ಬದುಕಿನ ಹೂ ಅರಳಲು ಬೇಕು ಶಿಕ್ಷಣ

7

ಬದುಕಿನ ಹೂ ಅರಳಲು ಬೇಕು ಶಿಕ್ಷಣ

Published:
Updated:

ನಿದ್ದೆಗಣ್ಣಲ್ಲೇ ಮೊಬೈಲ್‌ಗೆ ತಡಕಾಡುವ ಕೈಗಳು, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸಂದೇಶಗಳು, ದೇಶೀಯ–ವಿದೇಶಿಯ ಸುದ್ದಿ–ಸಮಾಚಾರಗಳನ್ನು ನವಮಾಧ್ಯಮಗಳಲ್ಲಿ ಓದುತ್ತಾ, ನೋಡುತ್ತಾ ಬೆಳಗಾಗುತ್ತದೆ ನನಗೆ.

ಮದುವೆಯಾದ ಮೇಲೆ ಅನಾರೋಗ್ಯದ ದಿನಗಳನ್ನು ಬಿಟ್ಟರೆ ಅಡುಗೆಮನೆಯಲ್ಲಿ ತಿಕ್ಕುವ, ತೊಳೆಯುವ, ಉಜ್ಜುವ, ತಟ್ಟುವ ಕೆಲಸದಲ್ಲಿಯೇ ಬೆಳಗು ಕಾಣುವವಳು ನನ್ನ ಹೆತ್ತ ಆಯಿ.

ಅಕ್ಕನೂ ಗೃಹಿಣಿಯೇ; ಆದರೆ ಆಕೆಗೆ ಬೆಳಿಗ್ಗೆ 10 ಗಂಟೆಯವರೆಗೂ ಕಾಲುಚಾಚಿ ಮಲಗಬೇಕೆನ್ನಿಸಿದರೆ ಸ್ವಿಗ್ಗಿಯಲ್ಲೊ, ಜೊಮ್ಯಾಟೊದಲ್ಲಿ ತಿಂಡಿ ಆರ್ಡರ್ ಮಾಡಿ ಮುಸುಕು ಮುಚ್ಚಿಕೊಳ್ಳುತ್ತಾಳೆ. ಆಯಿ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದರೂ ಇವೆಲ್ಲ ಮಾಡಲು ಆಕೆಗೆ ತಿಳಿಯದು. ಕಾರಣವಿಷ್ಟೆ, ಆಕೆ ಶಿಕ್ಷಣವಂಚಿತೆ. ಕನ್ನಡವನ್ನು ನಿಧಾನವಾಗಿ ಓದಬಲ್ಲಳು ಮತ್ತು ಬರೆಯಬಲ್ಲಳು. ಆದರೆ ತಂತ್ರಜ್ಞಾನ, ವಿಜ್ಞಾನ, ಬದುಕಿನ ಅವಕಾಶಗಳ ಬಗ್ಗೆ ನಮ್ಮಷ್ಟು ಅರಿವಿಲ್ಲ. ಮನೆಬಿಟ್ಟು ಹೊರಬಂದರೆ ಆಕೆಯ ಸಹಾಯಕ್ಕೆ ಇನ್ನೊಂದು ಕೈ ಬೇಕು.

‘ನಿನ್ ಗಂಡ ನಂಗೆ ಹೆಂಗೆ ಅಪ್ಪ..?’ ‘ಬಾ ಈಗ್ಲೇ ಗುಮ್ಮನ ತೋರ್ಸು..’ ಎಂದು ಎಡಬಿಡದೆ ಆಯಿಯ ಜೀವ ಹಿಂಡಿದಾಗ ನನ್ನ ಮೈ ಮೇಲೆ ಬಾಸುಂಡೆಗಳೆದ್ದಿದ್ದವು. ನನ್ನ ಮನವೊಲಿಸುವ ರಮಿಸುವ ಸಾಧ್ಯತೆಗಳ ಕುರಿತಾದ ಪೂರಕ ಶಿಕ್ಷಣ ಆಕೆಗಿಲ್ಲ. 1955ರ ಹಿಂದೂ ವಿವಾಹ ಕಾಯ್ದೆ ಇದ್ದರೂ 1980ರಲ್ಲಿ 14ನೇ ವಯಸ್ಸಿಗೆ ಮದುವೆಯಾಗಿ 26 ವಯಸ್ಸಿಗಾಗಲೇ ಮೂರು ಮಕ್ಕಳನ್ನು ಹೆತ್ತವಳು ಅವಳು.

ಇಂದು ನನಗೆ 27 ಆದರೂ ವರನ ಆಯ್ದುಕೊಳ್ಳುವ ವಿಚಾರದಲ್ಲಿ ನನ್ನ ಅಭಿಪ್ರಾಯಕ್ಕೆ ಬೆಲೆಯಿದೆ; ನನಗೆ ನನ್ನದೇ ಆದ ಬೇಡಿಕೆಗಳಿವೆ; ಅದನ್ನು ಕೇಳುವ ಹಕ್ಕಿನ ಕುರಿತಾದ ಅರಿವಿದೆ ಎಂದರೆ ಕಾರಣ ಶಿಕ್ಷಣ.

ಔಪಚಾರಿಕ ಶಿಕ್ಷಣದ ಗಂಧಗಾಳಿಯು ಇರದ ಅಜ್ಜಿಯ ಮುಂದೆ ಯಾವುದಾದರೂ ಕಾರಣಕ್ಕೆ ಹಟ ಹಿಡಿದರೆ ಸಾಕಿತ್ತು, ‘ನೀ ಶಾಲೆಗೆ ಹೋಗ್ತೀಯಲ್ಲ, ಹಿಂಗೆಲ್ಲ ಹಟ ಮಾಡ್ಬಾರ್ದು ಅಂತ ಶಾಲೇಲಿ ಹೇಳ್ಕೊಡ್ತಾರೋ ಇಲ್ವೋ’ ಎನ್ನೋಳು. ಅವಳ ಅರ್ಥದಲ್ಲಿ ಬದುಕಿನ ಸರಿ ತಪ್ಪುಗಳ ಕುರಿತಾಗಿ ತಿಳಿವಳಿಕೆ ಮೂಡುವುದೆಂದರೆ ಅದು ಔಪಚಾರಿಕ ಶಿಕ್ಷಣದಿಂದ ಎಂಬ ನಂಬಿಕೆ. ಆಕೆಯ ಮಾತುಗಳು ಅಕ್ಷರಶಃ ಸತ್ಯ. ಅದೇ ಕಾರಣಕ್ಕೆ ಶಿಕ್ಷಣ ಸಂವಿಧಾನದಲ್ಲಿ ಮೂಲಭೂತ ಹಕ್ಕಿನ ಮಾನ್ಯತೆಯಿದೆ. ಅಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲ. ಔಪಚಾರಿಕ ಶಿಕ್ಷಣ ಅನೌಪಚಾರಿಕ ಶಿಕ್ಷಣಕ್ಕೆ ನಿಶ್ಚಿತ ಆಕಾರ ನೀಡುತ್ತದೆ.

ನಲವತ್ತು ವರ್ಷ ಅಡುಗೆಮನೆಯಲ್ಲಿ ಬೆಂದ ಆಯಿಗಿಂತ ಒಂದೈದು ಬಗೆ ತಿಂಡಿಗಳನ್ನು ನಾನು ಹೆಚ್ಚು ಕಲಿತಿದ್ದೇನೆ; ಅಡುಗೆಮನೆಯ ಎಲ್ಲಾ ಸಾಮಗ್ರಿಗಳ ಆರೋಗ್ಯಕರ ಉಪಯೋಗಗಳು ನನಗೆ ತಿಳಿದಿದೆ ಎಂದರೆ ಅದು ನನ್ನ ಶಿಕ್ಷಣದ ಘಮ. ಮಳೆಗಾಲದಲ್ಲಿ ಉಪ್ಪು ಯಾಕೆ ನೀರಾಗತ್ತೆ, ನಿಂಬೆಶರಬತ್ತಿಗೆ ಅದರ ಬೀಜ ಬಿದ್ರೆ ಯಾಕೆ ಹುಳಿ ಎಂಬುದಕ್ಕೆ ಆಕೆಗೆ ವೈಜ್ಞಾನಿಕ ಉತ್ತರ ತಿಳಿಯದು. ನನಗೆ ನೆನಪಿನಲ್ಲಿಲ್ಲದಿದ್ದರೂ ಗೂಗಲ್‌ನ ಉತ್ತರವನ್ನು ನಾನು ಕಾಪಿ ಮಾಡಿ ಹೇಳಬಲ್ಲೆ ಅದು ನನ್ನ ಶೈಕ್ಷಣಿಕ ಕಲಿಕೆಯ ಪರಿಣಾಮ. 

ಊರಿನ ಗದ್ದೆಯ ಹೂಳಿನಲ್ಲಿ ನನ್ನ ಕಾಲುಗಳು ಮಳೆಗಾಲದಲ್ಲಿ ದಿನಕ್ಕೆ ಏಳು ತಾಸುಗಳು ಹುಗಿದಿಲ್ಲ, ಬಾಲ್ಯದಲ್ಲೇ ನನ್ನ ಕೊರಳಿಗೆ ಮಾಂಗಲ್ಯ ಉರುಳಾಗಿಲ್ಲ, ಅಡುಗೆಮನೆಯ ಕೆಲಸಮಾಡಿಯೇ ನನ್ನ ಉಗುರುಗಳು ಸವೆದಿಲ್ಲ, ಕೊಟ್ಟಿಗೆಯ ಸಗಣಿ ಮತ್ತು ಮನೆ ಹೊರಗಿನ ಮಣ್ಣಿಗೆ ನನ್ನ ಕಾಲುಗಳು ಬಿರಿದಿಲ್ಲ, ತಿಂಗಳಿಗೆ ಮೂರು ದಿನಗಳನ್ನು ಮನೆಯ ಹೊರ ಜಗುಲಿಯಲ್ಲಿ ನಾನು ಕಳೆದಿಲ್ಲ ಎಂದರೆ ಅದಕ್ಕೆ ಕಾರಣ ಶಿಕ್ಷಣ. ಅದು ನನಗೆ ನೀಡಿದ ಜ್ಞಾನ ಮತ್ತು ವೈಜ್ಞಾನಿಕ ತಿಳಿವಳಿಕೆ; ಅದರಿಂದ ತೆರೆದುಕೊಂಡ ವಿಭಿನ್ನ ಅವಕಾಶಗಳು.

ಅದರ ಜೊತೆಗೆ ಕೃಷಿ ಕೀಳಲ್ಲ, ಅಡುಗೆಮನೆ ಕೆಲಸ ನಿರುದ್ಯೋಗಿ ಹೆಣ್ಣಿನದ್ದಲ್ಲ, ಕೂಲಿಯೊಬ್ಬ ಕನಿಷ್ಠನಲ್ಲ, ವೃದ್ಧರು ನಿಷ್ಪ್ರಯೋಜಕರಲ್ಲ, ಕಾನೂನಿನ ಚೌಕಟ್ಟಿನಡಿಯ ಯಾವೊಂದು ಕೆಲಸವೂ ಕೀಳಲ್ಲ – ಎಂಬ ಮಾನವೀಯ ಮತ್ತು ವೈಚಾರಿಕ ನೆಲೆಯ ಚಿಂತನೆಯನ್ನು ಬೆಳೆಸಿದ್ದು, ಮತ್ತು ನನ್ನನ್ನು ನಾನು ಈ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯದಂತೆ ಮಾಡಿದ್ದು ನನ್ನ ಉದಾತ್ತ ಶಿಕ್ಷಣ.

ನನ್ನ ಕನಸಿಗೆ ಪರಿಧಿಯನ್ನು ವಿಸ್ತರಿಸಿದ್ದು, ಸಾಮಾಜಿಕ, ರಾಜಕೀಯ, ವೃತ್ತಿ ಅವಕಾಶಗಳ ಅರಿವು, ಬದುಕಿನ ಮುಂದಿರುವ ಸವಾಲುಗಳಿಗೆ ಜವಾಬು, ಸೃಜನಾತ್ಮಕ ಚಿಂತನೆ ಮತ್ತು ಬಾಳ್ವೆ, ವೃತ್ತಿಕೌಶಲ, ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿ, ಸಮಾನತೆ, ಸಮಾನ ಅವಕಾಶ, ಬದುಕಿನ ಗುರಿ, ಒಂದೇ ವಿಚಾರದೆಡೆಗೆ ವಿವಿಧ ದೃಷ್ಟಿಕೋನ, ಸಾಮಾಜಿಕ ತಿಳಿವಳಿಕೆ – ಇವೆಲ್ಲದರ ಅರಿವನ್ನು ಮೂಡಿಸಿದ್ದು ಶಿಕ್ಷಣ. ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಅಕ್ಷರಗಳಿಂದ. ನನ್ನ ಜ್ಞಾನದ ಹಸಿವನ್ನು ತಣಿಸಲು ನನ್ನನ್ನು ಇತರರೊಂದಿಗೆ ಬೆರೆತು ಮಾತನಾಡುವ ಧೈರ್ಯ ನೀಡಿದ್ದು, ನನ್ನ ಕುತೂಹಲವನ್ನು ತಣಿಸಿದ್ದೇ ಶಿಕ್ಷಣ. ಬದುಕಿನ ಹೂ ಅರಳಲು, ಅರಳಿದ ಹೂ ಕಂಪ ಸೂಸಲು ಸತ್ವ ನೀಡುವುದು ಶಿಕ್ಷಣ. 

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !