ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಕ್‌ ಮಾನ್ಯತೆಗೆ ಡಿಜಿಟಲ್‌ ಮೌಲ್ಯಮಾಪನ

Last Updated 26 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾಪರಿಷತ್ತು (ನ್ಯಾಕ್‌) ನೀಡುವ ಗ್ರೇಡ್‌ ಆಧಾರದ ಮೇಲೆ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಅಳೆಯಲಾಗುತ್ತಿದೆ. ದುರದೃಷ್ಟದ ಸಂಗತಿಯೆಂದರೆ ದೇಶದ ಯಾವ ಉನ್ನತ ಶಿಕ್ಷಣ ಸಂಸ್ಥೆಯೂ ಜಾಗತಿಕ ಮಟ್ಟದಲ್ಲಿ ಉನ್ನತ ರ‍್ಯಾಂಕ್‌ ಪಡೆದಿಲ್ಲ. ಈ ಸಂದರ್ಭದಲ್ಲಿ ನ್ಯಾಕ್‌ ನಿರ್ದೇಶಕ ಪ್ರೊ. ಎಸ್‌. ಸಿ. ಶರ್ಮ ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಣೆ ಸೇರಿದಂತೆ ನಾನಾ ವಿಚಾರಗಳನ್ನು ಸಂದರ್ಶನದಲ್ಲಿ ಚರ್ಚಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಯೊಂದಕ್ಕೆ ನ್ಯಾಕ್‌ ಮಾನ್ಯತೆ ಎಷ್ಟು ಅವಶ್ಯಕ?

ನ್ಯಾಕ್‌ ನೀಡುವ ವಿವಿಧ ಗ್ರೇಡ್‌ನ ಮಾನ್ಯತೆ ಆಧಾರದ ಮೇಲೆ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಗೋಚರಿಸುತ್ತದೆ. ನ್ಯಾಕ್‌ ಮಾನ್ಯತೆ ಸಿಕ್ಕರೆ ಈ ಸಂಸ್ಥೆಗಳಿಗೆ ವಿಶೇಷ ಆರ್ಥಿಕ ನೆರವು ಹರಿದು ಬರುತ್ತದೆ. ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶ ಸಿಗುತ್ತದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯೊಂದರ ಶೈಕ್ಷಣಿಕ ಗುಣಮಟ್ಟ ಎಷ್ಟಿದೆ ಎಂಬುದನ್ನು ಅಳೆಯಲು ನ್ಯಾಕ್‌ ಮಾನ್ಯತೆ ಮಾನದಂಡ. ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣದ ಮೇಲೂ ಅದು ಪರಿಣಾಮ ಬೀರುತ್ತದೆ.

ದೇಶದಲ್ಲಿ ಎಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ನ್ಯಾಕ್‌ ಮಾನ್ಯತೆ ಪಡೆದಿವೆ. ಇನ್ನೂ ಪಡೆಯಬೇಕಿರುವುದು ಎಷ್ಟು?

ದೇಶದಲ್ಲಿ ಅಂದಾಜು 30 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿಯವರೆಗೆ 8,273 ಉನ್ನತ ಶಿಕ್ಷಣ ಸಂಸ್ಥೆಗಳು ನ್ಯಾಕ್‌ನಿಂದ ಮಾನ್ಯತೆ ಪಡೆದಿವೆ. 2022ರೊಳಗೆ ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳೂ ನ್ಯಾಕ್‌ನಿಂದ ಮಾನ್ಯತೆ ಪಡೆದಿರಬೇಕು ಎಂಬುದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಬಯಕೆ. ಈ ನಿಟ್ಟಿನಲ್ಲಿ ನ್ಯಾಕ್‌ ಕಾರ್ಯ ನಿರ್ವಹಿಸುತ್ತಿದೆ

ನ್ಯಾಕ್‌ ಮಾನ್ಯತೆ ನೀಡುವ ಹೊಸ ವಿಧಾನದ ಬಗ್ಗೆ ಹೇಳಿ?

ನಾನು ಅಧಿಕಾರಕ್ಕೆ ಬರುವ ಕೆಲ ದಿನಗಳ ಮೊದಲು ಈ ವಿಧಾನವನ್ನು ನ್ಯಾಕ್‌ ಪರಿಚಯಿಸಿತ್ತು. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ನಾನು ಮತ್ತು ನಮ್ಮ ಸಿಬ್ಬಂದಿ ಮಾಡುತ್ತಿದ್ದೇವೆ. ಇದು ಡಿಜಿಟಲ್‌ ವಿಧಾನವಾಗಿದ್ದು, ತ್ವರಿತ ಮತ್ತು ಪಾರದರ್ಶಕವೂ ಆಗಿದೆ. ಯಾವುದೇ ಗೊಂದಲಗಳಿಲ್ಲದಂತೆ, ಯಾರಿಗೂ ಪರ ಅಥವಾ ವಿರೋಧ ಇಲ್ಲದಂತೆ ಮೌಲ್ಯಮಾಪನ ಮಾಡುವ ಅತ್ಯಾಧುನಿಕ ವಿಧಾನವಾಗಿದೆ.

ಎಷ್ಟು ವಿಧದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ?

ಹೊಸ ವಿಧಾನದಲ್ಲಿ ಪ್ರಮುಖವಾಗಿ ಎರಡು ಬಗೆಯಲ್ಲಿ ಮೌಲ್ಯಮಾಪನ ನಡೆಯುತ್ತದೆ. ಇದು 70:30ರ ಅಂಕಗಳ ಅನುಪಾತದ ಮೌಲ್ಯಮಾಪನ. ಶೇ 70ರಷ್ಟು ಅಂಕಗಳನ್ನು ಡಿಜಿಟಲ್‌ ಪರಿಶೀಲನೆಗೆ ಒಳಪಡಿಸಲಾಗುತ್ತವೆ. ಶಿಕ್ಷಣ ಸಂಸ್ಥೆ ಸ್ವಯಂ ಮೌಲ್ಯಮಾಪನ ಮಾಡಿದ ವರದಿ ಮತ್ತು ದತ್ತಾಂಶವನ್ನು ಡಿಜಿಟಲ್‌ ವಿಧಾನದ ಮೂಲಕ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಉಳಿದ 30 ಅಂಕಗಳನ್ನು ತಜ್ಞರ ಪೀರ್‌ ಸಮಿತಿ ಪರಿಶೀಲಿಸಿ ನೀಡುತ್ತದೆ.

ಮೌಲ್ಯಮಾಪನಕ್ಕೆ ಯಾವ ಅಂಶಗಳನ್ನು ಪರಿಗಣಿಸಲಾಗುತ್ತದೆ?

ಉನ್ನತ ಶಿಕ್ಷಣ ಸಂಸ್ಥೆಯ ಪಠ್ಯಕ್ರಮ, ಬೋಧನಾ ಮತ್ತು ಕಲಿಕಾ ವಿಧಾನ, ಮೌಲ್ಯಮಾಪನ, ಸಂಶೋಧನೆ, ಮೂಲ ಸೌಕರ್ಯ, ವಿದ್ಯಾರ್ಥಿ ಬೆಳವಣಿಗೆ ಕಾರ್ಯಕ್ರಮಗಳು, ಗವರ್ನೆನ್ಸ್‌, ನಾಯಕತ್ವ, ನಿರ್ವಹಣೆ, ಹೊಸ ಮತ್ತು ಅತ್ಯುತ್ತಮ ಕಲಿಕಾ ಅಭ್ಯಾಸಗಳ ಅಳವಡಿಕೆಯನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳಿಂದ ಬೋಧಕರ ಬೋಧನಾ ವಿಧಾನ, ಜ್ಞಾನದ ಕುರಿತು ‘ಫೀಡ್‌ ಬ್ಯಾಕ್’ ಕೂಡ ಪಡೆಯುತ್ತೇವೆ. ಇವೆಲ್ಲಕ್ಕೂ ನಿಗದಿತ ಅಂಕಗಳನ್ನು ನೀಡಿ ದತ್ತಾಂಶಗಳನ್ನು ತಾಳೆ ನೋಡಿ ಮಾನ್ಯತೆಯ ಗ್ರೇಡ್‌ಗಳನ್ನು ನೀಡಲಾಗುತ್ತದೆ

ಎಷ್ಟು ಬಗೆಯ ಗ್ರೇಡ್‌ಗಳನ್ನು ನೀಡಲಾಗುತ್ತದೆ?

ಒಟ್ಟು ಎಂಟು ಬಗೆಯ ಗ್ರೇಡ್‌ಗಳನ್ನು ನೀಡಲು ಅವಕಾಶ ಇದೆ. ಎ++, ಎ+, ಎ, ಬಿ++, ಬಿ+, ‘ಬಿ’, ‘ಸಿ’ ಹಾಗೂ ‘ಡಿ’ ಗ್ರೇಡ್‌ಗಳನ್ನು ನೀಡಲಾಗುತ್ತದೆ. ‘ಡಿ’ ಗ್ರೇಡ್‌ ಎಂಬುದು ಮಾನ್ಯತೆ ನಿರಾಕರಣೆ ಆಗಿರುತ್ತದೆ. ಪ್ರತಿ ಸಂಸ್ಥೆಗೂ ನೀಡಲಾದ ಗ್ರೇಡ್‌ಗೆ ಖಚಿತ ಮತ್ತು ಕರಾರುವಕ್ಕಾದ ಉತ್ತರವನ್ನು ದತ್ತಾಂಶಗಳ ಮೂಲಕವೇ ನೀಡಲಾಗುತ್ತದೆ. ಇವುಗಳನ್ನು ಸುಧಾರಿಸಿಕೊಂಡು ಅವು ಮುಂದಿನ ಬಾರಿಗೆ ಗ್ರೇಡಿಂಗ್‌ ಸುಧಾರಿಸಿಕೊಳ್ಳಲು ಅವಕಾಶ ಇರುತ್ತದೆ. ಒಂದು ವೇಳೆ ಶಿಕ್ಷಣ ಸಂಸ್ಥೆಗಳಿಗೆ ತೃಪ್ತಿ ಆಗದಿದ್ದರೆ ಅವರು ಮರು ಪರಿಶೀಲನೆಗೂ ಅರ್ಜಿ ಸಲ್ಲಿಸಬಹುದು. ಹಾಗಾಗಿಯೇ ಇದು ಹೆಚ್ಚು ಪಾರದರ್ಶಕ ವಿಧಾನ.

ಮಾನ್ಯತೆ ನೀಡಲು ಹೆಚ್ಚು ಅವಧಿ ತಗಲುತ್ತದೆಯಾ?

ಡಿಜಿಟಲ್‌ ವೆರಿಫಿಕೇಷನ್‌ ಆಗಿರುವುದರಿಂದ ಹೆಚ್ಚು ಕಾಲ ಆಗದು. ಹಳೆ ವಿಧಾನಕ್ಕಿಂತ ಇದು ಚುರುಕಾಗಿದೆ. ಇಲ್ಲದಿದ್ದರೆ ಎಂಟು ತಿಂಗಳಲ್ಲಿ 820 ಸಂಸ್ಥೆಗಳ ಅರ್ಜಿಗಳ ಪರಿಶೀಲನೆ ಸಾಧ್ಯವಾಗುತ್ತಿತ್ತಾ?

ತಜ್ಞರನ್ನು ಒಳಗೊಂಡಿರುವ ಪೀರ್‌ ಸಮಿತಿ ಸದಸ್ಯರನ್ನು ಶಿಕ್ಷಣ ಸಂಸ್ಥೆಯವರು ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆಗಳಿವೆಯಲ್ಲ?

ಹಿಂದಿನ ಗ್ರೇಡಿಂಗ್‌ ವಿಧಾನ ಮಾಪನದಲ್ಲಿ ಅದಕ್ಕೆ ಅವಕಾಶ ಇತ್ತು. ಆದರೆ ಹೊಸ ವಿಧಾನದಲ್ಲಿ ಅದಕ್ಕೆಲ್ಲ ಅವಕಾಶವಿಲ್ಲ. ಅಷ್ಟಕ್ಕೂ ಶಿಕ್ಷಣ ಸಂಸ್ಥೆಯೊಂದರ ಪರಿಶೀಲನೆಗೆ ಯಾವ ತಜ್ಞರು ಬರುತ್ತಾರೆ ಎಂಬುದು ಅವರಿಗೆ ಗೊತ್ತಾಗುವುದು ಕೇವಲ ಎರಡು, ಮೂರು ದಿನದ ಮೊದಲು. ಅಲ್ಲದೆ ಪೀರ್‌ ತಂಡದ ತಜ್ಞರ ಎಲ್ಲ ಖರ್ಚು, ವೆಚ್ಚವನ್ನು ನ್ಯಾಕ್‌ ಮಾಡುತ್ತದೆ. ಹಾಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಅವರಿಗೆ ವಿಶೇಷ ಆತಿಥ್ಯ ಮಾಡುವುದಕ್ಕೂ ಆಗುವುದಿಲ್ಲ. ಇದೆಲ್ಲದರ ನಂತರ ದತ್ತಾಂಶಗಳು ತಾಳೆಯಾದರೆ ಮಾತ್ರ ಮಾನ್ಯತೆ ಪ್ರಮಾಣ ಪತ್ರ ದೊರೆಯುವುದರಿಂದ ಉನ್ನತ ಶಿಕ್ಷಣ ಸಂಸ್ಥೆಗಳು ವ್ಯರ್ಥ ಕಸರತ್ತಿಗೆ ಕೈ ಹಾಕುವುದಿಲ್ಲ.

ನ್ಯಾಕ್‌ ರಚನೆಯಾಗಿ 25 ವರ್ಷಗಳಾಗಿವೆ. ಆದರೂ ದೇಶದ ಯಾವ ಉನ್ನತ ಶಿಕ್ಷಣ ಸಂಸ್ಥೆಗಳೂ ಜಾಗತಿಕ ಮಟ್ಟದಲ್ಲಿ ಗಣನೀಯ ರ‍್ಯಾಂಕಿಂಗ್‌ ಪಡೆದಿಲ್ಲವಲ್ಲ?

ಇದು ಬೇಸರದ ಸಂಗತಿ. ದೇಶದಲ್ಲಿ ವೈಯಕ್ತಿಕ ಬೆಳವಣಿಗೆಗೆ ಎಲ್ಲರೂ ಒತ್ತು ನೀಡುತ್ತಿದ್ದಾರೆ. ಸಂಸ್ಥೆಯ ಬೆಳವಣಿಗೆ ವಿಚಾರ ಬಂದಾಗ ಸಂಘಟಿತ ಶ್ರಮ ಹಾಕುತ್ತಿಲ್ಲ. ಬಹುತೇಕರಲ್ಲಿ ಅಸೂಯೆ ಹೆಚ್ಚಿದೆ. ಅದು ತೊಲಗಿದಾಗ ಮಾತ್ರ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಾಧ್ಯ.

ನಿಮ್ಮ ಮುಂದಿನ ಗುರಿ, ಯೋಜನೆಗಳೇನು?

ನ್ಯಾಕ್‌ಗೆ ಸಂಬಂಧಿಸಿದ ಐದು ಎಕರೆ ಜಾಗ ಇದೆ. ಅಲ್ಲಿ ದೊಡ್ಡ ಸಭಾಂಗಣ ನಿರ್ಮಿಸುವ ಉದ್ದೇಶ ಇದೆ. ಇಲ್ಲಿಂದ ನ್ಯಾಕ್‌ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಿದೆ.

ಅಂತ್ಯೋದಯ ಯೋಜನೆ ಹಾಕಿಕೊಂಡು ಗ್ರಾಮೀಣ ಭಾಗದ ಕಟ್ಟ ಕಡೆ ಕಾಲೇಜಿಗೂ ನ್ಯಾಕ್‌ ಮಾನ್ಯತೆ ದೊರೆಯಲು ನೆರವಾಗಬೇಕು ಎಂಬ ಯೋಚನೆಯೂ ಇದೆ. ಕೋರ್ಸ್‌ಗಳನ್ನು ಬಲಿಷ್ಠಗೊಳಿಸುವ, ಸಂಶೋಧನೆ, ದತ್ತಾಂಶ ವಿಶ್ಲೇಷಣೆ ಮಾಡುವ ಯೋಜನೆಗಳೂ ಇವೆ. ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಿಗೆ ನ್ಯಾಕ್‌ ಕಚೇರಿಯಲ್ಲಿ ವಿಶೇಷ ಘಟಕ ರಚಿಸಿ ಅಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಪಡೆಯುವ ಕುರಿತು ವಿಶೇಷ ತರಬೇತಿ, ಮಾಹಿತಿ ನೀಡಲು ಆರಂಭಿಸಿದ್ದೇವೆ.

***

ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌) ನಿರ್ದೇಶಕರಾಗಿರುವ ಪ್ರೊ. ಎಸ್‌. ಸಿ. ಶರ್ಮ ಅವರು ತುಮಕೂರು ವಿ.ವಿಯ ಎರಡನೇ ಕುಲಪತಿಯಾಗಿ (2009–2013) ಸೇವೆ ಸಲ್ಲಿಸಿ ಆ ವಿಶ್ವವಿದ್ಯಾಲಯದ ದಿಕ್ಕನ್ನೇ ಬದಲಿಸಿದವರು.

ಬಳಿಕ ಛತ್ತೀಸಗಡದ ತಾಂತ್ರಿಕ ವಿ.ವಿ ಕುಲಪತಿಯಾಗಿ ನೇಮಕವಾಗಿ ಅಲ್ಲಿಯೂ ಇಡೀ ವ್ಯವಸ್ಥೆಯನ್ನು ಆಧುನೀಕರಿಸಿ ಗಮನಸೆಳೆದರು. 2018ರ ಮೇ 28ರಂದು ನ್ಯಾಕ್‌ ನಿರ್ದೇಶಕರಾಗಿ ನೇಮಕಗೊಂಡಿರುವ ಅವರು ಅಲ್ಪಾವಧಿಯಲ್ಲಿಯೇ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವುದಕ್ಕೆ ಪರಿಣಾ ಮಕಾರಿಯಾದ ಆಧುನಿಕ ವಿಧಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.

ಎಂಟು ತಿಂಗಳಲ್ಲಿ 640 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೊಸ ವಿಧಾನದಡಿ ನ್ಯಾಕ್‌ ಮಾನ್ಯತೆ ನೀಡಿದೆ. ಸದ್ಯದಲ್ಲಿಯೇ 180 ಸಂಸ್ಥೆಗಳು ಮಾನ್ಯತೆ ಪಡೆಯಲಿವೆ. ಪ್ರೊ. ಶರ್ಮ ಅವರ ಸೇವೆ ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT