ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರ: ಕರಾವಳಿಯಲ್ಲಿ ಹೊಸ ಲೆಕ್ಕಾಚಾರ

ಜೆಡಿಎಸ್‌ಗೆ ನೆಲೆ ಇಲ್ಲದ ನಾಡಿನಲ್ಲಿ ಕುತೂಹಲ ಕೆರಳಿಸಿದ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ
Last Updated 20 ಮೇ 2018, 11:52 IST
ಅಕ್ಷರ ಗಾತ್ರ

ಮಂಗಳೂರು: ಬಿ.ಎಸ್‌. ಯಡಿಯೂರಪ್ಪ ವಿಶ್ವಾಸಮತ ಯಾಚನೆಗೂ ಮುನ್ನವೇ ರಾಜೀನಾಮೆ ನೀಡಿದ್ದಾರೆ. ಇದೀಗ ಜೆಡಿಎಸ್‌–ಕಾಂಗ್ರೆಸ್ ಮೈತ್ರಿಕೂಟದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಇದರ ಜತೆಗೆ ಕರಾವಳಿಯಲ್ಲೂ ಸಚಿವ ಸ್ಥಾನದ ಹೊಸ ಲೆಕ್ಕಾಚಾರ ಶುರುವಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 13 ಸ್ಥಾನಗಳ ಪೈಕಿ ಯು.ಟಿ. ಖಾದರ್ ಏಕೈಕ ಕಾಂಗ್ರೆಸ್‌ ಶಾಸಕರು. ಇನ್ನೊಂದೆಡೆ ಜೆಡಿಎಸ್‌ಗೆ ಕರಾವಳಿಯಲ್ಲಿ ನೆಲೆಯೇ ಇಲ್ಲದಂತಹ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರದಲ್ಲಿ ಕರಾವಳಿಯ ಸಚಿವ ಸ್ಥಾನ ಯಾರಿಗೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಒಂದೆಡೆ 12 ಸ್ಥಾನಗಳನ್ನು ಗೆದ್ದರೂ, ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಬಿಜೆಪಿ ಶಾಸಕರದ್ದು. ಈ ಬಾರಿ ಯಡಿಯೂರಪ್ಪ ಸರ್ಕಾರ ವಿಶ್ವಾಸ ಮತ ಗಳಿಸಿದ್ದರೆ, ಕರಾವಳಿ ನಾಲ್ವರು ಸಚಿವರಾದರೂ ಸಿಗುತ್ತಿದ್ದರೂ ಎನ್ನುವ ಲೆಕ್ಕಾಚಾರ ಈಗ ಹಳೆಯದ್ದಾಗಿದೆ. ಇನ್ನೇನಿದ್ದರೂ ಮೈತ್ರಿ ಸರ್ಕಾರದ ಮಾತು. ಹೀಗಾಗಿ ಕರಾವಳಿ ಜಿಲ್ಲೆಗಳ ಯಾವ ಪ್ರತಿನಿಧಿಗಳಿಗೆ ಅವಕಾಶ ಸಿಗಬಹುದು ಎನ್ನುವ ಚರ್ಚೆ ವ್ಯಾಪಕವಾಗಿದೆ.

ಖಾದರ್‌ಗೆ ನಿಶ್ಚಿತ: ನಾಲ್ಕನೇ ಬಾರಿಗೆ ಮಂಗಳೂರು ಕ್ಷೇತ್ರದಿಂದ ಜಯಗಳಿಸಿರುವ ಯು.ಟಿ. ಖಾದರ್ ಅವರಿಗೆ ಮೈತ್ರಿ ಸರ್ಕಾರದಲ್ಲಿಯೂ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಆರೋಗ್ಯ ಹಾಗೂ ಆಹಾರ ಖಾತೆಗಳನ್ನು ನಿರ್ವಹಿಸಿರುವ ಖಾದರ್ ಅವರಿಗೆ ಈ ಸರ್ಕಾರದಲ್ಲಿಯೂ ಪ್ರಮುಖ ಖಾತೆ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.

ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ನ ಅಸ್ತಿತ್ವವನ್ನು ಉಳಿಸಿರುವ ಖಾದರ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎನ್ನುವ ವಾದವನ್ನು ಕಾಂಗ್ರೆಸ್‌ ಮುಂದಿಡುವುದು ನಿಶ್ಚಿತ. ಈ ಮೂಲಕ ಕರಾವಳಿಯಲ್ಲಿ ಮತ್ತೆ ಪಕ್ಷಕ್ಕೆ ಶಕ್ತಿ ತುಂಬಬಹುದು ಎನ್ನುವ ಮಾತುಗಳು ಪಕ್ಷದ ವಲಯದಲ್ಲಿವೆ. ಅಲ್ಲದೇ ಬೇರಾವ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ಗೆ ಜಯ ಲಭಿಸದೇ ಇರುವುದರಿಂದ ಖಾದರ್ ಅವರ ಹಾದಿ ಸುಗಮವಾಗಿದೆ.

ಎಐಸಿಸಿ ಮಟ್ಟದಲ್ಲಿಯೂ ಯು.ಟಿ. ಖಾದರ್ ಅವರಿಗೆ ಒಳ್ಳೆಯ ಹೆಸರು ಇದೆ. ಹೀಗಾಗಿ ಪಕ್ಷದ ಹೈಕಮಾಂಡ್‌ನಿಂದಲೂ ಖಾದರ್ ಅವರಿಗೆ ಸಚಿವ ಸ್ಥಾನ ನೀಡುವ ಸೂಚನೆ ಬರುವುದು ನಿಶ್ಚಿತ. ಇದರಿಂದಾಗಿ ಮತ್ತೊಮ್ಮೆ ಖಾದರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಫಾರೂಕ್‌ಗೆ ಸಚಿವ ಸ್ಥಾನ: ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಂ. ಫಾರೂಕ್‌ ಅವರಿಗೆ ಈ ಬಾರಿಯ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಕರಾವಳಿ ಭಾಗಕ್ಕೆ ಎರಡು ಸಚಿವ ಸ್ಥಾನ ನೀಡಲು ವರಿಷ್ಠರು ಮುಂದಾಗಬಹುದು ಎನ್ನಲಾಗುತ್ತಿದೆ.

ಬಿ.ಎಂ. ಫಾರೂಕ್‌ ಅವರು ಎರಡು ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದರೂ, ಜಯಗಳಿಸಲು ಸಾಧ್ಯವಾಗಿಲ್ಲ. ಎರಡು ಸೋಲುಗಳ ನಂತರವೂ ಫಾರೂಕ್‌ ಅವರು ಜೆಡಿಎಸ್‌ಗೆ ನಿಷ್ಠರಾಗಿದ್ದು, ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಬಾರಿಯ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಸಂಪೂರ್ಣ ನೆಲಕಚ್ಚಿರುವ ಜೆಡಿಎಸ್‌ಗೆ ಶಕ್ತಿ ತುಂಬಲು ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೂ ಅನಿವಾರ್ಯವೇ. ಫಾರೂಕ್‌ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಅವರಿಗೆ ಪ್ರಮುಖ ಖಾತೆಯ ಜತೆಗೆ ಜಿಲ್ಲಾ ಉಸ್ತುವಾರಿಯನ್ನು ನೀಡಿದರೂ ಆಶ್ಚರ್ಯಪಡಬೇಕಿಲ್ಲ ಎಂದು ಹೇಳಲಾಗುತ್ತಿದೆ.

ಟಾನಿಕ್‌ ರೀತಿ ಸಚಿವ ಸ್ಥಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಐದಂಕಿಯ ಮತಗಳನ್ನು ಪಡೆದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ ಐದು ಕಡೆ ಹಾಗೂ ಬಿಎಸ್ಪಿ ಒಂದು ಕಡೆ ಸ್ಪರ್ಧೆ ಮಾಡಿತ್ತು. ಆದರೆ, ಈ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅದರಲ್ಲೂ ಅಮರನಾಥ ಶೆಟ್ಟಿ ಅವರು ಬದಲಾಗಿ ಮೂಡುಬಿದಿರೆಯಲ್ಲಿ ಕಣಕ್ಕೆ ಇಳಿದಿದ್ದ ಜೀವನ್‌ ಶೆಟ್ಟಿ ಕೂಡ ಠೇವಣಿ ಕಳೆದುಕೊಂಡಿರುವುದು ಕರಾವಳಿಯಲ್ಲಿ ಜೆಡಿಎಸ್‌ನ ಕಳಪೆ ಸಾಧನೆಗೆ ಸಾಕ್ಷಿ. ಇಂತಹ ಪರಿಸ್ಥಿತಿಯಲ್ಲಿ ಬಿ.ಎಂ.ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ, ಪಕ್ಷಕ್ಕೆ ಒಂದಿಷ್ಟು ಬಲ ತಂದುಕೊಡಬಹುದು. ಪಕ್ಷಕ್ಕೆ ನಿಷ್ಠರಾಗಿರುವ ಫಾರೂಕ್‌ ಅವರಿಂದ ಕರಾವಳಿಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಸಾಧ್ಯ ಎನ್ನುವ ಲೆಕ್ಕಾಚಾರ ಜೆಡಿಎಸ್‌ ವರಿಷ್ಠರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT