ಬುಧವಾರ, ಜುಲೈ 28, 2021
21 °C

ಪರ್ಯಾಯ ಅಂಕ: ಪೂರ್ಣ ಮಾಹಿತಿ ನೀಡಲು ಐಸಿಎಸ್‌ಇಗೆ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ– ಸಾಂಕೇತಿಕ ಚಿತ್ರ

ಮುಂಬೈ: ಸೋಂಕು ವ್ಯಾಪಿಸುತ್ತಿರುವ ಕಾರಣ, ಬಾಕಿ ಇರುವ ವಿಷಯಗಳ ಪರೀಕ್ಷೆಗೆ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಹಾಜರಾಗದೇ ಇರಲು ನಿರ್ಧರಿಸಿದರೆ, ಪರ್ಯಾಯವಾಗಿ ಅಂಕಗಳನ್ನು ನೀಡುವ ಯೋಜನೆಯ ಪೂರ್ಣ ಮಾಹಿತಿಯನ್ನು ನೀಡುವಂತೆ ಬಾಂಬೆ ಹೈಕೋರ್ಟ್‌ ಬುಧವಾರ ದಿ ಇಂಡಿಯನ್‌ ಸರ್ಟಿಫಿಕೆಟ್‌ ಸೆಕೆಂಡರಿ ಎಜ್ಯುಕೇಷನ್‌ಗೆ (ಐಸಿಎಸ್‌ಇ) ಸೂಚಿಸಿದೆ. 

ಜೂನ್‌ 22ರೊಳಗಾಗಿ ಪರ್ಯಾಯ ಅಂಕ ವ್ಯವಸ್ಥೆಯ ಯೋಜನೆಯ ಮಾಹಿತಿಯನ್ನು ಸಲ್ಲಿಸಬೇಕು ಎಂದು ಮುಖ್ಯನ್ಯಾಯಮೂರ್ತಿ ದೀಪಂಕರ್‌ ದತ್ತಾ ಹಾಗೂ ನ್ಯಾಯಮೂರ್ತಿ ಎಸ್‌.ಎಸ್‌.ಶಿಂದೆ ಅವರಿದ್ದ ನ್ಯಾಯಪೀಠವು ನಿರ್ದೇಶಿಸಿತು.10ನೇ ತರಗತಿ ವಿದ್ಯಾರ್ಥಿಯ ತಂದೆ, ವಕೀಲ ಅರವಿಂದ್‌ ತಿವಾರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಎಲ್‌ಐ) ವಿಚಾರಣೆ ನಡೆಸಿದ ಪೀಠ ಈ ಆದೇಶ ನೀಡಿದೆ. 

ಪರೀಕ್ಷೆಯನ್ನು ರದ್ದುಗೊಳಿಸಲು ಕೋರಿ ತಿವಾರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ‘ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಇರಲು ನಿರ್ಧರಿಸಿದರೆ, ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕ, ಆಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಅಂಕದ ಆಧಾರದಲ್ಲಿ ಅಂತಿಮ ಫಲಿತಾಂಶವನ್ನು ನೀಡಲಾಗುವುದು’ ಎಂದು ಜೂನ್‌ 14ರಂದು ಐಸಿಎಸ್‌ಇ ತಿಳಿಸಿತ್ತು. 

‘ಶಾಲೆಗಳು ನಡೆಸುವ ಪೂರ್ವಭಾವಿ ಪರೀಕ್ಷೆಗಳಲ್ಲಿ ಮೌಲ್ಯಮಾಪನ ಕಠಿಣವಾಗಿ ನಡೆಸಲಾಗಿರುತ್ತದೆ. ಹೀಗಾಗಿ ಅಂತಿಮ ಪರೀಕ್ಷೆ ಬರೆಯದೇ ಹೋದರೆ, ನನಗೆ ಕಡಿಮೆ ಅಂಕಗಳು ಸಿಗಬಹುದು ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳು ಆರೋಗ್ಯವನ್ನೂ ಲೆಕ್ಕಿಸದೆ ಅಂತಿಮ ಪರೀಕ್ಷೆಗಳನ್ನು ಬರೆಯಲು ತೆರಳಲಿದ್ದಾರೆ’ ಎಂದು ತಿವಾರಿ ವಾದಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು