ಪರೀಕ್ಷೆ ಬರೆಯುವ ಮೊದಲು ಇದನ್ನೊಮ್ಮೆ ಓದಿಬಿಡಿ…

7
ಪರೀಕ್ಷೆ ಎದುರಿಸಲು ‘ಥ್ರಿ ಡಿ’ ಸೂತ್ರ

ಪರೀಕ್ಷೆ ಬರೆಯುವ ಮೊದಲು ಇದನ್ನೊಮ್ಮೆ ಓದಿಬಿಡಿ…

Published:
Updated:
Prajavani

ನನ್ನ ಮಗನಿಗೆ ಓದಿನಲ್ಲಿ ಆಸಕ್ತಿಯೇ ಇರಲಿಲ್ಲ. ನೀವು ಅದೇನು ಹೇಳಿದ್ರೋ ಏನೋ, ಈಗ ತಾನೇ ತಾನಾಗಿ ಓದಿಕೊಳ್ತಾನೆ. ಪ್ರಿಪರೇಟರಿಯಲ್ಲಿ ಒಳ್ಳೇ ಮಾರ್ಕ್ಸ್‌ ತಗೊಂಡಿದ್ದಾನೆ. ಈ ಸಲ ಫೈನಲ್ ಎಕ್ಸಾಂನಲ್ಲೂ ಒಳ್ಳೇ ಮಾರ್ಕ್ಸ್‌ ತಗೊಳ್ತಾನೆ ಅನ್ನೋ ವಿಶ್ವಾಸ ನನಗಿದೆ’.

‘ನನ್ನ ಮಗಳು ಮೊದಲಿನಿಂದ ಚೆನ್ನಾಗಿ ಓದ್ತಿದ್ಲು. ಪ್ರಿಪರೇಟರಿಯಲ್ಲಿ 30 ಪರ್ಸೆಂಟೂ ಬಂದಿಲ್ಲ. ಫೈನಲ್ ಎಕ್ಸಾಂನಲ್ಲಿ ಫೇಲಾಗಿ ಬಿಡ್ತೀನಿ ಅಂತ್ಲೋ ಏನೋ ಸದಾ ಚಿಂತೆ ಮಾಡ್ತಾ ಇರ್ತಾಳೆ. ಸರಿಯಾಗಿ ಊಟ ಮಾಡಲ್ಲ, ನಿದ್ದೆ ಇಲ್ಲ. ಸಣ್ಣಗೆ ಕಡ್ಡಿಯಂತೆ ಆಗಿಬಿಟ್ಟಿದ್ದಾಳೆ. ನೀವೇ ಏನಾದ್ರೂ ಮಾಡಿ ಸಾರ್’.

***

ಬೆಂಗಳೂರಿನ ಇಬ್ಬರು ಆಪ್ತಸಲಹೆಗಾರರು ಹೇಳಿದ ಪ್ರತ್ಯೇಕ ಉದಾಹರಣೆಗಳಿವು. ಮೊದಲ ಉದಾಹರಣೆಯಲ್ಲಿರುವ ಓದದ ಹುಡುಗನ ಹೆಸರು ರಮೇಶ. ಓರ್ವ ಬ್ಯಾಂಕ್ ಅಧಿಕಾರಿಯ ಮಗ. ಅವನೇನು ದಡ್ಡನಾಗಿರಲಿಲ್ಲ. ಆದರೆ ಅವನನ್ನು ಕಾಡುತ್ತಿದ್ದ ‘ನಾನೇಕೆ ಚೆನ್ನಾಗಿ ಓದಬೇಕು? ಉತ್ತಮ ಅಂಕ ಪಡೆಯಬೇಕು?’ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ.

ಎರಡನೇ ಉದಾಹರಣೆಯಲ್ಲಿರುವ ಆಟೊ ಡ್ರೈವರ್ ಮಗಳು ಸುಮಾ. ‘ಉತ್ತಮ ಅಂಕ ಪಡೆಯಲೇಬೇಕು’ ಎನ್ನುವ ಅನಿವಾರ್ಯತೆ ಅವಳಿಗೆ ಅರ್ಥವಾಗಿತ್ತು. ಆದರೆ ‘ಅಕಸ್ಮಾತ್ ಫೇಲ್ ಆಗಿಬಿಟ್ಟರೆ’ ಎನ್ನುವ ಆತಂಕವೇ ಮನಸ್ಸಿನಲ್ಲಿ ಹೆಮ್ಮರವಾಗಿ ಬೆಳೆದು ಪ್ರಿಪರೇಟರಿಯಲ್ಲಿ ಅಕ್ಷರಶಃ ಫೇಲ್ ಆಗಿದ್ದಳು.

ಈಗ ಇವರಿಬ್ಬರೂ ಸುಧಾರಿಸಿಕೊಂಡಿದ್ದಾರೆ, ಫೈನಲ್ಸ್‌ನಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸ ಬೆಳೆಸಿಕೊಂಡಿದ್ದಾರೆ ಎನ್ನುವುದು ಬೇರೆ ಮಾತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಎನ್ನುವ ಗುಮ್ಮನನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವ ಪ್ರತಿ ಹಂತದಲ್ಲಿಯೂ ಈ ಎರಡು ಉದಾಹರಣೆಗಳು ಪದೇಪದೆ ನೆನಪಾಗುತ್ತವೆ. ಪಬ್ಲಿಕ್ ಪರೀಕ್ಷೆ ಎಂದರೆ ಪೆಡಂಭೂತ ಎಂದು ಹೆದರಿ ನಲುಗಿರುವ ಲಕ್ಷಾಂತರ ಮಕ್ಕಳ ಆಂತರ್ಯ ಈ ಕಥೆಗಳಲ್ಲಿಯೇ ಅಡಗಿದೆ.

***

‘ನನಗೆ ಪುಸ್ತಕ ಅಂದ್ರೆ ವಾಕರಿಕೆ ಬರುವಂತೆ ಆಗಿದೆ...’

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎನ್ನುವ ಮೂರು ಗಂಟೆಗಳ ಪ್ರತಿಭಾ ಪ್ರದರ್ಶನಕ್ಕೆ 16 ವರ್ಷಗಳ ಸಿದ್ಧತೆ ಆಗಿರುತ್ತೆ. ಆದರೆ ಕೊನೆಯ ಹಂತದಲ್ಲಿ ನೆರವಿಗೆ ಬರುವುದು ಶ್ರದ್ಧೆ ಮತ್ತು ಸಿದ್ಧತೆ. ಈ ಎರಡಕ್ಕೂ ಮೂಲದ್ರವ್ಯ ಏಕಾಗ್ರತೆ. ಮನಸ್ಸನ್ನು ಒಂದೇ ವಿಷಯದತ್ತ ಕೇಂದ್ರೀಕರಿಸುವ ಸಾಮರ್ಥ್ಯಕ್ಕೆ ಇಲ್ಲಿ ಏಕಾಗ್ರತೆ ಎನ್ನುವ ಪದ ಬಳಸಲಾಗಿದೆ. ರಾಜ್ಯದ ಸಾವಿರಾರು ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಹತ್ತಿರದಿಂದ ನೋಡಿರುವ ‘ಚೈಲ್ಡ್‌ ರೈಟ್ಸ್‌ ಟ್ರಸ್ಟ್‌’ನ ನಾಗಸಿಂಹ ರಾವ್ ಅವರ ಪ್ರಕಾರ, ‘ರಾಜ್ಯದ ಮಕ್ಕಳಿಗೆ ಏಕಾಗ್ರತೆಯ ಕೊರತೆಯೇ ದೊಡ್ಡ ಸಮಸ್ಯೆ’.


ನಾಗಸಿಂಹ ರಾವ್

ಬೆಂಗಳೂರಿನಂಥ ದೊಡ್ಡ ಊರುಗಳಲ್ಲಿ, ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಟಾರ್ಗೆಟ್‌ ಚಿಂತೆ. ಇಂಥ ಶಾಲೆಗಳು, ‘ಈ ವರ್ಷ ನಮ್ಮ ಶಾಲೆಯ ಇಂತಿಷ್ಟು ಮಕ್ಕಳು ಸೆಂಟ್ ಪರ್ಸೆಂಟ್ ರಿಸಲ್ಟ್ ತಗೊಳ್ತಾರೆ’ ಅಂತ ಟಾರ್ಗೆಟ್ ಇಟ್ಟುಕೊಂಡಿರುತ್ತಾರೆ. ಈ ಗುರಿಯನ್ನು ಮಕ್ಕಳ ಮೇಲೆ ಹೇರಿ 8ನೇ ಕ್ಲಾಸಿನಿಂದಲೇ ಚಿತ್ರಹಿಂಸೆ ಕೊಡುತ್ತಾರೆ. ಬೆಂಗಳೂರಿನ ಕೆಲ ಶಾಲೆಗಳಲ್ಲಿ ಬೆಳಿಗ್ಗೆ 6ಕ್ಕೆ ತರಗತಿಗಳು ಆರಂಭವಾಗುತ್ತವೆ. ಬೆಳಿಗ್ಗೆ ಸ್ಪೆಷಲ್ ಕ್ಲಾಸ್, ಆಮೇಲೆ ಮಾಮೂಲಿ ಕ್ಲಾಸ್, ಅದೂ ಮುಗಿದ ಮೇಲೆ ಟ್ಯೂಷನ್‌ ಕ್ಲಾಸ್... ಹೀಗೆ ಕ್ಲಾಸ್‌ ಮೇಲೆ ಕ್ಲಾಸ್‌ ಆಗಿ ಮಕ್ಕಳ ಮನಸ್ಸು ಮುದುಡುತ್ತಿದೆ ಎನ್ನುತ್ತಾರೆ ನಾಗಸಿಂಹ ರಾವ್.

ಮೂರು ಹೊತ್ತೂ ‘ಓದೂ ಓದೂ ಓದೂ’ ಅಂತ ಪೀಡಿಸಿದ್ರೆ ಆ ಮಕ್ಕಳಿಗೆ ಓದಿನ ಬಗ್ಗೆಯೇ ವಾಕರಿಕೆ ಬಂದುಬಿಡುತ್ತೆ ಅಷ್ಟೇ. ಅದರಲ್ಲೂ 10ನೇ ಕ್ಲಾಸ್ ಮಕ್ಕಳ ಪರಿಸ್ಥಿತಿ ದೇವರಿಗೇ ಪ್ರೀತಿ ಆಗಬೇಕು. ಬೀದೀಲಿ ಆಟ ಆಡೋಕೆ ಹೋದ್ರೆ ಪಕ್ಕದ ಮನೆ ಅಂಕಲ್ ‘ಓದೋದು ಬಿಟ್ಟು ಆಡೋಕೆ ಬಂದಿದ್ಯಾ, ಈ ವರ್ಷ ನೀನು ಎಸ್‌ಎಸ್‌ಎಲ್‌ಸಿ ಗೊತ್ತಿದ್ಯಾ’ ಅಂತ ಗದರಿಸ್ತಾರೆ. ರಾತ್ರಿ ನೆಮ್ಮದಿಯಾಗಿ ಊಟ ಮಾಡೋಣ ಅಂತ ಕೂತ್ರೆ, ‘ಎಷ್ಟೊತ್ತು ತಿಂತೀಯೋ, ಬೇಗಬೇಗ ತಿಂದು ಓದ್ಕೋ ಹೋಗು, ನೀನು ಎಸ್‌ಎಸ್‌ಎಲ್‌ಸಿ’ ಅಂತ ತಾತ ಬೈತಾರೆ. ಟೀವಿ ನೋಡುವ ಹಾಗಿಲ್ಲ, ಹಾಡು ಕೇಳುವ ಹಾಗಿಲ್ಲ. ಎದುರಿಗೆ ಬಂದ ಪ್ರತಿಯೊಬ್ಬರಿಂದಲೂ ‘ನೀನು ಎಸ್‌ಎಸ್‌ಎಲ್‌ಸಿ, ಓದ್ಕೋ’ ಅಂತ ಉಪದೇಶ. ಈ ಮಕ್ಕಳಿಗೆ ಸಾಕಾಗಿ ಹೋಗುತ್ತೆ.

ಬಹುಶಃ ಇದಕ್ಕೇ ಇರಬೇಕು, ಆಪ್ತ ಸಲಹಾಕೇಂದ್ರಕ್ಕೆ ಬಂದಿದ್ದ ಆ ಹುಡುಗ, ‘ಅಯ್ಯೋ ಸಾರ್, ನನ್ನ ಪಾಡಿಗೆ ನನ್ನ ಬಿಟ್ಟಿದ್ರೆ ಓದಿಕೊಳ್ತಿದ್ದೆ. ಎಲ್ರೂ ಓದ್ಕೋಓದ್ಕೋ ಅಂತ ಹೇಳಿಹೇಳಿ ನನಗೆ ರೋಸಿ ಹೋಗಿದೆ’ ಅಂತ ಹೇಳುತ್ತಿದ್ದ.

* ಅತಿಯಾಗಿ ಹೇರಿದ್ರೆ ಮನಸ್ಸು ರಿಜೆಕ್ಟ್ ಮಾಡುತ್ತೆ
ಬೆಂಗಳೂರಿನಲ್ಲಿಯೇ ಇರುವ ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ನೋಡಿದ ಹಿರಿಯರಿಗೆ ತಮ್ಮ ಕಾಲ ಸುವರ್ಣಯುಗ ಅನ್ನಿಸಲೂ ಸಾಕು. ಏನು ಮಕ್ಕಳ ಬಾಧೆ, ರಾಮರಾಮ! ‘ನಮ್ಮ ಸ್ಕೂಲ್‌ಗೆ ಒಳ್ಳೇ ರಿಸಲ್ಟ್ ಬರಬೇಕು’ ಅನ್ನೋ ಟಾರ್ಗೆಟ್ ಇಟ್ಟುಕೊಳ್ಳುವ ಮ್ಯಾನೇಜ್‌ಮೆಂಟ್ 8–9ನೇ ಕ್ಲಾಸ್‌ನಿಂದಲೇ ಸ್ಪೆಷಲ್ ಕ್ಲಾಸ್ ಶುರು ಮಾಡಿಸುತ್ತೆ. ಕೆಲ ಶಾಲೆಗಳಲ್ಲಿಯಂತೂ ಎಸ್‌ಎಸ್‌ಎಲ್‌ಸಿ ಅಂದ್ರೆ ಬೆಳಿಗ್ಗೆ 6ರಿಂದಲೇ ಕ್ಲಾಸ್ ಶುರು. ‘ನಿಮ್ ಹುಡುಗಿ ಈ ವರ್ಷ ಎಸ್‌ಎಸ್‌ಎಲ್‌ಸಿ. ಅವಳನ್ನು ಎಲ್ಲಿಗೂ ಟೂರ್ ಕರ್ಕೊಂಡು ಹೋಗಬೇಡಿ. ಸಿನಿಮಾ, ನಾಟಕಗಳಿಗೆ, ಪಠ್ಯೇತರ ಚಟುವಟಿಕೆಗಳಿಗೆ ಕಳಿಸಬೇಡಿ’ ಅಂತ ಪೇರೆಂಟ್ಸ್‌ಗೆ ಹೇಳಿಬಿಟ್ಟಿರ್ತಾರೆ.

‘ಒಂದು ವಿಷಯದಲ್ಲಿ ಏಕತಾನತೆ ಹೆಚ್ಚಿದಷ್ಟೂ ಮನಸ್ಸು ಅದರಿಂದ ವಿಮುಖವಾಗುತ್ತೆ’ ಎನ್ನುವುದು ಮನಃಶಾಸ್ತ್ರದ ಸಾಮಾನ್ಯ ತಿಳಿವಳಿಕೆ ಇರುವವರಿಗೂ ಅರ್ಥವಾಗುವ ವಿಷಯ. ಓದಿನ ವಿಚಾರದಲ್ಲಿಯೂ ಆಗುತ್ತಿರುವುದು ಇದೇ ಅಲ್ಲವೇ? ಹೆತ್ತವರು, ಶಿಕ್ಷಕರು ಒತ್ತಾಯದಿಂದ ಮಕ್ಕಳು ಪುಸ್ತಕ ಹಿಡಿಯುವಂತೆ ಮಾಡಬಹುದು. ಆದರೆ ಅದರಲ್ಲಿರುವ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಆಸಕ್ತಿ ಇಂಥ ಒತ್ತಾಯದಿಂದ ಬರುವುದುಂಟೆ?

* ಇಂಥ ಭ್ರಮೆಗಳು ಬೇಡ
ಟೀವಿ ನೋಡಿದ್ರೆ ನೆನಪಿನ ಶಕ್ತಿ ಕಡಿಮೆ ಆಗುತ್ತೆ, ಮೊಬೈಲ್ ನೋಡಿದ್ರೆ ಏಕಾಗ್ರತೆ ಹಾಳಾಗುತ್ತೆ, ಫ್ರೆಂಡ್ಸ್‌ ಜೊತೆಗೆ ಮಾತಾಡಿದ್ರೆ ಓದಿದ್ದು ಮರೆತು ಹೋಗುತ್ತೆ, ರಾತ್ರಿ ಊಟ ಮಾಡಿದ ಮೇಲೆ ಒಂದು ಲೋಟ ಟೀ (ಚಹ) ಕುಡಿದುಬಿಟ್ರೆ ನಿದ್ದೆಯನ್ನೇ ಮಾಡದೆ ರಾತ್ರಿಯಿಡೀ ಓದಬಹುದು, ಸಿಗರೇಟ್ ಸೇದಿದ್ರೆ ಏಕಾಗ್ರತೆ ಹೆಚ್ಚಾಗುತ್ತೆ, ಈ ಮಾತ್ರೆ ತಗೊಂಡು ಓದಿದ್ರೆ ಅದು ಮರೆಯೋದೇ ಇಲ್ಲ... ಹೀಗೆ ನೂರೆಂಟು ಭ್ರಮೆಗಳು ವಿದ್ಯಾರ್ಥಿಗಳಲ್ಲಿವೆ. ಕೆಲವು ಮನೆಗಳಲ್ಲಿ ಸುಶಿಕ್ಷಿತ ಪೋಷಕರೂ ಇಂಥ ಭ್ರಮೆಗಳನ್ನು ಮಕ್ಕಳ ಮೇಲೆ ಹೇರುತ್ತಿರುತ್ತಾರೆ.

ರಾಜ್ಯದ ಹಲವು ಶಾಲೆಗಳಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕೆಂಬ ಕಾರಣಕ್ಕೇ ಮಾದಕ ವ್ಯಸನಿಗಳಾಗಿರುವ ಮಕ್ಕಳನ್ನು ಅದರಿಂದ ಹೊರಗೆ ತರಲು ಯತ್ನಿಸುತ್ತಿರುವ ನಾಗಸಿಂಹ ರಾವ್, ‘ಇಂಥ ಶಾರ್ಟ್‌ಕಟ್‌ಗಳಿಂದ ಏನೂ ಪ್ರಯೋಜನವಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ‘ಈ ರೀತಿಯ ಭ್ರಮೆಗಳಿಂದ ಮಕ್ಕಳ ಏಕಾಗ್ರತೆ ಚೆಲ್ಲಾಪಿಲ್ಲಿ ಆಗ್ತಿದೆ. ಅವರಿಗೆ ಏನನ್ನೂ ಗಮನ ಕೊಟ್ಟು ಓದಲು ಆಗ್ತಿಲ್ಲ. ಓದಿದ್ದು ನೆನಪಿನಲ್ಲಿಟ್ಟುಕೊಳ್ಳುವ ಕೆಲಸವನ್ನು ಹೊರಗುತ್ತಿಗೆಗೆ ಕೊಡಲು ಸಾಧ್ಯವೇ?’ ಎನ್ನುವ ಪ್ರಶ್ನೆ ಅವರದು.

* ಮಾತನಾಡಿ, ಮಾತನಾಡಲು ಬಿಡಿ...
‘ನನ್ನ ಮಗಳು ಒಳ್ಳೇ ಮಾರ್ಕ್ಸ್‌ ತಗೊಬೇಕು. ನೀವು ಹೇಳಿದಂತೆ ಕೇಳ್ತೀನಿ. ನಾನೇನು ಮಾಡಬೇಕು ಹೇಳಿ?’ – ತುಮಕೂರಿನಲ್ಲಿ ಆಪ್ತಸಲಹೆಗಾರರಾಗಿ ಕೆಲಸ ಮಾಡುವ ಪಾವಟೆ ಎದುರು ಕುಳಿತಿದ್ದ ತಂದೆಯೊಬ್ಬರು ಇಟ್ಟ ಪ್ರಶ್ನೆ ಇದು. ಇದಕ್ಕೆ ಪಾವಟೆ ಅವರು ಕೊಟ್ಟ ಉತ್ತರ, ‘ಮಗಳೊಂದಿಗೆ ಮಾತನಾಡಿ, ಅವಳಿಗೂ ಮಾತನಾಡಲು ಬಿಡಿ’.

ಇದೇನಿದು, ಎಂಥ ಪ್ರಶ್ನೆಗೆ ಇಂಥ ಉತ್ತರ ಎನ್ನುವಂತೆ ಅವರು ಹುಬ್ಬೇರಿಸಿದಾಗ ಪಾವಟೆ ವಿವರಿಸಿದರು.

ಮಕ್ಕಳಿಗೆ ನೆಮ್ಮದಿಯಾಗಿ ಊಟ ಮಾಡಲೂ ಬಿಡದೆ ‘ಓದ್ಕೋ ಓದ್ಕೋ’ ಅಂತ ಜೀವ ತೆಗೆಯುವ ಬದಲು, ‘ಏನು ಪುಟ್ಟೀ, ಇವತ್ತು ಏನು ಓದಿಕೊಂಡೆ’ ಅಂತ ಸಮಾಧಾನವಾಗಿ ಕೇಳಿ. ಅದು ಹೇಳುವುದನ್ನು ಸಾವಧಾನದಿಂದ ಕೇಳಿಸಿಕೊಳ್ಳಿ. ನಮ್ಮ ಮಕ್ಕಳು ನಮಗಿಂತಲೂ ಬುದ್ಧಿವಂತರು ಅನ್ನೋದು ಮೊದಲು ಒಪ್ಪಿಕೊಳ್ಳಿ. ನಿಮಗೆ ಅರ್ಥವಾಗುವಂತೆ ಸರಳ ಪದಗಳಲ್ಲಿ ಗಣಿತದ ಸೂತ್ರಗಳನ್ನೋ ವಿಜ್ಞಾನದ ನಿಯಮಗಳನ್ನೋ ವಿವರಿಸಲು, ಇತಿಹಾಸ ಪಾಠವನ್ನು ಒಂದು ಕಥೆಯಂತೆ ಹೇಳಲು ಯತ್ನಿಸುತ್ತೆ. ಇದರಿಂದ ಮಗುವಿನ ಪದಸಂಪತ್ತು ಹೆಚ್ಚಾಗುತ್ತೆ. ನಿಮ್ಮಿಬ್ಬರ ಬಾಂಧವ್ಯವೂ ಬೆಳೆಯುತ್ತೆ. ಮಗುವಿಗಾಗಿ ಸಮಯ ಕೊಡಲು ಇಷ್ಟವಿಲ್ಲದೆ ‘ಏಯ್ ಓದ್ಕೋ ಹೋಗೆ’ ಎಂದು ಅದನ್ನು ರೂಮಿನಲ್ಲಿ ಕೂಡಿಹಾಕಿ ನೀವು ಟೀವಿ ನೋಡಿದ್ರೆ ಏನು ಪ್ರಯೋಜನ ಆಯ್ತು? ಎಂದು ಆ ತಂದೆಯನ್ನು ಪ್ರಶ್ನಿಸಿದರು ಪಾವಟೆ.

ಇದನ್ನೂ ಓದಿ: ಪರೀಕ್ಷೆಗೆ ಪೋಷಕರೂ ಸಿದ್ಧರಾಗಿ...

* ಮಾತನಾಡಿದ್ರೆ ಲಾಭ ಹೆಚ್ಚು...
ಓದಿದ್ದನ್ನು ಮತ್ತೊಬ್ಬರ ಜೊತೆಗೆ ಶೇರ್ ಮಾಡುವುದು ಅಗತ್ಯ. ಗುಂಪು ಚರ್ಚೆಗಳಲ್ಲಿ ಓದಿದ ಪಾಠಗಳನ್ನು ಹಂಚಿಕೊಳ್ಳುವುದರಿಂದ ಅದು ನೆನಪಿನಲ್ಲಿ ಉಳಿಯುವ ಸಾಧ್ಯತೆಯೂ ಹೆಚ್ಚಾಗುತ್ತೆ. ಚೆನ್ನಾಗಿ ಓದಿಕೊಂಡ ಮಗುವಿಗೆ, ತನ್ನ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುತ್ತೆ. ಸರಿಯಾಗಿ ಓದದ ವಿದ್ಯಾರ್ಥಿಗೆ ಕಥೆಯ ರೂಪದಲ್ಲಿ ಪಾಠವನ್ನು ನೆನಪಿನಲ್ಲಿ ಇರಿಸಿಕೊಳ್ಳುವ ಅವಕಾಶ ಸಿಗುತ್ತೆ. ಮುಖ್ಯವಾಗಿ ಈ ಮಕ್ಕಳಲ್ಲಿ ನಾನು ಫೇಲಾಗಿಬಿಟ್ರೆ ಅನ್ನೋ ಭೀತಿ ದೂರವಾಗುತ್ತೆ.


ಡಾ. ಗುರುಪ್ರಸಾದ್

‘ಪರೀಕ್ಷಾ ಭಯ ಎನ್ನುವುದು ಪರೀಕ್ಷಾ ಭಯ ಅಲ್ಲವೇ ಅಲ್ಲ. ಅದು ಫೇಲಾಗಿಬಿಟ್ರೆ ಅನ್ನೋ ವೈಫಲ್ಯದ ಭಯ’ ಎಂದು ವಿಶ್ಲೇಷಿಸುತ್ತಾರೆ ಬೆಂಗಳೂರು ಬೌರಿಂಗ್ ಆಸ್ಪತ್ರೆಯಲ್ಲಿ ಮನಃಶಾಸ್ತ್ರಜ್ಞರಾಗಿರುವ ಡಾ. ಗುರುಪ್ರಸಾದ್.

‘ಈ ಭಯ ಮಕ್ಕಳಿಗಿಂತ, ಪೋಷಕರನ್ನೇ ಹೆಚ್ಚು ಕಾಡುತ್ತದೆ. ಪರೀಕ್ಷೆಯನ್ನು ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಹೆಚ್ಚಾದಂತೆ ಈ ಭಯ ಹೋಗುತ್ತೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುವ ವಾತಾವರಣವನ್ನು ಮನೆ ಮತ್ತು ಶಾಲೆಗಳಲ್ಲಿ ರೂಪಿಸಬೇಕು’ ಎನ್ನುತ್ತಾರೆ ಅವರು.

* ಮೊದಲೇ ಓದಿದ್ದೇನೆ, ಈಗೇನು ಮಾಡಲಿ
ಸ್ಕೂಲ್ ಶುರುವಾದ ಕಾಲದಿಂದ ಚೆನ್ನಾಗಿ ಓದಿಕೊಂಡಿರುವ ಮಕ್ಕಳಿಗೆ ಓದಿದ್ದು ಮರೆಯದೆ ಉಳಿಯಲು ಏನು ಮಾಡಬೇಕು ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ತಜ್ಞರ ಉತ್ತರ, ‘ಕಣ್ಣೆದುರಿನಲ್ಲಿದ್ದರೆ ಮನಸಿನಲ್ಲಿಯೂ ಉಳಿಯುತ್ತೆ’.

ಇಡೀ ಪಾಠದ ಸಾರವನ್ನು ಹೇಳುವ ಪದಗಳನ್ನು (ಕೀವರ್ಡ್ಸ್‌) ಗುರುತಿಸಿಕೊಳ್ಳಿ. ಉದಾ: ಅಶೋಕನ ಜೀವನದ ಬಗೆಗಿನ ಪಾಠ ಎಂದಿಟ್ಟುಕೊಳ್ಳೋಣ. ಆಗ ಕಳಿಂಗ ಯುದ್ಧ, ಬೌದ್ಧಭಿಕ್ಷು, ಧರ್ಮ ಪ್ರಸಾರ ಎನ್ನುವ ಪದಗಳು ಕೀವರ್ಡ್ಸ್‌ ಆಗಬಹುದು.

ಪ್ರಮುಖ ಪದಗಳನ್ನು ಸಣ್ಣ ಚೀಟಿಗಳಲ್ಲಿ ಬರೆದು ಗೋಡೆ, ಫ್ರಿಡ್ಜ್‌, ಕನ್ನಡಿ, ಬಾಗಿಲು, ಬಟ್ಟೆ ನೇತುಹಾಕುವ ಜಾಗ... ಹೀಗೆ ನಿಮ್ಮ ಕಣ್ಣಿಗೆ ಹೆಚ್ಚು ಬೀಳುವ ಸ್ಥಳಗಳಲ್ಲಿ ಅಂಟಿಸಿಕೊಳ್ಳಿ.

ಇತಿಹಾಸದ ಇಸವಿಗಳು, ಗಣಿತದ ಸೂತ್ರಗಳು, ಭೌತಶಾಸ್ತ್ರದ ನಿಯಮಗಳು, ರಸಾಯನಶಾಸ್ತ್ರದ ಪ್ರಯೋಗದ ಹಂತಗಳನ್ನೂ ಬರೆದುಕೊಳ್ಳಬಹುದು.

ಭಾಷಾಪಠ್ಯದಲ್ಲಿ (ಇಂಗ್ಲಿಷ್‌, ಕನ್ನಡ, ಹಿಂದಿ, ಸಂಸ್ಕೃತ) ಕಠಿಣ ಶಬ್ದಗಳು, ಕವಿ–ಕಾವ್ಯ ಪರಿಚಯವನ್ನು ಹೀಗೆ ಬರೆದುಕೊಳ್ಳಬಹುದು.

ಹೀಗೆ ಮಾಡುವುದರಿಂದ ವಿಷಯದ ಬಗ್ಗೆ ಪ್ರೀತಿ ಬೆಳೆಯುತ್ತೆ. ‘ನನಗೆ ಗಣಿತ ಅರ್ಥವಾಗಲ್ಲ, ಭೌತಶಾಸ್ತ್ರ ತಲೆಗೆ ಹೋಗಲ್ಲ’ ಇತ್ಯಾದಿ ಪೂರ್ವಗ್ರಹಗಳು ದೂರವಾಗುತ್ತವೆ.

ಪಾಠ, ಪದ್ಯ, ಸೂತ್ರಗಳನ್ನು ಜೋರಾಗಿ ಓದಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳಿ. ಬಸ್ಸುಗಳಲ್ಲಿ, ಮನೆಯಲ್ಲಿ ಬಿಡುವಿನ ಸಮಯ ಇದ್ದಾಗ ಅದನ್ನು ಕೇಳಿಸಿಕೊಳ್ಳಿ. ಓದಿದ ಪಾಠ ಮನನ ಮಾಡಿಕೊಳ್ಳಲು ಇದು ನೆರವಾಗುತ್ತೆ.

* ಇಲ್ಲಿಂದಾಚೆಗೆ ಓದಿದ್ರೆ ಪಾಸಾಗ್ತೀನಾ
ಈ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದಿದೆ ಎಂದರೆ ನಿಮಗೆ ಓದುವ ಆಸಕ್ತಿ ಮೂಡಿದೆ ಎಂದೇ ಅರ್ಥ. ‘ಓದುವುದು’ ಎನ್ನುವುದು ಅಧ್ಯಯನ ಎನ್ನುವ ಒಂದು ದೊಡ್ಡ ಪರಿಕಲ್ಪನೆಯ ಭಾಗ ಮಾತ್ರ. ಒಂದು ವಿಷಯವನ್ನು ನಾವು ಓದಿಯೇ ಅರ್ಥ ಮಾಡಿಕೊಳ್ಳಬೇಕಿಲ್ಲ. ಪಾಠಗಳನ್ನು ಕೇಳಿಸಿಕೊಳ್ಳುವ ಮೂಲಕ, ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ, ಫ್ರೆಂಡ್ಸ್‌ ಜೊತೆಗೆ ಆಡುವಾಗ, ಟೀವಿ ಕಾರ್ಯಕ್ರಮಗಳಲ್ಲಿ ಹೀಗೆ ಹತ್ತಾರು ಮಾಧ್ಯಮಗಳ ಮೂಲಕ ಪಾಠಗಳನ್ನು ಕಲಿಯುತ್ತಲೇ ಇರುತ್ತೇವೆ. ಆದರೆ ಅದನ್ನು ಪರೀಕ್ಷೆಗೆ ಅನ್ವಯಿಸಿ ಯೋಚಿಸುವುದನ್ನು ರೂಢಿಸಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳಬೇಕಾಗಿದೆ. ತಡವಾಗಿ ಎಚ್ಚೆತ್ತುಕೊಂಡವರು ಈ ಅಂಶವನ್ನು ಗಮನಿಸಬೇಕು. ಏಕಾಂಗಿಯಾಗಿ ಪಠ್ಯಕ್ರಮವನ್ನು ಪೂರ್ತಿ ಓದಿಯೇ ಮುಗಿಸುತ್ತೇನೆ ಎನ್ನುವ ಹಟ ಬಿಡಿ. ಹಳೆಯ ಪ್ರಶ್ನಪತ್ರಿಕೆಗಳನ್ನು ಬಿಡಿಸುವುದು, ಪ್ರಿಪರೇಟರಿ ಪರೀಕ್ಷೆಗಳಲ್ಲಿ ಬಂದಿರುವ ಪ್ರಶ್ನೆಗಳನ್ನು ಗಮನಿಸಿಕೊಳ್ಳುವುದು, ಚೆನ್ನಾಗಿ ಓದಿರುವ ವಿದ್ಯಾರ್ಥಿಗಳ ಜೊತೆಗೆ ಸೌಜನ್ಯದ ಒಡನಾಟ, ಗ್ರೂಪ್ ಡಿಸ್ಕಷನ್‌ಗಳಿಂದ ಖಂಡಿತ ಲಾಭವಿದೆ. ಮೊದಲಿನಿಂದಲೂ ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ನಿಮಗೆ ಪರೀಕ್ಷಾ ದೃಷ್ಟಿಯಿಂದ ಮುಖ್ಯವೆನಿಸುವ ಅಂಶಗಳನ್ನು ವಿವರಿಸಬಲ್ಲರು.

ಇದನ್ನೂ ಓದಿ: ಪರೀಕ್ಷಾ ಕೊಠಡಿಯಲ್ಲಿ ಮೂರು ತಾಸು

* ಬರೆದು ಅಭ್ಯಾಸ ಮಾಡಿ
ನಿಮಗೇನು ಗೊತ್ತಿದೆ ಹಾಗೂ ನೀವು ಏನೆಲ್ಲಾ ಓದಿಕೊಂಡಿದ್ದೀರಿ ಎನ್ನುವುದನ್ನು ಪರೀಕ್ಷೆಯಲ್ಲಿ ಬರೆದೇ ತಿಳಿಸಬೇಕು. ಕೆಲ ಮಕ್ಕಳು ಪರೀಕ್ಷೆಯಲ್ಲಿ ಸರಿಯಾಗಿ ಬರೆಯುವುದಿಲ್ಲ. ಆದರೆ ಪರೀಕ್ಷೆ ಮುಗಿಸಿ ಹೊರಗೆ ಬಂದಾಗ ಅಮ್ಮನ ಎದುರು ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳುತ್ತವೆ. ವಿದ್ಯಾರ್ಥಿಗೆ ಉತ್ತರ ಗೊತ್ತಿದ್ದರೂ ಅದನ್ನು ಸರಿಯಾಗಿ ಬರೆಯಲು ಸಾಧ್ಯವಾಗದ ಕಾರಣ ಕಡಿಮೆ ಅಂಕ ಬಂದಿರುತ್ತೆ.

‘ಬರವಣಿಗೆಯ ತಂತ್ರಗಳ ಕಡೆಗೆ ಗಮನ ಕೊಡದಿರುವುದೇ ಇದಕ್ಕೆ ಕಾರಣ. ಯಾವುದೇ ವಿಷಯವನ್ನು ಓದುವಾಗ ಕೇವಲ ನಮ್ಮ ಕಣ್ಣು ಕೆಲಸ ಮಾಡುತ್ತೆ. ಬರವಣಿಗೆ ಹಾಗಲ್ಲ. ಕಣ್ಣು, ಕೈ ಮತ್ತು ಮನಸ್ಸು ಏಕತ್ರವಾಗಿ ಗಮನ ಕೊಡಬೇಕು. ಹೀಗಾಗಿಯೇ ಮಕ್ಕಳು ಬರೆಯುವ ಹವ್ಯಾಸ ರೂಢಿಸಿಕೊಳ್ಳುವುದು ಅತಿಮುಖ್ಯ’ ಎನ್ನುತ್ತಾರೆ ಗುರುಪ್ರಸಾದ್.

‘ಆರಂಭದಲ್ಲಿ ಪುಸ್ತಕ ನೋಡಿಕೊಂಡು ಬರೆದರೂ ಕ್ರಮೇಣ ಉಕ್ತಲೇಖನ (ಬೇರೆಯವರು ಹೇಳುವುದನ್ನು ಬರೆಯುವುದು), ಪುಸ್ತಕ ಮುಚ್ಚಿಟ್ಟು ಉತ್ತರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಬೇಕು. ನಾವು ವೀಕ್ ಇರುವ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ಗಣಿತದ ಲೆಕ್ಕಗಳು, ಭೌತಶಾಸ್ತ್ರದ ನಿಯಮಗಳು, ರಸಾಯನಶಾಸ್ತ್ರದಲ್ಲಿ ರಿಯಾಕ್ಷನ್ಸ್‌ಗಳನ್ನು ನಾವು ಬಾಯಿಪಾಠ ಮಾಡಿಕೊಂಡು ಪರೀಕ್ಷೆ ಜಯಿಸುತ್ತೇವೆ ಎಂದರೆ ಆಗುವುದಿಲ್ಲ. ಅವನ್ನು ಬರೆದೇ ಅಭ್ಯಾಸ ಮಾಡಬೇಕು. ಪುಸ್ತಕ ಮುಚ್ಚಿಟ್ಟು ನಕಾಶೆ (ಮ್ಯಾಪ್) ಬಿಡಿಸುವುದು, ನಕಾಶೆಗಳಲ್ಲಿ ಸ್ಥಳ ಗುರುತಿಸುವುದನ್ನು ಅಭ್ಯಾಸ ಮಾಡಬೇಕು’ ಎಂದು ಅವರು ಸಲಹೆ ಮಾಡುತ್ತಾರೆ.

* ಭೀತಿ ಹೆಚ್ಚಾದ್ರೆ ಹೀಗೆಲ್ಲಾ ಆಗುತ್ತೆ...
ಓದುವುದನ್ನು ಮಕ್ಕಳು ಫನ್ (ಖುಷಿ) ಅಂದುಕೊಳ್ಳುವುದಿಲ್ಲ. ಅವರ ಪಾಲಿಗೆ ಅದೊಂದು ಹೊರೆಯಾಗಿದೆ. ಇದರ ಜೊತೆಗೆ 15 ವರ್ಷ ಆರಾಮಾಗಿ ಇದ್ದವರಿಗೆ 16ನೇ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹೆಸರಿನಲ್ಲಿ ಬರುವ ಪಬ್ಲಿಕ್ ಪರೀಕ್ಷೆ ಭಯ ಹುಟ್ಟಿಸುತ್ತೆ. ‘ಜನವರಿಯಿಂದ ಏಪ್ರಿಲ್‌ ತಿಂಗಳ ನಡುವೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹಲವು ದೈಹಿಕ, ಮಾನಸಿಕ ಸಮಸ್ಯೆಗಳಿಗೆ ಪರೀಕ್ಷಾ ಭೀತಿಯೇ ಕಾರಣ’ ಎನ್ನುತ್ತಾರೆ ಗುರುಪ್ರಸಾದ್.

ದೈಹಿಕ ಸಮಸ್ಯೆಗಳು: ಎದೆಬಡಿತ ಹೆಚ್ಚಾಗುವುದು, ವೇಗದ ಉಸಿರಾಟ, ಕೈಕಾಲು ನಡುಕ, ಅತಿ ಬೆವರುವಿಕೆ, ಪೆನ್ ಹಿಡಿಯೋಕೆ ಆಗದ ಸ್ಥಿತಿ, ಹೊಟ್ಟೆಯಲ್ಲಿ ಗುಡುಗುಡು ಅನ್ನೋದು, ಬೇಧಿ, ಹೊಟ್ಟೆನೋವು, ತಲೆನೋವು ಇತ್ಯಾದಿ.

ಮಾನಸಿಕ ಸಮಸ್ಯೆಗಳು: ಖಿನ್ನತೆ, ಕೆಟ್ಟ ಯೋಚನೆಗಳು, ಒಂಟಿಯಾಗಿರುವುದು, ಕೆಟ್ಟ ಕನಸುಗಳು, ಅತಿಯಾಗಿ ಕನವರಿಸಿಕೊಳ್ಳುವುದು, ಹಾಸಿಗೆಯಲ್ಲಿ ಮೂತ್ರವಿಸರ್ಜನೆ, ಮಂಕಾಗಿರುವುದು, ಅತಿಮರೆವು ಇತ್ಯಾದಿ.

ಕೆಲ ಮಕ್ಕಳು ಮೊದಲ ವಿಷಯದ ಪರೀಕ್ಷೆ ಬರೆದು ನಂತರ ಯಾವುದನ್ನೂ ಬರೆಯಲ್ಲ ಅಂತ ಹಿಂಜರಿಯುತ್ತವೆ. ನನಗೆಲ್ಲಾ ಮರೆತುಹೋಗಿದೆ ಅಂತ ಅಳುತ್ತವೆ.

ಪರೀಕ್ಷಾ ಸಮಯದಲ್ಲಿ ಹೀಗಿರಿ...
ಪರೀಕ್ಷೆ ಕೂಡ ಬದುಕಿನ ಒಂದು ಭಾಗ. ನಿನ್ನ ಅಪ್ಪ–ಅಮ್ಮ, ಟೀಚರ್‌ಗಳೆಲ್ಲಾ ಪರೀಕ್ಷೆ ಬರೆದಿದ್ದಾರೆ. ಇದೊಂದು ಸಹಜ ಪ್ರಕ್ರಿಯೆ ಎನ್ನುವುದನ್ನು ನಾಟುವಂತೆ ಮಕ್ಕಳಿಗೆ ವಿವರಿಸಿ.

* ಓದಿನ ನಡುವೆ ಗಂಟೆಗೊಮ್ಮೆ ಐದು ನಿಮಿಷಗಳ ವಿಶ್ರಾಂತಿ ಇರಲಿ.

* ದೇವರಲ್ಲಿ ನಂಬಿಕೆ ಇದ್ದರೆ ಮಂತ್ರ–ಸ್ತೋತ್ರ ಹೇಳಿಕೊಳ್ಳಿ. ಇಲ್ಲದಿದ್ದರೆ ಒಳ್ಳೇ ಸಂಗೀತ ಕೇಳಿ.

* ಕನಿಷ್ಠ ಏಳು ತಾಸು ನಿದ್ದೆ ಮಾಡಲೇಬೇಕು. ಓದುವ ಅವಧಿ ಹೆಚ್ಚುಕಡಿಮೆಯಾದರೂ ಪರವಾಗಿಲ್ಲ. ನಿದ್ದೆಯ ಅವಧಿಯಲ್ಲಿ ಕಡಿತ ಸಲ್ಲದು.

* ಓದುವ ಅಭ್ಯಾಸ (ಪ್ಯಾಟರ್ನ್‌) ಬದಲಿಸಬೇಡಿ. ಕೆಲವು ಮಕ್ಕಳಿಗೆ ತಡರಾತ್ರಿಯವರೆಗೆ ಓದುವ ಹವ್ಯಾಸ ಇರುತ್ತೆ. ಕೆಲವರಿಗೆ ಮುಂಜಾನೆ ಬೇಗ ಎದ್ದು ಓದುವ ಅಭ್ಯಾಸ. ಪರೀಕ್ಷೆ ಅವಧಿಯಲ್ಲಿ ಪ್ಯಾಟರ್ನ್ ಬದಲಿಸುವುದರಿಂದ ಹೆಚ್ಚೇನೂ ಪ್ರಯೋಜನವಾಗದು.

* ಪರೀಕ್ಷೆಗೆಂದು ಹೊರಡುವ ಮೊದಲು ‘ಹಾಲ್‌ ಟಿಕೆಟ್’ ಇಟ್ಟುಕೊಂಡಿರುವುದು ಖಾತ್ರಿಪಡಿಸಿಕೊಳ್ಳಿ. ಅರ್ಧಗಂಟೆ ಮುಂಚೆ ಪರೀಕ್ಷಾ ಕೇಂದ್ರ ತಲುಪಿ.

* ನಿಮ್ಮಿಷ್ಟದಂತೆ ಪರೀಕ್ಷೆ ಬರೆಯಿರಿ
ಜಗತ್ತಿನಲ್ಲಿ ಪರ್ಫೆಕ್ಟ್‌ ವಿದ್ಯಾರ್ಥಿ ಅಂತ ಇಲ್ಲವೇ ಇಲ್ಲ. ಹೀಗಾಗಿ ಪರೀಕ್ಷೆ ಬರೆಯುವುದರಲ್ಲಿಯೂ ಪರ್ಫೆಕ್ಟ್‌ ಸೂತ್ರ ಅಂತ ಯಾವುದೂ ಇಲ್ಲ. ಪ್ರತಿ ಮಗುವೂ ಪರೀಕ್ಷೆ ಬರೆಯುವುದರಲ್ಲಿ ತನ್ನದೇ ಶೈಲಿಯನ್ನು ಅನುಸರಿಸುವುದು ಸಾಮಾನ್ಯ ಸಂಗತಿ.

ಮೊದಲು ಪ್ರಶ್ನೆಪತ್ರಿಕೆಯನ್ನು ಇಡಿಯಾಗಿ ಓದಿಕೊಳ್ಳಿ. ನೀವು ನಿರೀಕ್ಷೆ ಮಾಡದ ಪ್ರಶ್ನೆಗಳಿದ್ದರೆ ಗಾಬರಿಪಟ್ಟುಕೊಳ್ಳಬೇಡಿ.

‘ಈ ಪ್ರಶ್ನೆಗೆ ಉತ್ತರ ಚೆನ್ನಾಗಿ ಬರೆಯಬಲ್ಲೆ’ ಎನ್ನುವ ಆತ್ಮವಿಶ್ವಾಸ ಇರುವ ಪ್ರಶ್ನೆಗಳನ್ನೇ ಮೊದಲು ಉತ್ತರಿಸಲು ಆರಿಸಿಕೊಳ್ಳಿ.

ಚೆನ್ನಾಗಿ ಓದಿಕೊಂಡಿರುವ ಉತ್ತರಗಳೂ ಕೆಲವೊಮ್ಮೆ ಮರೆತಂತೆ ಆಗಿರುತ್ತೆ. ಗಾಬರಿಯಾದರೆ ಪೂರ್ತಿ ಬ್ಲಾಂಕ್ ಆಗಿಬಿಡ್ತೀರಿ. ಗೊತ್ತಿರುವ ಉತ್ತರಗಳನ್ನು ಬರೆಯಲು ಶುರು ಮಾಡಿ, ಉಳಿದವು ಕ್ರಮೇಣ ನೆನಪಾಗುತ್ತವೆ.

ಯಾವುದಾದರೂ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದಾದರೆ ಅದರ ಬಗ್ಗೆಯೇ ಯೋಚಿಸುತ್ತಾ ಟೈಂ ವೇಸ್ಟ್‌ ಮಾಡಬೇಡಿ. ಹೀಗೆ ಮಾಡಿದರೆ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯುವ ಅವಕಾಶವನ್ನೂ ಕಳೆದುಕೊಳ್ತೀರಿ ಅನ್ನೋ ಎಚ್ಚರವಿರಲಿ.

* ಉಲ್ಲಾಸದ ಬೆರಳ ಹಿಡಿದು...
ತಜ್ಞರ ಕಿವಿಮಾತು, ಪಾಲಕರ ಹಾರೈಕೆ ಹಾಗೂ ಒತ್ತಾಸೆ, ಯಶಸ್ವಿ ವಿದ್ಯಾರ್ಥಿಗಳ ಟಿಪ್ಸ್‌, ಶಿಕ್ಷಕರು ಮತ್ತು ತಜ್ಞರ ಮಾರ್ಗದರ್ಶನ – ಇವೆಲ್ಲದರಿಂದಾಗಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗೆ ದೊರೆಯಬೇಕಾದುದೇನು? ಅದು, ಆತ್ಮವಿಶ್ವಾಸವಲ್ಲದೆ ಬೇರೇನಲ್ಲ.

ಪರೀಕ್ಷೆ ಬರೆಯಲಿಕ್ಕೆ ಪ್ರತಿಭೆ ಹಾಗೂ ಸಮರ್ಪಕ ಸಿದ್ಧತೆಯಷ್ಟೇ ಸಾಲದು; ಆತ್ಮವಿಶ್ವಾಸವೂ ಬೇಕು. ಕೆಲವು ಸಂದರ್ಭಗಳಲ್ಲಿ ನಮಗೆ ತಿಳಿದಿರುವ ವಿಷಯ ಕೂಡ ಪರೀಕ್ಷೆ ಬರೆಯುವಾಗ ಮರೆತುಹೋಗುತ್ತದೆ. ಅದಕ್ಕೆ ಕಾರಣ, ಆತ್ಮವಿಶ್ವಾಸದ ಕೊರತೆ. ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಾಗ, ಪರೀಕ್ಷೆ ಸುಲಭವಾಗುತ್ತದೆ.

ಆತ್ಮವಿಶ್ವಾಸದ ಕಾರಣದಿಂದಾಗಿ ಆತಂಕ ದೂರವಾಗಿ ಪರೀಕ್ಷೆಯನ್ನು ಹುರು‍ಪಿನಿಂದ ಎದುರಿಸುವುದು ಸಾಧ್ಯವಾಗುತ್ತದೆ. ಹಾಗೆ ನೋಡಿದರೆ, ಪರೀಕ್ಷೆ ಎನ್ನುವುದು ಶಾಲಾ ಕಾಲೇಜಿಗೆ ಸೀಮಿತವಾದ ಒಂದು ಪ್ರಕ್ರಿಯೆಯೇನಲ್ಲ. ಬದುಕಿನುದ್ದಕ್ಕೂ ಪರೀಕ್ಷೆಗಳನ್ನು ಎದುರಿಸುತ್ತಿರಲೇಬೇಕು. ಆಧುನಿಕ ಸಂದರ್ಭದಲ್ಲಂತೂ ಅನುದಿನವೂ ಅನುಕ್ಷಣವೂ ಪರೀಕ್ಷೆ. ಆ ಕಾರಣದಿಂದಾಗಿ ಪರೀಕ್ಷೆಗೆ ಅಂಜಿದರೆ ನಮ್ಮ ಬದುಕಿನ ಚೆಲುವನ್ನು ನಾವೇ ಕೈಯಾರೆ ಹಾಳು ಮಾಡಿಕೊಂಡಂತಾಗುತ್ತದೆ. ಸಮಸ್ಯೆಯೊಂದನ್ನು ಎದುರಿಸುವಾಗ ಆತಂಕದಿಂದ ಇದ್ದರೆ ಅದು ಇನ್ನಷ್ಟು ಕಠಿಣ ಎನ್ನಿಸುತ್ತದೆ. ಉಲ್ಲಾಸದ ಮನೋಭಾವದಲ್ಲಿ ಎಂಥ ಕಠಿಣ ಸಮಸ್ಯೆಯೂ ಸುಲಭವಾಗುತ್ತದೆ.

ಶಾಲಾ ಕಾಲೇಜುಗಳಾಚೆಗೂ ಬದುಕಿನ ಸಾಧ್ಯತೆಗಳು ಅಪಾರವಾಗಿವೆ ಹಾಗೂ ಪರೀಕ್ಷೆಯಲ್ಲಿ ದೊರೆಯುವ ಅಂಕಗಳಷ್ಟೇ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ ಎನ್ನುವ ತಿಳಿವಳಿಕೆ ಕೂಡ ಅಗತ್ಯ. ಪರೀಕ್ಷೆ ಹತ್ತನೇ ತರಗತಿಯದೋ ಪಿಯುಸಿಯದೋ – ಇವೆಲ್ಲ ಜೀವನದ ಒಂದು ಘಟ್ಟವೇ ಹೊರತು, ಆ ಪರೀಕ್ಷೆಗಳೇ ಬದುಕಲ್ಲ ಎನ್ನುವ ಅರಿವೂ ಮುಖ್ಯ.

ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷೆ ಹೊಸ್ತಿಲಲ್ಲಿದೆ. ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಜ್ಜಾಗಿ. ಸಂತೋಷದಿಂದ ಪರೀಕ್ಷೆ ಎದುರಿಸಿ.

**

ನಿಮ್ಮ ಉತ್ತರಗಳು ಹೀಗಿರಲಿ

‘ಈ ಮಕ್ಕಳು ಅದೇನು ಬರೀತಾರೋ, ಓದೋಕೆ ಆಗಲ್ಲ. ಹೀಗಾಗಿಯೇ ಒಂದಷ್ಟು ಮಕ್ಕಳಿಗೆ ಸೊನ್ನೆ ಸುತ್ತಿದೆ’ ಎಂದು ಪರೀಕ್ಷಾ ಮೌಲ್ಯಮಾಪನಕ್ಕೆ ಬಂದಿದ್ದ ಶಿಕ್ಷಕರೊಬ್ಬರು ತಮ್ಮ ಅನುಭವ ಹಂಚಿಕೊಂಡರು.

ಪರೀಕ್ಷೆಯನ್ನು ನಾವು ಬರೆದೇ ಸಾಧಿಸಬೇಕು. ಬರವಣಿಗೆಯಲ್ಲಿ ಅಕ್ಷರಗಳ ಅಂದ, ವೇಗ, ಸಮಯಪಾಲನೆಯ ಸೂತ್ರ ಅಳವಡಿಸಿಕೊಳ್ಳಬೇಕು. ಅಂದದ ಬರವಣಿಗೆಯೂ ಒಂದು ಕಲೆ. ಅದನ್ನು ಅಭ್ಯಾಸ ಮಾಡಿಯೇ ಸಿದ್ಧಿಸಿಕೊಳ್ಳಬೇಕು. ಹೀಗೆ ಮಾಡಿದರೆ ಕನಿಷ್ಠ ಓದಲು ಸಾಧ್ಯವಿರುವಷ್ಟರ ಮಟ್ಟಿಗಾದರೂ ನಿಮ್ಮ ಅಕ್ಷರಗಳು ಚಂದ ಆದಾವು.

ಸಮಾಧಾನವಾಗಿ ಬರೆಯಿರಿ: ವಿಪರೀತ ವೇಗ, ಅತಿ ನಿಧಾನ ಸಲ್ಲದು.

ಹುಡುಗಾಟಿಕೆ ಬೇಡ: ಪುಟಗಳನ್ನು ತುಂಬಿಸಬೇಕೆಂದು ಅತಿ ದಪ್ಪನಾಗಿ ಬರೆಯುವುದು, ಕಣ್ಣಿಗೆ ಕಾಣಿಸದಂತೆ ಬರೆದರೆ ಹೆಚ್ಚು ಮಾರ್ಕ್ಸ್‌ ಸಿಗುತ್ತೆ ಎಂದು ಕೊರೆಯುವುದು ತಪ್ಪು. ಹೀಗೆ ಮಾಡಿದರೆ ನಿಮ್ಮ ಸರಿಯುತ್ತರವನ್ನೂ ಮೌಲ್ಯಮಾಪಕರು ಗಮನಿಸದಿರುವ ಅಪಾಯ ಇರುತ್ತೆ.

ಅಂತರ ತಿಳಿದಿರಲಿ: ಅಕ್ಷರದಿಂದ ಅಕ್ಷರಕ್ಕೆ, ಪದದಿಂದ ಪದಕ್ಕೆ ಎಷ್ಟು ಅಂತರ ಕೊಡಬೇಕು ಎಂಬುದನ್ನು ಅಭ್ಯಾಸ ಮಾಡಿ ಸಾಧಿಸಿ.

ನಿರಂತರ ಅಭ್ಯಾಸ: ಓದಿದ್ದನ್ನು ಬರೆದು ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ. ನೀವು ಬರೆದದ್ದನ್ನು ಮತ್ತೊಬ್ಬರಿಗೆ ತೋರಿಸಿ. ಬರೆಯುವ ಕ್ರಮದಲ್ಲಿ ತಪ್ಪುಗಳಿದ್ದರೆ ತಿದ್ದಿಕೊಳ್ಳಿ.

ಸಕಾರಾತ್ಮಕ ಚಿಂತನೆ: ನನ್ನಿಂದ ಚೆನ್ನಾಗಿ ಬರೆಯಲು ಸಾಧ್ಯವಿಲ್ಲ ಎನ್ನುವ ತಪ್ಪುಕಲ್ಪನೆಯಿಂದ ಹೊರಬನ್ನಿ. ಅಭ್ಯಾಸ ಮಾಡಿದರೆ ಮತ್ತೊಬ್ಬರಿಗೆ ಅರ್ಥವಾಗುವಂತೆ ಬರೆಯಲು ಸಾಧ್ಯ ಎನ್ನುವ ಆತ್ಮವಿಶ್ವಾಸ ನಿಮ್ಮದಾಗಲಿ.

ಬರಹ ಸಾಮಗ್ರಿ: ಪರೀಕ್ಷೆಗೆ ಮೊದಲೇ ನಿರ್ದಿಷ್ಟ ಕಂಪನಿಯ ಪೆನ್ ಗುರುತಿಸಿಕೊಂಡು ಅದರಲ್ಲೇ ಬರವಣಿಗೆ ಅಭ್ಯಾಸ ಮಾಡುವುದು ಕ್ಷೇಮ. ಜೆಲ್‌, ಇಂಕ್‌ಪೆನ್‌ಗಳಿಗಿಂತ ಆಯಿಲ್ ಬೇಸ್ಡ್‌ ಗ್ರಿಪರ್ ಪೆನ್‌ಗಳಲ್ಲಿ ಅಕ್ಷರಗಳು ದುಂಡಾಗಿರುತ್ತವೆ.

ಬೆರಳುಗಳಿಗೆ ವ್ಯಾಯಾಮ ಮಾಡಿಸಿ: ಅಮ್ಮ ಚಪಾತಿ ಅಥವಾ ರೊಟ್ಟಿ ಹಿಟ್ಟು ಕಲೆಸುವಾಗ ತುಸು ಹಿಟ್ಟನ್ನು ಅಂಗೈಗೆ ಅಂಟಿಸಿಕೊಳ್ಳಿ. ಇನ್ನೊಂದು ಕೈ ನೆರವಿಲ್ಲದೆ ಅದನ್ನು ಬಿಡಿಸಲು ಯತ್ನಿಸಿ. ಹೀಗೆ ಮಾಡಿದರೆ ಬೆರಳುಗಳಿಗೆ ಚೆನ್ನಾಗಿ ವ್ಯಾಯಾಮವಾಗಿ ಹೆಚ್ಚು ಬರೆಯುವ ಸಾಮರ್ಥ್ಯ ಬರುತ್ತದೆ. ನರಗಳು ಚುರುಕಾಗಿ, ಮಿದುಳು ಸಕ್ರಿಯವಾಗುತ್ತದೆ.

ಕಾಗುಣಿತ, ವ್ಯಾಕರಣ, ಉದ್ಧರಣ ಚಿಹ್ನೆಗಳ (ಪಂಕ್ಚುಯೇಷನ್‌) ಕಡೆಗೆ ಗಮನಕೊಡಿ.

ಒಂದು ಪ್ರಶ್ನೆಗೆ ಉತ್ತರ ಬರೆದ ನಂತರ ಒಂದು ಗೆರೆ ಖಾಲಿ ಬಿಡಿ.

ಉತ್ತರದಲ್ಲಿರುವ ಮುಖ್ಯ ಅಂಶಗಳತ್ತ ಮೌಲ್ಯಮಾಪಕರ ಗಮನ ಸೆಳೆಯಲು ಅಂಡರ್‌ಲೈನ್ ಮಾಡಿ.

**

ನಮ್ಮ ಬರವಣಿಗೆ ಮತ್ತೊಬ್ಬರಿಗೆ ಅರ್ಥವಾಗುವಂತಿದ್ದರೆ, ಕಾಗುಣಿತ, ಸ್ಪೆಲ್ಲಿಂಗ್ ಮಿಸ್ಟೇಕ್ ಇಲ್ಲದ ಬರಹ ನಮ್ಮದಾಗಿದ್ದರೆ ಅರ್ಧ ಪರೀಕ್ಷೆ ಗೆದ್ದಂತೆ. ಉತ್ತಮ ಬರವಣಿಗೆ ವಿದ್ಯಾರ್ಥಿಯ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

–ಆಶಾ ಭಾರಧ್ವಾಜ್, ಶಿಕ್ಷಕಿ, ಮೇರಿ ಇಮ್ಯಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ, ಶಿವಮೊಗ್ಗ

***

ಕೆಲವು ಮಕ್ಕಳು ನಾಲ್ಕೈದು ಬೆರಳುಗಳನ್ನು ಮುಷ್ಟಿ ಕಟ್ಟಿಕೊಂಡು ಬರೆಯುವುದುಂಟು. ಇದು ಮಿದುಳಿನ ಕಾರ್ಯನಿರ್ವಹಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯಮ ಬೆರಳನ್ನು ಮಾತ್ರ ಬರೆಯಲು ಬಳಸುವುದು ಒಳಿತು. ಬರೆಯುವಾಗ ಕೆಲವು ಮಕ್ಕಳ ಕೈ ಬೆವರುತ್ತದೆ. ಇಂಥವರು ಕಡ್ಡಾಯವಾಗಿ ಗ್ರಿಪ್ಪರ್ ಇರುವ ಪೆನ್ ಬಳಸಬೇಕು.

–ಶ್ರುತಿ ಚಂದ್ರಶೇಖರ್, ಕೈಬರಹ ತಜ್ಞೆ, ಬೆಂಗಳೂರು

**

ಗಣಿತ ಕಬ್ಬಿಣದ ಕಡಲೆ ಅಲ್ಲ
ಈಗ ಎಕ್ಸಾಂ ಹತ್ತಿರ ಬಂದಿದೆ. ಮೊದಲು ಎಷ್ಟೆಲ್ಲ ಪಾಠಗಳ ಬಗ್ಗೆ ಕಾನ್ಫಿಡೆನ್ಸ್ ಇದೆ ಆಂತ ಗುರುತು ಮಾಡಿಕೊಳ್ಳಿ. ಯಾವುದರ ಬಗ್ಗೆ ಆತಂಕ ಇದೆ ಕಂಡುಕೊಳ್ಳಿ. ಗೊತ್ತಿರುವ ಪಾಠಗಳ ಪುನರ್‌ಮನನಕ್ಕೆ ಮತ್ತು ಕಾನ್ಫಿಡೆನ್ಸ್ ಇಲ್ಲದ ಪಾಠಗಳ ಅಭ್ಯಾಸಕ್ಕೆ ಪ್ರತ್ಯೇಕ ಸಮಯ ನಿಗದಿಮಾಡಿಕೊಳ್ಳಿ.

ಗೊತ್ತಿರುವ ಪಾಠಗಳನ್ನು ಮತ್ತೊಮ್ಮೆ ಅಭ್ಯಾಸ ಮಾಡಿ ಪಕ್ಕಾ ಮಾಡಿಕೊಳ್ಳಿ. ಅದು ನಮಗೆ ಅಸಲು. ಆರು ವರ್ಷಗಳ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ. ಪ್ರತಿ ಪ್ರಶ್ನೆಗೂ ತನ್ನದೇ ಆದ ರೀತಿಯಲ್ಲಿ ಉತ್ತರಿಸಬೇಕು. ಆ ಮೆಥೆಡ್ ಕಂಡುಕೊಳ್ಳಿ. ಗ್ರಾಫ್‌ ಮೂಲಕ ಉತ್ತರಿಸುವ ಪ್ರಶ್ನೆ, ಪ್ರಮುಖ ಪ್ರವೇಯಗಳ ವಿವರಣೆಗಳನ್ನು ಗಮನಿಸಿಕೊಳ್ಳಿ. ಪಾಠಗಳ ಅನುಸಾರ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಬಿಡಿಸಿ ಅಭ್ಯಾಸ ಮಾಡಿದರೆ ಪಾಸ್‌ ಆಗುವುದಂತೂ ಗ್ಯಾರಂಟಿ. ಹೆಚ್ಚಿನ ಅಂಕ ಪಡೆಯಲೂ ಇದೊಂದು ಸುಲಭದ ದಾರಿ.

ಪರೀಕ್ಷೆಯ ಹಿಂದಿನ ದಿನ ಹೊಸದಾಗಿ ಏನನ್ನೂ ಓದಲು ಹೋಗಬೇಡಿ. ಈಗಾಗಲೇ ಓದಿರುವುದನ್ನೇ ಇನ್ನೊಮ್ಮೆ ನೆನಪಿಸಿಕೊಳ್ಳುತ್ತ ಹೋಗಿ. ಪರೀಕ್ಷೆ ಬರೆಯುವಾಗ ಗೊತ್ತಿರುವ ಪ್ರಶ್ನೆಗಳನ್ನು ಮಾರ್ಕ್‌ ಮಾಡಿಕೊಳ್ಳಿ. ನಾನು ಅಧಿಕ ಅಂಕದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿದೆ. ಇದರಿಂದ ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳಿಗೆ ಯೋಚಿಸಿ ಉತ್ತರಿಸಲು ಸಮಯ ಸಿಕ್ಕಿತ್ತು.

ಮೊದಲಲ್ಲೇ ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳಿಗೆ ಹೆಚ್ಚು ಸಮಯ ಕೊಟ್ಟರೆ, ಕೊನೆಯಲ್ಲಿ ಸಮಯದ ಅಭಾವದಿಂದ ಅಧಿಕ ಅಂಕಗಳ ಪ್ರಶ್ನೆಗಳನ್ನು ಬಿಟ್ಟು ಬರುವಂತಾದರೆ ಕಷ್ಟ.

**

ಶೈಕ್ಷಣಿಕ ಮನೋವಿಜ್ಞಾನಿ ಹೀಗೆ ಹೇಳ್ತಾರೆ...

ಪೋಷಕರು, ಶಿಕ್ಷಕರು ಮಾತ್ರವಲ್ಲ – ಇಡೀ ಸಮಾಜದ ನಿರೀಕ್ಷೆಗಳ ಭಾರ ಮಕ್ಕಳ ಮೇಲೆ ಇರುತ್ತೆ. ಇಷ್ಟೊಂದು ಭಾರ ಹೊತ್ತು ಪರೀಕ್ಷೆ ಬರೆಯಲು ಸಿದ್ಧರಾಗುವ ಮಕ್ಕಳ ಕಷ್ಟ ಅವರಿಗೇ ಗೊತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವುದು ‘ಬ್ರಹ್ಮವಿದ್ಯೆ’ ಅಲ್ಲ. ಎಲ್ಲವನ್ನೂ ಸಹಜವಾಗಿ, ಸರಳವಾಗಿ, ಸಕಾರಾತ್ಮಕವಾಗಿ ಸ್ವೀಕರಿಸುವುದನ್ನು ರೂಢಿಸಿಕೊಂಡರೆ ಒಳ್ಳೆಯದೇ ಆಗುತ್ತದೆ.

ಎಲ್ಲ ಮಕ್ಕಳ ನೆನಪಿನ ಶಕ್ತಿ ಒಂದೇ ರೀತಿಯಲ್ಲಿರುವುದಿಲ್ಲ. ನೆನಪಿನ ಶಕ್ತಿ ಕಡಿಮೆ ಇರುವ ಮಕ್ಕಳು ಪರೀಕ್ಷೆ ಸಮಯದಲ್ಲಿ ಹೆಚ್ಚು ಆತಂಕಕ್ಕೊಳಗಾಗುತ್ತಾರೆ. ಹಾಗೆಂದು ಅವರು ದಡ್ಡರೇನಲ್ಲ. ಓದುವ ವಿಧಾನದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಪರೀಕ್ಷೆಯ ಕಾರಣದಿಂದ ಮಕ್ಕಳ ಮನಸ್ಸಿನಲ್ಲಿ ಆತಂಕ ಮತ್ತು ಉದ್ವಿಗ್ನತೆ ಹೆಚ್ಚಾಗುತ್ತೆ. ಇದರ ಪರಿಣಾಮ ಅಜೀರ್ಣ, ಅಸಿಡಿಟಿ, ನಿದ್ರಾಹೀನತೆ, ಜ್ವರದ ಲಕ್ಷಣಗಳು ಗೋಚರಿಸಬಹುದು. ಹೊತ್ತಿಗೆ ಸರಿಯಾಗಿ ತಿಂಡಿ–ಊಟ ಮಾಡುವುದು, 6ರಿಂದ 8 ಗಂಟೆಯ ನಿದ್ದೆಯಿಂದ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಪರೀಕ್ಷೆ ನಡೆಯುತ್ತಿರುವ ದಿನಗಳಲ್ಲಿಯಂತೂ ನಿದ್ದೆ ಮತ್ತು ಊಟದಲ್ಲಿ ಹೆಚ್ಚುಕಡಿಮೆಯಾಗದಂತೆ ಎಚ್ಚರಿಕೆಯಿಂದ ಇರಬೇಕು. ನೆನಪಿನಶಕ್ತಿಗೆ ಮತ್ತು ಓದಿದ್ದು ಸಕಾಲಕ್ಕೆ ಒದಗಿ ಬರುವ ಚುರುಕುತನಕ್ಕೆ ನಿದ್ದೆ ಅತ್ಯಂತ ಅಗತ್ಯ. ಈ ಮಾತನ್ನು ನಾನು ಒತ್ತಿ ಹೇಳುತ್ತೇನೆ. ಪ್ರಸ್ತುತ ಪರೀಕ್ಷೆಗೆ ಇನ್ನೂ ಸಮಯ ಇದೆ. ಇಷ್ಟು ದಿನ ಓದಿರುವುದನ್ನು ಈಗ ಪುನರ್‌ಮನನ (ರಿವಿಷನ್) ಮಾಡಲು ಶುರುಮಾಡಿ. ಕಂಠಪಾಠ ತಂತ್ರಕ್ಕೆ ಜೋತು ಬೀಳಬೇಡಿ. ವಿಷಯಗಳನ್ನು ಅರ್ಥ ಮಾಡಿಕೊಳ್ಳಿ.

ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಮಾಡಿಕೊಂಡರೆ ದೈಹಿಕ ಚಟುವಟಿಕೆಗಳಷ್ಟೇ ಅಲ್ಲ, ಮಾನಸಿಕ ಸಾಮರ್ಥ್ಯವೂ ವೃದ್ಧಿಸುತ್ತದೆ. ಏಕಾಗ್ರತೆ ಮತ್ತು ನೆನಪಿನಶಕ್ತಿ ಸುಧಾರಿಸುತ್ತದೆ. ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 20 ನಿಮಿಷ ಯೋಗಕ್ಕೆ ಮೀಸಲಿಡಿ. ವಾಕಿಂಗ್, ಜಾಗಿಂಗ್, ಆಟೋಟದ ಅಭ್ಯಾಸಗಳಿದ್ದರೆ ಅದಕ್ಕೂ ನಿಮ್ಮ ದಿನಚರಿಯಲ್ಲಿ ತುಸು ಸಮಯವಿರಲಿ. ಆದರೆ ಅತಿಯಾಗುವುದು ಬೇಡ. ಯೋಗಾಸನಗಳಲ್ಲಿ ಶೀರ್ಷಾಸನ ಮತ್ತು ಸರ್ವಾಂಗಾಸನಗಳ ಅಭ್ಯಾಸ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒಳಿತು. ರಾತ್ರಿಯಲ್ಲಿ ತುಸು ಕಾಲ ನಕ್ಷತ್ರ ನೋಡಿ, ನಗುವ ಚಂದ್ರನನ್ನು ನೋಡಿ ಖುಷಿಪಡಿ, ದೇವರಮನೆಯಲ್ಲಿ ದೀಪವನ್ನು ಗಮನಿಸಿ, ಬಿಳಿಗೋಡೆಯ ಮೇಲೆ ಚಿಕ್ಕ ಚುಕ್ಕಿ ಇರಿಸಿಕೊಂಡು ಕೆಲ ಸಮಯ ತದೇಕಚಿತ್ತದಿಂದ ನೋಡಿ.

ಪರೀಕ್ಷಾ ಸಮಯದಲ್ಲಿ ಜಂಕ್‌ ಫುಡ್‌ಗಳಿಂದ ದೂರ ಇರಿ. ಸುಲಭವಾಗಿ ಜೀರ್ಣವಾಗುವ ಸರಳ ಆಹಾರ ಇರಲಿ. ಹಣ್ಣು, ತರಕಾರಿ, ಸೊಪ್ಪುಗಳ ಸೇವನೆ ಒಳಿತು. ಯಾವುದನ್ನೂ ಅತಿಯಾಗಿ ಮಾಡಲು ಹೋಗಬೇಡಿ.

**

ಪದಸಂಪತ್ತು ಹೆಚ್ಚಿಸಿಕೊಳ್ಳಿ
ಅನೇಕ ಮಕ್ಕಳಿಗೆ ವಿಷಯ ಅರ್ಥವಾಗಿರುತ್ತೆ. ಅದರೆ ಅದನ್ನು ಅಭಿವ್ಯಕ್ತಿಸಲು ಬೇಕಾದ ಪದಸಂಪತ್ತು ಇರುವುದಿಲ್ಲ. ಪದಸಂಪತ್ತನ್ನು ಪರೀಕ್ಷೆ ಸಮಯದಲ್ಲಿ ಬೆಳೆಸಿಕೊಳ್ಳಲು ಆಗುವುದಿಲ್ಲ. ಆದರೆ ಬಳಸುವ ಪದಗಳ ಕಾಗುಣಿತ, ಸ್ಪೆಲ್ಲಿಂಗ್, ವ್ಯಾಕರಣ ಶುದ್ಧತೆಯನ್ನು ಖಾತ್ರಿಪಡಿಸಿಕೊಳ್ಳಲು ಅವಕಾಶವಂತೂ ಖಂಡಿತ ಇದೆ. ಪೋಷಕರು ಮಕ್ಕಳಿಂದ ಪಾಠ ಕೇಳುವ ಪ್ರಯತ್ನ ಮಾಡಿದರೆ ಮಕ್ಕಳು ತಾವು ಅರ್ಥ ಮಾಡಿಕೊಂಡಿದ್ದನ್ನು ಯಾವ ಪದಗಳನ್ನು ಬಳಸಿ ಅಭಿವ್ಯಕ್ತಿಸಬೇಕು ಎಂದು ಯೋಚಿಸುತ್ತಾರೆ. ಸಂವಾದ ಮತ್ತು ಬರೆಯುವ ಅಭ್ಯಾಸ ಬೆಳೆದಷ್ಟೂ ಪದಸಂಪತ್ತು ಬೆಳೆಯುತ್ತೆ, ಅಭಿವ್ಯಕ್ತಿ ಸುಲಭವಾಗುತ್ತೆ. ಸಮಾಜ ವಿಜ್ಞಾನ ಮತ್ತು ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಲು ಈ ಪ್ರಯೋಗ ನೆರವಾಗುತ್ತೆ.

ಈ ಬರಹದ ಬಗ್ಗೆ ಪ್ರತಿಕ್ರಿಯಿಸಿ: feedback@sudha.co.in

–––

ಡಿ.ಎಂ.ಘನಶ್ಯಾಮ, ಯೋಗಿತಾ ಆರ್‌.ಜೆ., ಹೇಮಂತ್‌ಕುಮಾರ್ ಎಸ್‌, ವನಿತಾ ಜೈನ್, ಶಿವಕುಮಾರ ಜಿ.ಎನ್., ಗುರು ಪಿ.ಎಸ್., ವಿದ್ಯಾಶ್ರೀ ಎಸ್.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !