ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ | ಪರೀಕ್ಷೆಯ ಆತಂಕದಿಂದ ಹೊರಬನ್ನಿ!

Last Updated 23 ಜೂನ್ 2020, 19:30 IST
ಅಕ್ಷರ ಗಾತ್ರ

ನಾಳೆಯಿಂದಲೇ ಪರೀಕ್ಷೆ, ಸಿದ್ಧರಾಗಿದ್ದೀರಾ?

ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಮತ್ತೆಮತ್ತೆ ಉತ್ತರಿಸಿ ಸಿಟ್ಟು ಬರುತ್ತಾ ಇರುತ್ತದೆ ಅಥವಾ ಒಂದು ರೀತಿಯ ಆತಂಕ, ಭಯ ತುಂಬಿಕೊಳ್ಳುತ್ತದೆ ಅಲ್ವಾ ಮಕ್ಕಳೇ? ಈ ವರ್ಷವಂತೂ ಮೂರು ತಿಂಗಳಿನಿಂದ ಪರೀಕ್ಷೆಯ ಗುಮ್ಮನನ್ನು ತಲೆಯಲ್ಲಿ ತುಂಬಿಕೊಂಡು ಏನೆಲ್ಲಾ ಆತಂಕ, ಗೊಂದಲವನ್ನು ಅನುಭವಿಸಿದ್ದೀರಿ. ಹಾಗಾಗಿ ಒಮ್ಮೆ ಪರೀಕ್ಷೆ ಮುಗಿದರೆ ಸಾಕಪ್ಪಾ ಎಂದು ಮಕ್ಕಳಿಗೆ ಮತ್ತು ಪೋಷಕರಿಗೆ ಕೂಡ ಅನ್ನಿಸುತ್ತಿರಬಹುದು. ಈಗ ಉಳಿದಿರುವ ಒಂದೇ ದಿನದಲ್ಲಿ ಏನು ಮಾಡುವುದು?

ಮಕ್ಕಳಿಗೆ..

*ನಿಮ್ಮ ದೇಹವನ್ನು ಕಡೆಯ ಪಕ್ಷ ಗಂಟೆಗೊಮ್ಮೆ ಗಮನಿಸಿ. ಎದೆಬಡಿತ ಹೆಚ್ಚುವುದು, ಹೊಟ್ಟೆಯಲ್ಲಿ ತಳಮಳ, ಪದೇಪದೇ ಬಾಯಾರಿಕೆ, ಮಲಮೂತ್ರಗಳ ಒತ್ತಡ ಮುಂತಾದವು ಆತಂಕದ ಸೂಚನೆಗಳು. ಆತಂಕಕ್ಕೆ ಹೆದರಬೇಡಿ. ತಕ್ಷಣ ಮೂರು ನಿಮಿಷ ದೀರ್ಘವಾಗಿ ಉಸಿರಾಟವನ್ನು ಮಾಡುತ್ತಾ ದೇಹವನ್ನು ಗಮನಿಸಿ. ದೇಹ ತನ್ನಿಂದ ತಾನೇ ಸಡಿಲಗೊಳ್ಳುತ್ತದೆ. ನಂತರ ಓದನ್ನು ಮುಂದುವರೆಸಿ. ಪರೀಕ್ಷೆ ಬರೆಯುವಾಗಲೂ ಒಂದು ಪ್ರಶ್ನೆಯನ್ನು ಉತ್ತರಿಸಿ ಮುಗಿದ ಮೇಲೆ ಒಂದು ನಿಮಿಷ ಇದೇ ಪ್ರಯೋಗವನ್ನು ಮಾಡಿ. ಮೆದುಳು ಹಗುರಾಗಿ ನೆನಪು ಚುರುಕಾಗುತ್ತದೆ. ಉಸಿರಾಟದ ಹದ ತಪ್ಪಿದರೆ ದೇಹ ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಬುದ್ಧಿ ಕೆಲಸ ಮಾಡುವುದು ಕಷ್ಟ ಎಂದು ನೆನಪಿಡಿ.

*ಏನೋ ಅರ್ಥವಾಗಿಲ್ಲ ಅಥವಾ ಹಿಂದೆ ಓದಿದ್ದು ಮರೆತಿದೆ ಎಂದು ಅನ್ನಿಸತೊಡಗಿದರೆ ನಿಮ್ಮ ಆತಂಕ ಹೆಚ್ಚಿ ಚೆನ್ನಾಗಿ ಓದಿರುವುದೂ ಕೂಡ ಮರೆತು ಹೋಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇವತ್ತಿನಿಂದ ಹೊಸದೇನನ್ನಾದರೂ ಕಲಿಯಲು ಪ್ರಯತ್ನಿಸಬೇಡಿ. ಕಲಿತಿದ್ದು ನೆನಪಿದೆಯೇ ಎಂದು ಆಗಾಗ ಪರೀಕ್ಷೆ ಮಾಡಿಕೊಳ್ಳುವುದೂ ಬೇಡ. ಮನೆಯಲ್ಲಿ ಪರೀಕ್ಷೆ ಮಾಡಿಕೊಳ್ಳುವ ಸಮಯ ಇದಲ್ಲ. ಇಂದಿನಿಂದ ಪರೀಕ್ಷೆ ಮುಗಿಯುವವರೆಗೆ ಇಲ್ಲಿಯವರೆಗೆ ಓದಿದ್ದನ್ನು ಇನ್ನೊಮ್ಮೆ ಗಮನಿಸಿ.

*ಆತಂಕ, ಭಯ, ಒತ್ತಡಗಳು ಎಲ್ಲರ ಸಹಜ ಅನುಭವಗಳು. ಇವು ನಿಮ್ಮ ದೌರ್ಬಲ್ಯದ ಸೂಚನೆಗಳಲ್ಲ. ಕೋಟ್ಯಂತರ ಜನರು ನೋಡುತ್ತಿರುವಾಗ ಅದ್ಭುತ ಆಟ ತೋರಿಸುವ ಸಚಿನ್‌, ಕೊಹ್ಲಿಯಂತಹವರಿಗೂ ಆತಂಕವಿರುತ್ತದೆ. ಆತಂಕ ಭಯಗಳು ನಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಇದನ್ನು ಹೇಗೆ ಮಾಡುವುದು ಎನ್ನುವುದನ್ನು ನಿಮ್ಮ ಅನುಭವವೇ ನಿಮಗೆ ಕಲಿಸುತ್ತದೆ. ಜೀವನವನ್ನೂ ಕೂಡ ಶಾಲಾ ಪಠ್ಯದಂತೆ ಹಂತಹಂತವಾಗಿ ಕಲಿಯುತ್ತಾ ಹೋಗಬಹುದು.

ಪೋಷಕರಿಗೆ..

*‘ಇದನ್ನು ಓದಿದ್ದೀಯಾ, ಅದನ್ನು ನೆನಪು ಮಾಡಿಕೊ’ ಎಂದು ಮಕ್ಕಳನ್ನು ಪರೀಕ್ಷಿಸುವುದನ್ನು ಸಂಪೂರ್ಣ ನಿಲ್ಲಿಸಿ. ‘ಭಯ ಬೇಡ, ಧೈರ್ಯವಾಗಿರು’ ಎನ್ನುವ ಹಿತವಚನಗಳೂ ಸಹಾಯ ಮಾಡುವುದಿಲ್ಲ.

*ಮಕ್ಕಳು ಚಡಪಡಿಸುತ್ತಿದ್ದಾರೆ, ಕಷ್ಟಪಡುತ್ತಿದ್ದಾರೆ ಎನ್ನಿಸಿದರೆ ಮಾತಿನ ಉಪದೇಶವನ್ನು ಮಾಡದಿರುವುದು ಒಳ್ಳೆಯದು. ಮಕ್ಕಳನ್ನು ಜೊತೆಯಲ್ಲಿ ಕೂರಿಸಿಕೊಂಡು ಇಬ್ಬರೂ ದೀರ್ಘವಾಗಿ ಉಸಿರಾಡುತ್ತಾ ನಿಮ್ಮನಿಮ್ಮ ದೇಹ ಮನಸ್ಸುಗಳನ್ನು ಸಾಂತ್ವನಗೊಳಿಸಿ. ಕೆಲವೇ ನಿಮಿಷಗಳಲ್ಲಿ ಇಬ್ಬರ ಮುಖದಲ್ಲೂ ಮುಗುಳ್ನಗು ಇರುತ್ತದೆ.

*ಪರೀಕ್ಷೆಯಿಂದ ಬಂದ ಕೂಡಲೇ ‘ಹೇಗಾಯಿತು?’ ಎನ್ನುವ ತಪಾಸಣೆ ಶುರು ಮಾಡದೆ ಮಕ್ಕಳಿಗೆ ಅವರದ್ದೇ ಆದ ರೀತಿಯಲ್ಲಿ ಮಾತನಾಡಲು ಅವಕಾಶ ಕೊಡಿ. ಕಡಿಮೆ ಮಾತನಾಡಿ, ಹೆಚ್ಚು ಹೆಚ್ಚು ಕೇಳಿಸಿಕೊಳ್ಳಿ. ಅವರಿಗೆ ಮಾತನಾಡಲು ಇಷ್ಟವಿಲ್ಲದಿದ್ದರೆ ಅವರ ಭಾವನೆಗಳನ್ನು ಗೌರವಿಸಿ. ಅವರ ಮಾತುಗಳಲ್ಲಿ ಬೇಸರ, ಆತಂಕಗಳಿದ್ದರೆ ಹೇಳಿಕೊಳ್ಳಲು ಅವಕಾಶ ನೀಡಿ. ಜೊತೆಗೆ ಮುಂದಿನ ಪರೀಕ್ಷೆಗೆ ಅವರು ಮಾನಸಿಕವಾಗಿ ಸಿದ್ಧರಾಗುವುದಕ್ಕೆ ಸಹಾಯ ಮಾಡಿ.

*ಪರೀಕ್ಷೆ, ಫಲಿತಾಶ, ಮುಂದಿನ ದಾರಿ ಮುಂತಾದವುಗಳೆಲ್ಲವನ್ನೂ ಮರೆತು ದಿನಕ್ಕೆ ಹದಿನೈದು ನಿಮಿಷವಾದರೂ ಮಕ್ಕಳ ಜೊತೆ ಸಂತೋಷವಾಗಿ ಸಮಯ ಕಳೆಯಿರಿ. ಹೊರಾಂಗಣ ಆಟಗಳನ್ನು ಆಡಿದರೆ ಹೆಚ್ಚು ಸಹಾಯಕಾರಿ.

(ಲೇಖಕ: ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT