ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಸುವುದೂ ಒಂದು ಕೌಶಲ

Last Updated 21 ಜನವರಿ 2020, 19:30 IST
ಅಕ್ಷರ ಗಾತ್ರ

ತರಗತಿಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಪರೀಕ್ಷಿಸುವ ಸಲುವಾಗಿ ಅಧ್ಯಾಪಕರು ತಮ್ಮ ಬೋಧನೆಯ ನಡುವೆ ‘ನಾನು ಏನು ವಿವರಿಸುತ್ತಿದ್ದೆ ಹೇಳಿ ನೋಡೋಣ’ ಎಂದು ತರಾಟೆ ಗೈಯುವುದುಂಟು. ತರಗತಿಯಲ್ಲಿ ವಿದ್ಯಾರ್ಥಿಗಳು ಕೇವಲ ಭೌತಿಕವಾಗಿ ಹಾಜರಿದ್ದರೆ ಆಗದು. ಅಧ್ಯಾಪಕರು ಹೇಳಿಕೊಡುವ ಪಾಠದತ್ತ ಅವರ ಚಿತ್ತವಿರಬೇಕು. ‘ಬುದ್ಧಿವಂತಿಕೆಯೆಂದರೆ ಮಾತಾಡುವುದರ ಬದಲಿಗೆ ಆಲಿಸುವ ನಿರ್ಧಾರ’ ಎಂಬ ಉಕ್ತಿಯಿದೆ. ಭಾರತೀಯ ಪರಂಪರೆಯಲ್ಲಿ ಶ್ರವಣಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿಯೇ ಲಿಖಿತವಾದವಕ್ಕಿಂತ ಮೌಖಿಕ ಕಾವ್ಯ, ಕಥನಗಳು ಹೇರಳ. ಜಾನಪದ ಸಾಹಿತ್ಯವೆಲ್ಲ ಬಾಯಿಂದ ಬಾಯಿಗೆ ಪ್ರಸರಿಸಿವೆ.

ಗಮನವಿಟ್ಟು ಆಲಿಸುವುದೊಂದು ಕೌಶಲವೇ ಹೌದು. ಅದು ನಾಲ್ಕು ಪ್ರಧಾನ ಅಂಶಗಳನ್ನು ಒಳಗೊಂಡಿದೆ- ಕೇಳುವುದು, ಗಮನವಿಡುವುದು, ಅರ್ಥೈಸಿಕೊಳ್ಳುವುದು ಮತ್ತು ನೆನಪಿನಲ್ಲಿಡುವುದು. ತರಗತಿಯಲ್ಲಿ ಕುಳಿತಾಗ ಯಾವುದೇ ಒತ್ತಡಗಳಿರದೆ ಮುಕ್ತವಾಗಿರಬೇಕು. ಸಹನೆ ಅತ್ಯಂತ ಅಗತ್ಯ. ಆಲಿಸುವುದೆಂದರೆ ಕೇವಲ ಶಬ್ದಗಳನ್ನು ಯಾಂತ್ರಿಕವಾಗಿ ಕೇಳುವುದಲ್ಲ. ಬೋಧಕರು ತಮಗಾಗಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆಂದು ಗ್ರಹಿಸುವುದು ಮುಖ್ಯವಾಗುತ್ತದೆ. ಕಿವಿಗೊಡುವ ಕೌಶಲ ವಿದ್ಯಾರ್ಥಿ ದೆಸೆಯಲ್ಲಿ ಮಾತ್ರವಲ್ಲದೆ ಬದುಕಿನಾದ್ಯಂತವೂ ಅಗತ್ಯ. ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ರಚೆಲ್ ನವೊಮಿ ರಿಮನ್ ‘ನಾವು ಪರಸ್ಪರ ನೀಡಬಹುದಾದ ಅತ್ಯಂತ ಮೌಲಿಕ ಉಡುಗೊರೆಯೆಂದರೆ ನಮ್ಮ ಗಮನ’ ಎನ್ನುತ್ತಾರೆ.

ಕೇಳುವುದಕ್ಕಿಂತ ಭಿನ್ನ

ಆಲಿಸುವಾಗ ನಮ್ಮ ಕಿವಿಗಳು ಮಾತ್ರವಲ್ಲ, ನಮ್ಮ ಮನಸ್ಸು, ಹೃದಯ ಕೂಡ ತೆರೆದುಕೊಳ್ಳುತ್ತವೆ. ನಮ್ಮ ಸಾಮಾಜಿಕ ಬದುಕಿನ ಗುಣಮಟ್ಟ ವೃದ್ಧಿಸಲು ನಾವು ದಕ್ಷ ಕೇಳುಗರಾಗಬೇಕು. ಆಲಿಸುವಿಕೆ ನಿಷ್ಕ್ರಿಯ ಚಟುವಟಿಕೆ ಅಲ್ಲ. ಆಲಿಸುವಾಗ ನಮಗೆ ಸಿಗುವ ಜ್ಞಾನವನ್ನು ಅವಲೋಕಿಸುತ್ತಿರುತ್ತೇವೆ. ಇತ್ತ ಬೋಧಕರಿಗೆ ಪಾಠ, ವಿವರಣೆ, ಪ್ರಾತ್ಯಕ್ಷಿಕೆ... ಹೀಗೆ ಮಾತಿನಲ್ಲೇ ಅಧಿಕ ಸಮಯ ವ್ಯಯವಾಗುವುದು ಸಹಜವೆ. ಇದರ ನಡುವೆಯೆ ಅವರು ವಿದ್ಯಾರ್ಥಿಗಳು ಬರೆದ ಉತ್ತರಗಳು, ಪೂರೈಸಿದ ಹೋಂ ವರ್ಕ್ ತಿದ್ದಬೇಕು. ಅವರ ಸಂಕಷ್ಟ, ಸಂದೇಹಗಳಿಗೆ ಕಿವಿಗೊಡಲು ಬಿಡುವು ಕಲ್ಪಿಸಿಕೊಳ್ಳುವುದು ಬೋಧಕರ ಕರ್ತವ್ಯ. ವಾಸ್ತವವಾಗಿ ಕೇಳುವುದು, ಆಲಿಸುವುದು- ಎರಡೂ ಒಂದೇ ಅಲ್ಲ. ಕೇಳುವುದು ಸ್ವಯಂಪ್ರೇರಿತವಲ್ಲದ ಶಬ್ದಗ್ರಹಣ. ನಾವು ಇಷ್ಟಪಡದ ಗದ್ದಲ, ಗಲಾಟೆ ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಆದರೆ ಆಲಿಸುವುದೆಂದರೆ ಬಯಸಿ ಆಯ್ಕೆ ಮಾಡಿಕೊಳ್ಳುವ ಮತ್ತು ಅದನ್ನು ವಿಶ್ಲೇಷಣೆಗೊಳಪಡಿಸುವ ಶಬ್ದ.

ಬೋಧನೆ ಪ್ರಕ್ರಿಯೆ ಅರ್ಧ ಸಂವಹನವಷ್ಟೆ. ಶ್ರವಣವೇ ಸಂವಹನದ ಪ್ರಧಾನ ಅಂಗ. ವಿದ್ಯಾರ್ಥಿಗಳು ಪಾಠವನ್ನು ಶ್ರದ್ಧೆ, ಆಸಕ್ತಿಯಿಂದ ಆಲಿಸಿ ತಮ್ಮದನ್ನಾಗಿಸಿಕೊಂಡಾಗ ಮಾತ್ರವೆ ಅದರ ಸಾರ್ಥಕ್ಯ. ಹಿಂದಿನ ತರಗತಿಯಲ್ಲಾದ ಪಾಠವನ್ನು ಚೆನ್ನಾಗಿ ಪುನರಾವರ್ತಿಸಿ ಬಂದಾಗ ಅಂದಂದಿನ ಪಾಠ ಬೇಸರವೆನ್ನಿಸುವುದಿಲ್ಲ. ಇಲ್ಲವಾದರೆ ಗಳಿಗೆ ಕಳೆಯುವುದೂ ಶಿಕ್ಷೆಯಾಗುತ್ತದೆ. ಚೊಕ್ಕವಾಗಿ ಪಾಠ ಹೇಳಲು ಬೋಧಕರು ಹಾಗೂ ತಬ್ಬಿಬ್ಬುಗೊಳ್ಳದೆ ಪಾಠ ಆಲಿಸಲು ವಿದ್ಯಾರ್ಥಿಗಳು ಪೂರ್ವತಯಾರಿ ನಡೆಸಿ ಬಂದಲ್ಲಿ ತರಗತಿ ಕಳೆಗಟ್ಟುವುದು. ಇಲ್ಲವಾದರೆ ಬೋಧಕ- ವಿದ್ಯಾರ್ಥಿಗಳ ನಡುವಿನ ಚರ್ಚೆ ನೀರಸವಾಗುತ್ತದೆ. ಮುಜುಗರದಿಂದ ಯಾರಿಗಾದರೂ ತರಗತಿಯಿಂದ ಹೊರಗೆ ಬಂದುಬಿಡೋಣವೆನ್ನಿಸುತ್ತದೆ. ಸಭೆ, ಸಂವಾದಗಳಲ್ಲಿ ಮಾತಾಡಲು ನಾ ಮುಂದು ತಾ ಮುಂದೆನ್ನುವ ಪೈಪೋಟಿಯೇ ಎದ್ದು ಕಾಣುತ್ತದೆ. ಯಾರು ಏನು ಹೇಳುತ್ತಿದ್ದಾರೆ ಎನ್ನುವುದೇ ಗೊತ್ತಾಗದು. ಪರಸ್ಪರ ಸಂವಹನಕ್ಕೆ ಆಸ್ಪದವಾಗದೆ ಇಡೀ ಸಂದರ್ಭ ಗೌಜಾಗುತ್ತದೆ. ಆಲಿಸುವುದರಿಂದ ಅವರಿಗೆ ಗೌರವ ಹಾಗೂ ಅನುಭೂತಿ ತೋರಿದಂತಾಗುವುದು. ಅವರೂ ನಮ್ಮ ಮಾತಿಗೆ ಕಿವಿಯಾಗುತ್ತಾರೆ. ಎಂದಮೇಲೆ ಕಿವಿಗೊಡುವುದರಿಂದ ಅಕ್ಷರಶಃ ಹೆಚ್ಚು ಕೇಳುತ್ತದೆ.

ಸುದೀರ್ಘವಾಗಿ ಆಲಿಸಿದಷ್ಟೂ ಪ್ರಶ್ನಿಸದೆ ಉತ್ತರಗಳು ದೊರಕುತ್ತವೆ. ಉತ್ತಮ ಕೇಳುಗರಿಗೆ ಮಾತನಾಡುವ ವ್ಯಕ್ತಿ ಏನನ್ನು ಹೇಳುತ್ತಾರೆನ್ನುವಷ್ಟೇ ಮುಖ್ಯವೆನ್ನಿಸುತ್ತದೆ. ಅಂದರೆ ಒಳ್ಳೆಯ ಸಂಭಾಷಣೆ ಒಳ್ಳೆಯ ಆಲಿಸುವಿಕೆಯಿಂದಲೇ ಪ್ರಾರಂಭವಾಗುತ್ತದೆ. ಸ್ವಾರಸ್ಯವೆಂದರೆ ನಮ್ಮ ಮಾತು ಕಡಿಮೆಯಾದಷ್ಟೂ ನಮಗೆ ಹೆಚ್ಚು ಕೇಳುತ್ತದೆ. ಅಷ್ಟಕ್ಕೂ ತದೇಕಚಿತ್ತದಿಂದ ಕಿವಿಗೊಡುವ ಉದ್ದೇಶ ಅರ್ಥೈಸಿಕೊಳ್ಳುವುದೇ ಹೊರತು ಪ್ರತಿಕ್ರಿಯಿಸುವುದಲ್ಲ!

ಹೆಚ್ಚು ಮಾತು ಜ್ಞಾನವೃದ್ಧಿಗೆ ಅಡೆತಡೆ

ಉತ್ತಮ ಶ್ರೋತೃಗಳು ಇತರರ ಗ್ರಹಿಕೆಗಳನ್ನು ತಿಳಿಯಲು ತಮಗೆ ತಾವೆ ಅವಕಾಶಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಒಬ್ಬರ ಹೆಚ್ಚು ಮಾತಿನಿಂದ ಅವರ ಜ್ಞಾನವೃದ್ಧಿಗೆ ಅಡೆತಡೆಯಾಗುವುದು ನಿಶ್ಚಿತ. ಇತರರ ಅಭಿಪ್ರಾಯಗಳನ್ನು ನೀವು ಒಪ್ಪದಿದ್ದರೂ ಸರಿಯೆ, ಅವರಿಗೆ ಕಿವಿಗೊಡುವುದರಿಂದ ಅವರ ವಾದ ವೈಖರಿ, ಆಂಗಿಕ ಭಾಷೆ ಲಕ್ಷಿಸಿ ನಿಮ್ಮ ಆಲೋಚನೆಗಳನ್ನು ಸುಧಾರಿಸಿಕೊಳ್ಳಬಹುದು. ಸಾವಧಾನವಾಗಿ ಆಲಿಸುವ ಪ್ರವೃತ್ತಿ ರೂಢಿಗತವಾದರೆ ಔದಾರ್ಯವೂ ಬೆಳೆಯುವುದು. ಬಹುಶಃ ಮೌನಿಯಂತೆ ತೋರ್ಪಡಿಸಿಕೊಳ್ಳ ಬಯಸದಿರುವುದೇ ಇನ್ನೊಬ್ಬರು ಮಾತು ನಿಲ್ಲಿಸುವುದಕ್ಕೆ ಮೊದಲೇ ಮಾತಾಡಲು ಮುಂದಾಗಲು ಕಾರಣವಿದ್ದೀತು. ಪ್ರತಿಯೊಬ್ಬರೂ ಒಂದಿಲ್ಲೊಂದು ಬಗೆಯಲ್ಲಿ ಪ್ರತಿಭಾಶಾಲಿಗಳೇ. ಎಂತಹವರಲ್ಲೂ ವಿಶಿಷ್ಟ ಅನುಭವಗಳು, ಸಾಧನೆಗಳು, ಗ್ರಹಿಕೆಗಳು, ಅಭಿಪ್ರಾಯಗಳಿರುತ್ತವೆ ಎನ್ನುವುದನ್ನು ನಾವು ಮನಗಾಣಬೇಕು.

ಮಾತುಕತೆಗಳು ವಿಫಲವಾಗುವುದಕ್ಕೆ, ಭಿನ್ನಾಭಿಪ್ರಾಯಗಳು ತಲೆದೋರುವುದಕ್ಕೆ ಬಹುತೇಕ ತೊಡಗುವವರ ಪರಸ್ಪರ ಅಸಮರ್ಥ ಆಲಿಸುವಿಕೆಯೇ ಕಾರಣ. ಶ್ರವಣ ಸಂವಹನದ ಪ್ರಧಾನ ಭಾಗ. ಒಬ್ಬರು ಮಾತಾಡುತ್ತಿದ್ದಾಗ ನಡುವೆ ನಮ್ಮ ಅಭಿಪ್ರಾಯ ಮಂಡಿಸುವ ಆತುರ ತೋರಿದರೆ ಒಂದೆಡೆ ಅವರ ಓಘ, ಉತ್ಸಾಹಕ್ಕೂ ಭಂಗ. ಇನ್ನೊಂದೆಡೆ ನಮ್ಮ ಒಳಸಂಧಾನವೂ ಏರುಪೇರು. ಇನ್ನೊಬ್ಬರು ಹೇಳುತ್ತಿರುವಾಗ ಕೆಲವು ಹಂತಗಳಲ್ಲಿ ಕೋಪ ತಾಪಗಳು ಉಂಟಾಗಬಹುದು. ಆದರೆ ಉದ್ವೇಗಗೊಳ್ಳದೆ ಅವರು ಏನು ವಿವರಿಸುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಬೇಕೆ ಹೊರತು ಅವರ ವಿರೋಧವನ್ನಲ್ಲ. ಅಂದಹಾಗೆ ಶ್ರೋತೃಗಳು ಮಾತನಾಡುತ್ತಿರುವವರನ್ನು ಧನಾತ್ಮಕವಾಗಿ ಉತ್ತೇಜಿಸುವುದರಿಂದ ಅವರ ಅರಿವು, ಕಲೆಹಾಕಿರುವ ಅಂಕಿ– ಅಂಶಗಳು, ಟೀಕೆ, ವಿಮರ್ಶೆ ಹರಿದು ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT