ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಗ್ರಂಥಾಲಯಕ್ಕೂ ಬೇಕು ಡಿಜಿಟಲ್‌ ಸ್ಪರ್ಶ

Last Updated 19 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಹಿಂದೆ ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಗ್ರಂಥಾಲಯಗಳಲ್ಲಿ ಕಳೆಯುತ್ತಿದ್ದರು. ಮಾಹಿತಿ ತಂತ್ರಜ್ಞಾನದಲ್ಲಿ ಆದ ಕ್ರಾಂತಿ ಮತ್ತು ಸ್ಮಾರ್ಟ್ ಫೋನ್‌ಗಳ ಯುಗದಲ್ಲಿ ಈಗ ನಮಗೆ ಬೇಕಾಗುವ ಮಾಹಿತಿ ನಮ್ಮ ಬೆರಳು ತುದಿಯಲ್ಲಿಯೇ ಲಭ್ಯವಿದೆ. ನಮ್ಮ ಮೊಬೈಲಲ್ಲಿ ಗೂಗಲ್ ಸರ್ಚ್ ಮಾಡಿ ನಮಗೆ ಬೇಕಾದ ಮಾಹಿತಿ ಹುಡುಕುವುದು ಸುಲಭವಾಗಿರಬಹುದು ಆದರೆ ಮಾಹಿತಿ ಸ್ಫೋಟದ ಪರಿಣಾಮದಿಂದಾಗಿ ಒಂದು ವಿಷಯದ ಕುರಿತು ನಿಖರ ಮತ್ತು ನಿರ್ದಿಷ್ಟ ಮಾಹಿತಿ ಪಡೆಯುವುದು ತುಂಬಾ ಸವಾಲಿನ ಕೆಲಸವಾಗಿದೆ.

ಯಾವುದೇ ಸಾಮಾನ್ಯ ಮಾಹಿತಿಗಾಗಿ ಜಾಲತಾಣದಲ್ಲಿ ಸರ್ಚ್ ಮಾಡಿದಾಗ ಸಾವಿರಾರು ಫಲಿತಾಂಶಗಳು ನಮ್ಮ ಮುಂದೆ ಬಂದು ಬೀಳುತ್ತವೆ.

ಒಬ್ಬ ಸಂಶೋಧನಾ ವಿದ್ಯಾರ್ಥಿಯಾಗಿ ಅಂತರ್ಜಾಲದಲ್ಲಿ ತನಗೆ ಬೇಕಾಗಿರುವ ಮಾಹಿತಿ ಏನು ? ಅದು ಎಲ್ಲಿ ದೊರೆಯುತ್ತದೆ? ಅದನ್ನು ಲಕ್ಷಗಟ್ಟಲೆ ಪುಟಗಳಿರುವ ಡಿಜಿಟಲ್ ಮಹಾಸಾಗರದಲ್ಲಿ ಹೇಗೆ ಕೆದಕಿ ತೆಗೆಯಬೇಕು ? ದೊರೆತ ಮಾಹಿತಿಯ ಪರಾಮರ್ಶೆ ನಡೆಸುವ ರೀತಿ ಇತ್ಯಾದಿಗಳ ಕುರಿತು ಸ್ಪಷ್ಟತೆ ಇರುವುದು ತುಂಬಾ ಮುಖ್ಯವಾಗಿರುತ್ತದೆ. ಈ ಕೌಶಲವನ್ನು ಮಾಹಿತಿ ತಂತ್ರಜ್ಞಾನದ ಭಾಷೆಯಲ್ಲಿ ‘ಡಿಜಿಟಲ್ ಸಾಕ್ಷರತೆ’ (ಇನ್‌ಫಾರ್ಮೇಷನ್‌ ಲಿಟರಸಿ) ಎಂದು ಕರೆಯಲಾಗುತ್ತದೆ.

ನಿತ್ಯ ಬದಲಾಗುತ್ತಿರುವ ಡಿಜಿಟಲ್‌ ಯುಗದಲ್ಲಿ ಗ್ರಂಥಪಾಲಕರ ಮತ್ತು ಗ್ರಂಥಾಲಯಗಳ ಕಾರ್ಯ ಸ್ವರೂಪ ಸಹ ಬದಲಾಗಿದ್ದು ಈಗ ಅವುಗಳನ್ನು ಡಿಜಿಟಲ್‌ ಗ್ರಂಥಾಲಯಗಳೆಂದು ಕರೆಯಲಾಗುತ್ತದೆ.

ಹೆಚ್ಚಿನ ಕಾಲೇಜು ಮತ್ತು ಮಹಾವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿ ಮತ್ತು ಗ್ರಂಥಪಾಲಕರ ಸಂಬಂಧ ‘ನಿಮ್ಮಲ್ಲಿ ಈ ಪುಸ್ತಕ ಇದೆಯಾ ?’ ಎಂಬ ಪ್ರಶ್ನೆಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ , ಆನ್ ಲೈನ್ ನಿಯತಕಾಲಿಕಗಳು ಮತ್ತು ಡೇಟಾಬೇಸ್‌ ಹೊಂದಿರುವ ಡಿಜಿಟಲ್‌ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿ – ಪ್ರಾಧ್ಯಾಪಕರು ಹಾಗೂ ಗ್ರಂಥಪಾಲಕರ ನಡುವೆ ಉತ್ತಮ ಸಂವಹನ ಇರುವುದು ತುಂಬಾ ಅವಶ್ಯಕ.

ಶೈಕ್ಷಣಿಕ ಸಂಸ್ಥೆಗಳ ಗ್ರಂಥಪಾಲಕರಿಗಿರುವ ಸವಾಲುಗಳು

1. ಸಂಪನ್ಮೂಲಗಳ ಕ್ರೋಢಿಕರಣ ಮತ್ತು ವರ್ಗೀಕರಣ: ಒಬ್ಬ ಗ್ರಂಥಪಾಲಕನಿಗೆ ತಾನಿರುವ ಸಂಸ್ಥೆಗೆ ಅವಶ್ಯಕವಿರುವ ಮಾಹಿತಿ ಸಂಪನ್ಮೂಲಗಳ ಸ್ಪಷ್ಟ ಚಿತ್ರಣವಿದ್ದಲ್ಲಿ ಅದಕ್ಕೆ ತಕ್ಕ ಗ್ರಂಥಾಲಯ ಅಭಿವೃದ್ಧಿಪಡಿಸುವುದು ಕಷ್ಟವಾಗುವುದಿಲ್ಲ. ಖಂಡಿತವಾಗಿ ಗ್ರಂಥಾಲಯಗಳಿಗೆ ಬಜೆಟ್ ಕಡಿತ ಹಾಗೂ ಸಿಬ್ಬಂದಿ ಕಡಿತದಂತಹ ಸಮಸ್ಯೆಗಳು ಈಗ ಸಾಮಾನ್ಯ. ಆದರೆ ಇತ್ತೀಚಿಗೆ ಅಂತರ್ಜಾಲದಲ್ಲಿ ವಿಜ್ಞಾನ, ಇತಿಹಾಸ, ತಂತ್ರಜ್ಞಾನ, ಕಲೆ, ಸಾಹಿತ್ಯ ಹಾಗೂ ಇತರ ಎಲ್ಲಾ ವಿಷಯಗಳ ಕುರಿತು ಇ–ಬುಕ್ಸ್‌, ಡೇಟಾಬೇಸ್‌ ಮತ್ತು ಜರ್ನಲ್ಸ್‌ ಹೀಗೆ ಹಲವಾರು ಸಂಪನ್ಮೂಲಗಳು ಉಚಿತವಾಗಿ ಲಭ್ಯವಿದ್ದು ಅವುಗಳ ಪ್ರಯೋಜನ ಪಡೆಯಬಹುದು.

2. ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರೊಂದಿಗೆ ಸಂವಹನ ಕೊರತೆ: ಇವತ್ತಿಗೂ ಹೆಚ್ಚಿನ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವುದು ಪರಸ್ಪರ ಭೇಟಿಯಾಗಲಿಕ್ಕೆ ಮಾತ್ರ. ವಿದ್ಯಾರ್ಥಿ ಮತ್ತು ಗ್ರಂಥಪಾಲಕರ ನಡುವಿನ ಸಂವಹನ ಕೊರತೆಯಿಂದಾಗಿ ಗ್ರಂಥಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಗೊತ್ತಾಗುವುದೆ ಇಲ್ಲ. ಅದೇ ರೀತಿ ಪ್ರಾಧ್ಯಾಪಕರು ಸಹ ಗ್ರಂಥಾಲಯಗಳ ಉಪಯೋಗ ಪಡೆದುಕೊಳ್ಳುವುದು ತುಂಬಾ ಕಡಿಮೆ. ಸ್ಮಾರ್ಟ್ ಫೋನ್ ಪೀಳಿಗೆಯ ಈ ಯುಗದಲ್ಲಿ ಗ್ರಂಥಾಲಯಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದಲ್ಲಿ ಗ್ರಂಥಪಾಲಕರೇ ವಿದ್ಯಾರ್ಥಿಗಳಿರುವಲ್ಲಿ ಹೋಗಬೇಕು. ಈ ನಿಟ್ಟಿನಲ್ಲಿ ಕೆಲವು ವಿನೂತನ ಪ್ರಯೋಗಗಳನ್ನು ಮಾಡವುದು ಅನಿವಾರ್ಯ.

* ಪ್ರಥಮವಾಗಿ ಕಾಲೇಜಿನ ಪ್ರಾಧ್ಯಾಪಕರಿಗೆ ಗ್ರಂಥಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ನೀಡುವುದು. ಅವರು ಕಲಿಸುವ ವಿಷಯಗಳ ಕುರಿತು ಗ್ರಂಥಾಲಯದಲ್ಲಿ ಹೊಸದಾಗಿ ಬರುವ ಪುಸ್ತಕ ಮತ್ತು ನಿಯತಕಾಲಿಕಗಳ ಕುರಿತು ಮಾಹಿತಿ ನೀಡುವುದು. ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸುವಂತೆ ಕೇಳಿಕೊಳ್ಳುವುದು.

* ಶೈಕ್ಷಣಿಕ ವರ್ಷದ ಆರಂಭದಲ್ಲಿ ಬರುವ ಹೊಸ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಪರಿಚಯ ಮತ್ತು ಅದರ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತಹ ತರಬೇತಿ ನೀಡುವುದು. ವಿಶೇಷವಾಗಿ ಡಿಜಿಟಲ್ ಡೇಟಾಬೇಸ್‌ ಮತ್ತು ಆನ್‌ಲೈನ್ ನಿಯತಕಾಲಿಕಗಳನ್ನು ಬಳಸುವ ತರಬೇತಿ ನೀಡುವುದು. ಸಾಧ್ಯವಾದಲ್ಲಿ ಸಂಸ್ಥೆಯ ವೆಬ್ ಸೈಟ್ ನಲ್ಲಿ ಗ್ರಂಥಾಲಯ ವಿಭಾಗದಲ್ಲಿ ಇದರ ಕುರಿತು ವಿಡಿಯೋ ಮತ್ತು FAQ ಗಳನ್ನು ಒದಗಿಸುವುದು.

* ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸೆಮಿನಾರ್ ಸಿಧ್ದತೆಗೆ ಮತ್ತು ಪ್ರಾಜೆಕ್ಟ್‌ ಪೂರ್ಣಗೊಳಿಸಲು ಸಹಾಯ ಮಾಡುವುದು.

* ಸಂಶೋಧನಾ ವಿದ್ಯಾರ್ಥಿಗಳಾಗಿದ್ದರೆ ಮೇಲೆ ತಿಳಿಸಿದಂತೆ ಡಿಜಿಟಲ್ ಸಾಕ್ಷರತೆ ತುಂಬಾ ಅವಶ್ಯಕವಾಗುತ್ತದೆ. ಅಂತರ್ಜಾಲ ಅಥವಾ ಡೇಟಾಬೇಸ್‌ ಉಪಯೋಗಿಸಿ ಸರಿಯಾದ ಮಾಹಿತಿ ಹುಡುಕಲು ಮತ್ತು ಅವುಗಳ ಮೂಲ ತಿಳಿದು ಪರಾಮರ್ಶಿಸಲು ಸಹಾಯ ಮಾಡುವುದು. ಮುಖ್ಯವಾಗಿ ಕೃತಿ ಚೌರ್ಯದ ಕುರಿತು ತಿಳಿವಳಿಕೆ ಮೂಡಿಸುವುದು.

ಇದನ್ನೆಲ್ಲಾ ಸಮರ್ಥವಾಗಿ ನಿರ್ವಹಿಸುವ ಪ್ರತಿಭೆ ಗ್ರಂಥಪಾಲಕರಲ್ಲಿದೆಯೆಂಬ ವಿಶ್ವಾಸ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರಲ್ಲಿ ಬಂದಾಗ ಮಾತ್ರ ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT