ಭಾನುವಾರ, ಫೆಬ್ರವರಿ 28, 2021
20 °C
ರಸಾಯನಶಾಸ್ತ್ರ

PUC ಪರೀಕ್ಷೆ ದಿಕ್ಸೂಚಿ: ಸಾರಜನಕವನ್ನು ಹೊಂದಿರುವ ಸಾವಯವ ಸಂಯುಕ್ತಗಳು-ಅಮೈನ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮೈನ್‌ಗಳು ಮೂಲತಃ ಅಮೋನಿಯಾದ ಉತ್ಪನ್ನಗಳಾಗಿವೆ. ಅಮೋನಿಯಾದ ಒಂದು ಅಥವಾ ಹೆಚ್ಚಿನ ಹೈಡ್ರೋಜನ್ ಪರಮಾಣುಗಳನ್ನು ಆಲ್ಕೈಲ್ ಅಥವಾ ಅರೈಲ್ ಗುಂಪುಗಳಿಂದ ಪ್ರತಿಸ್ಥಾಪಿಸಿದಾಗ ಅಮೈನ್‌ಗಳು ದೊರೆಯುತ್ತದೆ. ಅಮೈನ್‌ಗಳು ಪ್ರೋಟೀನ್‌ಗಳಲ್ಲಿ, ವಿಟಮಿನ್‌ಗಳಲ್ಲಿ, ಆಲ್ಕಲಾಯ್ಡ್‌ಗಳಲ್ಲಿ ಹಾಗೂ ಹಾರ್ಮೋನ್‌ಗಳಲ್ಲಿ ಲಭಿಸುತ್ತವೆ. ಸಂಶ್ಲೇಷಿತ (ಸಿಂಥೆಟಿಕ್‌) ಉದಾಹರಣೆಗಳನ್ನು ತೆಗೆದುಕೊಂಡಲ್ಲಿ ಪಾಲಿಮರ್‌ಗಳು, ರಂಗುಕಾರಕಗಳು, ಔಷಧಗಳು ಇವೆಲ್ಲವೂ ಅಮೈನ್‌ಗಳನ್ನು ಒಳಗೊಂಡಿವೆ. ಅಮೈನ್‌ಗಳ ಮುಖ್ಯವಾದ ವ್ಯಾವಹಾರಿಕ ಉಪಯೋಗವೆಂದರೆ ಔಷಧಿಗಳ ಮತ್ತು ತಂತುಗಳ (ಫೈಬರ್‌) ತಯಾರಿಕೆಯಲ್ಲಿ ಮಧ್ಯಂತರಿಗಳಾಗಿ (ಇಂಟರ್‌ಮೀಡಿಯೇಟ್ಸ್‌) ಬಳಕೆಯಾಗುವುದು. ಅಡ್ರಿನಾಲಿನ್ ಮತ್ತು ಎಪ್ರೆಡಿಸ್ ಎಂಬ ಅಮೈನ್‌ಗಳನ್ನೊಳಗೊಂಡ ಎರಡು ಸಂಯುಕ್ತಗಳನ್ನು ರಕ್ತದೊತ್ತಡವನ್ನು ಹೆಚ್ಚಿಸಲು ಬಳಸುತ್ತಾರೆ. `ನೋವಾಕೈನ್' ಎನ್ನುವ ಸಂಶ್ಲೇಶಿತ ಅಮೈನೋ ಸಂಯುಕ್ತವನ್ನು ದಂತ ಚಿಕಿತ್ಸೆಯಲ್ಲಿ ಅರವಳಿಕೆ (ಅನಸ್ತೇಶಿಯ) ಯಾಗಿ ಬಳಸುತ್ತಾರೆ. ಬೆನೆಡ್ರಿಲ್ ಎನ್ನುವ ಪ್ರಸಿದ್ಧ ಹಿಸ್ಟಮಿನ್ ರೋಧಕ ಔಷಧ ಕೂಡ ಅಮೈನ್‌ಗಳನ್ನು ಒಳಗೊಂಡಿದೆ. ನೊರೆಕಾರಕ ಪದಾರ್ಥಗಳಲ್ಲಿ ಸಹ ಅಮೋನಿಯಂ ಲವಣಗಳು ಬಳಸಲ್ಪಡುತ್ತದೆ.

ಅಮೈನ್‌ಗಳ ವರ್ಗೀಕರಣ

ಅಮೋನಿಯಾ ಅಣುವಿನಲ್ಲಿರುವ ಹೈಡ್ರೋಜನ್ ಪರಮಾಣುಗಳನ್ನು ಸ್ಥಾಪಿಸುವ ಅಲ್ಕೈಲ್‌ ಅಥವಾ ಅರೈಲ್‌ ಗುಂಪುಗಳ ಸಂಖ್ಯೆಯನ್ನು ಆಧರಿಸಿ ಅಮೈನ್‌ಗಳನ್ನು ಈ ಕೆಳ ಕಂಡಂತೆ ವರ್ಗೀಕರಿಸಲಾಗಿದೆ.

ಪ್ರಾಥಮಿಕ (1) ಅಮೈನ್‌ಗಳು: ಅಮೋನಿಯಾದ ಒಂದು ಜಲಜನಕ ಪರಮಾಣುವು R ಅಥವಾ Ar ಗುಂಪಿನಿಂದ ಪ್ರತಿಸ್ಥಾಪಿಸಲ್ಪಟ್ಟಾಗ ನಮಗೆ ಪ್ರಾಥಮಿಕ ಅಮೈನ್‌ R- NH2 ಅಥವಾ Ar-NH2 ದೊರೆಯುತ್ತದೆ.

ದ್ವಿತೀಯಕ (2) ಅಮೈನ್‌ಗಳು: ಅಮೋನಿಯಾದ ಎರಡು ಜಲಜನಕ ಪರಮಾಣುವನ್ನು R ಅಥವಾ Ar ಗುಂಪಿನಿಂದ ಪ್ರತಿಸ್ಥಾಪಿಸಲ್ಪಟ್ಟಾಗ ದ್ವಿತೀಯಕ ಅಮೈನ್‌ R2 NH/R– NH– R ದೊರೆಯುತ್ತದೆ. ಎರಡನೆಯ ಅಲ್ಕೈಲ್‌ ಅಥವಾ ಅರೈಲ್‌ ಸಮೂಹ ಒಂದೇ ತೆರನಾಗಿರಬಹುದು ಅಥವಾ ಭಿನ್ನವಾಗಿರಬಹುದು.

ತೃತೀಯಕ (3) ಅಮೈನ್‌ಗಳು: ಅಮೋನಿಯಾದ ಮೂರು ಜಲಜನಕದ ಪರಮಾಣುವನ್ನು R ಅಥವಾ Ar ಗುಂಪಿನಿಂದ ಪ್ರತಿಸ್ಥಾಪಿಸಲ್ಪಟ್ಟಾಗ ನಮಗೆ ತೃತೀಯಕ ಅಮೈನ್‌ R3N ದೊರೆಯುತ್ತದೆ.

ಅಮೋನಿಯಾ ಅಣುವಿನಲ್ಲಿರುವ ಜಲಜನಕದ ಪರಮಾಣುಗಳನ್ನು ಪ್ರತಿಸ್ಥಾಪಿಸುವ ಅಲ್ಕೈಲ್‌ ಅಥವಾ ಅರೈಲ್‌ ಗುಂಪುಗಳ ಪ್ರಕೃತಿಯನ್ನು ಆಧರಿಸಿ ಅಮೈನ್‌ಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.

1. ಅಲಿಫಾಟಿಕ ಅಮೈನ್‌ಗಳು: ಅಮೈನೋ ಗುಂಪಿನ ನೈಟ್ರೋಜನ್‌ (ಸಾರಜನಕ) ಪರಮಾಣು ಕೇವಲ ಅಲಿಫಾಟಿಕ್‌ ಗುಂಪುಗಳಿಗೆ ಮಾತ್ರ ಜೋಡಿಸಲ್ಪಟ್ಟಿದ್ದರೆ ಅಂತಹ ಸಂಯುಕ್ತಗಳನ್ನು ಅಲಿಫಾಟಿಕ್‌ ಅಮೈನ್‌ಗಳೆಂದು ಕರೆಯಲಾಗುತ್ತದೆ.

ಉದಾಹರಣೆ: ಮಿಥೈಲ್‌ ಅಮೈನ್‌, ಈಥೈಕ್‌ ಅಮೈನ್‌

2. ಅರೋಮ್ಯಾಟಿಕ್ ಅಮೈನ್‌ಗಳು: ಇವುಗಳು ಕನಿಷ್ಠ ಪಕ್ಷ ಒಂದು ಬೆಂಜೀನ್‌ ರಿಂಗ್‌ ಅನ್ನು ಹೊಂದಿರುತ್ತವೆ. ಅಮೋನಿಯಾ ಅಣುವಿನಲ್ಲಿರುವ ಜಲಜನಕದ ಪರಮಾಣುಗಳನ್ನು ಪ್ರತಿಸ್ಥಾಪಿಸುವ ಅಲ್ಕೈಲ್‌ ಅಥವಾ ಅರೈಲ್‌ ಗುಂಪುಗಳ ಮಾದರಿಯನ್ನು ಆಧರಿಸಿ ಅಮೈನ್‌ಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.

1. ಸರಳ ಅಮೈನ್‌ಗಳು: ಅಮೈನ್‌ಗಳ ಎಲ್ಲಾ ಅಲ್ಕೈಲ್‌ ಮತ್ತು ಅರೈಲ್‌ ಸಮೂಹಗಳು ಒಂದೇ ಆದರೆ ಅವುಗಳನ್ನು ಸರಳ ಅಮೈನ್‌ಗಳೆಂದು ಕರೆಯುತ್ತಾರೆ.
ಉದಾ: ಡೈಈಥೈಲ್‌ ಅಮೈನ್‌

2. ಮಿಶ್ರಿತ ಅಮೈನ್‌ಗಳು: ಅಮೈನ್‌ಗಳ ಎಲ್ಲಾ ಅಲ್ಕೈಲ್‌ ಮತ್ತು ಅರೈಲ್‌ ಸಮೂಹಗಳು ಬೇರೆ ಬೇರೆ ಆದರೆ ಅವುಗಳಿಗೆ ಮಿಶ್ರಿತ ಅಮೈನ್‌ಗಳೆಂದು ಹೆಸರು.
ಉದಾ: ಮಿಥೈಲ್‌ ಫೀಸೈಲ್‌ ಅಮೈನ್‌

ಅಮೈನ್‌ಗಳ ರಚನೆ

ಅಮೋನಿಯಾದಂತೆ ಅಮೈನ್‌ಗಳ ನೈಟ್ರೋಜನ್ (ಸಾರಜನಕ) ಪರಮಾಣುಗಳು ಟ್ರೈವೇಲೆನ್ಸಿಯನ್ನು ಹೊಂದಿವೆ ಮತ್ತು ಹಂಚಿಕೊಳ್ಳದ ಒಂದು ಜೋಡಿ (ಅನ್‌ಶೇರ್ಡ್‌ ಪೇರ್‌) ಎಲೆಕ್ಟ್ರಾನ್ ಅನ್ನು ಹೊಂದಿದೆ. ಅಮೈನ್‌ಗಳ ನೈಟ್ರೋಜನ್ ಕಕ್ಷಗಳು (ಆರ್ಬಿಟಲ್ಸ್‌) SP3 ಸಂಕಿರಣ ಹೊಂದಿದೆ. ಹಾಗೂ ಪಿರಮಿಡ್ ಆಕೃತಿಯನ್ನು ಹೊಂದಿದೆ. ಈ ಮೂರು ಹೈಬ್ರಿಡ್ ಕಕ್ಷೆಗಳನ್ನು ಅಮೈನ್‌ಗಳ ಸಂಯೋಜನೆಯನ್ನು ಅವಲಂಬಿಸಿ ಹೈಡ್ರೋಜನ್/ಇಂಗಾಲದೊಂದಿಗಿನ ಬಂಧನಕ್ಕೆ ಬಳಸಲಾಗುತ್ತದೆ. ಅಮೈನ್‌ಗಳಲ್ಲಿರುವ ಸಾರಜನಕದ ನಾಲ್ಕನೇ ಕಕ್ಷೆಯು ಹಂಚಿಕೊಳ್ಳದ ಜೋಡಿ ಎಲೆಕ್ಟ್ರಾನ್‌ಗಳನ್ನು ಹೊಂದಿರುತ್ತದೆ. ಮತ್ತು ಇದರ ಪರಿಣಾಮವಾಗಿ ಅಮೈನ್‌ಗಳಿಗೆ ಪಿರಮಿಡ್ ಆಕಾರ ಬರುತ್ತದೆ. ಬಂಧೇತರ ಎಲೆಕ್ಟ್ರಾನ್‌ಗಳ ಉಪಸ್ಥಿತಿಯಿಂದ C-N-E (E=C ಅಥವಾ H) ಕೋನವು 109 ಡಿಗ್ರಿಗಿಂತ ಕಡಿಮೆ ಇರುತ್ತದೆ. ಇದು ಟ್ರೈ ಮೀಥೈಲ್ ಅಮೈನಿನಲ್ಲಿ 108 ಡಿಗ್ರಿ ಆಗಿರುತ್ತದೆ.

(ಚಿತ್ರ 13.1)

(ಪಾಠ ಸಂಯೋಜನೆ: ರಸಾಯನಶಾಸ್ತ್ರ ವಿಭಾಗ, ಆಕಾಶ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು