ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ ಕೋರ್ಸ್ ಆಯ್ಕೆ ಉದ್ಯೋಗಾವಕಾಶಕ್ಕೆ ಪೂರಕವಾಗಿರಲಿ

Last Updated 28 ಮೇ 2019, 19:30 IST
ಅಕ್ಷರ ಗಾತ್ರ

ಕಳೆದ ಕೆಲವು ವರ್ಷಗಳಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅದರಲ್ಲೂ ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗಾವಕಾಶಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ಸಾಂಪ್ರದಾಯಿಕ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಹಲವು ಎಂಜಿನಿಯರಿಂಗ್‌ ಕೋರ್ಸ್‌ಗಳನ್ನು ಮಾಡಿಕೊಂಡವರಿಗಂತೂ ಉದ್ಯೋಗ ಸಿಗುವುದೇ ಕಷ್ಟ ಎನಿಸಿಬಿಟ್ಟಿದೆ. ಹೀಗಾಗಿ ಎಂಜಿನಿಯರಿಂಗ್‌ ಪದವೀಧರರು ಹಣಕಾಸು, ಬ್ಯಾಂಕ್‌, ಮಾರುಕಟ್ಟೆ ಮತ್ತಿತರ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುವಂತಾಗಿದೆ.

ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೊರಟರೆ ಮಾಡಿಕೊಂಡ ಪದವಿಗೂ, ಉದ್ಯೋಗ ಬೇಡುತ್ತಿರುವ ಕೌಶಲಗಳಿಗೂ ತಾಳೆಯಾಗದಿರುವುದು ಕಂಡುಬರುತ್ತದೆ. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಬಗೆಯ ಆವಿಷ್ಕಾರಗಳಾಗುತ್ತಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುವ, ಫಲಿತಾಂಶ ಕೊಡುವ ಉದ್ಯೋಗಿಗಳ ಅವಶ್ಯಕತೆ ಬಹಳಷ್ಟಿದೆ.

ಹೀಗಾಗಿವೃತ್ತಿಪರ ಕೋರ್ಸ್‌ಗಳ ಕಡೆಗೆ ಹೆಚ್ಚು ಒಲವು ತೋರುತ್ತಿರುವ, ಅದರಲ್ಲೂ ಎಂಜಿನಿಯರಿಂಗ್ ಮಾಡುವ ಉತ್ಸಾಹದಲ್ಲಿರುವವಿದ್ಯಾರ್ಥಿಗಳು ಕೋರ್ಸ್‌ ಆಯ್ಕೆಯ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಎಂಜಿನಿಯರಿಂಗ್ ಪದವಿ ಮಾಡ ಬಯಸುವ ವಿದ್ಯಾರ್ಥಿಗಳು, ಇಂದಿನ ಸಮಾಜದ ಪ್ರಗತಿಗೆ ತಂತ್ರಜ್ಞಾನದ ಅವಶ್ಯಕತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನೆನಪಿನಲ್ಲಿಡಬೇಕು. ಪದವಿ ಪಡೆಯುವುದಕ್ಕಷ್ಟೇ ಅಲ್ಲದೇ, ಪದವಿಗೆ ಬೇಕಾದ ತಂತ್ರಜ್ಞಾನ ಕೌಶಲಗಳನ್ನೂ ಕಲಿಯುವುದು ಬಹು ಮುಖ್ಯ. ಈ ಕೌಶಲಗಳು ವೃತ್ತಿ ಬೇಡುವಂತಹ ನೈಪುಣ್ಯಕ್ಕೆ ಅನುಗುಣವಾಗಿರಬೇಕು. ಅಂತಹ ಕೌಶಲಗಳನ್ನು ಕಲಿಸುವ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಒಳಿತು.

ನಿರ್ಧಾರ ಮುಖ್ಯ

ಒಂದು ಕಾಲದಲ್ಲಿ ಸರ್ಕಾರಿ ಕೆಲಸ ದೊರೆತರೆ ಸಾಕು ಎಂದು ಎಲ್ಲರೂ ಯೋಚಿಸುತ್ತಿದ್ದರು. ಆದರೆ 90ರ ದಶಕದ ನಂತರ ವಿದ್ಯಾರ್ಥಿಗಳೆಲ್ಲಾ ಎಂಜಿನಿಯರಿಂಗ್ ಪದವಿ ಮೇಲೆಯೇ ದೃಷ್ಟಿ ನೆಟ್ಟಿದ್ದಾರೆ. ಎಂಜಿನಿಯರಿಂಗ್ ಪದವಿ ಸೇರುತ್ತಿರುವವರೆಲ್ಲಾ ಯಶಸ್ವಿಯಾಗಿ ಪದವಿ ಪೂರೈಸುತ್ತಿಲ್ಲ. ಹೀಗಾಗಿ ಕೋರ್ಸ್ ಆಯ್ಕೆ ಮಾಡುವ ಮುನ್ನ ಎಂಜಿನಿಯರಿಂಗ್ ಪದವಿ ಮಾಡಬೇಕೆ ಎಂದು ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕಾರಣ ಸ್ಪಷ್ಟವಾಗಿದ್ದರೆ ಮಾತ್ರ ಕೋರ್ಸ್ ಯಶಸ್ವಿಯಾಗಿ ಪೂರೈಸಲು ಸಾಧ್ಯ. ಎಂಜಿನಿಯರಿಂಗ್ ಪದವಿ ಮಾಡಲು ಮುಂದಾಗುತ್ತಿರುವ ಬಹುತೇಕ ವಿದ್ಯಾರ್ಥಿಗಳು ಒತ್ತಡ ತಾಳಲಾರದೇ ಅರ್ಧಕ್ಕೇ ತಿಲಾಂಜಲಿ ಹಾಡಿದ ಉದಾಹರಣೆಗಳು ಸಾಕಷ್ಟಿವೆ.

ಕೋರ್ಸ್‌ಗಳು

ಈ ಸ್ಪರ್ಧಾತ್ಮಕ ಯುಗದಲ್ಲಿ, ಅದರಲ್ಲೂ ದಿನಕ್ಕೊಂದು ಹೊಸ ತಂತ್ರಜ್ಞಾನ ಬೆಳಕಿಗೆ ಬಂದು ನಿನ್ನೆ ಮೊನ್ನೆ ಬಂದಂತಹ ತಂತ್ರಜ್ಞಾನ ತೆರೆಮರೆಗೆ ಸರಿಯುತ್ತಿರುವ ಇಂದಿನ ಧಾವಂತದ ದಿನಗಳಲ್ಲಿ ಅಪ್‌ಡೇಟ್‌ ಆದಂತಹ ಕೋರ್ಸ್‌ ಹುಡುಕುವುದು ನಿಜಕ್ಕೂ ಕಷ್ಟವೇ ಸರಿ. ಅದು ಲೇಟೆಸ್ಟ್‌ ಸ್ಮಾರ್ಟ್‌ ಫೋನ್‌ ಹುಡುಕಿದಂತೆ ಎಂದು ತಮಾಷೆಯಾಗಿ ಕರೆಯಬಹುದು. ಆದರೆ ಕೃತಕ ಬುದ್ಧಿಮತ್ತೆಯಂತಹ ಕೋರ್ಸ್‌ ಈಗ ನಿಜಕ್ಕೂ ಬೇಡಿಕೆ ಇರುವಂತಹದ್ದು. ಸದ್ಯ ಅದು ಮುಂಚೂಣಿಯಲ್ಲಿದ್ದು, ಬಿಗ್‌ ಡೇಟಾ ಎನಾಲಿಟಿಕ್ಸ್‌, ವರ್ಚುವಲ್‌ ರಿಯಲಿಟಿ ಮೊದಲಾದವುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಸಾಂಪ್ರದಾಯಿಕ ಕೋರ್ಸ್‌ಗಳಲ್ಲೂ ವಿಶೇಷ ವಿಭಾಗಗಳು ಹುಟ್ಟಿಕೊಂಡಿವೆ.

ಮಾಹಿತಿ ತಂತ್ರಜ್ಞಾನ, ಸಿವಿಲ್‌, ಎಲೆಕ್ಟ್ರಿಕಲ್‌, ಕಂಪ್ಯೂಟರ್‌ ವಿಜ್ಞಾನ ಮೊದಲಾದ ವಿಭಾಗಗಳಲ್ಲಿ ಯಾವ ವಿಶೇಷ ಉಪ ವಿಭಾಗಗಳಿಗೆ ಬೇಡಿಕೆ ಇದೆ ಎಂಬುದನ್ನು ಕಂಪನಿಗಳನ್ನು ಅವಲೋಕಿಸಿ ತಿಳಿದುಕೊಳ್ಳಬಹುದು.

ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಇನ್ನೊಂದು ಅಂಶದ ಬಗ್ಗೆ ಗಮನ ನೀಡಬೇಕಾಗುತ್ತದೆ. ನಿಮಗೆ ಆ ಕೋರ್ಸ್‌ ಮಾಡುವ ಅರ್ಹತೆಗಳಿವೆಯೆ ಎಂಬುದನ್ನು ನಿಮಗೆ ನೀವೇ ವಿಶ್ಲೇಷಣೆ ಮಾಡಿಕೊಳ್ಳುವುದು ಅವಶ್ಯಕ. ಉದಾಹರಣೆಗೆ ಕೃತಕ ಬುದ್ಧಿಮತ್ತೆ (ಎಐ) ಕುರಿತು ಎಂಜಿನಿಯರಿಂಗ್‌ ಪದವಿ ಮಾಡುವವರು ಗಣಿತದ ಬಗ್ಗೆ ಉತ್ತಮ ಜ್ಞಾನ ಹೊಂದಿರಬೇಕು.

ಸೂಕ್ತ ಕಾಲೇಜುಗಳು

ಹಾಗೆಯೇ ಕೋರ್ಸ್‌ ಮಾಡುವುದಕ್ಕೆ ತೋರುವ ಧಾವಂತ, ಉತ್ಸಾಹ ಕಾಲೇಜು ಆಯ್ಕೆ ವಿಚಾರದಲ್ಲಿ ಇರುವುದಿಲ್ಲ ಎಂಬುದೇ ಬೇಸರದ ಸಂಗತಿ. ಮೊದಲ ವರ್ಷದಿಂದ ಹಿಡಿದು ಕೊನೆಯ ವರ್ಷದವರೆಗೆ ಯಾವುದೇ ಸಮಸ್ಯೆ ಇಲ್ಲದೇ ಕೋರ್ಸ್ ಪೂರೈಸಬೇಕೆಂದರೆ ಉತ್ತಮ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು. ಹೀಗಾಗಿ ಕಾಲೇಜು ಆಯ್ಕೆ ಮಾಡುವುದಕ್ಕೂ ಮುನ್ನ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ಇರಲಿ.

ಬಹುತೇಕ ವಿದ್ಯಾಸಂಸ್ಥೆಗಳು ಶೇ 100ರಷ್ಟು ಉದ್ಯೋಗ ಕೊಡಿಸುವ ಭರಸವೆ ನೀಡಿಯೇ ವಿದ್ಯಾರ್ಥಿಗಳನ್ನು ತಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಪ್ರಚಾರ ಮಾಡುತ್ತಿವೆ. ಆದರೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳೂ ಶೇ 100ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ಈಡೇರಿಸಿಲ್ಲ.

ಈಚೆಗೆ ಎಐಸಿಟಿಇ ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ, ಶೇ 22ರಷ್ಟು ವಿದ್ಯಾಸಂಸ್ಥೆಗಳು ಯಾವುದೇ ಉದ್ದಿಮೆಗಳೊಂದಿಗೆ ಕೈ ಜೋಡಿಸಿಲ್ಲ ಎಂಬುದು ಬಹಿರಂಗವಾಗಿದೆ . ಹೀಗಾಗಿ ಕಾಲೇಜು ಸೇರುವ ಮುನ್ನ ಉದ್ಯೋಗ ಖಾತ್ರಿ ಕೊಡಿಸುವ ಕಾಲೇಜು ಸೇರಿ.ಕೇವಲ ಉದ್ಯೋಗ ಕೊಡಿಸುವುದಷ್ಟೇ ಅಲ್ಲದೇ, ಉದ್ಯೋಗ ಪಡೆಯಲು ಬೇಕಾಗುವ ಕೌಶಲಗಳನ್ನು ಕಲಿಸುತ್ತಿವೆಯೇ ಎಂಬುದೂ ನೆನಪಿರಲಿ. ಶಿಕ್ಷಕ ವೃಂದ, ಪ್ರಯೋಗಾಲಯ, ಗ್ರಂಥಾಲಯ, ವಿದ್ಯಾರ್ಥಿನಿಲಯ, ಸಿಲೆಬಸ್‌, ಇಂಟರ್ನ್‌ಶಿಪ್‌ ಸೌಲಭ್ಯ ಮೊದಲಾದವುಗಳನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಿ. ಕಾಲೇಜಿಗೆ ಯುಜಿಸಿ/ ಎಐಸಿಟಿಇ ಮಾನ್ಯತೆ ಇದೆಯೇ ಎಂಬುದು ಬಹು ಮುಖ್ಯ.ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆಯುವುದು ಒಳ್ಳೆಯದು.

(ಪೂರಕ ಮಾಹಿತಿ: ಪ್ರೊ.ಸುನೀಲ್‌ಕುಮಾರ್‌ ಜಾರ್ಜ್‌, ವೃತ್ತಿ ಮಾರ್ಗದರ್ಶಕರು)

**

ಈ ತಪ್ಪುಗಳನ್ನು ಮಾಡಬೇಡಿ

ಸ್ನೇಹಿತರು, ಬಂಧುಗಳು ಸೇರಿದರೆಂದು ನೀವೂ ಎಂಜಿನಿಯರ್ ಆಗಲು ಬಯಸಬೇಡಿ.

ಬಹುತೇಕ ವಿದ್ಯಾರ್ಥಿಗಳು ಕೇವಲ ಪ್ರತಿಷ್ಠೆಗಾಗಿ ಎಂಜಿನಿಯರಿಂಗ್ ಮಾಡುತ್ತಿದ್ದಾರೆ. ಆಸಕ್ತಿಯಿಂದ ಕೋರ್ಸ್‌ ಮಾಡುವವರು ಕಡಿಮೆ.

ಪರಿಶೀಲನೆ ನಡೆಸದೇ ಅಥವಾ ಉದ್ಯೋಗ ಖಾತ್ರಿ ಇಲ್ಲದೇ ಸೇರುವುದು.

ಸೂಕ್ತ ತರಬೇತಿ ಇಲ್ಲದೇ ಅಥವಾ ಮಾರ್ಗದರ್ಶನವಿಲ್ಲದೇ ಕೋರ್ಸ್‌ಗೆ ಸೇರುವುದು.

ಎಂಜಿನಿಯರಿಂಗ್ ಸೇರ ಬಯಸಿದರೂ ಅದಕ್ಕೆ ತಕ್ಕಂತೆ ಸ್ವಯಂ ಸಿದ್ಧತೆ ಮತ್ತು ಗಣಿತ ಜ್ಞಾನ ಪಡೆಯದೇ ಇರುವುದು.

ಸೌಲಭ್ಯಗಳು ಮತ್ತು ಸಿಬ್ಬಂದಿ ಇಲ್ಲದ ಕಾಲೇಜು ಸೇರುವುದು.

ಉದ್ದಿಮೆ ಸಂಸ್ಥೆಗಳೊಂದಿಗೆ ಸಂಬಂಧವಿರದ ಕಾಲೇಜುಗಳನ್ನು ಸೇರುವುದು.

ಕೇವಲ ಸಂಸ್ಥೆಯ ಹೆಸರು ನೋಡಿ ಕಾಲೇಜಿಗೆ ಸೇರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT