ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ: ಇ– ಜ್ಞಾನದಮುಕ್ತ ವೇದಿಕೆ

Last Updated 15 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನವನ್ನು ವೃದ್ಧಿಸಿ ಕೊಳ್ಳುವವರಿಗೆ ಹೆಚ್ಚಿನ ಗುಣಮಟ್ಟದ ಕಲಿಕೆ ಹಾಗೂ ಅತ್ಯುತ್ತಮ ಸಂಸ್ಥೆಗಳಿಂದ ಪಠ್ಯ ಮತ್ತು ಬೋಧನೆ ಸಿಗುವುದರಿಂದ ಭವಿಷ್ಯದ ಪೀಳಿಗೆಗೆ ಹೆಚ್ಚು ಪ್ರಯೋಜನಕಾರಿ. ಈ ಹಿನ್ನೆಲೆಯಲ್ಲಿ ಮೂಕ್‌ (Massive Open Online Course) ಭವಿಷ್ಯದ ದೂರಶಿಕ್ಷಣದ ದೃಷ್ಟಿಯಿಂದ ಭಾರತದಲ್ಲಿ ಪ್ರಾರಂಭಿಸಿದ ಸ್ವಯಂ (SWAYAM– Study Webs of Active Learning for Young Aspiring Minds) ಒಂದು ಒಳ್ಳೆಯ ಇ– ಲರ್ನಿಂಗ್‌ ವೇದಿಕೆ.

ಮುಕ್ತ ಆನ್‌ಲೈನ್ ಕೋರ್ಸ್‌ಗಳನ್ನು ಸೂಚಿಸುವ ‘ಮೂಕ್‌’ ದೂರ ಶಿಕ್ಷಣದಲ್ಲಿ ‘ಸ್ವಯಂ’ ಮೂಲಕ ರಚನಾತ್ಮಕ ಬಾಗಿಲನ್ನು ತೆರೆದಿದೆ. 2011ರ ಮಧ್ಯಭಾಗದಲ್ಲಿ ಮೂಕ್‌ ಪ್ರಾರಂಭವಾಗಿದ್ದು, ಹೆಸರೇ ಸೂಚಿಸುವಂತೆ ಈ ಕೋರ್ಸ್‌ಗಳು ಅನಿಯಮಿತ ಗುರಿಯನ್ನು ಮತ್ತು ದೊಡ್ಡ ಸಮೂಹವನ್ನು ತಲುಪುವಂತಹ ಸಾಮರ್ಥ್ಯ ಹೊಂದಿವೆ. ಇದರಲ್ಲಿ ಹಲವು ಕೋರ್ಸ್‌ಗಳು ಲಭ್ಯವಿದ್ದು ಆನ್‌ಲೈನ್‌ನಲ್ಲಿ ಯಾವುದೇ ಶುಲ್ಕವಿಲ್ಲದೆ ಮುಕ್ತ ಪ್ರವೇಶ ಪಡೆಯಬಹುದು.

ಮೂಕ್‌

ಸಾಂಪ್ರದಾಯಕ ಉನ್ನತ ಶಿಕ್ಷಣದಲ್ಲಿ ಹೆಚ್ಚುತ್ತಿರುವ ವೆಚ್ಚದಿಂದಾಗಿ ಮತ್ತು ಉದ್ಯೋಗಸ್ಥರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಆರಂಭಗೊಂಡ ಮೂಕ್‌ ಇಂದು ಹಲವರ ನೆಚ್ಚಿನ ಆಯ್ಕೆ. ಇದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟು ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದು, ಪ್ರಪಂಚದಾದ್ಯಂತ ಪರಿಣಾಮಕಾರಿಯಾಗಿ ಪ್ರವೇಶ ಪಡೆಯಬಹುದಾಗಿದೆ.

ಶೈಕ್ಷಣಿಕ ಜ್ಞಾನ ಹಾಗೂ ಕೌಶಲಗಳನ್ನು ಕಲಿಸಲು ಮತ್ತು ವರ್ಧಿಸಿಕೊಳ್ಳಲು ಮೂಕ್‌ ಸ್ವಯಂ ಎಂಬ ಇ-ಲರ್ನಿಂಗ್ ಪ್ಲಾಟ್‌ಫಾರ್ಮ್‌ ಆರಂಭಿಸಿದ್ದು, ಪ್ರೌಢಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಸಾಕಷ್ಟು ಕೋರ್ಸ್‌ಗಳು ಲಭ್ಯ. ಹೆಚ್ಚಿನ ಸಂಖ್ಯೆಯ ಕಲಿಕಾರ್ಥಿಗಳಿಗೆ ಕಲಿಯಲು ಸಾಧ್ಯವಾಗುವಂತಹ ವಿಧಾನದಲ್ಲಿ ಈ ಇ–ಲರ್ನಿಂಗ್‌ ಪೋರ್ಟಲ್‌ ಅನ್ನು ಯೋಜಿಸಲಾಗಿದೆ, ಬಹು ಮಾಧ್ಯಮದಲ್ಲಿ ವಿಷಯದ ಬಗ್ಗೆ ಬೋಧನೆ ಇಲ್ಲಿ ದೊರಕುತ್ತದೆ. ಇ-ಟ್ಯುಟೋರಿಯಲ್, ವಿಡಿಯೊ, ಚಿತ್ರಗಳ ಮೂಲಕ ಉಪನ್ಯಾಸ, ರಸಪ್ರಶ್ನೆಗಳು ಮತ್ತು ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯದಲ್ಲೂ ಕೋರ್ಸ್ ಸಂಯೋಜಕರಿದ್ದು, ಚರ್ಚಾ ವೇದಿಕೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಶ್ನೆಗಳನ್ನು ಕೇಳಲು ಹಾಗೂ ಅವುಗಳಿಗೆ ಉತ್ತರ ನೀಡಲು ಕೂಡ ವ್ಯವಸ್ಥೆ ಮಾಡಲಾಗಿದೆ.

ಬಹು ಆಯ್ಕೆ ಪ್ರಶ್ನೆಗಳು

ಸ್ವಯಂ- ಮೌಲ್ಯಮಾಪನ ಪರೀಕ್ಷೆಗಳು ಇದರಲ್ಲಿ ಲಭ್ಯ. ಇದು ಪ್ರಶ್ನೆಗಳು ಮತ್ತು ಉತ್ತರಗಳನ್ನು ಒಳಗೊಂಡಿದ್ದು, ಬಹು ಆಯ್ಕೆ ಪ್ರಶ್ನೆಗಳೂ ಇರುತ್ತವೆ. ಖಾಲಿ ಜಾಗಗಳನ್ನು ಭರ್ತಿ ಮಾಡಿ, ಹೊಂದಾಣಿಕೆಯ ಪ್ರಶ್ನೆಗಳು, ಸಣ್ಣ ಪ್ರಶ್ನೆಗಳು, ದೀರ್ಘ ಪ್ರಶ್ನೆಗಳು, ನಿಯೋಜನೆಗಳು ಮತ್ತು ಪರಿಹಾರಗಳು, ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ ಗಳು) ಇರುತ್ತವೆ ಮತ್ತು ಯಾವುದೇ ವಿಷಯದಲ್ಲಿ ತಪ್ಪು ಗ್ರಹಿಕೆ ಇದ್ದರೆ ಸ್ಪಷ್ಟೀಕರಣವನ್ನು ಒದಗಿಸುತ್ತದೆ.

ವಿಜ್ಞಾನ, ವಾಣಿಜ್ಯ, ಪ್ರದರ್ಶಕ ಕಲೆ, ಸಾಮಾಜಿಕ ವಿಜ್ಞಾನ ಮತ್ತು ಮಾನವಿಕ ವಿಷಯಗಳು, ಎಂಜಿನಿಯರಿಂಗ್, ತಂತ್ರಜ್ಞಾನ, ಕಾನೂನು, ವೈದ್ಯಕೀಯ ವಿಜ್ಞಾನ, ಕೃಷಿ ಮೊದಲಾದವುಗಳ ಕುರಿತು ಶಿಕ್ಷಣದ ಪಠ್ಯವನ್ನು ರಚಿಸಲಾಗಿದೆ. ಈ ಎಲ್ಲಾ ಕೋರ್ಸ್‌ಗಳಿಗೆ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ.

ಶಿಕ್ಷಕರಿಗೆ ಮಾಡ್ಯೂಲ್‌

ಉನ್ನತ ಶಿಕ್ಷಣ ಮಾತ್ರವಲ್ಲ, ಪ್ರೌಢಶಾಲಾ ಮಕ್ಕಳಿಗೆ ಪಠ್ಯವನ್ನು ಅರ್ಥಮಾಡಿಕೊಳ್ಳುವ ಹಾದಿಯಲ್ಲಿ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಶಾಲಾ ಶಿಕ್ಷಕರಿಗೆ ಶಿಕ್ಷಣ ಮಾಡ್ಯೂಲ್‌ಗಳನ್ನು ನೀಡುತ್ತದೆ. ತರಬೇತಿ, ಬೋಧನೆ ಮತ್ತು ಕಲಿಕೆಗೆ ಇಲ್ಲಿ ನಮಗೆ ಬೇಕಾದಂತಹ ನೆರವು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವವರಿಗೂ ಇಲ್ಲಿ ಸಾಕಷ್ಟು ಸಹಾಯ ಲಭ್ಯ. ಜೊತೆಗೆ ವೃತ್ತಿಪರ ಪದವಿ ಶಿಕ್ಷಣಕ್ಕೆ ಪ್ರವೇಶ ಹೊಂದಲು ಸ್ಪರ್ಧಾ ಆಕಾಂಕ್ಷಿಗಳಿಗೆ ಸೂಕ್ತ ತರಬೇತಿ ಕೂಡ ಸಿಗುತ್ತದೆ.

ಸಿ.ಬಿ.ಸಿ.ಎಸ್. (Choice Based Credit System)ಗೆ ಒಳಪಡುವ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ವಯಂನಲ್ಲಿ ಮಾಡಿದ ಕೋರ್ಸ್‌ಗಳಿಗೆ ಮಾನ್ಯತೆ ನೀಡಿ ಕ್ರೆಡಿಟ್‌ ಕೊಟ್ಟು ಶೈಕ್ಷಣಿಕ ದಾಖಲೆಗೆ (ಅಂಕಪಟ್ಟಿಗೆ) ವರ್ಗಾಯಿಸಬಹುದು. ಈ ಕುರಿತು ಯುಜಿಸಿಯು ವಿಶ್ವವಿದ್ಯಾಲಯಕ್ಕೆ ಸಲಹೆ ನೀಡಿದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿಯೂ ಪ್ರಯೋಜನ ಪಡೆಯಬಹುದು.

ಪುನಃಶ್ಚೇತನ ತರಬೇತಿ

ಎಂಎಚ್‌ಆರ್‌ಡಿ ಮತ್ತು ಯುಜಿಸಿಯ ಪ್ರಕಾರ ವೃತ್ತಿ ಪ್ರಗತಿ ಯೋಜನೆ (CAS) ಅಡಿಯಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಮತ್ತು ವಿಶ್ವವಿದ್ಯಾಲಯಗಳ ಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡುವ ಪ್ರಾಧ್ಯಾಪಕರಿಗೆ ಮತ್ತು ಗ್ರಂಥಪಾಲಕರಿಗೆ ಇಲ್ಲಿ ಪುನಃಶ್ಚೇತನ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿ ಪ್ರಮಾಣ ಪಾತ್ರವನ್ನು ನೀಡಲಾಗುತ್ತದೆ. ಯುಜಿಸಿಯು ಇದನ್ನು ವಿಶ್ವವಿದ್ಯಾಲಯಗಳ ಎಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗಳು ಆಯೋಜಿಸುವ ಪುನಃಶ್ಚೇತನ ತರಬೇತಿಯ ಕೋರ್ಸ್‌ಗೆ ಸಮನಾಗಿ ಪರಿಗಣಿಸುತ್ತದೆ.

ಆದರೆ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಕನಿಷ್ಠ ಜ್ಞಾನ, ಅಂತರ್ಜಾಲ ಬಳಕೆ, ಮಲ್ಟಿಮೀಡಿಯಾ ಬಳಕೆಯ ಕಲಿಕೆ, ರಿಯಲ್ ಟೈಂನಲ್ಲಿ ಪಠ್ಯ ಸಮಸ್ಯೆಯನ್ನು ನಿವಾರಿಸಲು ಸಾಮರ್ಥ್ಯ ಇಲ್ಲದಿರುವುದು ಮತ್ತು ಬಹು ಆಯ್ಕೆ ಪ್ರಶ್ನೆಯೇ ಮೌಲ್ಯಮಾಪನದ ಮಾನದಂಡವಾಗಿರುವುದು ಸ್ವಯಂನ ಕೆಲವು ಸವಾಲುಗಳಾಗಿವೆ. ಇದರ ಹೊರತಾಗಿಯೂ ಇದು ಒಳ್ಳೆಯ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು, ಇದರಿಂದ ಯಾರಾದರೂ, ಎಲ್ಲಿಂದಲಾದರೂ ಸುಲಭವಾಗಿ ಕಲಿಯುವ ಅವಕಾಶವಿದ್ದು ಯಾವುದೇ ಸಮಯದಲ್ಲಿ ನೊಂದಾಯಿಸಿ ಮತ್ತು ಅಧ್ಯಯನ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ https://swayam.gov.in ಜಾಲತಾಣವನ್ನು ವೀಕ್ಷಿಸಬಹುದು.

(ಲೇಖಕರು ಗ್ರಂಥಪಾಲಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಲಿಗ್ರಾಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT