ಸರ್ಕಾರಿ ಶಾಲೆ ಮಕ್ಕಳಿಗಾಗಿ ‘ಶಿಕ್ಷಣ..’

7

ಸರ್ಕಾರಿ ಶಾಲೆ ಮಕ್ಕಳಿಗಾಗಿ ‘ಶಿಕ್ಷಣ..’

Published:
Updated:

ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಪ್ರಯೋಗಾಲಯದ ಕೊರತೆ ಹಾಗೂ ಮೂಲ ಸೌಲಭ್ಯಗಳ ಕೊರತೆ ಸಂಗತಿ ಹೊಸದೇನಲ್ಲ. ಇದರಿಂದ ನಗರದ ಶಾಲೆಗಳೂ ಹೊರತಲ್ಲ. ಸರ್ಕಾರಿ ಶಾಲೆ ಮಕ್ಕಳಿಗೆ ಕಾಡುವ ಮತ್ತೊಂದು ದೊಡ್ಡ ಸಮಸ್ಯೆ ಇಂಗ್ಲಿಷ್‌ ಸಂವಹನ. ಈ ಸಮಸ್ಯೆಗಳನ್ನೆಲ್ಲ ಮನಗಂಡು ನಗರದಲ್ಲಿ ಯುವತಂಡವೊಂದು ‘ಶಿಕ್ಷಣ– ಮಕ್ಕಳ ಹಕ್ಕು ರಕ್ಷಣೆ ನಮ್ಮ ಕರ್ತವ್ಯ’ ಎಂಬ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್‌ ಸಂವಹನ ಕಲಿಕೆ, ಗಣಿತ, ವಿಜ್ಞಾನ ಪ್ರಾಯೋಗಿಕ ಕಲಿಕೆ, ಕಂಪ್ಯೂಟರ್‌ ಕಲಿಕೆಯಲ್ಲಿ ತೊಡಗಿಸಿಕೊಂಡಿದೆ. 

‘ಶಿಕ್ಷಣ– ಮಕ್ಕಳ ಹಕ್ಕು ರಕ್ಷಣೆ ನಮ್ಮ ಕರ್ತವ್ಯ’ ತಂಡ ಆರಂಭವಾಗಿದ್ದು 2017ರಲ್ಲಿ. ಈ ತಂಡದಲ್ಲಿ ಈಗ 50ಕ್ಕೂ ಹೆಚ್ಚು ಸ್ವಯಂಸೇವಾ ಸದಸ್ಯರಿದ್ದಾರೆ. ಇದರಲ್ಲಿ ಎಂಜಿನಿಯರ್‌ ವಿದ್ಯಾರ್ಥಿಗಳು, ವಿಜ್ಞಾನಿ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಖಾಸಗಿ ಶಾಲೆ ಶಿಕ್ಷಕರು, ಕಂಪ್ಯೂಟರ್‌ ಆಪರೇಟರ್ಸ್‌...ಹೀಗೆ ಬೇರೆ ಬೇರೆ ಕ್ಷೇತ್ರದ ಸದಸ್ಯರಿದ್ದಾರೆ. ಶನಿವಾರ, ಭಾನುವಾರಗಳಲ್ಲಿ ಇವರು ನಗರದ ಸರ್ಕಾರಿ ಶಾಲೆಗಳಿಗೆ ಹೋಗಿ ಪಾಠ ಮಾಡುತ್ತಾರೆ. 

ಈ ತಂಡವನ್ನು ಡಿಆರ್‌ಡಿಒದಲ್ಲಿ ಸಹಾಯಕ ಎಂಜಿನಿಯರ್‌ ಆಗಿರುವ ವಿನೋದ್‌ ಎಸ್‌. ಸಮಾನ ಮನಸ್ಕ ಗೆಳೆಯರ ಜೊತೆ ಸೇರಿ ಈ ತಂಡ ಕಟ್ಟಿದರು. ಆರಂಭದಲ್ಲಿ ಕಿರಣ್‌ ಕುಮಾರ್‌, ವಿಶ್ವ, ದಿವ್ಯಾ, ಪ್ರಜ್ವಲ್‌ ಎಂಬವರು ಕೈ ಜೋಡಿಸಿದರು. 

ಸದ್ಯ ಈ ತಂಡ ನಗರದ ಐದು ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಪಂಗಿರಾಮನಗರ, ಶಿವಾಜಿನಗರ, ನಾಗವಾರ, ಶಾಂತಿನಗರ, ವಸಂತನಗರದ ಸರ್ಕಾರಿ ಶಾಲೆಗಳಲ್ಲಿ ವಾರಾಂತ್ಯಗಳಲ್ಲಿ ಪಾಠ ಹೇಳಿಕೊಡುತ್ತಿದೆ. ಈ ತಂಡವು ಈ ಶಾಲೆಗಳಲ್ಲಿ  ಕಂಪ್ಯೂಟರ್‌ ಲ್ಯಾಬ್‌ ಹಾಗೂ ಕಂಪ್ಯೂಟರ್‌ಗಳನ್ನು ಒದಗಿಸಿದೆ. ಆರಂಭದಲ್ಲಿ ಈ ತಂಡವು ಸ್ವಂತ ಬಂಡವಾಳದಿಂದ ಕಂಪ್ಯೂಟರ್‌ ಖರೀದಿಸಿತು. ಬಳಿಕ  ಈ ತಂಡದ ಕೆಲಸವನ್ನು ಮೆಚ್ಚಿಕೊಂಡು ಹುವಾಯ್‌ ಮೊಬೈಲ್‌ ಕಂಪನಿ ಕಂಪ್ಯೂಟರ್‌ಗಳನ್ನು ಒದಗಿಸಿದ್ದು, ಈಗಸಂಪಂಗಿರಾಮನಗರದ ಶಾಲೆಯಲ್ಲಿ 10, ನಾಗವಾರದಲ್ಲಿ 10, ಶಾಂತಿನಗರದಲ್ಲಿ 8, ಶಿವಾಜಿನಗರದಲ್ಲಿ 9 ಕಂಪ್ಯೂಟರ್‌ ಹಾಗೂ ವಸಂತನಗರದ ಶಾಲೆಯಲ್ಲಿ 5 ಕಂಪ್ಯೂಟರ್‌ಗಳನ್ನು ಒದಗಿಸಿವೆ. 

ಈ ತಂಡವನ್ನು ಮೂರು ವರ್ಷಗಳ ಹಿಂದೆ‘ಕರ್ತವ್ಯ ಇಟ್ಸ್‌ ಮೈ ಡ್ಯೂಟಿ’ ಎಂಬ ಹೆಸರಿನ ತಂಡ ಕಟ್ಟಿಕೊಂಡು ಕಸ ವಿಂಗಡಣೆ, ಖಾಲಿ ಜಾಗಗಳಲ್ಲಿ ಗಿಡ ನೆಡುವುದು, ಸಂಚಾರ ಅವ್ಯವಸ್ಥೆ ಬಗ್ಗೆ ಜಾಗೃತಿ, ಕಸದ ರಾಶಿ ಹಾಕುವ ಜಾಗಗಳ ಸ್ವಚ್ಛತೆ, ಅನ್ನದಾನ ಮಹತ್ವದ ಬಗ್ಗೆ ಬೀದಿನಾಟಕ ಪ್ರದರ್ಶನ, ಆಶ್ರಮಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಮೊದಲಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿತ್ತು. ಆದರೆ ಈ ಕೆಲಸಗಳ ಬಗ್ಗೆ ಜನರ ನಿರಾಸಕ್ತಿ ಕಂಡು, ಮಕ್ಕಳಿಗೆ ಪರಿಸರ ಹಾಗೂ ಶಿಕ್ಷಣದ ಅರಿವು ಮೂಡಿಸಲು ‘ಶಿಕ್ಷಣ– ಮಕ್ಕಳ ಹಕ್ಕು ರಕ್ಷಣೆ ನಮ್ಮ ಕರ್ತವ್ಯ’  ಆರಂಭಿಸಿದರು.  

ಈ ತಂಡದ ಸದಸ್ಯರು ಮಕ್ಕಳಿಗೆ ವ್ಯಕ್ತಿತ್ವ ವಿಕಸನ, ಕಂಪ್ಯೂಟರ್‌, ಗಣಿತ, ವಿಜ್ಞಾನ, ಇಂಗ್ಲಿಷ್‌ ಸಂವಹನ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಆಯಾಯ ವಿಷಯಕ್ಕೆ ತಕ್ಕಂತೆ ಪಠ್ಯಕ್ರಮ ನಿಗದಿ ಮಾಡಿದ್ದಾರೆ. ಇಂಗ್ಲಿಷ್‌ ಹಾಗೂ ಗಣಿತವನ್ನು ಎಜುಆ್ಯಪ್‌ ಗೇಮ್‌ಗಳ ಮೂಲಕ ಹೇಳಿಕೊಡಲಾಗುತ್ತದೆ. ‘ಇಂಗ್ಲಿಷ್‌ ವ್ಯಾಕರಣವನ್ನೂ ಮಕ್ಕಳಿಗೆ ಕೆಲ ಆಟಗಳ ಮೂಲಕ ಹೇಳಿಕೊಡುತ್ತೇವೆ. ಇದರ ಮೂಲಕ ಮಕ್ಕಳ ಗ್ರಹಿಕೆ ಹೆಚ್ಚಾಗಿ ಅವರು ಬೇಗ ಕಲಿಯುತ್ತಾರೆ. ನಿತ್ಯದಂತೆ ನಾವೂ ತರಗತಿ ತೆಗೆದುಕೊಂಡರೆ ಅವರ ಆಸಕ್ತಿ ಕಡಿಮೆಯಾಗಬಹುದು’ ಎಂದು ತಮ್ಮ ಬೋಧನಾ ಕ್ರಮದ ಬಗ್ಗೆ ವಿವರಣೆ ನೀಡುತ್ತಾರೆ ಅವರು. 

‘ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿಯಿಂದಲೇ ಕಂಪ್ಯೂಟರ್‌ ಎಂಬ ವಿಷಯ ಪಠ್ಯದಲ್ಲಿರುತ್ತದೆ. ಆದರೆ ಸರ್ಕಾರಿ ಶಾಲೆ ಮಕ್ಕಳು ಈ ಸೌಲಭ್ಯದಿಂದ ವಂಚಿತರು. ಕಂಪ್ಯೂಟರ್‌ ಕಲಿಕೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಕೈಗೊಂಡೆವು’ ಎನ್ನುವುದು ವಿನೋದ್‌ ಅವರ ಮಾತು. ಇದರ ಜೊತೆಗೆ ಮಕ್ಕಳಿಗೆ ಪರಿಸರ ಕಾಳಜಿ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ ಈ ತಂಡ.

ತಂಡದ ಸದಸ್ಯರಾಗಿರುವ ಆರ್‌. ಶ್ರೀನಿವಾಸನ್‌ ಅವರು ಡಿಆರ್‌ಡಿಒದಲ್ಲಿ ವಿಜ್ಞಾನಿ. ಹಾಗೇ ಜ್ಞಾನ ಪ್ರಕಾಶ್‌ ಹಾಗೂ ಇಳಂಗೋವನ್‌ ಎಂಬವರು ಭಾರತ ರಾಷ್ಟ್ರೀಯ ಫುಟ್‌ಬಾಲ್‌ ತಂಡ ಹಾಗೂ ಕರ್ನಾಟಕ ರಾಜ್ಯ ತಂಡದಲ್ಲಿ ಪ್ರತಿನಿಧಿಸಿದ್ದರು. ಅವರು ಮಕ್ಕಳಿಗೆ ಫುಟ್‌ಬಾಲ್‌ ಸೇರಿದಂತೆ ಬೇರೆ ಬೇರೆ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳನ್ನು ನಡೆಸುತ್ತಾರೆ. 

‘8ರಿಂದ 12ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಹೇಳಿಕೊಡುತ್ತೇವೆ. ಇಲ್ಲಿ ರ‍್ಯಾಮ್, ಸಿಪಿಯು ಸೇರಿದಂತೆ ಕಂಪ್ಯೂಟರ್‌ ಬಿಡಿಭಾಗಗಳನ್ನು ಪೂರ್ಣವಾಗಿ ಬಿಚ್ಚಿ ಹಾಕಿ, ಅವುಗಳ ಬಗ್ಗೆ ಸಮಗ್ರವಾಗಿ ಹೇಳಿಕೊಡಲಾಗುತ್ತದೆ. ಅನಂತರ ಅವುಗಳ ಬಗ್ಗೆಯೇ ತರಗತಿಗಳನ್ನು ನಡೆಸಲಾಗುತ್ತದೆ. ರೆಸ್ಯುಮೆ, ರಜಾ ಅರ್ಜಿ, ಎಂಎಸ್‌ ವರ್ಡ್‌, ಎಕ್ಸೆಲ್‌ ಬಗ್ಗೆ ಹೇಳಿಕೊಡಲಾಗುತ್ತದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪವರ್‌ ಪಾಯಿಂಟ್‌ ಪ್ರೆಸೆಂಟೇಷನ್‌, ಟ್ಯಾಲಿ ಬಗ್ಗೆ ಹೇಳಿಕೊಡಲಾಗುತ್ತದೆ. ಒಂದು ವೇಳೆ ಅವರು ಪಿಯುಸಿ ನಂತರ ಶಿಕ್ಷಣ ಮೊಟಕುಗೊಳಿಸಿದರೂ, ಕಂಪ್ಯೂಟರ್‌ ಗೊತ್ತಿರುವುದರಿಂದ ಕಂಪನಿಗಳಲ್ಲಿ ಉದ್ಯೋಗ ಹುಡುಕಬಹುದು’ ಎಂಬ ಆಶಾವಾದ ಈ ತಂಡದ್ದು. 

ಇಂಗ್ಲಿಷ್‌ ಹಾಗೂ ವಿಜ್ಞಾನ, ಗಣಿತ ಪ್ರಯೋಗ ತರಗತಿಗಳು ಪ್ರಾಥಮಿಕ ಶಾಲಾ ಮಕ್ಕಳಿಂದಲೇ ಆರಂಭಿಸುತ್ತಾರೆ. ತಂಡದ ಸದಸ್ಯರು ತಮ್ಮ ಕಾರ್ಯಚಟುವಟಿಕೆಗಳಿಗೆ ವಾಟ್ಸ್‌ಆ್ಯಪ್‌ ತಂಡ ರಚಿಸಿಕೊಂಡಿದ್ದಾರೆ. ಸದಸ್ಯರು ತಮಗೆ ಸಮೀಪವಾಗುವ ಶಾಲೆಗಳಿಗೆ ತೆರಳಿ, ಪಠ್ಯಕ್ರಮದಂತೆ ಭೋದನೆ ಮಾಡುತ್ತಾರೆ. ಭವಿಷ್ಯದಲ್ಲಿ ಹೆಚ್ಚು ಸರ್ಕಾರಿ ಶಾಲೆಗಳಿಗೆ ತಮ್ಮ ಚಟುವಟಿಕೆಗಳನ್ನುವಿಸ್ತರಿಸುವ ಗುರಿ ಹೊಂದಿರುವ ಈ ತಂಡ, ಎಲ್ಲಾ ಶಾಲೆಗಳಲ್ಲಿ ಡಿಜಿಟಲ್‌ ಲೈಬ್ರರಿ ಮಾಡುವ ಆಲೋಚನೆ ಹೊಂದಿದೆ.

ಮಾಹಿತಿಗಾಗಿ: 9611733032 

***

ಗಿಡ ನೆಟ್ಟು ಹೋದರೆ ಯಾರೂ ನೀರು ಹಾಕುತ್ತಿರಲಿಲ್ಲ. ಆಗ ಮಕ್ಕಳಿಗೆ ಸಣ್ಣವಯಸ್ಸಿನಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಇದಕ್ಕಾಗಿ ಸರ್ಕಾರಿ ಶಾಲೆಗಳನ್ನು ಭೇಟಿ ಮಾಡಿದಾಗ ಅಲ್ಲಿನ ಸಮಸ್ಯೆಗಳು ಗೊತ್ತಾಯಿತು --ವಿನೋದ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !