ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟ್ಸ್‌ ಬರವಣಿಗೆ ಹೇಗಿರಬೇಕು?

Last Updated 23 ಜುಲೈ 2019, 19:30 IST
ಅಕ್ಷರ ಗಾತ್ರ

ಟಿಪ್ಪಣಿ ಅಥವಾ ‘ನೋಟ್ಸ್’ ಬರೆದುಕೊಳ್ಳುವುದು, ಸಿದ್ಧಪಡಿಸುವುದು ಶೈಕ್ಷಣಿಕ ಯಶಸ್ಸಿನ ಮುಖ್ಯ ಚಟುವಟಿಕೆಗಳಲ್ಲೊಂದು. ‘ನಿಮ್ಮ ನೆನಪನ್ನು ನಂಬಬೇಡಿ’ ಎಂಬ ಜಾಣ್ಣುಡಿಯಿದೆ. ಸರ್ವಜ್ಞ ‘ಬರೆಯದೆ ಓದಬಾರದು, ಕರೆಯದೆ ಬರಬಾರದು’ ಎನ್ನುತ್ತಾನೆ. ನಿನ್ನೆ ಏನೇನು ಮಾಡಿದೆವು ಎನ್ನುವುದೇ ಮರೆತುಹೋಗಿರುತ್ತದೆ. ಹೀಗಿರುವಾಗ ಓದಿದ್ದು ಮರೆತು ಹೋಗುವುದು ಸಹಜ. ಅದರಲ್ಲೂ ಪಠ್ಯವನ್ನು ಓದಿದಾಗ ವಿದ್ಯಾರ್ಥಿಗಳು ಎಲ್ಲವನ್ನೂ ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದಕ್ಕೇ ನೋಟ್ಸ್ ಎಂದರೆ ಓದಿರುವುದನ್ನು ನೆನಪಿಡಲು ಅಥವಾ ಭವಿಷ್ಯದಲ್ಲಿ ಅದನ್ನು ಪರಾಮರ್ಶೆಗೆ ಒಳಪಡಿಸಲು ಪೂರಕವಾಗಬಲ್ಲ ಸಂಕ್ಷಿಪ್ತ ದಾಖಲೆ.

ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಮುಖ್ಯವಾದ ವಿಷಯಗಳನ್ನು ವಿದ್ಯಾರ್ಥಿಗಳು ತಪ್ಪದೆ ಸ್ಫುಟವಾಗಿ ನೋಟ್ಸ್ ಬರೆದುಕೊಳ್ಳಬೇಕು. ನೆನಪಿಡಿ, ಇದು ಶಿಕ್ಷಕರನ್ನು ಮೆಚ್ಚಿಸಲು ಅಲ್ಲ... ಬದಲಾಗಿ ನಿಮ್ಮ ಅನುಕೂಲಕ್ಕಾಗಿಯೇ. ಪಾಠ ಗ್ರಹಿಕೆಯ ಪ್ರಕ್ರಿಯೆಯಾದ ನೋಟ್ಸ್‌ನಿಂದ ಬಹುಮುಖ ಪ್ರಯೋಜನವಿದೆ.

ಬೋಧನೆಯ ಕೆಲ ಅಂಶಗಳು ತತ್ಕಾಲಕ್ಕೆ ಅರ್ಥವಾಗದಿರಬಹುದು. ಆದರೆ ಬರೆದುಕೊಳ್ಳುವುದನ್ನು ಮಾತ್ರ ತಪ್ಪಕೂಡದು. ತದನಂತರ ಅದು ಗ್ರಹಿಕೆಗೆ ಎಟಕುತ್ತದೆ. ಯಾವುದೇ ವಿಷಯದ ತಜ್ಞನಿರಲಿ, ಹಿಂದೊಮ್ಮೆ ಆತ ಆರಂಭಿಗನೇ!

ನೋಟ್ಸ್ ಎಂಬುದು ತರಗತಿಯಲ್ಲಿನ ಅಧ್ಯಯನಕ್ಕೂ, ಪಠ್ಯ ಪುಸ್ತಕದ ಓದಿಗೂ ಸಂಪರ್ಕ ಕಲ್ಪಿಸುತ್ತದೆ. ಏನು ಕಲಿಯ ಹೊರಟಿದ್ದೇವೆ, ಅದರ ಉದ್ದೇಶವೇನು ಎಂಬುದು ಸ್ಪಷ್ಟಗೊಳ್ಳುವುದು ನೋಟ್ಸ್ ತಯಾರಿಸಿದಾಗಲೇ. ಆಯಾ ವರ್ಷದ ಅಂತಿಮ ಪರೀಕ್ಷೆಯಷ್ಟೇ ಅಲ್ಲ, ಮುಂದೆ ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ ಎದುರಿಸಲು ಕೂಡ ನೋಟ್ಸ್ ಎಂಬುದು ಸಂಜೀವಿನಿ ಅಥವಾ ಆಯುಧ ಶಾಲೆಯಂತೆ. ಪುನರಾವಲೋಕನಕ್ಕೆ ಅದು ಅತ್ಯಗತ್ಯ.

ಬರೆದು ಓದುವುದು ಗ್ರಹಿಕೆಗೆ ಸುಲಭ

ತರಗತಿಯ ನೋಟ್ಸ್ ಎಂದರೆ ಎರಡು ಬಗೆ. ಒಂದು, ಶಿಕ್ಷಕರೇ ಹೇಳಿ ಬರೆಸುವಂತಹದ್ದು- ಉಕ್ತ ಲೇಖನ. ನಮ್ಮ ಪರಂಪರೆಯಲ್ಲೇ ಈ ಪರಿಪಾಠವಿದೆ. ‘ಮಹಾಭಾರತ’ ಕಾವ್ಯವು ವ್ಯಾಸ ಬೋಧಿತ, ಗಣಪತಿ ಲಿಖಿತ. ಇನ್ನೊಂದು, ಬೋಧನೆಯಾಗುತ್ತಿದ್ದಂತೆ ವಿದ್ಯಾರ್ಥಿಗಳೇ ಬರೆದುಕೊಳ್ಳುವುದು. ಎರಡನೇ ವಿಧವೇ ಯುಕ್ತ. ಏಕೆಂದರೆ ಅದು ವಿದ್ಯಾರ್ಥಿಗಳನ್ನು ತರಗತಿಯಾದ್ಯಂತ ಗ್ರಹಿಕೆಯಲ್ಲಿ ತೊಡಗಿಸಿಟ್ಟಿರುತ್ತದೆ. ತರಗತಿಯಲ್ಲಿ ಯಾಂತ್ರಿಕವಾಗಿ ಏನನ್ನೂ ದಾಖಲಿಸಿಕೊಳ್ಳಬಾರದು, ಅರ್ಥೈಸಿಕೊಂಡೇ ನಮೂದಿಸಿಕೊಳ್ಳಬೇಕು.

ಒಬ್ಬೊಬ್ಬ ವಿದ್ಯಾರ್ಥಿಯ ಕಲಿಕಾ ವಿಧಾನವೂ ಭಿನ್ನ. ಬೋರ್ಡ್‌ ಮೇಲೆ ಬರೆದ ಚಿತ್ರ, ಚಿತ್ತಾರ, ನಕ್ಷೆ, ಕೋಷ್ಟಕ, ಸೂತ್ರಗಳು.. ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೇ ಸಮರ್ಪಕವಾಗಿ ನೋಟ್ಸ್ ಬರೆದುಕೊಳ್ಳಲು ಪೂರಕ. ನೋಟ್ಸ್ ಅನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಕಾ ಕ್ರಮದ ಅವಿನಾಭಾವ ಭಾಗವಾಗಿ ಪರಿಗಣಿಸಬೇಕು. ಈಗೇನು ತಂತ್ರಜ್ಞಾನ ಬಹಳ ಮುಂದುವರಿದಿದೆ. ಒಂದು ವೇಳೆ ತರಗತಿ ತಪ್ಪಿದರೂ ಸಹಪಾಠಿಗಳಿಂದ ನೋಟ್ಸ್ ಪಡೆದು ಅದರ ಪುಟಗಳನ್ನು ನಕಲು ಮಾಡಿಕೊಳ್ಳಬಹುದು. ಗೆಳೆಯರು, ಆಪ್ತರಿಗೂ ರವಾನಿಸಬಹುದು. ಅದರೆ ನಿಯಮಿತವಾಗಿ ತರಗತಿಗೆ ಖುದ್ದು ಹೋಗಿ ಕುಳಿತು ಬರೆದುಕೊಳ್ಳುವ ಸೊಗಸೇ ವಿಶಿಷ್ಟ, ವಿಭಿನ್ನ.

ಪಾಠ ಕೇಳುತ್ತಲೇ ನೋಟ್ಸ್‌ ಮಾಡಿ

ವಿದ್ಯಾರ್ಥಿಗಳಿಗೆ ತರಗತಿಯೇ ಪರಮ ಗತಿ. ತರಗತಿ ಸವಾಲೂ ಅಲ್ಲ, ಸಮಸ್ಯೆಯೂ ಅಲ್ಲ. ಅದೊಂದು ವಿಚಾರಧಾರೆಯನ್ನು ತಲೆಯ ಒಳಗಿಳಿಸುವ ಜಾಗ ಎನ್ನಬಹುದು. ಸಾಂಘಿಕ ಜ್ಞಾನ ಪ್ರಾಪ್ತವಾಗುವುದು ತರಗತಿಯಲ್ಲೇ. ವಿದ್ಯಾರ್ಥಿಗಳ ಅತಿ ದೊಡ್ಡ ದೌರ್ಬಲ್ಯವೆಂದರೆ ತರಗತಿಗೆ ಗೈರಾಗುವುದು. ಏಕೆಂದರೆ ತರಗತಿಯಲ್ಲೂ ಪಾಠ ಅರ್ಥವಾಗದೆ ಇದ್ದರೆ ಕೇವಲ ಪಠ್ಯವನ್ನು ಬಾಯಿಪಾಠ ಮಾಡಬೇಕಾಗುತ್ತದೆ. ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಅರ್ಥವಾಗದ ವಿಷಯವನ್ನು ಒಂದಲ್ಲೊಂದು ಬಗೆಯಲ್ಲಿ ಅನೌಪಚಾರಿಕವಾಗಿ ಹೇಗೆ, ಏನು ಎಂದು ಪ್ರಶ್ನಿಸಿ ಅರಿವು ಹೆಚ್ಚಿಸಿಕೊಳ್ಳಬಹುದು. ಶಿಕ್ಷಕರು ಹೆಚ್ಚುವರಿಯಾಗಿ ನೀಡುವ ವಿವರಗಳನ್ನು ನೋಟ್ಸ್‌ನಲ್ಲಿ ಬರೆದುಕೊಂಡು ನಂತರ ಮನನ ಮಾಡಬಹುದು. ಕ್ಲಿಷ್ಟವೆನ್ನಲಾಗುವ ಗಣಿತವೂ ಸೇರಿದಂತೆ ಎಲ್ಲ ವಿಷಯಗಳನ್ನೂ ಇದರಿಂದ ಆಪ್ತವಾಗಿಸಲು ಸಾಧ್ಯ.

ಪರೀಕ್ಷೆ ಮುಗಿದ ನಂತರ ನೋಟ್ಸ್ ಜೋಪಾನವಾಗಿರಿಸಿ ಕೊಳ್ಳುವುದು ಬಹು ಮುಖ್ಯ. ಅದು ಬದುಕಿನ ಪರ್ಯಂತ ಅಮೂಲ್ಯ ಸಂಪನ್ಮೂಲ. ವಿದ್ಯಾರ್ಥಿ ದೆಸೆಯನ್ನು ಸದಾ ನೆನಪಾಗಿಸುವ ನೋಟ್ಸ್‌ನೊಂದಿಗಿನ ಭಾವನಾತ್ಮಕ ಸಂಬಂಧವೂ ಅನನ್ಯ.

ನೋಟ್ಸ್‌ ಬರೆಯುವ ಕ್ರಮ

ನೋಟ್ಸ್‌ ಬರೆದುಕೊಳ್ಳುವುದಕ್ಕೆ ಹಲವಾರು ಪದ್ಧತಿಗಳಿವೆ. ಔಟ್‌ಲೈನ್‌ ಪದ್ಧತಿಯಲ್ಲಿ ಮುಖ್ಯ ವಿಷಯವನ್ನು ನಿಮ್ಮ ನೋಟ್‌ಬುಕ್‌ನ ಎಡಗಡೆ ಬರೆದುಕೊಳ್ಳಿ. ನಂತರ ಬುಲೆಟ್‌ ಪಾಯಿಂಟ್ಸ್‌ ಹಾಕಿಕೊಂಡು ಉಳಿದ ಅಂಶಗಳನ್ನು ಬರೆದುಕೊಳ್ಳುತ್ತ ಹೋಗಿ. ಇದರಿಂದ ನಿಮಗೆ ಬೇಕಾದಾಗ ಮುಖ್ಯಾಂಶಗಳ ಮೇಲೆ ಕಣ್ಣು ಹಾಯಿಸಬಹುದು. ಸಮಯದ ಉಳಿತಾಯವೂ ಆಗುತ್ತದೆ. ಆದರೆ ಗಣಿತ ಅಥವಾ ರಸಾಯನಶಾಸ್ತ್ರದ ಸೂತ್ರಗಳನ್ನು ಬರೆಯಲು ಈ ಪದ್ಧತಿಯಲ್ಲಿ ಸಾಧ್ಯವಿಲ್ಲ.

ಇನ್ನೊಂದು ಪದ್ಧತಿಯಲ್ಲಿ ಎರಡು ಕಾಲಂ ಮಾಡಿಕೊಳ್ಳಿ. ಬಲಕ್ಕೆ ನೋಟ್ಸ್‌ ಬರೆಯುತ್ತ ಹೋಗಿ. ನಿಮಗೇನಾದರೂ ಅನುಮಾನಗಳಿದ್ದರೆ, ಹೊಸ ವಿಷಯಗಳು ಹೊಳೆದರೆ ಎಡಕ್ಕೆ ಬರೆದುಕೊಳ್ಳಿ. ಕೆಳಗಡೆ ಗೆರೆ ಎಳೆದು ಒಟ್ಟು ಮುಖ್ಯಾಂಶಗಳನ್ನು ನಿಮ್ಮದೇ ವಾಕ್ಯಗಳಲ್ಲಿ ಬರೆದುಕೊಳ್ಳಿ. ಇದು ಅಂದು ಶಿಕ್ಷಕರು ಯಾವ ವಿಷಯವನ್ನು ಪಾಠ ಮಾಡಿದರು ಎಂಬುದರ ಸಂಕ್ಷಿಪ್ತ ರೂಪವಾಗಿರುತ್ತದೆ.

ಇದೇ ರೀತಿ ಬಾಕ್ಸ್‌ ಮಾಡಿಕೊಂಡು ಬರೆದುಕೊಳ್ಳಬಹುದು. ಬಾಣದ ಗುರುತು ತೋರಿಸುತ್ತ, ಮುಖ್ಯ ವಿಷಯದ ಕೆಳಗೆ ಗೆರೆ ಎಳೆದು ಬರೆದುಕೊಳ್ಳಬಹುದು. ನಿಮಗೆ ಯಾವುದು ಅನುಕೂಲವೋ ಆ ಪದ್ಧತಿ ಅನುಸರಿಸಿ.

ಬೋಧಕರ ಮಾರ್ಗದರ್ಶನ

ಬೋಧಕರು ಕೂಡ ಆಯಾ ತರಗತಿಯಲ್ಲಿ ಏನು ಪಾಠ ಮಾಡುತ್ತೇವೆಂದು ಮೊದಲಿಗೆ ಪರಿಚಯಿಸಬೇಕು. ಒಂದೊಂದು ಅಂಶವನ್ನೂ ವಿವರಿಸುತ್ತಲೇ ವಿದ್ಯಾರ್ಥಿಗಳನ್ನು ಚಿಂತಿಸಲು ಪ್ರೇರೇಪಿಸುವುದು ಮತ್ತು ಏನನ್ನು ಬರೆದುಕೊಳ್ಳಬೇಕೆಂದು ಸೂಚಿಸುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ಹೆದರಿಸುವುದರಿಂದ, ಒತ್ತಾಯಿಸುವುದರಿಂದ ಯಾವುದೇ ಪ್ರಯೋಜನವಾಗದು. ನ್ಯೂಯಾರ್ಕ್‌ನ ಖ್ಯಾತ ಶಿಕ್ಷಣತಜ್ಞರಾಗಿದ್ದ ಡೇವಿಡ್ ಆನ್ಸುಬೆಲ್ ‘ಕಲಿಕೆ ಪ್ರಚೋದಿಸುವ ಏಕೈಕ ದ್ರವ್ಯವೆಂದರೆ ವಿದ್ಯಾರ್ಥಿ ಈಗಾಗಲೇ ತಿಳಿದಿರುವುದು..’ ಎನ್ನುತ್ತಿದ್ದರು. ಹೀಗಾಗಿ ತರಗತಿ ಪ್ರವೇಶಿಸುವ ಮುನ್ನ ಕಲಿಕಾರ್ಥಿ ಆಯಾ ಅಧ್ಯಾಯದ ಅಂಶಗಳ ರೂಪುರೇಷೆ ಅರಿತಿರಬೇಕು.

ನೋಟ್ಸ್‌ ಪ್ರಯೋಜನಗಳು

* ಕಲಿಕೆ ಹೆಚ್ಚು ಕ್ರಿಯಾಶೀಲವಾಗುತ್ತದೆ.

* ಕಂಡಿದ್ದು, ಕೇಳಿದ್ದು ಚೆನ್ನಾಗಿ ಮನದಟ್ಟಾಗುತ್ತದೆ.

* ಬೋಧನೆಯತ್ತಲೇ ನಿಗಾ ಇರುತ್ತದೆ.

* ಸಂದೇಹ, ಗೌಜಿಗೆ ಅವಕಾಶವಿಲ್ಲದಂತಾಗಿ ವಿಷಯದ ಚಿತ್ರಣ ಚೆನ್ನಾಗಿ ಮೂಡುತ್ತದೆ.

* ಹೆಚ್ಚಿನ ಅಭ್ಯಾಸದತ್ತ ಆಸಕ್ತಿ ಕೆರಳುತ್ತದೆ.

* ಸಮರ್ಥ ಮತ್ತು ಅಡಕವಾದ್ದರಿಂದ ಅದನ್ನು ಶೀಘ್ರವಾಗಿ ಪರಾಮರ್ಶಿಸಬಹುದು.

* ಸಮಯದ ಉಳಿತಾಯವೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT