೃದ್ಧಿಪಡಿಸುವ ತಜ್ಞ (ವಿಸಿಡಿ) ಪ್ರಮುಖವಾಗಿ ನಿರ್ವಹಣೆ ಮಾಡುವವರು.

ಇಡೀ ಇ–ಕಲಿಕಾ ವ್ಯವಸ್ಥೆ ಅಭಿವೃದ್ಧಿಪಡಿಸುವುದನ್ನು ಒಂದು ಸಿನಿಮಾ ತಯಾರಿಕೆಗೆ ಹೋಲಿಸಬಹುದು. ಎಸ್‌ಎಂಇ ಅಂದರೆ ಚಿತ್ರಕಥೆ ಬರಹಗಾರ, ಐಡಿಯನ್ನು ನಿರ್ದೇಶಕನಿಗೆ, ಎಸ್‌ಬಿಎಯನ್ನು ಸಿನಿಮಾಟೊಗ್ರಾಫರ್‌ಗೆ, ವಿಸಿಡಿಯನ್ನು ಕೊನೆಯ ಹಂತದ ಸಂಕಲನಕಾರನಿಗೆ ಹೋಲಿಸಬಹುದು.

ಯಾವುದಾದರೂ ವಿಷಯದಲ್ಲಿ ನಿಮಗೆ ಆಳವಾದ ಜ್ಞಾನವಿದ್ದರೆ, ಕಲಿಸುವುದರಲ್ಲಿ ಅನುಭವವಿದ್ದರೆ ನೀವು ವಿಷಯ ತಜ್ಞರಾಗಬಹುದು. ಯಾವ ವಿಷಯದ ಟೂಲ್‌ ಅನ್ನು ಅಭಿವೃದ್ಧಿಪಡಿಸಬೇಕಾಗಿದೆಯೋ, ಅದರ ಮೇಲೆ ಒಂದಿಷ್ಟು ಸಂಶೋಧನೆ ಮಾಡಿ ದಾಖಲಿಸಬೇಕಾಗುತ್ತದೆ. ವಿಷಯವನ್ನು ನಿಮ್ಮ ಆಸಕ್ತಿ, ಅನುಭವ, ಅದರ ಕುರಿತು ಇರುವ ಜ್ಞಾನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ನಿಮಗೆ ಆಹಾರ ಮತ್ತು ಪೌಷ್ಟಿಕಾಂಶದ ಕುರಿತು ಅಪಾರ ತಿಳಿವಳಿಕೆ ಇದೆ ಎಂದುಕೊಳ್ಳಿ. ಅದನ್ನೇ ದಾಖಲಿಸುವ ಕೆಲಸ ಆಯ್ಕೆ ಮಾಡಿಕೊಳ್ಳಬಹುದು. ದಾಖಲಿಸುವಾಗ ಎಲ್ಲಾ ಮಹತ್ವದ ವಿಷಯಗಳು ಬರುವಂತೆ ಎಚ್ಚರಿಕೆ ವಹಿಸಬೇಕು. ಜೊತೆಗೆ ಸಾಧ್ಯವಾದಷ್ಟೂ ವಿವರಗಳನ್ನು ಒಳಗೊಂಡಿರಬೇಕು. 

ವಿಷಯವನ್ನು ಕ್ರೋಢೀಕರಿಸಿ ಅಭಿವೃದ್ಧಿಪಡಿಸಿದ ಮೇಲೆ ಅದನ್ನು ಸೂಚನಾ ವಿನ್ಯಾಸಕನಿಗೆ ಹಸ್ತಾಂತರಿಸಲಾಗುತ್ತದೆ. ಈ ಸೂಚನಾ ವಿನ್ಯಾಸಕ ಅಥವಾ ಐಡಿಯ ಕೆಲಸವೆಂದರೆ ಅಭಿವೃದ್ಧಿಪಡಿಸಿದ ವಿಷಯವನ್ನು ಸರಳಗೊಳಿಸುವುದು. ಅದನ್ನು ಹಲವು ವಿಭಾಗ, ಉಪ ವಿಭಾಗಗಳನ್ನಾಗಿ ಮಾಡಿ ವಿಂಗಡಿಸುವುದು. ವಿಷಯದ ಹರಿವು ಹೇಗಿರುತ್ತದೆಂದರೆ ವಿಡಿಯೊದಲ್ಲಿ ಪರದೆಯ ಮೇಲೆ ಕಾಣಿಸುವ ಬರಹಗಳು, ಹಿನ್ನೆಲೆ ಧ್ವನಿ, ಅಡಿ ಟಿಪ್ಪಣಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಪರೀಕ್ಷೆ, ಅಸೈನ್‌ಮೆಂಟ್‌ಗಳನ್ನು ಕೂಡ ವಿಡಿಯೊದಲ್ಲಿ ಅಳವಡಿಸಬೇಕಾಗುತ್ತದೆ. ಇವು ಬಳಕೆದಾರನ ಜ್ಞಾನವನ್ನು ಅಳೆಯುವ ಸಾಧನಗಳು.

ಐಡಿ ವಿಷಯವನ್ನು ದಾಖಲಿಸಿದ ನಂತರ ಇದಕ್ಕೆ ಇನ್ನಷ್ಟು ದೃಶ್ಯಗಳನ್ನು, ಟಿಪ್ಪಣಿಗಳನ್ನು ಸೇರಿಸುವ ಕೆಲಸ  ಸ್ಟೋರಿಬೋರ್ಡ್‌ ಕಲಾವಿದನದ್ದು. ಅಂದರೆ ವಿಡಿಯೊದ ಗುಣಮಟ್ಟವನ್ನು ಸುಧಾರಿಸುವುದು. ವಿಡಿಯೊ ಟಿಪ್ಪಣಿಗಳ ಬಗ್ಗೆ ಕಲಾವಿದನಿಗೆ ಪರಿಪೂರ್ಣ ತಿಳಿವಳಿಕೆ ಇರಬೇಕು. ವಿಷಯ ತಜ್ಞ ದಾಖಲಿಸಿದ ವಿಷಯಕ್ಕೆ ಅನುಗುಣವಾಗಿ, ಬೇಡಿಕೆಗೆ ತಕ್ಕಂತೆ ಹೊಂದಾಣಿಕೆ ಮಾಡಬೇಕಾಗುತ್ತದೆ.

ವಿಡಿಯೊದಲ್ಲಿ ವಿಷಯವನ್ನು ಅನುಕ್ರಮವಾಗಿ ಜೋಡಿಸುವುದು ವಿಸಿಡಿಯ ಕೆಲಸ. ಅನಿಮೇಶನ್‌, ವಿಡಿಯೊ ತಯಾರಿಕೆ, ಸಂಕಲನದ ಬಗ್ಗೆ ತಿಳಿವಳಿಕೆ ಇದ್ದರೆ ಉದ್ಯೋಗಕ್ಕೆ ನೀವು ಸೇರಿಕೊಳ್ಳಬಹುದು. ಅಂತಿಮ ಉತ್ಪನ್ನವು ವಿಸಿಡಿಯ ಕೌಶಲ್ಯವನ್ನು ಅವಲಂಬಿಸಿದೆ. ಅವಶ್ಯಕತೆಯಿದ್ದಲ್ಲಿ ವಿಷಯವನ್ನು ಹೈಲೈಟ್‌ ಮಾಡಬೇಕಾಗುತ್ತದೆ.

ಈ ನಾಲ್ಕು ಪ್ರಮುಖ ವಿಭಾಗಗಳ ಹೊರತಾಗಿ ಇ–ಕಲಿಕೆಯಲ್ಲಿ ಮಾರಾಟ ವಿಭಾಗ, ಉತ್ಪನ್ನ ಮತ್ತು ವೆಬ್‌ಸೈಟ್‌ ಅಭಿವೃದ್ಧಿ ವಿಭಾಗಗಳಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಹುಡುಕಿಕೊಳ್ಳಬಹುದು. 

ಕೋರ್ಸ್‌ ಮತ್ತು ತರಬೇತಿ

ಇ–ಕಲಿಕೆ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಅಧಿಕೃತ ಐಡಿ (ಇನ್‌ಸ್ಟ್ರಕ್ಷನಲ್‌ ಡಿಸೈನ್‌) ಪದವಿ ಇದ್ದರೆ ಒಳಿತು. ಇಲ್ಲದಿದ್ದರೂ ಪರವಾಗಿಲ್ಲ, ಕಾಲೇಜಿನಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದ ನಂತರ ಐಡಿ ವಿಷಯದಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಮಾಡಬಹುದು. ಇದನ್ನೂ ಇ– ಕಲಿಕೆಯಲ್ಲೇ ಮಾಡಬಹುದು.

ಒಂದಿಷ್ಟು ಪ್ರಾಯೋಗಿಕ ಅನುಭವ ಪಡೆಯಿರಿ. ಸ್ವಯಂ ಸೇವಾ ಸಂಸ್ಥೆ, ಆಸ್ಪತ್ರೆ.. ಹೀಗೆ ಒಂದಿಷ್ಟು ಕಡೆ ಉಚಿತವಾಗಿ ಮಾದರಿಯನ್ನು ಮಾಡಿಕೊಟ್ಟರೂ ಪರವಾಗಿಲ್ಲ, ನಿಮಗೆ ಅನುಭವವಂತೂ ಸಿಗುತ್ತದೆ.

 ಜೊತೆಗೆ ಇ–ಕಲಿಕೆಯ ಸಾಫ್ಟ್‌ವೇರ್‌ ಬಳಸುವುದನ್ನು ಕಲಿಯಬಹುದು. ಇ–ವಿನ್ಯಾಸ ಅಥವಾ ಗ್ರಾಫಿಕ್‌ ವಿನ್ಯಾಸದ ಬಗ್ಗೆ ಮೂಲಭೂತ ತಿಳಿವಳಿಕೆ ಇದ್ದರೆ ಸಾಕು. ಯುಎಕ್ಸ್‌ ವಿನ್ಯಾಸದ ಬಗ್ಗೆ ಒಳ್ಳೆಯ ಪುಸ್ತಕಗಳೂ ಲಭ್ಯ. ವಿಡಿಯೊ, ಇಮೇಜ್‌ ಮತ್ತು ಆಡಿಯೊ ಬಗ್ಗೆ ವೈವಿಧ್ಯಮಯ ಮಾಹಿತಿ ಕೂಡಾ ಸಿಗುತ್ತದೆ. 

ಜಾವಾಸ್ಕ್ರಿಪ್ಟ್‌, ವೆಬ್‌ ಪ್ರೋಗ್ರಾಮಿಂಗ್‌, ಎಚ್‌ಟಿಎಂಎಲ್‌5 ಬಗ್ಗೆ ಒಂದಿಷ್ಟು ತರಬೇತಿ ಪಡೆದುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ ಇ–ಕಲಿಕೆ ವೆಬ್‌ಸೈಟ್‌, ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಸೂಕ್ಷ್ಮವಾಗಿ ಅವಲೋಕಿಸಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.