ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಬ್‌ನಲ್ಲಿ ಬೇಕು ಸುರಕ್ಷತೆಯ ಪಾಠ

Last Updated 18 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ಯಾವುದೇ ಕೆಲಸವಾಗಿರಲಿ, ಅದಕ್ಕೆ ಕೊಡಬೇಕಾದ ಮರ್ಯಾದೆ, ಶ್ರದ್ಧೆ ಕೊಡದಿದ್ದರೆ, ಅದು ಸುಸಂಪನ್ನವಾಗುವುದಿಲ್ಲ; ಈ ಶ್ರದ್ಧೆ ಯಾವುದೋ ಉನ್ನತ ಹುದ್ದೆಯನ್ನು ನಿಭಾಯಿಸುವುದಕ್ಕೆ ಮಾತ್ರವೇ ಆಗಬೇಕಿಲ್ಲ. ದಿನನಿತ್ಯದ ಸಣ್ಣಪುಟ್ಟ ಕೆಲಸಗಳದರೂ ಸರಿ. ಉದಾಹರಣೆಗೆ ಗಿಡಕ್ಕೆ ನೀರು ಹಾಕುವಾಗ, ಆಗಷ್ಟೇ ಚಿಗುರುತ್ತಿರುವ ಸಸಿಗೆ ಒಂದು ತಂಬಿಗೆ ನೀರು ರಪ್ ಅಂತ ಎರಚಿದರೆ ಅದರ ಪರಿಣಾಮ ಏನಾಗತ್ತೆ ನಿಮಗೆ ಗೊತ್ತೇ ಇದೆ; ಬದಲಿಗೆ ಅಲ್ಲಿ ನೀರನ್ನು ಹನಿಸಿದರೆ ಸಾಕು. ಹಾಗೇ, ತರಕಾರಿಯನ್ನು ಹೆಚ್ಚುವಾಗ, ಒಂದರೆಕ್ಷಣ ನಮ್ಮ ಕಣ್ಣು ಮತ್ತು ಕೈಯ ನಡುವಿನ ಬ್ಯಾಲೆನ್ಸ್ ತಪ್ಪಿದರೆ ತರಕಾರಿಯ ಬದಲು ನಮ್ಮ ಬೆರಳೇ ಹೋಳಾಗಬಹುದು! ಅಭ್ಯಾಸಬಲದಿಂದ ಕೆಲವರು ಬೇರೇನೋ ನೋಡುತ್ತಲೋ, ಮಾತಾಡುತ್ತಲೋ ತಮ್ಮ ಕೆಲಸ ಮಾಡುತ್ತಿರಬಹುದು. ಆದರೆ, ತಮ್ಮ ಕಣ್ಣಿನ ಬದಲು ಒಳಗಣ್ಣನ್ನು ತರಕಾರಿಯ ಮೇಲಿಟ್ಟು, ಗಮನವನ್ನು ಅಲ್ಲಿರಿಸಿಯೇ ಬೇರೆ ಕಡೆ ಕಣ್ಣು ಹಾಯಿಸುತ್ತಿರುತ್ತಾರೆ. ಅಂದರೆ, ಆ ಕೆಲಸಕ್ಕೆ ಬೇಕಾದ ಶ್ರದ್ಧೆ ಅಲ್ಲಿ ಇದ್ದೇ ಇದೆ ಎಂದರ್ಥ. ಶ್ರದ್ಧೆ ಅಷ್ಟೇ ಅಲ್ಲದೇ ಎಲ್ಲಿರುವಾಗ ಏನು ಮಾಡುವಾಗ ಹೇಗಿರಬೇಕು ಎಂಬ ಎಚ್ಚರಿಕೆ ಬಹಳ ಮುಖ್ಯ; ಅಡುಗೆಮನೆಯಲ್ಲಿ ಆಗಲಿ, ಬಚ್ಚಲುಮನೆಯಲ್ಲಿ ಆಗಲಿ ವಿದ್ಯುತ್ ಉಪಕರಣಗಳನ್ನು ಬಳಸುವಾಗ ಒದ್ದೆಯಂಶದ ಕಾರಣ ಶಾಕ್ ಹೊಡೆಯದಂತೆ, ಜಾರಿಕೆ ಇರುವ ನೆಲದಲ್ಲಿ ನಡೆಯುವಾಗ ಜಾರದಂತೆ, ಆಫೀಸಿನಲ್ಲಿ ಹೊಸ ಪೇಪರ್ ಕಟ್ಟನ್ನು ಹ್ಯಾಂಡಲ್ ಮಾಡುವಾಗ ಬೆರಳು ಕಟ್ ಆಗದಂತೆ, ಮಗುವನ್ನು ಮಲಗಿಸುವಾಗ ಆಚೀಚೆ ಅದು ಬೀಳದಂತೆ - ಹೀಗೆ ಬದುಕಿನ ಪ್ರತಿ ಹಂತದಲ್ಲೂ, ಸದಾ ಕಾಲ ಒಂದು ಎಚ್ಚರಿಕೆ ಬೇಕೇಬೇಕು; ಹಾಗಿರುವಾಗ, ಅಪಾಯಕಾರಿ ಕೆಮಿಕಲ್‌ಗಳು ಇರುವ ಪ್ರಯೋಗಾಲಯಗಳಲ್ಲಿ ಇನ್ನೂ ಪ್ರಬುದ್ಧರೆನಿಸದ ಮಕ್ಕಳು ಇನ್ನೆಷ್ಟು ಎಚ್ಚರಿಕೆ ವಹಿಸಬೇಕು ಊಹಿಸಿಕೊಳ್ಳಿ.

ಶಾಲಾ–ಕಾಲೇಜುಗಳಲ್ಲಿ ವಿಜ್ಞಾನವನ್ನು ಪರಿಪೂರ್ಣವಾಗಿ ಕಲಿಸಲು, ಆಸಕ್ತಿದಾಯಕವನ್ನಾಗಿಸಲು, ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಲು ಪ್ರಯೋಗಾಲಯಗಳು ಬೇಕೇಬೇಕು. ಶಾಲಾಕಾಲೇಜುಗಳಲ್ಲಿ ತಮ್ಮ ಆಸಕ್ತಿ ಹಾಗೂ ಹಣದ ಗ್ರ್ಯಾಂಟ್‌ಗೆ ಅನುಗುಣವಾಗಿ ಪ್ರಯೋಗಾಲಯಗಳನ್ನು ನಿರ್ಮಿಸುತ್ತಾರೆ. ಮುಂಚೆ ಕೇವಲ ಪಿ.ಯು. ಅಥವಾ ಪದವಿಯ ವಿದ್ಯಾರ್ಥಿಗಳು ಲ್ಯಾಬ್‌ಗಳಲ್ಲಿ ಪ್ರಯೋಗಗಳನ್ನು ಮಾಡುವ ಅವಕಾಶವಿತ್ತು. ಆದರೆ ಬದಲಾಗುತ್ತಿರುವ ಶಿಕ್ಷಣವ್ಯವಸ್ಥೆಯ ಭಾಗವಾಗಿ, ಹೈಸ್ಕೂಲು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಫ್ರೈಮರಿ ತರಗತಿಯ ಮಕ್ಕಳಿಗೆ ಕೂಡ ಲ್ಯಾಬ್ ಸೆಷನ್ಸ್ ಇರುತ್ತದೆ. ಇದು ಖಂಡಿತ ತಪ್ಪಲ್ಲ. ಬದಲಿಗೆ, ಉತ್ತಮ ನಡೆಯೇ. ಇತ್ತೀಚೆಗೆ ಮಕ್ಕಳಿಗೆ ಬಹುಮಾಧ್ಯಮಗಳಿಂದ ಸಿಗುತ್ತಿರುವ ಎಕ್ಸ್‌ಪೋಷರ್‌, ಅವರ ಬುದ್ಧಿಮತ್ತೆಗೆ ಅನೇಕ ಆಯಾಮಗಳನ್ನು ಕೊಡಮಾಡುತ್ತವೆ; ಕೇವಲ ಥಿಯರಿಯ ಮೂಲಕ ಕಲಿಸಿದರೆ ಕಲಿಯದ ಮಕ್ಕಳು ಪ್ರಾಕ್ಟಿಕಲ್‌ನ ಮೂಲಕ ಎಷ್ಟು ಚೆನ್ನಾಗಿ ಕಲೀತಾರೆ ಎಂಬುದರ ಉದಾಹರಣೆಯನ್ನು ನಾವು ಖಂಡಿತ ನೋಡಿರುತ್ತೇವೆ. ಇದೇ ಕಾರಣಕ್ಕೇ, ವಿಜ್ಞಾನಕ್ಕೆ ಮಾತ್ರವಲ್ಲದೇ, ಗಣಿತ, ಭಾಷೆಗಳು, ಸಮಾಜ ವಿಜ್ಞಾನ, ಕಂಪ್ಯೂಟರ್ - ಹೀಗೆ ಎಲ್ಲಾ ವಿಷಯಗಳನ್ನು ಕಲಿಸಲೂ ಲ್ಯಾಬ್‌ಗಳ ಸಹಾಯ ಪಡೆಯಲಾಗುತ್ತದೆ. ಆದರೆ, ಈ ಯಾವ ಲ್ಯಾಬ್‌ಗಳಲ್ಲೂ ಇಲ್ಲದ ಅಪಾಯಗಳು ವಿಜ್ಞಾನ ಪ್ರಯೋಗಾಲಯಗಳಲ್ಲಿ ಇರುವುದು ಸತ್ಯ. ಆಗೀಗ ಲ್ಯಾಬ್‌ಗಳಲ್ಲಿ ನಡೆದ ಅವಘಡಗಳ ಬಗ್ಗೆ ಸುದ್ದಿಗಳನ್ನು ಓದಿದಾಗಂತೂ, ಲ್ಯಾಬ್‌ಗಳಲ್ಲಿ ಪಾಲಿಸಲೇಬೇಕಾದ ಕೆಲವು ಅಂಶಗಳನ್ನು ಎಲ್ಲರೂ ಅರಿತಿರಬೇಕು ಮತ್ತು ಪಾಲಿಸುವಂತೆ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಅನಿವಾರ್ಯ. ಅದು ಮುಖ್ಯವಾಗಿ ಶಿಕ್ಷಕರ ಕೆಲಸವೇ ಇರಬಹುದು; ಆದರೆ, ನಮ್ಮ ಮಕ್ಕಳ ಸೇಫ್ಟಿ ನಮಗೆ ಮುಖ್ಯವಲ್ಲವೇ? ಲ್ಯಾಬ್‌ಗಳಲ್ಲಿ ಪಾಲಿಸಲೇಬೇಕಾದ ಕೆಲವು ಅಂಶಗಳು ಇಲ್ಲಿವೆ:

* ಮೊದಲಿಗೆ, ಲ್ಯಾಬ್‌ನೊಳಗೆ ಕರೆದೊಯ್ಯುವ ಮುನ್ನ ಶಿಕ್ಷಕರು ನೀಡುವ ಎಚ್ಚರಿಕೆಗಳನ್ನ ಗಮನವಿಟ್ಟು ಕೇಳಿ, ಪಾಲಿಸಬೇಕು.

* ಲ್ಯಾಬ್ ಕೋಟ್, ಸೇಪ್ಟಿ ಗಾಗಲ್ಸ್ ಧರಿಸುವಂತಹ ಬೇಸಿಕ್ ಸುರಕ್ಷತಾ ಕ್ರಮಗಳನ್ನು ಪಾಲಿಸಲೇಬೇಕು.

* ಉದ್ದಕೂದಲನ್ನು ಗಂಟು/ಜುಟ್ಟು ಕಟ್ಟಿಯೇ ಲ್ಯಾಬ್ ಪ್ರವೇಶಿಸಬೇಕು; ಇಲ್ಲದಿದ್ದಲ್ಲಿ ಬೆಂಕಿ ಅಥವಾ ಕೆಮಿಕಲ್‌ಗಳು ಹೆಚ್ಚು ಅಪಾಯ ಉಂಟುಮಾಡಬಹುದು.

* ಯೂನಿಫಾರ್ಮ್ ಇಲ್ಲದಿದ್ದ ಕಾಲೇಜುಗಳಲ್ಲಿ, ಲ್ಯಾಬ್ ತರಗತಿ ಇದ್ದ ದಿನ ಸೂಕ್ತ ಬಗೆಯ ಕಾಟನ್ ಬಟ್ಟೆ ಧರಿಸುವುದು ಉತ್ತಮ.

* ಗುಂಪುಗುಂಪಾಗಿ ಮುಗಿಬಿದ್ದು, ಹುಡುಗಾಟಿಕೆಯಿಂದ ಲ್ಯಾಬ್ ಕೆಲಸಗಳನ್ನು ಮಾಡುವುದುಎಂದಿಗೂ ಸರಿಯಲ್ಲ; ಆಸಕ್ತಿಯಿಂದ ಮಾಡಿದ ಪ್ರಯೋಗಗಳಷ್ಟೇ ಸುರಕ್ಷಿತ ಹಾಗೂ ಯೋಗ್ಯ ರಿಸಲ್ಟ್ಸ್‌ ನೀಡಲು ಸಾಧ್ಯ. ಲ್ಯಾಬ್‌ನಲ್ಲಿ ಓಡುವುದು, ಕುಣಿಯುವುದು, ಟೆಸ್ಟ್‌ಟ್ಯೂಬ್‌ನಲ್ಲಿ ನಲ್ಲಿನ ಕೆಮಿಕಲಗಳನ್ನು ಜೋರಾಗಿ ಸಿಂಕ್‌ನೊಳಗೆ ಸುರಿಯುವುದು, ಕುತೂಹಲಕ್ಕಾಗಿ ಯಾವುದೋ ಕೆಮಿಕಲ್‌ನ ಮತ್ಯಾವುದಕ್ಕೋ ಸೇರಿಸಿ ಮಜಾ ನೋಡುವುದು - ಇವೆಲ್ಲಾ ಲ್ಯಾಬ್‌ನೊಳಗೆ ನಿಷಿದ್ಧ.

* ಲ್ಯಾಬ್‌ನ ಹೆಚ್ಚಿನ ವಸ್ತುಗಳು ಗಾಜಿನದ್ದೇ ಆಗಿರುವ ಕಾರಣ, ಹೆಚ್ಚೇ ಎಚ್ಚರಿಕೆಯಿಂದ ಅವುಗಳನ್ನು ಬಳಸಬೇಕಾಗತ್ತದೆ. ಕೈ ತಪ್ಪಿ ಒಡೆದರೆ, ಅದನ್ನ ತಪ್ಪದೇ ಶಿಕ್ಷಕರಿಗೆ, ಲ್ಯಾಬ್ ಅಟೆಂಡರ್‌ಗೆ ತಕ್ಷಣವೇ ತಿಳಿಸಬೇಕಾಗತ್ತದೆ. ಇದರಿಂದ ಮುಂದಿನ ಅಪಾಯಗಳನ್ನು ತಪ್ಪಿಸಬಹುದು.

* ಲ್ಯಾಬ್‌ನಲ್ಲಿ ಆಹಾರ ಸೇವಿಸುವುದು, ನೀರು ಕುಡಿಯುವುದು ನಿಷಿದ್ಧ; ಕೇವಲ ಲಿಕ್ವಿಡ್ ಅಥವಾ ಸಾಲಿಡ್ ರಾಸಾಯನಿಕಗಳಲ್ಲದೇ, ಅಲ್ಲಿ ನಡೆಸಲಾದ ಪ್ರಯೋಗಗಳ ಫಲಿತಾಂಶವಾಗಿ ಹೊರಬಂದ ಅನಿಲಗಳೂ ಅಪಾಯಕಾರಿಯಾಗಿರುವ ಸಾಧ್ಯತೆ ಹೆಚ್ಚು; ಹಾಗಾಗಿ ಅಲ್ಲಿ ತಿನ್ನುವುದು, ಹೆಚ್ಚು ಮಾತಾಡಿ ಬೇಡದ ಅನಿಲಗಳನ್ನು ಉಸಿರಾಡುವುದೂ ಸರಿಯಲ್ಲ.

* ಯಾವುದೇ ಕೆಮಿಕಲನ್ನು ಮೂಗಿಗೆ ಅತಿ ಹತ್ತಿರ ಎಳೆದುಕೊಂಡು ಸ್ಮೆಲ್ ಮಾಡುವುದು, ಚಿಟಿಕೆಯಷ್ಟು ನಾಲಿಗೆಯ ಮೇಲಿರಿಸಿ ರುಚಿ ನೋಡುವುದೂ ನಿಷಿದ್ಧ; ಒಂದೇ ಚಿಟಿಕೆ ಅಪಾಯಕಾರಿ ರಾಸಾಯನಿಕ ಕೂಡ ಕ್ಷಣಮಾತ್ರದಲ್ಲಿ ಜೀವಕ್ಕೇ ಕಂಟಕ ತರಬಹುದು.

* ಲ್ಯಾಬ್‌ನಲ್ಲಿ ಪ್ರತಿ ಅಪಾರಟಸ್‌ನ ಮೇಲೆ, ರಾಸಾಯನಿಕದ ಬಾಟಲ್‌ಗಳ ಮೇಲೆ ಎಚ್ಚರಿಕೆಯ ಸೂಚನೆಗಳನ್ನು ಪದಗಳಲ್ಲಿ ಹಾಗೂ ಸಂಕೇತಗಳ ಮೂಲಕ ಬರೆದಿರುತ್ತಾರೆ. ಅದನ್ನು ಓದಿದ ನಂತರವೇ ಅವುಗಳನ್ನ ಅದಕ್ಕೆ ತಕ್ಕಂತೆ ಉಪಯೋಗಿಸುವುದೇ ಸೂಕ್ತ; ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟಬುತ್ತಿ.

* ಲ್ಯಾಬ್‌ನಲ್ಲಿ ಆ ದಿನ ಏನು ಪ್ರಯೋಗ ಮಾಡಲಿಕ್ಕಿದೆ ಎಂಬುದರ ಬಗ್ಗೆ ಮೊದಲೇ ತಿಳಿಸಿರುತ್ತಾರೆ; ಹಾಗಾಗಿ, ಅದರ ಬಗ್ಗೆ ಪೂರ್ವಭಾವಿ ಸಿದ್ಧತೆ ನಡೆಸಿಕೊಂಡು, ಕೇವಲ ಆ ಏಕ್ಸ್‌ಪರಿಮೆಂಟ್‌ ನಡೆಸುವುದು ಹೇಗೆ ಎಂಬುದಷ್ಟೇ ಅಲ್ಲದೇ ಅದರಲ್ಲಿ ಬಳಸುವ ಅಪಾರಟಸ್/ರಾಸಾಯನಿಕಗಳ ಬಗ್ಗೆಯೂ ಮಾಹಿತಿ ತಿಳಿದುಕೊಂಡಿದ್ದರೆ, ಅನಪೇಕ್ಷಿತ ಅಪಾಯಗಳನ್ನು ತಡೆಯಬಹುದು.

* ಲ್ಯಾಬ್‌ಗಳಲ್ಲಿ ವಿವಿಧ ಪ್ರಯೋಗಗಳಿಗೆ ಬೇಕು ಅನ್ನೊ ಕಾರಣಕ್ಕೆ ವಿವಿಧ ಗ್ಯಾಸ್‌ಗಳನ್ನ ಸಿಲಿಂಡರ್‌ಗಳಲ್ಲಿ ಶೇಖರಿಸಿ ಇಟ್ಟಿರುತ್ತಾರೆ. ಅಷ್ಟೇ ಅಲ್ಲದೇ ಟೇಬಲ್‌ಗೆ ನಾಲ್ಕರಂತೆ ಬರ್ನರ್‌ಗಳೂ ಇದ್ದು, ಅವಕ್ಕೆ ಎಲ್.ಪಿ.ಜಿ. ಕನೆಕ್ಷನ್ ಕೂಡ ಇರತ್ತದೆ; ಹಾಗಾಗಿ ಅಲ್ಲಿನ ಸೇಪ್ಟೀ ನಾಝಲ್‌ಗಳ ಬಗ್ಗೆ, ಆನ್/ಆಫ್ ಮಾಡುವುದರ ಬಗ್ಗೆ ತಿಳಿದುಕೊಂಡಿರಬೇಕು.

* ಆಕಸ್ಮಾತ್ ಯಾವುದೇ ವಿದ್ಯುತ್/ಬೆಂಕಿ/ರಾಸಾಯನಿಕ ಅವಘಡವಾದರೆ, ಒಬ್ಬರಿಗೊಬ್ಬರು ಅಪಾಯ ಮಾಡಿಕೊಳ್ಳದೇ, ಹೊರಹೋಗುವ ದಾರಿ ಅರಿತಿರಬೇಕು; ಶಿಸ್ತು ಇಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.

* ಫ್ಯಾನ್, ಕಿಟಕಿ, ಎಕ್ಸಾಸ್ಟ್ ಫ್ಯಾನ್‌ಗಳಿದ್ದರೂ ಲ್ಯಾಬ್‌ನಲ್ಲಿ ಯಾವಾಗ ಅವನ್ನು ಬಳಸಬೇಕು/ಬಳಸಬಾರದು ಎಂಬುದರ ಬಗ್ಗೆ ಕೂಡ ತಿಳಿದುಕೊಂಡಿರಬೇಕು; ಇಲ್ಲದಿದ್ದಲ್ಲಿ ಜೋರು ಗಾಳಿಗೆ ಅಪಾಯಕಾರಿ ಅನಿಲ ಬೇಗ ಹರಡಬಹುದು ಅಥವಾ ಸಣ್ಣ ಉರಿಯಲ್ಲಿ ಬಳಸುತ್ತಿದ್ದ ಬರ್ನರ್ ಆರಿಹೋಗಿ, ನಮಗೆ ತಿಳಿಯದಂತೆ ಅನಿಲ ಲೀಕ್ ಆಗ್ಬಹುದು.

ಒಂದೇ, ಎರಡೇ, ಇಂತಹ ನೂರಾರು ಸಾಮಾನ್ಯವಾಗಿ ಪಾಲಿಸಲೇಬೇಕಾದ ಎಚ್ಚರಿಕೆ ಕ್ರಮಗಳಿದ್ದು, ಅದರ ಜೊತೆಗೆ, ನಡೆಸುತ್ತಿರುವ ಪ್ರಯೋಗ ಮತ್ತು ಇರುವ ಲ್ಯಾಬ್‌ನ ಆಧಾರದ ಮೇಲೆ ನಿರ್ದಿಷ್ಟ ಎಚ್ಚರಿಕಾ ಕ್ರಮಗಳೂ ಇರುತ್ತವೆ; ಮೈಯೆಲ್ಲಾ ಕಣ್ಣಾಗಿ ಗಮನವಹಿಸಿ, ಮಾಡಬೇಕಾದ್ದಷ್ಟನ್ನೇ ಎಚ್ಚರಿಕೆಯಿಂದ ಮಾಡಿದರೆ ವಿಜ್ಞಾನದ ಅದ್ಭುತ ಸೌಂದರ್ಯದ ಅನುಭೂತಿ ಸಿಕ್ಕಿತು. ಇಲ್ಲದಿದ್ದರೆ ಅಂಗಗಳಿಗೆ ಊನವಾಗುವ, ಪ್ರಾಣಕ್ಕೆ ಸಂಚಕಾರವಾಗುವ ಸಂದರ್ಭ ಬಂದೊದಗೀತು. ಆಗ ಅಲ್ಲಿನ ವ್ಯವಸ್ಥೆಯನ್ನೋ ಶಿಕ್ಷಕರನ್ನೋ ದೂರುವುದರಿಂದ ಯಾವುದೇ ಪ್ರಯೋಜನವಿರಲಿಕ್ಕಿಲ್ಲ. ಬೆಟರ್ ಸೇಫ್ ದೆನ್ ಸಾರಿ ಅಲ್ವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT