ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದ ಜೊತೆ ತಂತ್ರಜ್ಞಾನ ಕಲಿಕೆ

Last Updated 29 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಎಂಬುದು ಇಂದಿನ ದಿನಗಳಲ್ಲಿ ನಮ್ಮ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವುದಂತೂ ಹೌದು. ಆದರೆ ತಲೆಮಾರುಗಳನ್ನು ತೆಗೆದುಕೊಂಡರೆ ಜನರೇಶನ್‌ ಝೆಡ್‌ (1995 ಮತ್ತು 2010ರ ನಡುವೆ ಹುಟ್ಟಿದವರು– ವಿದ್ಯಾರ್ಥಿಗಳು) ಈ ತಂತ್ರಜ್ಞಾನದ ಸದುಪಯೋಗವನ್ನು ಹೆಚ್ಚಿನ ಮಟ್ಟದಲ್ಲಿ ಮಾಡಿಕೊಳ್ಳುತ್ತಿದೆ. ಡಿಜಿಟಲ್‌ ಜಗತ್ತಿಗೆ ಹತ್ತಿರವಾದವರು, ಅಂದರೆ ಡಿಜಿಟಲ್‌ ಜಗತ್ತಿನ ಸ್ಥಳೀಯ ತಲೆಮಾರಿನವರು ಎಂದರೆ ಇವರೇ. ಹೇಗೆಂದರೆ ಚಿಕ್ಕಂದಿನಿಂದಲೇ, ತಿಳಿವಳಿಕೆ ಬಂದಾಗಿನಿಂದಲೇ ಅವರಿಗೆ ಅಂತರ್ಜಾಲ, ಸಾಮಾಜಿಕ ಜಾಲತಾಣ, ಮೊಬೈಲ್‌ ಸಾಧನಗಳ ಜೊತೆ ಒಡನಾಟ ಸಿಕ್ಕಿದೆ. ನಾವು ಮಾಡುವಂತಹ ಕೆಲಸ, ಸಂವಹನ ಅಥವಾ ವಿಷಯವನ್ನು ಅರಿಯುವ ರೀತಿಯನ್ನು ಪುನರ್‌ ಸಂಶೋಧನೆಗೆ ಒಳಪಡಿಸಿ ನಮ್ಮ ಸ್ಥಾನಪಲ್ಲಟ ಮಾಡುವಂತಹ ಕ್ರಾಂತಿಕಾರಿ ಶಕ್ತಿ ಅಂತರ್ಜಾಲಕ್ಕಿದೆ ಎಂಬ ಅರಿವು ಜನರೇಶನ್‌ ಎಕ್ಸ್‌ ಮತ್ತು ಮಿಲೇನಿಯಲ್‌ ತಲೆಮಾರಿನವರಲ್ಲಿದ್ದರೆ, ಈಗಿನ ವಿದ್ಯಾರ್ಥಿಗಳಿಗೆ ಅಂತರ್ಜಾಲ ಎಂಬುದು ವಿಶೇಷ ಸೌಲಭ್ಯದ ಬದಲಾಗಿ, ತಮ್ಮ ಬಗಲಲ್ಲೇ ಇರುವಂತಹದ್ದು.

ಆನ್‌ಲೈನ್‌ ಕಲಿಕೆ
ಹೊಸ ತಲೆಮಾರಿನವರಿಗೆ ಆನ್‌ಲೈನ್‌ ಎಂಬುದು ಬದುಕು ಎಂಬಂತಾಗಿಬಿಟ್ಟಿದೆ. 24/7 ಆ ಜಗತ್ತಿನಲ್ಲೇ ಮುಳುಗಿದ್ದು, ಡೇಟಿಂಗ್‌ನಿಂದ ಷಾಪಿಂಗ್‌ವರೆಗೆ, ಚಲನಚಿತ್ರದ ವೀಕ್ಷಣೆಗೂ ಅದರಲ್ಲೇ ಮುಳುಗಿರುತ್ತಾರೆ. ಇದು ಅವರ ಹಿಂದಿನ ಅಂದರೆ ವೈ ಮತ್ತು ಮಿಲೇನಿಯಲ್‌ ತಲೆಮಾರಿನವರಿಗೂ ಅನ್ವಯವಾದರೂ ಈಗಿನ ತಲೆಮಾರಿನವರು ಶಿಕ್ಷಣ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನುವುದು ವಿಶೇಷ. ನಾವು ಪಠ್ಯಪುಸ್ತಕ, ನೋಟ್‌ಬುಕ್‌, ಕಪ್ಪು ಹಲಗೆಯ ಮಧ್ಯೆ ಬೆಳೆದಿದ್ದರೆ, ಜಾಗತಿಕವಾಗಿ ಶೈಕ್ಷಣಿಕ ಸಂಸ್ಥೆಗಳು ತಂತ್ರಜ್ಞಾನವನ್ನು ಪಠ್ಯಕ್ಕೆ ಅಳವಡಿಸಿದ್ದಾರೆ. ಇದು ತಂತ್ರಜ್ಞಾನ ಸ್ನೇಹಿ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿದೆ ಎನ್ನಬಹುದು. ವರ್ಚುವಲ್‌ ಕೌಶಲ ಹಾಗೂ ಗೂಗಲ್‌ ಕಾರ್ಡ್‌ಬೋರ್ಡ್‌ನಿಂದ ಹಿಡಿದು ಸರಳವಾದ ಆನ್‌ಲೈನ್‌ ಕ್ಯಾಲೆಂಡರ್‌ವರೆಗೂ ಬಳಕೆ ಮುಂದುವರಿದಿದ್ದು, ಶಿಕ್ಷಣವನ್ನು ಸುಧಾರಿಸುವ ಯತ್ನ ನಿರಂತರವಾಗಿ ಸಾಗಿದೆ ಎನ್ನಬಹುದು. ಆಧುನಿಕ ಹಾಗೂ ಹೆಚ್ಚು ಪ್ರಗತಿಪರ ಶಿಕ್ಷಣ ಸಂಸ್ಥೆಗಳಲ್ಲಿ ವರ್ಚುವಲ್‌ ತರಗತಿಗಳು, ಆನ್‌ಲೈನ್‌ ಕಲಿಕೆ, ಪಾಡ್‌ಕಾಸ್ಟ್‌ ಅಲ್ಲದೇ ವೈದ್ಯಕೀಯ, ಆಟೊಮೇಟಿವ್‌ ಮೊದಲಾದ ಕ್ಷೇತ್ರಗಳಲ್ಲಿ ವರ್ಚುವಲ್‌ ಆಧಾರಿತ ತರಬೇತಿ ಸಾಮಾನ್ಯವಾಗಿದೆ.

2015ರಲ್ಲಿ ಕೇವಲ ಶೇ 26.42 ಶಾಲೆಗಳಲ್ಲಿ ಮಾತ್ರ ಕಂಪ್ಯೂಟರ್‌ಗಳಿದ್ದವು. ಆದರೆ ಈಗ ಪರಿಸ್ಥಿತಿ ಅಚ್ಚರಿಪಡುವಷ್ಟು ಬದಲಾಗಿದೆ. ಉದಾಹರಣೆಗೆ ಜವಾಹರಲಾಲ್‌ ನವೋದಯ ವಿದ್ಯಾಲಯಗಳಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಕ್ಲಾಸ್‌ 2.5 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಡಿಜಿಟಲ್‌ ಕಲಿಕೆ ಸವಲತ್ತು ಒದಗಿಸಿದೆ. ಸರ್ಕಾರವೇ ರೈಸ್‌, ಸ್ವಯಂ ಮೊದಲಾದ ಯೋಜನೆಗಳ ಮೂಲಕ ಕ್ಲೌಡ್‌ ಕಂಪ್ಯೂಟಿಂಗ್‌, ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹ ನೀಡಿದೆ. ಉನ್ನತ ಶಿಕ್ಷಣದಲ್ಲಿ ಬಹುತೇಕ ವಿಶ್ವವಿದ್ಯಾಲಯಗಳು ಆಫೀಸ್‌ ಸಾಫ್ಟ್‌ವೇರ್‌, ಸ್ಲ್ಯಾಕ್‌, ಗೂಗಲ್‌ ಡಾಕ್ಸ್‌ನಂತಹ ಟೂಲ್‌ ಬಳಸುತ್ತಿವೆ. ಸಂಶೋಧನ ವಿದ್ಯಾರ್ಥಿಗಳು ಪ್ರಾಜೆಕ್ಟ್‌ನಲ್ಲಿ ಇವುಗಳನ್ನು ಬಳಸುವುದು ಸಾಮಾನ್ಯ. ಮುಂದೆ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರಿದಾಗ ಇಂತಹುದೇ ಸಾಫ್ಟ್‌ವೇರ್‌ ಬಳಸುವುದರಿಂದ ಅವರ ಔದ್ಯೋಗಿಕ ಉನ್ನತಿಗೆ ಅನುಕೂಲ. ಹೀಗಾಗಿ ಕೆಲವು ಅವಶ್ಯಕ ಆ್ಯಪ್‌ಗಳು, ಸಾಫ್ಟ್‌ವೇರ್‌ಗಳನ್ನು ಕಲಿಕೆಯ ಮೊದಲ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವುದು ಒಳಿತು.

ಉದ್ಯೋಗಕ್ಕೆ ನೆರವಾಗುವ ಟೂಲ್‌ ಕಲಿಕೆ
ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ಕ್ಷೇತ್ರದಲ್ಲಿ ನೆರವಾಗಲು ಕೌಶಲಗಳ ಅಗತ್ಯವಿದೆ. ಆಫೀಸ್‌ ಸಾಫ್ಟ್‌ವೇರ್‌ (WPS Office), ಡಿಸೈನ್‌ ಸಾಫ್ಟ್‌ವೇರ್‌ (Pixlr), ವಿಡಿಯೊ ಎಡಿಟಿಂಗ್‌, ಟಾಸ್ಕ್‌ ನಿರ್ವಹಣೆ ಸಾಫ್ಟ್‌ವೇರ್‌ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ತಂತ್ರಜ್ಞಾನ ಕೌಶಲ ಕಲಿಸಿದರೆ ಉದ್ಯೋಗ ಮಾಡುವಾಗ ನೆರವಿಗೆ ಬರುತ್ತವೆ.

ಗೇಮಿಫಿಕೇಶನ್‌, ವರ್ಚುವಲ್‌ ರಿಯಾಲಿಟಿ, ಪಠ್ಯ ಮತ್ತು ತಂತ್ರಜ್ಞಾನ ಮಿಶ್ರಣ ಮಾಡಿದ ಕಲಿಕೆ ಮೂಲಕ ಆನ್‌ಲೈನ್‌ ಕಲಿಕೆಯ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡಬಹುದು.

ಕೃತಕ ಬುದ್ಧಿಮತ್ತೆ ಅಳವಡಿಕೆ
ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆಯಿಂದಾಗಿ ನಾವು ಮಾಡುವಂತಹ ಕೆಲಸ ನಿಧಾನವಾಗಿ ಬದಲಾಗುತ್ತಿದೆ. ಡೆಸ್ಕ್‌ ಕೆಲಸ, ಭೌತಿಕ ಕಚೇರಿ, ಮಾಸಿಕ ಪೇರೋಲ್‌ ಕೂಡ ಬದಲಾಗುತ್ತಿದೆ. ಬಹುತೇಕ ಕೈಗಾರಿಕಾ ಸಂಸ್ಥೆಗಳು ಕೂಡ ಉತ್ಪಾದಕತೆ ಹೆಚ್ಚಿಸಲು ಹಾಗೂ ಖರ್ಚು ಕಡಿಮೆ ಮಾಡಲು ತಂತ್ರಜ್ಞಾನ ಅಳವಡಿಸಿಕೊಂಡು ಕಚೇರಿಯ ಕೆಲಸವನ್ನೇ ಮರು ವಿನ್ಯಾಸಗೊಳಿಸುತ್ತಿವೆ. ಮಿಲೇನಿಯಲ್‌ ತಲೆಮಾರಿನವರಿಗೆ ಈ ಬದಲಾವಣೆ ಬಹುತೇಕ ಸುಲಭ ಎನಿಸಿದರೂ ಮನೆಯಿಂದಲೇ ಕೆಲಸ ಮಾಡುವಂತಹ ಬದಲಾವಣೆಗೆ ಹಳೆ ತಲೆಮಾರಿನವರಿಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಹೊಸ ಬಗೆಯ ಕಚೇರಿ, ಹೊಸ ರೀತಿಯ ಕೆಲಸಗಳಿಗೆ ಯಾವ ರೀತಿಯ ಜ್ಞಾನ, ಕೌಶಲ, ತಂತ್ರಜ್ಞಾನ ಮುಖ್ಯ ಎಂಬುದನ್ನು ಈಗಿನ ವಿದ್ಯಾರ್ಥಿಗಳು ತಿಳಿದುಕೊಂಡು ಅಂತಹವುಗಳಲ್ಲಿ ಅನುಭವ ಪಡೆಯುವುದು ಮುಖ್ಯ.

(ಲೇಖಕ ಕಿಂಗ್‌ಸಾಫ್ಟ್‌ ಆಫೀಸ್‌ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT