ಮಂಗಳವಾರ, ಮಾರ್ಚ್ 2, 2021
31 °C
ಇಂಗ್ಲಿಷ್ ಶಿಕ್ಷಕರಾದ ಕರಡಿಗುಡ್ಡ ಗ್ರಾಮದ ರೈತ

ವಿರೂಪಾಕ್ಷಪ್ಪ ಕೋಟೂರು ವೃತ್ತಿಯಿಂದ ರೈತ, ಪ್ರವೃತ್ತಿಯಿಂದ ಶಿಕ್ಷಕ...

ಇ.ಎಸ್‌. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Deccan Herald

ಶಿಕ್ಷಕರ ಕಡ್ಡಾಯ ಹಾಜರಾತಿ ದಾಖಲಿಸಲು ಶಾಲೆಯಲ್ಲಿ ಬೆರಳಚ್ಚು ಹಾಜರಾತಿ ಅಳವಡಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸುತ್ತಿದೆ. ಆದರೆ ಕೃಷಿಕರಾಗಿದ್ದುಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬೋಧಿಸುವ ಶಿಕ್ಷಕರಲ್ಲದ ಗುರುವೊಬ್ಬರು ಕರಡಿಗುಡ್ಡ ಗ್ರಾಮದಲ್ಲಿದ್ದಾರೆ. 

ಇಂಗ್ಲಿಷ್‌ನಲ್ಲಿ ಪದವಿ ಪಡೆದಿರುವ ವಿರೂಪಾಕ್ಷಪ್ಪ ಕೋಟೂರು ಅವರಿಗೆ ಈಗ 62 ವರ್ಷ. ವೃತ್ತಿಯಲ್ಲಿ ಕೃಷಿಕರು. ಆಕಸ್ಮಿಕವಾಗಿ ಒಲಿದ ಪಾಠ ಮಾಡುವ ಜವಾಬ್ದಾರಿ ಇವರಿಗೆ ಪ್ರವೃತ್ತಿಯಾಗಿದೆ. ಒಂದೆಡೆ ಕೃಷಿಕ ಮತ್ತೊಂದೆಡೆ ಹವ್ಯಾಸಿ ಶಿಕ್ಷಕರಾಗಿರುವ ಇವರಿಗೆ ನಿವೃತ್ತಿ ಎನ್ನುವುದೇ ಇಲ್ಲ. ಕರಡಿಗುಡ್ಡದ ಮಾಧ್ಯಮಿಕ ಶಾಲೆಯಲ್ಲಿ ನಿತ್ಯ ಬೆಳಿಗ್ಗೆ 9.30ರಿಂದ 10.30ರವರೆಗೆ ವಿರೂಪಾಕ್ಷಪ್ಪ ಗುರುಗಳ ಇಂಗ್ಲಿಷ್ ಪಾಠ. ಕೆಲವೊಮ್ಮೆ ಮಧ್ಯಾಹ್ನದ ನಂತರವೂ ಪಾಠ ಇರುವುದುಂಟು.

ವಿರೂಪಾಕ್ಷಪ್ಪ ಅವರು 1975ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಬಿ.ಎ. ಪೂರ್ಣಗೊಳಿಸಿದವರು. ಆಗ ಉದ್ಯೋಗದ ಅವಕಾಶ ಇದ್ದರೂ ಸೇರದೆ ಒಕ್ಕಲುತನವನ್ನೇ ನೆಚ್ಚಿಕೊಂಡರು. ಇವರ ಪಾಲಿನ 3.5ಎಕರೆ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡರು. ಇವರ ಸಹೋದರ ಶಿಕ್ಷಣ ಇಲಾಖೆಗೆ ಸೇರಿ ಮುಖ್ಯಶಿಕ್ಷಕರಾಗಿದ್ದರು. ಬೋಧನೆಗೆ ಇವರ ಸಹೋದರರೇ ಇವರಿಗೆ ಸ್ಪೂರ್ತಿ ಎಂದು ಸ್ವತಃ ವಿರೂಪಾಕ್ಷಪ್ಪ ಹೇಳುತ್ತಾರೆ.

‘2003ರಲ್ಲಿ ಸಾಕ್ಷರತಾ ಆಂದೋಲನ ಆರಂಭವಾಯಿತು. ಒಂದಷ್ಟು ಕಲಿತವರು ಮತ್ತು ಶಿಕ್ಷಣದಲ್ಲಿ ಆಸಕ್ತಿ ಇರುವವರನ್ನು ಆಹ್ವಾನಿಸಿದರು. ಗ್ರಾಮದಲ್ಲಿ 20ರಿಂದ 22 ಕೇಂದ್ರಗಳನ್ನು ತೆರೆಯಲಾಗಿತ್ತು. ತುಸು ಹೆಚ್ಚೇ ಆಸಕ್ತಿ ವಹಿಸಿದ್ದ ನನಗೆ ಒಟ್ಟು ಜವಾಬ್ದಾರಿಯನ್ನು ವಹಿಸಿದರು. 10ರಿಂದ 15 ಜನರಿಗೆ ಒಬ್ಬ ಶಿಕ್ಷಕರನ್ನು ನೇಮಿಸಿ, ಒಟ್ಟಾರೆ ಎಲ್ಲವನ್ನೂ ನಿಭಾಯಿಸುವ ಹೊಣೆ ನನ್ನದಾಗಿತ್ತು’ ಎಂದೆನ್ನುತ್ತ ಹದಿನೈದು ವರ್ಷಗಳ ಹಿಂದಿನ ನೆನಪಿಗೆ ಜಾರಿದರು ವಿರೂಪಾಕ್ಷಪ್ಪ.

‘ಹಳ್ಳಿಗಾಡಿನ ಮಕ್ಕಳಿಗೆ ಇಂಗ್ಲಿಷ್ ಕಷ್ಟ ಎನ್ನುವುದು ಸಾಮಾನ್ಯವಾಗಿ ಕೇಳುವ ಶಬ್ದ. ಕೆಲವರು ಇಂಗ್ಲಿಷ್ ಕಲಿಯಲೇಬೇಕು ಎಂಬ ಆಸಕ್ತಿಯಿಂದ ಹಠ ಹೊತ್ತು ಕಲಿಯುತ್ತಾರೆ. ಇನ್ನೂ ಕೆಲವರು ಇದರ ಸಹವಾಸವೇ ಬೇಡ ಎಂದು ಇಂಗ್ಲಿಷ್ ತರಗತಿಗೆ ಚಕ್ಕರ್ ಹಾಕುತ್ತಾರೆ. ಆದರೆ ಇಂಗ್ಲಿಷ್ ಅನ್ನು ಸುಲಭವಾಗಿ ಕಲಿಯುವುದು ಹೇಗೆ? ಇಂಗ್ಲಿಷ್‌ ಕುರಿತು ಆಸಕ್ತಿ ತೆಳೆಯುವುದು ಹೇಗೆ? ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು ನನ್ನ ಕೆಲಸವಾಗಿತ್ತು. ಇದಕ್ಕೆ ನಾನೇ ಉದಾಹರಣೆಯಾದೆ’ ಎಂದರು ಅವರು.

‘ಕನ್ನಡ ಮಾಧ್ಯಮ ಶಾಲೆಯಿಂದ ಪದವಿ ಪೂರ್ವ ಶಿಕ್ಷಣಕ್ಕೆ ತೆರಳಿದಾಗ ಅಲ್ಲಿ ಎಲ್ಲವೂ ಇಂಗ್ಲಿಷ್‌ನಲ್ಲೇ ಹೇಳಲಾಗುತ್ತಿತ್ತು. ಆರಂಭದಲ್ಲಿ ಇದರ ಸಹವಾಸವೇ ಬೇಡ ಎಂದು ಮನೆಯತ್ತ ಹೊರಡುವ ಆಲೋಚನೆ ಬಂದರೂ, ಕಲಿತೇ ತೀರುವೆ ಎನ್ನುವ ಛಲ ನನ್ನೊಳಗೆ ಇಂಗ್ಲಿಷ್ ಕಲಿಯುವಂತೆ ಪ್ರೇರೇಪಿಸಿತು. ಈ ಕಥೆಯನ್ನು ವಿದ್ಯಾರ್ಥಿಗಳಿಗೆ ಹೇಳಿದೆ. ನಾನೂ ನಿಮ್ಮಂತೆಯೇ ಇದ್ದೆ ಎಂಬುದನ್ನು ಮನದಟ್ಟು ಮಾಡಿದೆ. ನಂತರ ಅವರನ್ನು ಇಂಗ್ಲಿಷ್‌ನತ್ತ ಸೆಳೆದೆ. ಇಂಗ್ಲಿಷ್ ಓದು ಮತ್ತು ಬರಹ ಕುರಿತು ಕಲಿಸಿದೆ’ ಎಂದು ತಾವು ಅಳವಡಿಸಿಕೊಂಡ ತಂತ್ರಗಾರಿಕೆ ಕುರಿತು ವಿರೂಪಾಕ್ಷಪ್ಪ ವಿವರಿಸಿದರು.

ಸಾಕ್ಷರತಾ ಆಂದೋಲನ ಮುಗಿದ ನಂತರ ತರಗತಿಗೆ ಹೋಗಿ ಪಾಠ ಮಾಡುವುದು ವಿರೂಪಾಕ್ಷಪ್ಪ ಅವರಿಗೆ ಅಭ್ಯಾಸವಾಗಿತ್ತು. ಕರಡಿಗುಡ್ಡದ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆಯೂ ಅಷ್ಟಾಗಿ ಇರಲಿಲ್ಲ. ಇದ್ದ ಎಂಟು ಜನರಲ್ಲಿ ಒಂದಿಬ್ಬರು ರಜೆ ಇದ್ದರೆ, ತರಗತಿ ನಡೆಸುವುದು ಕಷ್ಟವಾಗುತ್ತಿತ್ತು. ಆಗ ಶಾಲೆಯ ಮುಖ್ಯಶಿಕ್ಷಕರಿಗೆ ಇರುವ ಏಕೈಕ ಆಸರೆ ಎಂದರೆ ಅದು ವಿರೂಪಾಕ್ಷಪ್ಪ ಮಾತ್ರ. ಹೀಗಾಗಿ ಅವರು ಹೊಲಕ್ಕೆ ಹೊರಡುವ ಮುನ್ನ, ಒಂದು ತರಗತಿ ಪೂರೈಸಿ ಹೋಗುವಂತೆ ಕೋರಲಾಗಿತ್ತು. 

ವಿದ್ಯಾರ್ಥಿಗಳೊಂದಿಗೆ ಬೆಸೆದ ಅದನ್ನು ಆಸ್ವಾದಿಸಿದ್ದ ಇವರಿಗೂ, ಶಾಲೆಯಿಂದ ದೂರವಿರಲು ಸಾಧ್ಯವಾಗಲೇ ಇಲ್ಲ. ಪಾಠ ಮಾಡಲಿ, ಬಿಡಲಿ ಶಾಲೆಗೆ ಹೋಗಿ ಬರುವುದು ಇವರ ನಿತ್ಯ ದಿನಚರಿಯ ಭಾಗವಾಗಿದೆ. ಸದ್ಯ ಕರಡಿಗುಡ್ಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ 11ಕ್ಕೆ ಏರಿದೆ. ಜತೆಗೆ ಇದು ತಾಲ್ಲೂಕಿನ ಪಬ್ಲಿಕ್ ಶಾಲೆಯೂ ಆಗಿದೆ. ಆದರೂ 62 ವರ್ಷದ ವಿರೂಪಾಕ್ಷಪ್ಪ ಅವರ ಇಂಗ್ಲಿಷ್ ತರಗತಿ ನಡೆಯುತ್ತಲೇ ಇದೆ.

ಈವರೆಗೂ ಇವರು ಮಾಡಿದ ಪಾಠಕ್ಕೆ ಯಾವುದೇ ವೇತನ ಪಡೆದಿಲ್ಲ. ಇವರ ಮಗನೂ ಶಿಕ್ಷಕರಾಗಿದ್ದಾರೆ. ಖಾಸಗಿ ಶಾಲೆಯಲ್ಲಿ ವಿಜ್ಞಾನ ಬೋಧಿಸುತ್ತಿದ್ದಾರೆ. ತಮ್ಮಿಷ್ಟದ ಶಿಕ್ಷಕ ವೃತ್ತಿಯನ್ನೇ ಮಗ ನೆಚ್ಚಿಕೊಂಡಿದ್ದು ವಿರೂಪಾಕ್ಷಪ್ಪ ಅವರಿಗೆ ಸಂತಸದ ವಿಷಯವಾಗಿದೆ.

‘ಹೊಲದಲ್ಲಿ ಶೇಂಗಾ, ಹತ್ತಿ, ಹೆಸರು, ಉದ್ದು, ಸೋಯಾಬೀನ್ ಬೆಳೆಯುತ್ತೇವೆ. ಅವು ಬೆಳೆದು ನಿಂತಾಗ ಸಿಗುವ ಆತ್ಮತೃಪ್ತಿಯೇ ಶಿಕ್ಷಣದಲ್ಲೂ ಸಿಗುತ್ತಿದೆ. ವಿದ್ಯಾಭ್ಯಾಸ ಪೂರ್ಣಗೊಳಿಸಿದಾಗ ಕೆಲಸಕ್ಕೆ ಸೇರುವ ಅವಕಾಶದಿಂದ ಕೈಚೆಲ್ಲಿದ್ದೆ. ಆದರೆ ಈಗ ನನ್ನನ್ನು ವಿದ್ಯಾರ್ಥಿಗಳು ‘ಸರ್‌’ ಎಂದು ಸಂಬೋಧಿಸುತ್ತಾರೆ. ನಾನು ಕಲಿಸಿದ ವಿದ್ಯಾರ್ಥಿಗಳಲ್ಲಿ ಕೆಲವರು ದೊಡ್ಡ ಹುದ್ದೆಯಲ್ಲಿದ್ದಾರೆ. ಅವರೆಲ್ಲ ಊರಿಗೆ ಬಂದಾಗ ಸರ್‌, ಅರಾಮಿದೀರಿ? ಎಂದು ಕೇಳುತ್ತಾರೆ. ಆಗ ಸಿಗುವ ಆತ್ಮತೃಪ್ತಿಯಿಂದ ಬದುಕು ಸಾರ್ಥಕವೆನಿಸುತ್ತದೆ’ ಎಂದು ವಿರೂಪಾಕ್ಷಪ್ಪ ಸಂತೃಪ್ತಭಾವ ವ್ಯಕ್ತಪಡಿಸಿದರು.

* ನಾನು ಆತ್ಮತೃಪ್ತಿಗಾಗಿ ಪಾಠ ಮಾಡುತ್ತಿದ್ದೇನೆ. ಇದಕ್ಕೆ ಫಲಾಪೇಕ್ಷೆ ಬಯಸುವುದು ತಪ್ಪು. ಹೀಗಾಗಿ ಯಾವುದೇ ಅಧಿಕಾರಿಯನ್ನು ಕೇಳುವ ಅಗತ್ಯವೇ ಬೀಳಲಿಲ್ಲ.
– ವಿರೂಪಾಕ್ಷಪ್ಪ ಕೋಟೂರು, ಕರಡಿಗುಡ್ಡ 

* ವಿರೂಪಾಕ್ಷಪ್ಪ ಅವರೊಬ್ಬರು ಶಿಕ್ಷಣ ಪ್ರೇಮಿ. ಈ ಶಾಲೆಯ ಮುಖ್ಯ ಶಿಕ್ಷಕಿ ಆದ ನಂತರ ಅವರು ಸಮಾಜ ವಿಜ್ಞಾನವನ್ನು ಬೋಧಿಸಿದ್ದನ್ನು ನೋಡಿದ್ದೇನೆ. 
– ಎಸ್‌.ಸಿ.ಧಾರವಾಡಕರ್‌, ಮುಖ್ಯಶಿಕ್ಷಕಿ, ಕರಡಿಗುಡ್ಡ ಸರ್ಕಾರಿ ಪಬ್ಲಿಕ್ ಶಾಲೆ

* ಇಂಥವರೊಬ್ಬರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದು ಈವರೆಗೂ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಇದು ಶ್ಲಾಘನೀಯ ಕೆಲಸ. ಅವರು ಅಭಿನಂದನೆಗೆ ಅರ್ಹರು
– ವಿದ್ಯಾ ನಾಡಿಗೇರ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು