ಬುಧವಾರ, ಜುಲೈ 28, 2021
28 °C
ಜಯಂತಿಗಳ ರಜೆ ಬೇಡ ಎಂದು ಶಿಫಾರಸು

ಎಂಜಿನಿಯರಿಂಗ್ ಕೋರ್ಸ್‌ ಪರೀಕ್ಷೆ ಬೇಗ ಮುಗಿಸಿ: ಪ್ರೊ. ಎಂ.ಆರ್.ದೊರೆಸ್ವಾಮಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಂಜಿನಿಯರಿಂಗ್‌ ಪದವಿಯ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳು ಹಾಗೂ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಬಾಕಿ ಇರುವ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರು ಶಿಫಾರಸು ಮಾಡಿದ್ದಾರೆ.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿ ಏಳು ಪ್ರಮುಖ ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಅವರು ಸಲ್ಲಿಸಿದರು.

ಎಂಜಿನಿಯರಿಂಗ್‌ ಕೋರ್ಸ್‌ನಲ್ಲಿ ಬ‌ಹುತೇಕ ವಿದ್ಯಾರ್ಥಿಗಳು ಉದ್ಯೋಗಗಳಿಗೆ ಆಯ್ಕೆಯಾಗಿರುತ್ತಾರೆ. ಆದ್ದರಿಂದ ಅವರಿಗೆ ಉತ್ತೀರ್ಣತೆಯ ಪ್ರಮಾಣ ಪತ್ರ ಅಗತ್ಯವಿರುತ್ತದೆ. ಈ ಕಾರಣಕ್ಕಾಗಿ ಬೇಗ ಪರೀಕ್ಷೆಗಳನ್ನು ಮುಗಿಸಬೇಕು ಎಂದು ಸಲಹೆ ನೀಡಿದರು.

ಜಯಂತಿಗಳಿಗೆ ರಜೆ ಬೇಡ: ಗಾಂಧಿ ಜಯಂತಿ ಸೇರಿದಂತೆ ಎಲ್ಲ ಗಣ್ಯ ವ್ಯಕ್ತಿಗಳು ಮತ್ತು ಮಹನೀಯರ ಜಯಂತಿಗಳಿಗೆ ಶಾಲಾ– ಕಾಲೇಜುಗಳಿಗೆ ರಜೆ ನೀಡುವುದರ ಬದಲು ಅರ್ಥಪೂರ್ಣ ಆಚರಣೆ ನಡೆಸಬೇಕು ಎಂದೂ ಶಿಫಾರಸು ಮಾಡಿದರು.

ವಿದ್ಯಾರ್ಥಿಗಳಿಗೆ ರಜೆ ನೀಡುವುದರ ಬದಲು, ಶಾಲಾ– ಕಾಲೇಜುಗಳಲ್ಲಿ ಅಂತಹ ಗಣ್ಯ ವ್ಯಕ್ತಿಗಳ ಕುರಿತು ಉಪನ್ಯಾಸ, ಕಾರ್ಯಾಗಾರ ಆಯೋಜಿಸಿ ಹೆಚ್ಚಿನ ಅರಿವು ಮೂಡಿಸಬೇಕು. ಇದರಿಂದ ವಿದ್ಯಾರ್ಥಿಗಳು ಜ್ಞಾನವಂತರಾಗಲು ಸಹಾಯವಾಗುತ್ತದೆ. ಜಯಂತಿಗಳೂ ಅರ್ಥಪೂರ್ಣವಾಗುತ್ತವೆ ಎಂದು ಅವರು ಹೇಳಿದರು.

ಕೋವಿಡ್‌–19 ಸಂಕಷ್ಟ ಮುಗಿದ ಬಳಿಕ ಶಿಕ್ಷಣ ವ್ಯವಸ್ಥೆಯನ್ನು ಮೊದಲಿನ ಸ್ಥಿತಿಗೆ ತರುವುದು ದೊಡ್ಡ ಸವಾಲು. ಹೀಗಾಗಿ ಕೆಲವು ತ್ಯಾಗಗಳನ್ನು ಮಾಡಲೇಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.

ಈ ವರದಿಯ ವಿವಿಧ ಅಂಶಗಳ ಬಗ್ಗೆ ಚರ್ಚಿಸಿದ ಅಶ್ವತ್ಥನಾರಾಯಣ ಅವರು, ಜಯಂತಿಗಳ ರಜೆ ವಿಚಾರದಲ್ಲಿ ನಿರ್ಧಾರವನ್ನು ಮುಖ್ಯಮಂತ್ರಿಗಳೇ ಕೈಗೊಳ್ಳಬೇಕು ಎಂದು ದೊರೆಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು